ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, October 7, 2020

Mahabharata Tatparya Nirnaya Kannada 19160_19165

 

ಉದ್ವಾಹ್ಯ ತತ್ರ ನಿವಸತ್ಸು ಚ ಪಾಣ್ಡವೇಷು ಶ್ರುತ್ವೈವ ರಾಮಸಹಿತಃ ಸಹ ಯಾದವೈಶ್ಚ ।

ಆದಾಯ ಪಾರಿಬರ್ಹಂ  ಬಹುಲಂ ಸ ಕೃಷ್ಣ ಆಯಾನ್ಮುದೈವ ಪೃಥಯಾ ಸಹಿತಾಂಶ್ಚ ಪಾರ್ತ್ಥಾನ್ ॥೧೯.೧೬೦॥

 

ಮದುವೆಯಾಗಿ ಮಾವನ ಮನೆಯಲ್ಲೇ ಪಾಂಡವರು ವಾಸಮಾಡುತ್ತಿದ್ದಾರೆ ಎನ್ನುವುದನ್ನು ಕೇಳಿಯೇ, ಬಲರಾಮ ಹಾಗೂ ಇತರ ಯಾದವರೊಂದಿಗೆ ಕೂಡಿದ ಶ್ರೀಕೃಷ್ಣನು, ಬಹಳ ಕಾಣಿಕೆಗಳೊಂದಿಗೆ,  ಕುಂತಿಯಿಂದ ಕೂಡಿದ ಪಾಂಡವರನ್ನು ಕುರಿತು ಸಂತಸದಿಂದಲೇ ಬಂದನು.

 

ದೃಷ್ಟ್ವೈವ ತಂ ಮುಮುದುರಾಶು ಕುರುಪ್ರವೀರಾ ಆಶ್ಲಿಷ್ಯ ಕೃಷ್ಣಮಥ ನೇಮುರಸೌ ಚ ಕೃಷ್ಣಾಮ್ ।

ದೃಷ್ಟ್ವಾ ಪ್ರದಾಯ ಗೃಹಯೋಗ್ಯಸಮಸ್ತಭಾಣ್ಡಂ ಸೌವರ್ಣ್ಣಮೇಭ್ಯ ಉರುಭೂಷಣಮಚ್ಯುತೋsದಾತ್ ॥೧೯.೧೬೧॥

 

ಪಾಂಡವರು ಅವನನ್ನು ಕಂಡೇ ಬಹಳ ಸಂತೋಷಪಟ್ಟರು. ತದನಂತರ ಕೃಷ್ಣನನ್ನು ಆಲಂಗಿಸಿ ನಮಸ್ಕಾರ ಮಾಡಿದರು. ಶ್ರೀಕೃಷ್ಣನು ದ್ರೌಪದಿಯನ್ನು ಕಂಡು, ಮನೆಗೆ ಉಪಯುಕ್ತವಾದ ಎಲ್ಲಾರೀತಿಯ  ಬಂಗಾರದ ಪಾತ್ರೆಗಳನ್ನು ಅವಳಿಗೆ ಕೊಟ್ಟು, ಬಂಗಾರದ ಆಭರಣಗಳನ್ನೂ ಕೂಡಾ ನೀಡಿದನು.

 

ದೇವಾಙ್ಗಯೋಗ್ಯಶುಭಕುಣ್ಡಲಹಾರಮೌಲಿಕೇಯೂರವಸ್ತ್ರಸಹಿತಾನ್ಯುರುಭೂಷಣಾನಿ ।

ಷಣ್ಣಾಂ ಪೃಥಕ್ಪೃಥಗದಾತ್ ಪೃಥಗೇವ ಯೋಗ್ಯಾನ್ಯನ್ಯದ್ ದದಾವಥ ಪಿತೃಷ್ವಸುರಾತ್ಮಯೋಗ್ಯಮ್ ॥೧೯.೧೬೨॥

 

ತದನಂತರ ಶ್ರೀಕೃಷ್ಣನು ದೇವತೆಗಳ ಅಂಗಕ್ಕೆ ಯೋಗ್ಯವಾಗಿರುವಂತಹ, ಮಂಗಳಕರವಾದ ಕುಂಡಲ, ಮುತ್ತಿನಹಾರ, ಕಿರೀಟ, ಬಾಹುಭೂಷಣ, ವಸ್ತ್ರ, ಇವುಗಳಿಂದ ಕೂಡಿರುವ ಉತ್ಕೃಷ್ಟವಾದ ಭೂಷಣಗಳನ್ನು  ಆರೂ ಜನರಿಗೂ ಪ್ರತ್ಯೇಕ-ಪ್ರತ್ಯೇಕವಾಗಿ ನೀಡಿದನು. ತದನಂತರ ಸೋದರತ್ತೆ ಕುಂತಿಗೂ ಕೂಡಾ ಅವಳಿಗೆ ಯೋಗ್ಯವಾಗಿರುವ ಆಭರಣ ಮೊದಲಾದವುಗಳನ್ನು ಬೇರೆಯಾಗಿಯೇ ಕೊಟ್ಟನು.

 

[ಈಕುರಿತು ವೇದಾಂಗತೀರ್ಥರ ವ್ಯಾಖ್ಯಾನ ಹೀಗಿದೆ: ಅಥ ಪಿತೃಷ್ವಸುಃ ಕುಂತ್ತ್ಯಾಃ ಆತ್ಮಯೋಗ್ಯಂ ಮೃತಭರ್ತೃಕಾಯಾಸ್ತಸ್ತ್ಯಾ ಯೋಗ್ಯಂ- ಕುಂತಿ ವಿಧವೆ, ಹಾಗಾಗಿ ಅವಳಿಗೆ ಯಾವುದು ಯೋಗ್ಯವೋ ಆರೀತಿಯ ಆಭರಣಗಳನ್ನು ಶ್ರೀಕೃಷ್ಣ ಪ್ರತ್ಯೇಕವಾಗಿ ನೀಡಿದನು].

 

ರತ್ನಾನಿ ಗಾ ಗಜತುರಙ್ಗರಥಾನ್ ಸುವರ್ಣ್ಣಭಾರಾನ್ ಬಹೂನಪಿ ದದಾವಥ ಚಾsಶಿಷೋsಗ್ರ್ಯಾಃ ।

ವ್ಯಾಸೋsಪ್ಯದಾದಿಹ ಪರತ್ರ ಚ ಪಾರ್ಷತೋsಪಿ ಭೂಷಾರಥಾಶ್ವಗಜರತ್ನಸುಕಾಞ್ಚನಾನಿ ॥೧೯.೧೬೩॥

 

ಅಷ್ಟೇ ಅಲ್ಲದೇ, ಅನೇಕ ವಿಧದ ಮುತ್ತು-ರತ್ನಗಳನ್ನು, ಹಸುಗಳನ್ನು, ಆನೆ-ಕುದುರೆ ರಥಗಳನ್ನು, ಬಂಗಾರದ ಗಟ್ಟಿಗಳನ್ನು ಬಹುಪ್ರಮಾಣದಲ್ಲಿ ಕೊಟ್ಟನು. ತದನಂತರ ವೇದವ್ಯಾಸರೂ ಕೂಡಾ ಶ್ರೇಷ್ಠವಾದ ಆಶೀರ್ವಾದಗಳನ್ನು ಕೊಟ್ಟರು. ದ್ರುಪದನೂ ಕೂಡಾ ಆಭರಣಗಳು, ಅಶ್ವ, ಗಜ, ರತ್ನ, ಬಂಗಾರ ಮೊದಲಾದ ಉಡುಗೊರೆಗಳನ್ನು ಕೊಟ್ಟನು.

 

ದಾಸೀಶ್ಚ ದಾಸಸಹಿತಾಃ ಶುಭರೂಪವೇಷಾಃ ಸಾಹಸ್ರಶೋ ದದತುರತ್ರ ಹರಿರ್ನ್ನೃಪಶ್ಚ ।

ತಾಸಾಂ ವಿಚಿತ್ರವಸನಾನ್ಯುರುರತ್ನಮಾಲಾಃ ಪ್ರತ್ಯೇಕಶೋ ದದತುರಪ್ಯುರುಭೂಷಣಾನಾಮ್ ॥೧೯.೧೬೪॥

 

ಮಂಗಳಕರವಾದ ವೇಷದಿಂದಿರುವ, ಸಾವಿರಾರು ದಾಸರಿಂದ ಕೂಡಿರುವ ದಾಸಿಯರನ್ನು ಪರಮಾತ್ಮ ಮತ್ತು ದ್ರುಪದರಾಜ  ಅವರಿಗೆ ನೀಡಿದರು. ವಿಶಿಷ್ಟವಾದ ಬಟ್ಟೆಗಳನ್ನೂ, ಉತ್ಕೃಷ್ಟವಾದ ರತ್ನಮಾಲೆಗಳನ್ನೂ, ಉತ್ಕೃಷ್ಟವಾದ ಭೂಷಣಗಳನ್ನೂ ಪ್ರತ್ಯೇಕವಾಗಿ ಇಬ್ಬರೂ ಕೊಟ್ಟರು.

 

ಮಾಸಾನ್ ಬಹೂನಪಿ ವಿಹೃತ್ಯ ಸಹೈವ ಪಾರ್ತ್ಥೈಃ ಕೃಷ್ಣೋ ಯಯೌ ಯದುಪುರೀಂ ಸಹಿತೋsಗ್ರಜೇನ ।

ಅನ್ತರ್ಹಿತೇ ಭಗವತಿ ಪ್ರತತೋರುಶಕ್ತೌ ವ್ಯಾಸೇ ಚ ವತ್ಸರಮಿಹೋಷುರಿಮೇ ತು ಪಾರ್ತ್ಥಾಃ ॥೧೯.೧೬೫॥

 

ಕೃಷ್ಣನು ಬಹಳ ತಿಂಗಳುಗಳ ಕಾಲ ಪಾಂಡವರಿಂದ ಕೂಡಿಕೊಂಡು ವಿಹಾರಮಾಡಿ, ನಂತರ,  ಬಲರಾಮನಿಂದ ಕೂಡಿಕೊಂಡು ದ್ವಾರಕೆಗೆ ಹಿಂತಿರುಗಿದನು. ಅವನು ಹೋದಮೇಲೆ, ಉತ್ಕೃಷ್ಟವಾಗಿರುವ ಶಕ್ತಿಯುಳ್ಳ ವೇದವ್ಯಾಸರೂ ಅಂತರ್ಧಾನರಾಗಲು, ಈ ಪಾಂಡವರು ದ್ರುಪದನ ಮನೆಯಲ್ಲಿ ಒಂದು ವರ್ಷ ಕಾಲ (ಅಲ್ಲೇ ಇದ್ದು ಇನ್ನೆಲ್ಲೂ ಹೋಗದೇ) ವಾಸಮಾಡಿದರು.

No comments:

Post a Comment