ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, September 29, 2021

Mahabharata Tatparya Nirnaya Kannada 20: 207 - 214

 

ತತೋsರ್ಜ್ಜುನೋ ಯತ್ರ ತಿಷ್ಠನ್ ನ ಕಶ್ಚಿತ್ ಪರಾಜಯಂ ಯಾತಿ ಕೃಷ್ಣಾಜ್ಞಯೈವ ।

ರಥೇನ ತೇನೈವ ಯಯೌ ಸಭಾರ್ಯ್ಯಃ ಶಕ್ರಪ್ರಸ್ಥಂ ಚಾವಿಶದ್ ಭ್ರಾತೃಗುಪ್ತಮ್ ॥೨೦.೨೦೭॥

 

 ‘ಎಲ್ಲಿ ನಿಂತು ಯಾರೂ ಕೂಡಾ ಪರಾಜಯವನ್ನು ಹೊಂದುವುದಿಲ್ಲವೋ, ಅಂತಹ ಕೃಷ್ಣನ ರಥವನ್ನು ಏರಿದ ಅರ್ಜುನನು ಸುಭದ್ರೆಯೊಂದಿಗೆ ಭೀಮಸೇನನಿಂದ ರಕ್ಷಿತವಾದ ಇಂದ್ರಪ್ರಸ್ಥವನ್ನು ಪ್ರವೇಶಿಸಿದನು.

 

ಸಮ್ಭಾವಿತೋ ಭ್ರಾತೃಭಿಶ್ಚಾತಿತುಷ್ಟೈರೂಚೇsಥ ಸರ್ವಂ ತೇಷು ಯಚ್ಚಾsತ್ಮವೃತ್ತಮ್ ।

ಶಾನ್ತೇಷು ವಾಕ್ಯಾದಾತ್ಮನೋ ಯಾದವೇಷು ಕೃಷ್ಣೋ ಯುಕ್ತೋ ಹಲಿನಾsಗಾಚ್ಚ ಪಾರ್ತ್ಥಾನ್ ॥೨೦.೨೦೮॥

 

ಅತ್ಯಂತ ಸಂತುಷ್ಟರಾದ ಸಹೋದರರಿಂದ ಬಹುಮಾನಿತನಾದ ಅರ್ಜುನನು  ತನ್ನ ವೃತ್ತಾಂತವೆಲ್ಲವನ್ನೂ ಅವರಿಗೆ ಹೇಳಿದನು. ಇತ್ತ, ತನ್ನ ಮಾತಿನ ಮೋಡಿಯಿಂದ ಯುದ್ಧದ ಪ್ರಯತ್ನವನ್ನು ಕೈಬಿಟ್ಟ ಯಾದವರಿರಲು, ಬಲರಾಮನಿಂದ ಕೂಡಿ, ಪಾಂಡವರನ್ನು ಕುರಿತು ಶ್ರೀಕೃಷ್ಣ ತೆರಳಿದನು. 

  

ಸಾರ್ದ್ಧಂ ಯಯೌ ಶಕಟೈ ರತ್ನಪೂರ್ಣ್ಣೈಃ ಶಕ್ರಪ್ರಸ್ಥಂ ಪೂಜಿತಸ್ತತ್ರ ಪಾರ್ತ್ಥೈಃ ।

ದದೌ ತೇಷಾಂ ತಾನಿ ರಾಮೇಣ ಯುಕ್ತಸ್ತಥಾ ಕೃಷ್ಣಾಯೈ ಭೂಷಣಾನಿ ಸ್ವಸುಶ್ಚ ॥೨೦.೨೦೯॥

 

ಕೃಷ್ಣ ರತ್ನಗಳಿಂದ ತುಂಬಿದ ಗಾಡಿಗಳೊಂದಿಗೆ ಇಂದ್ರಪ್ರಸ್ಥಕ್ಕೆ ಬಂದು, ಅಲ್ಲಿ ಪಾಂಡವರಿಂದ ಪೂಜಿತನಾಗಿ, ಬಲರಾಮನಿಂದ ಕೂಡಿಕೊಂಡು ದ್ರೌಪದಿಗೂ ಹಾಗೂ  ತಂಗಿ ಸುಭದ್ರೆಗೂ ಆಭರಣಗಳನ್ನು ಕೊಟ್ಟನು.

 

ಮಾಸಾನುಷಿತ್ವಾ ಕತಿಚಿದ್ ರೌಹಿಣೇಯೋ ಯಯೌ ಪುರೀಂ ಸ್ವಾಂ ಕೇಶವೋsತ್ರಾವಸಚ್ಚ ।

ಬಹೂನ್ ವರ್ಷಾನ್ ಪಾಣ್ಡವೈಃ ಪೂಜ್ಯಮಾನಃ ಪ್ರೀತಿಂ ತೇಷಾಮಾದಧಾನೋsಧಿಕಾಂ ಚ ॥೨೦.೨೧೦॥

 

ಬಲರಾಮನು ಕೆಲವು ತಿಂಗಳುಗಳ ಕಾಲ ಇಂದ್ರಪ್ರಸ್ಥದಲ್ಲಿ ವಾಸಮಾಡಿ ದ್ವಾರಕೆಗೆ ಹಿಂತಿರುಗಿದನು. ಶ್ರೀಕೃಷ್ಣ ಇಂದ್ರಪ್ರಸ್ಥದಲ್ಲಿಯೇ ಬಹಳ ವರ್ಷಗಳ ಕಾಲ ಪಾಂಡವರಿಂದ ಪೂಜಿಸಲ್ಪಡುವವನಾಗಿ, ಅವರಿಗೆ ಉತ್ಯುಕ್ತವಾದ ಪ್ರೀತಿಯನ್ನು ಕೊಡುತ್ತಾ ಅಲ್ಲೇ ಆವಾಸ ಮಾಡಿದನು.

 

[ದ್ರೌಪದೀ ಪುತ್ರರ ಮೂಲಸ್ವರೂಪವನ್ನು ಪರಿಚಯಿಸುತ್ತಾರೆ:]

ಆಸನ್ ಕೃಷ್ಣಾಯಾಃ ಪಞ್ಚ ಸುತಾ ಗುಣಾಢ್ಯಾ ವಿಶ್ವೇ ದೇವಾಃ ಪಞ್ಚ ಗನ್ಧರ್ವಮುಖ್ಯೈಃ

ಆವಿಷ್ಟಾಸ್ತೇ ಚಿತ್ರರಥಾಭಿತಾಮ್ರಕಿಶೋರಗೋಪಾಲಬಲೈಃ ಕ್ರಮೇಣ ॥೨೦.೨೧೧॥

 

ದ್ರೌಪದಿಗೆ ಪಾಂಡವರಿಂದ ಐದು ಜನ ಗುಣಭರಿತರಾದ ಮಕ್ಕಳಾದರು. ಸ್ವರೂಪತಃ ಅವರು ಐದುಮಂದಿ ವಿಶ್ವೇದೇವತೆಗಳು. ಗಂಧರ್ವಮುಖ್ಯರಾದ ಚಿತ್ರರಥ, ಅಭಿತಾಮ್ರ, ಕಿಶೋರ, ಗೋಪಾಲ, ಬಲ ಎನ್ನುವ ಗಂಧರ್ವರಿಂದ ಆವಿಷ್ಟರಾಗಿ ಇಲ್ಲಿ ಹುಟ್ಟಿದರು.

[ಮಹಾಭಾರತದಲ್ಲಿ (ಆದಿಪರ್ವ ೬೮.೧೨೭) ಈ ಕುರಿತ ವಿವರ ಕಾಣಸಿಗುತ್ತದೆ: ‘ದ್ರೌಪದೇಯಾಶ್ಚ  ಯೇ ಪಞ್ಚ ಬಭೂವುರ್ಭರತರ್ಶಭ । ವಿಶ್ವಾನ್ ದೇವಗಣಾನ್  ವಿದ್ಧಿ ಸಞ್ಜಾತಾನ್ ಭರತರ್ಷಭಾನ್’ ದ್ರೌಪದಿಯ ಐದು ಜನ ಮಕ್ಕಳು ಯಾರು ಎಂದರೆ- ಅವರು ವಿಶ್ವೇದೇವತೆಗಳು. ಇಲ್ಲಿ  ಸಞ್ಜಾತಾನ್’ ಎನ್ನುವ ಪದ ಪ್ರಯೋಗ  ಅವರು ಐದು ಮಂದಿ ಗಂಧರ್ವರ ಜೊತೆಗೆ ಕೂಡಿಕೊಂಡು  ಹುಟ್ಟಿರುವುದನ್ನು ಸೂಚಿಸುತ್ತದೆ ಎನ್ನುವುದು ಆಚಾರ್ಯರ ನಿರ್ಣಯದಿಂದ ತಿಳಿಯುತ್ತದೆ.

ದ್ರೌಪದಿಯ ಐದು ಮಂದಿ ಮಕ್ಕಳ ಮೂಲರೂಪ ಹಾಗೂ ಅವರ ಈ ಜನ್ಮಕ್ಕೆ ಕಾರಣವಾದ ಘಟನೆಯನ್ನು   ಮಾರ್ಕಂಡೇಯ ಪುರಾಣದಲ್ಲಿ(೭.೬೨-೬೮) ವಿವರಿಸಿರುವುದನ್ನು ಕಾಣಬಹುದು. ಒಮ್ಮೆ ವಿಶ್ವೇದೇವತೆಗಳು ಮತ್ತು ವಿಶ್ವಾಮಿತ್ರರ ನಡುವೆ ಯಾವುದೋ ಸಣ್ಣ ಕಾರಣಕ್ಕಾಗಿ ಘರ್ಷಣೆ ಉಂಟಾಯಿತು. ಆ ಸಂದರ್ಭದಲ್ಲಿ ವಿಶ್ವೇದೇವತೆಗಳು ವಿಶ್ವಾಮಿತ್ರರನ್ನು ಹೀಗಳೆದು- ‘ವಿಶ್ವಾಮಿತ್ರಃ  ಸುಪಾಪೋsಯಂ ಲೋಕಾನ್ ಕಾನ್ ಸಮವಾಪ್ಸ್ಯತಿ’ – ‘ಪಾಪಿಷ್ಟನಾದ ವಿಶ್ವಾಮಿತ್ರನು ಯಾವಲೋಕವನ್ನು ಹೊಂದುತ್ತಾನೆ’ ಎಂಬುದಾಗಿ ಮಾತನಾಡಿದರು. ಆಗ ಕೋಪಗೊಂಡ ವಿಶ್ವಾಮಿತ್ರರು ‘ಶಶಾಪ ತಾನ್ ಮನುಷ್ಯತ್ವಂ ಸರ್ವೇ ಯೋಯಮವಾಪ್ಸ್ಯಾಥ’ - ನೀವೆಲ್ಲರೂ ಕೂಡಾ ಮನುಷ್ಯರಾಗಿ ಹುಟ್ಟಿ ಎಂದು ಶಾಪ ಕೊಟ್ಟರು. ನಂತರ ಬೇಡಿಕೊಂಡ ವಿಶ್ವೇದೇವತೆಗಳಿಗೆ ವಿಶ್ವಾಮಿತ್ರರು ‘ಮಾನುಷತ್ವೇsಪಿ ಭವತಾಂ ಭವಿತ್ರಿ ನೈವ ಸನ್ತತಿಃ’  ‘ದ್ರೌಪದಿಯ ಗರ್ಭದಿಂದ ಮನುಷ್ಯರಾಗಿ ಹುಟ್ಟಿ, ಆದರೆ ಅಲ್ಲಿ ನಿಮ್ಮ ಸಂತತಿ ಮುಂದುವರಿಯದಿರಲಿ’ ‘ನ ದಾರಸಙ್ಗ್ರಹಶ್ಚೈವ  ಭವಿತಾ ನಚ ಮತ್ಸರಃ’ ನಿಮಗೆ ಮದುವೆಯಾಗುವುದಿಲ್ಲ ಹಾಗೂ  ನಿಮ್ಮಲ್ಲಿ ಮತ್ಸರ ಬರುವುದಿಲ್ಲ. ಕಾಮ-ಕ್ರೋಧ ವಿನಿರ್ಮುಕ್ತರಾಗಿ ಮತ್ತೆ ದೇವತೆಗಳಾಗಿ ಬರುತ್ತೀರಿ’ ಎಂದು ಶಾಪ ವಿಮೋಚನೆಯ ಮಾರ್ಗವನ್ನು ಹೇಳಿದರು].

 

ಪ್ರತಿವಿನ್ಧ್ಯಃ ಸುತಸೋಮಃ ಶ್ರುತಾಖ್ಯಕೀರ್ತ್ತಿಃ ಶತಾನೀಕ ಉತ ಶ್ರುತಕ್ರಿಯಃ ।

ಯುಧಿಷ್ಠಿರಾದ್ಯೈಃ ಕ್ರಮಶಃ ಪ್ರಜಾತಾಸ್ತೇಷಾಂ ದ್ವಯೋಶ್ಚಾವರಜೋsಭಿಮನ್ಯುಃ ॥೨೦.೨೧೨

 

ದ್ರೌಪದಿಯಲ್ಲಿ ಧರ್ಮರಾಜನಿಂದ ಹುಟ್ಟಿದವನು ಪ್ರತಿವಿನ್ಧ್ಯ. ಅದೇ ರೀತಿ ಭೀಮಸೇನನಿಂದ ಸುತಸೋಮ, ಅರ್ಜುನನಿಂದ ಶ್ರುತಕೀರ್ತಿ, ನಕುಲನಿಂದ ಶತಾನೀಕ ಮತ್ತು ಸಹದೇವನಿಂದ ಹುಟ್ಟಿದವನು ಶ್ರುತಕರ್ಮಾ. ಅಭಿಮನ್ಯು ಕ್ರಮವಾಗಿ ಪ್ರತಿವಿನ್ಧ್ಯ ಮತ್ತು  ಸುತಸೋಮನ ನಂತರ ಹುಟ್ಟಿದವನು (ಶ್ರುತಕೀರ್ತಿ, ಶತಾನೀಕ ಮತ್ತು ಶ್ರುತಕರ್ಮಾ ಅಭಿಮನ್ಯುಗಿಂತ ಚಿಕ್ಕವರು)


[ಅಭಿಮನ್ಯುವಿನ ಮೂಲಸ್ವರೂಪವನ್ನು ಪರಿಚಯಿಸುತ್ತಾರೆ:]

ಚನ್ದ್ರಾಂಶಯುಕ್ತೋsತಿತರಾಂ ಬುಧೋsಸೌ ಜಾತಃ ಸುಭದ್ರಾಜಠರೇsರ್ಜ್ಜುನೇನ ।

ಧರ್ಮ್ಮೇರಶಕ್ರಾಂಶಯುತೋsಶ್ವಿನೋಶ್ಚ ತಥೈವ ಕೃಷ್ಣಸ್ಯ ಸ ಸನ್ನಿಧಾನಯುಕ್ ॥೨೦.೨೧೩॥

 

ಚಂದ್ರನ ಅಂಶದಿಂದ ಕೂಡಿದ ಬುಧನು ಅರ್ಜುನನಿಂದ ಸುಭದ್ರೆಯಲ್ಲಿ ಹುಟ್ಟಿದನು. ಇವನು ಧರ್ಮರಾಜ, ಮುಖ್ಯಪ್ರಾಣ ಮತ್ತು ಇಂದ್ರ ಇವರ ಅಂಶದಿಂದಲೂ, ಅಶ್ವೀದೇವತೆಗಳ ಆವೇಶದಿಂದಲೂ, ಕೃಷ್ಣನ ಸನ್ನಿಧಾನದಿಂದಲೂ ಕೂಡಿದ್ದನು.

[ಅಭಿಮನ್ಯು ನಾಮದ ನಿರ್ವಚನವನ್ನು ಮಹಾಭಾರತದಲ್ಲಿ(ಆದಿಪರ್ವ:೨೪೭.೬೩)   ಹೀಗೆ ವಿವರಿಸಿದ್ದಾರೆ: ‘ಅಭೀಶ್ಚ ಮನ್ಯುಮಾಂಶ್ಚೈವ ತತಸ್ತಮರಿಮರ್ದನಮ್ । ಅಭಿಮನ್ಯುರಿತಿ ಪ್ರಾಹುರಾರ್ಜುನಿಂ ಪುರುಷರ್ಷಭಮ್’- ಭಯ ಇಲ್ಲದ, ಶತ್ರುಗಳೆಡೆಗೆ ದೊಡ್ಡ ಮುನಿಸನ್ನುಳ್ಳವನು ಅಭಿಮನ್ಯು. ಚಂದ್ರಾಂಶಯುಕ್ತನಾದ ಅಭಿಮನ್ಯುವನ್ನು ವರ್ಚಾ(ಕಾಂತಿ ಉಳ್ಳವನು) ಎಂದೂ ಕರೆಯುತ್ತಾರೆ – ‘ಯಸ್ತು ವರ್ಚಾ ಇತಿ ಖ್ಯಾತಃ ಸೋಮಪುತ್ರಃ ಪ್ರತಾಪವಾನ್ । ಸೊsಭಿಮನ್ಯುರ್ಬೃಹತ್ಕೀತಿರರ್ಜುನಸ್ಯ ಸುತೋsಭವತ್’(ಆದಿಪರ್ವ ೬೮.೧೧೨)]

 

ಸರ್ವೇsಪಿ ತೇ ವೀರ್ಯ್ಯವನ್ತಃ ಸುರೂಪಾ ಭಕ್ತಾ ವಿಷ್ಣೋಃ ಸರ್ವಶಾಸ್ತ್ರೇಷ್ವಭಿಜ್ಞಾಃ ।

ಮೋದಂ ಯಯುಃ ಪಾಣ್ಡವಾಸ್ತೈಃ ಸುತೈಶ್ಚ ವಿಶೇಷತಃ ಸಾತ್ತ್ವತೀನನ್ದನೇನ ೨೦.೨೧೪

 

ಈ ಆರೂ ಜನರು ಒಳ್ಳೆಯ ವೀರ್ಯವುಳ್ಳವರು, ಒಳ್ಳೆಯ ರೂಪವುಳ್ಳವರು, ಪರಮಾತ್ಮನ ಭಕ್ತರು ಹಾಗೂ ಎಲ್ಲಾ ಶಾಸ್ತ್ರಗಳನ್ನೂ ಬಲ್ಲವರಾಗಿದ್ದರು. ಪಾಂಡವರು ತಮ್ಮ ಮಕ್ಕಳಿಂದ, ವಿಶೇಷವಾಗಿ (ಗುಣಾಧಿಕ್ಯನಾದ್ದರಿಂದ) ಅಭಿಮನ್ಯುವಿನಿಂದ ಸಂತೋಷವನ್ನು ಹೊಂದಿದರು. 


Sunday, September 26, 2021

Mahabharata Tatparya Nirnaya Kannada 20: 196 - 206

 

ತತಃ ಪರಾಜಿತವಚ್ಛೀಘ್ರಮೇತ್ಯ ಶಶಂಸ ಸರ್ವಂ ಹಲಿನೇsಥ ಸೋsಪಿ ।

ಪ್ರದ್ಯುಮ್ನಸಾಮ್ಬಾದಿಯುತೋsಥ ಕೋಪಾದಾಯಾತ್ ಪುರೀಂ ಹನ್ತುಕಾಮೋsರ್ಜ್ಜುನಂ ಚ॥೨೦.೧೯೬॥

 

ತದನಂತರ ವಿಪೃಥುವು ಅರ್ಜುನನಿಂದ ಸೋತವನಂತೆ ತೋರುತ್ತಾ, ಶೀಘ್ರವಾಗಿ ಪಿಂಡೋದ್ಧಾರ ಕ್ಷೇತ್ರಕ್ಕೆ  ಬಂದು ಬಲರಾಮನಿಗೆ ವಿಷಯವನ್ನು ತಿಳಿಸಿದನು. ಬಲರಾಮನಾದರೋ, ಪ್ರದ್ಯುಮ್ನ ಹಾಗೂ ಸಾಮ್ಬರಿಂದ ಕೂಡಿಕೊಂಡು, ಕೋಪದಿಂದ ಅರ್ಜುನನನ್ನು ಕೊಲ್ಲ ಬಯಸಿ ಪಟ್ಟಣಕ್ಕೆ ಬಂದ. 

 

ಕೃಷ್ಣೋsಪಿ ಸರ್ವಂ ವಿಪೃಥೋರ್ನ್ನಿಶಮ್ಯ ಪ್ರಾಪ್ತಃ ಸುಧರ್ಮ್ಮಾಂ ವಿಮನಾ ಇವಾsಸೀತ್ ।

ಅವಾಙ್ಮುಖಸ್ತತ್ರ ಯದುಪ್ರವೀರಾಃ  ಪ್ರದ್ಯುಮ್ನಾದ್ಯಾ ಆಹುರುಚ್ಚೈರ್ನ್ನದನ್ತಃ ॥೨೦.೧೯೭॥

 

ಇತ್ತ ಕೃಷ್ಣನು ಎಲ್ಲವನ್ನೂ ವಿಪೃಥುವಿಂದ ಕೇಳಿ, ಸುಧರ್ಮಸಭೆಯನ್ನು ಹೊಂದಿ, ಅನ್ಯಮನಸ್ಕನಂತೆ  ತಲೆತಗ್ಗಿಸಿಕೊಂಡು ಕುಳಿತ. ಪ್ರದ್ಯುಮ್ನ ಮೊದಲಾದ ಯಾದವರೆಲ್ಲರೂ ಗಟ್ಟಿಯಾಗಿ ಗರ್ಜಿಸುತ್ತಾ ಮಾತನಾಡಿದರು.

 

ಮಾಯಾವ್ರತಂ ತಂ ವಿನಿಹತ್ಯ ಶೀಘ್ರಂ ವಯಂ ಸುಭದ್ರಾಮಾನಯಾಮಃ ಕ್ಷಣೇನ ।

ಇತ್ಯುಕ್ತವಾಕ್ಯಾನವದದ್ ಬಲಸ್ತಾನ್ ಕೃಷ್ಣಾಜ್ಞಯಾ ಯಾನ್ತು ನ ಸ್ವೇಚ್ಛಯೈವ ॥೨೦.೧೯೮॥

 

‘ಸುಳ್ಳು ಸನ್ಯಾಸಿಯ ವೇಷವನ್ನು ಧರಿಸಿದ್ದ ಅರ್ಜುನನನ್ನು ಕೂಡಲೇ ಕೊಂದು, ನಾವು ಶೀಘ್ರದಲ್ಲಿಯೇ ಸುಭದ್ರೆಯನ್ನು ತರೋಣ’ ಎಂದು ಅವರು ಹೇಳಿದ ಮಾತನ್ನು ಕೇಳಿಸಿಕೊಂಡ ಬಲರಾಮನು ‘ಕೃಷ್ಣನ ಅಣತಿಯಂತೆ ನಡೆಯಿರಿ, ನಿಮ್ಮ  ಇಚ್ಛೆಯಂತೆ ಮಾಡಬೇಡಿ’ ಎಂದ.

 

ಜ್ಞಾತವ್ಯಮೇತಸ್ಯ ಮತಂ ಪುರಸ್ತಾದ್ಧರೇರ್ವಿರೋಧೇ ನ ಜಯೋ ಭವೇದ್ ವಃ ।

ಇತ್ಯುಕ್ತವಾಕ್ಯೇ ಹಲಿನಿ ಸ್ಮ ಸರ್ವೇ ಪಪ್ರಚ್ಛುರಾನಮ್ಯ ಜನಾರ್ದ್ದನಂ ತಮ್ ॥೨೦.೧೯೯॥

 

‘ಮೊದಲು ಶ್ರೀಕೃಷ್ಣನ ಮತವನ್ನು ತಿಳಿಯಬೇಕು. ಪರಮಾತ್ಮನ ವಿರೋಧವಾದಲ್ಲಿ ನಿಮಗೆ ಜಯ ಸಿಗಲಾರದು’ ಎಂದು ಬಲರಾಮ ಹೇಳಲು, ಎಲ್ಲರೂ ಕೃಷ್ಣನಿಗೆ ನಮಸ್ಕರಿಸಿ, ಏನು ಮಾಡಬೇಕೆಂದು ಕೇಳಿದರು.

 

ಅಥಾsಬ್ರವೀದ್ ವಾಸುದೇವೋsಮಿತೌಜಾಃ  ಶೃಣ್ವನ್ತು ಸರ್ವೇ ವಚನಂ ಮದೀಯಮ್ ।

ಪುರೈವೋಕ್ತಂ ತನ್ಮಯಾ ಕನ್ಯಕಾಯಾ ಮಾಯಾವ್ರತೋ ನಾರ್ಹತಿ ಸನ್ನಿಧಿಸ್ಥಿತಿಮ್ ॥೨೦.೨೦೦॥

 

ಆಗ ಎಣಿಯಿರದ ಕಸುವಿನ ಶ್ರೀಕೃಷ್ಣನು - ‘ಎಲ್ಲರೂ ನನ್ನ ಮಾತನ್ನು ಕೇಳಿರಿ. ಕಪಟ ವ್ರತವನ್ನು ಧರಿಸಿದ ಕಪಟ ಸನ್ಯಾಸಿಯು ಕನ್ಯೆಯ ಸನ್ನಿಧಿಯಲ್ಲಿ ಇರುವಿಕೆಯನ್ನು ಹೊಂದಲು ಯೋಗ್ಯನಲ್ಲ ಎಂದು ನನ್ನಿಂದ ಮೊದಲೇ ಹೇಳಲ್ಪಟ್ಟಿತ್ತು’. 

 

ತಾಂ ಮೇ ವಾಚಂ ನಾಗ್ರಹೀದಗ್ರಜೋsಯಂ ಬಹೂನ್ ದೋಷಾನ್ ವ್ಯಾಹರತೋsಪ್ಯತೋ ಮಯಾ

ಅನುಲ್ಲಙ್ಘ್ಯತ್ವಾದಗ್ರಜೋsನುಪ್ರವೃತ್ತಃ ಕನ್ಯಾಗೃಹೇ ವಾಸನೇ ಕೂಟಬುದ್ಧೇಃ ॥೨೦.೨೦೧॥

 

‘ಈ ಅಣ್ಣನು  ನನ್ನಿಂದ (ಸನ್ಯಾಸಿಯನ್ನು ಕುರಿತು) ಬಹಳ ದೋಷಗಳು ಹೇಳಲ್ಪಟ್ಟರೂ ಕೂಡಾ  ಅದನ್ನು  ಸ್ವೀಕರಿಸಲಿಲ್ಲ. ಮೋಸವನ್ನೇ ಮನಸ್ಸಿನಲ್ಲಿ ಇಟ್ಟುಕೊಂಡ ಅವನ ಕನ್ಯಾಗಾರ ವಾಸದ ವಿಷಯವು ಅಣ್ಣನ ಮಾತನ್ನು ಮೀರಲಾರದೇ ನನ್ನಿಂದ ಅನುಸರಿಸಲ್ಪಟ್ಟಿತು’.

 

ಅತೀತಶ್ಚಾಯಂ ಕಾರ್ಯ್ಯಯೋಗೋsಸಮಕ್ಷಂ ಹೃತಾ ಕನ್ಯಾsತೋ ನೋsತ್ರ ಕಾ ಮಾನಹಾನಿಃ।

ಭೂಯಸ್ತರಾಂ ಮಾನಿನಸ್ತಸ್ಯ ಸಾ ಸ್ಯಾಜ್ಜ್ಞಾತಾ ಚ ವೋ ವಿಪೃಥೋಃ ಪಾರ್ತ್ಥತಾsಸ್ಯ ॥೨೦.೨೦೨॥

 

‘ನಾವು ಇಲ್ಲದಿರುವಾಗ ಈರೀತಿಯಾದ ಕಾರ್ಯವು ನಡೆದು ಹೋಗಿದೆ. ಕನ್ಯೆ ಅಪಹೃತಳಾಗಿದ್ದಾಳೆ. ಆದರೆ ಈ ವಿಚಾರದಲ್ಲಿ ವೀರನೆಂಬ ಅಹಂಕಾರವುಳ್ಳ ಅರ್ಜುನನಿಗೆ ಮಾನಹಾನಿಯೇ ಹೊರತು ನಮಗಲ್ಲ. ನಮಗೆ ಆ ರೀತಿ ಸುಭದ್ರೆಯನ್ನು ಅರ್ಜುನ ಕರೆದೊಯ್ದ ವಿಷಯ ತಿಳಿದದ್ದು ವಿಪೃಥುವಿನಿಂದ.

 

ದೇಯಾ ಚ ಕನ್ಯಾ ನಾಸ್ತಿ ಪಾರ್ತ್ಥೇನ ತುಲ್ಯೋ ವರೋsಸ್ಮಾಕಂ ಕೌರವೇಯಶ್ಚ ಪಾರ್ತ್ಥಃ ।

ಪೌತ್ರಶ್ಚ ಕೃಷ್ಣಸ್ಯ ಸುಪೂರ್ಣ್ಣಶಕ್ತೇಃ ಪೈತೃಷ್ವಸೇಯೋ ವೀರತಮೋ ಗುಣಾಢ್ಯಃ ॥೨೦.೨೦೩॥

 

‘ಕನ್ನಿಕೆಯನ್ನು ಕೊಡಬೇಕು ಎಂದಾದಮೇಲೆ ಅರ್ಜುನನಿಗೆ ಸಮನಾದ ವರ ಇನ್ನೊಬ್ಬ ಇಲ್ಲವೇ ಇಲ್ಲ. ಅವನು ಕುರುವಂಶಕ್ಕೆ ಸೇರಿದವನು. ವೇದವ್ಯಾಸರ ಮೊಮ್ಮಗ. ನಮ್ಮ ಅತ್ತೆಯ ಮಗನಾಗಿದ್ದಾನೆ. ವೀರನೂ ಗುಣಾಢ್ಯನೂ ಆಗಿದ್ದಾನೆ’.

 

ಅರ್ತ್ಥ್ಯೋsಸ್ಮಾಭಿಃ ಸ್ವಯಮೇವಾಹರತ್ ಸ ಶಕ್ರಾತ್ಮಜೋ ನಾತ್ರ ನಃ ಕಾರ್ಯ್ಯಹಾನಿಃ ।

ಅನುದ್ರುತ್ಯೈನಂ ಯದಿ ಚ ಸ್ಯಾತ್ ಪರಾಜಯೋ ಹಾನಿರ್ದ್ದೃಢಂ ಯಶಸೋ ವೋ ಭವೇತ ॥೨೦.೨೦೪

 

‘ಕನ್ನಿಕಾಗ್ರಹಣಕ್ಕಾಗಿ ನಮ್ಮಿಂದ ಬೇಡಲ್ಪಡಬೇಕಾದವನು ತಾನಾಗಿಯೇ ಬಂದು ಅಪಹರಿಸಿಕೊಂಡು ಹೋದ. ಅದರಿಂದ ನಾವು ಕಳೆದುಕೊಂಡಿದ್ದೇನೂ ಇಲ್ಲ. ಒಂದು ವೇಳೆ ನಾವು ಅವನನ್ನು ಬೆನ್ನಟ್ಟಿ ಯುದ್ಧಮಾಡಿ  ಸೋತರೆ ನಮ್ಮ ಕೀರ್ತಿ-ಯಶಸ್ಸು ನಾಶವಾಗುತ್ತದೆ’. 

 

ಜಿತ್ವಾ ಯದ್ಯೇನಂ ಕನ್ಯಕಾ ಚಾsಹೃತಾ ಚೇತ್ ಪರಾಮೃಷ್ಟಾಂ ನೈವ ಕಶ್ಚಿದ್ಧಿ ಲಿಪ್ಸೇತ್ ।

ಅತೋ ನ ಮೇ ರೋಚತೇ ವೋsನುಯಾನಮಿತ್ಯೂಚಿವಾನಾಸ ತೂಷ್ಣೀಂ ಪರೇಶಃ ॥೨೦.೨೦೫ ॥

 

‘ಒಂದು ವೇಳೆ ಅವನನ್ನು ನಾವು ಗೆದ್ದು ಸುಭದ್ರೆಯನ್ನು ತಂದರೆ, ಬೇರೊಬ್ಬನ ಜೊತೆ ಓಡಿಹೋದವಳೆಂದು ಅವಳನ್ನು ಯಾರೂ ಕೂಡಾ ಬಯಸುವುದಿಲ್ಲ. ಆ ಕಾರಣದಿಂದ ನಿಮ್ಮ ಗೆಲುವಿಗಾಗಿ ಅರ್ಜುನನನ್ನು ಹಿಂಬಾಲಿಸಿ ಹೋಗುವುದು ನನಗೆ ಇಷ್ಟವಿಲ್ಲ’. ಈ ರೀತಿಯಾಗಿ ಜಗದೊಡೆಯನಾದ ಕೃಷ್ಣನು ಹೇಳಿ ಸುಮ್ಮನಾದನು.

 

ಶ್ರುತ್ವಾ ಹಲೀ ಕೃಷ್ಣವಾಕ್ಯಂ ಬಭಾಷೇ ಮಾ ಯಾತ ಚಿತ್ತಂ ವಿದಿತಂ ಮಮಾಸ್ಯ

ಅಸ್ಯಾನುವೃತ್ತಿರ್ವಿಜಯಾಯ ನಃ ಸ್ಯಾಚ್ಛುಭಾಯ ಶಾನ್ತ್ಯೈ ಪರತಶ್ಚ ಮುಕ್ತ್ಯೈ ॥೨೦.೨೦೬॥

 

ಬಲರಾಮನು ಕೃಷ್ಣನ ಮಾತನ್ನು ಕೇಳಿ ಮಾತನಾಡಿದ. ‘ಪ್ರದ್ಯುಮ್ನ ಸಾಮ್ಬರೇ ತೆರಳಬೇಡಿ. ಇವನ ಮನದೊಳಗಣ ಅಭಿಪ್ರಾಯ ಏನು ಎಂಬುದು ನನಗೆ ತಿಳಿಯಿತು. ಕೃಷ್ಣನ ಅನುಸರಣೆಯು ನಮಗೆ ವಿಜಯಕ್ಕಾಗಿ, ಶುಭಕ್ಕಾಗಿ, ಶಾಂತಿಗಾಗಿ. ಅದು ಪರಲೋಕದಲ್ಲಿ ಮುಕ್ತಿಗೂ ಕಾರಣವಾಗುತ್ತದೆ’.

Mahabharata Tatparya Nirnaya Kannada 20: 189 - 195

 

ತತಃ ಸ ಆಬದ್ಧತಳಾಙ್ಗುಲಿತ್ರಃ ಸತೂಣೀರಶ್ಚಾಪಮಾಯಮ್ಯ ಬಾಣೈಃ ।

ಚಕ್ರೇsನ್ತರಿಕ್ಷಮ್ ಪ್ರದಿಶೋ ದಿಶಶ್ಚ ನಿರನ್ತರಂ ಶಿಕ್ಷಯಾ ವಿದ್ಯಯಾ ಚ ॥೨೦.೧೮೯

 

ಅಂಗೈ ಹಾಗೂ ಬೆರಳುಗಳ ಕವಚ ತೊಟ್ಟ ಅರ್ಜುನನು, ಬತ್ತಳಿಕೆಯಿಂದ ಸಹಿತನಾಗಿ, ಬಿಲ್ಲನ್ನು ಹೆದೆಯೇರಿಸಿ, ದಿಕ್ಕು-ವಿದಿಕ್ಕುಗಳನ್ನು ತನ್ನ ಅಭ್ಯಾಸದಿಂದಲೂ, ವಿದ್ಯೆಯಿಂದಲೂ, ಬಾಣಗಳಿಂದ ನಿಬಿಡವನ್ನಾಗಿ ಮಾಡಿದನು. (ಅಂದರೆ: ಎಲ್ಲೆಡೆ ಬಾಣಗಳ ಮಳೆಗರೆದನು).  

 

ಚಕ್ರೇ ಸಾರತ್ಥ್ಯಂ ಕೇಶವೇನೈತದರ್ತ್ಥೇ ಸುಶಿಕ್ಷಿತಾ ತಸ್ಯ ಸಮ್ಯಕ್ ಸುಭದ್ರಾ ।

ತಯಾ ಪಾರ್ತ್ಥೋ ವಾರಿತೋ ನೈವ ಕಞ್ಚಿದ್ ಭಿನ್ನತ್ವಚಂ ಕೃತವಾನ್ ಕ್ರೀಡಮಾನಃ ॥೨೦.೧೯೦॥

 

ಕೃಷ್ಣನಿಂದ ಇದಕ್ಕಾಗಿಯೇ ಶಿಕ್ಷಣವನ್ನು ಹೊಂದಿದ್ದ ಸುಭದ್ರೆಯು, ನುರಿತ ಸಾರಥಿಯ ತರದಲ್ಲಿ ಸಾರಥ್ಯವನ್ನು ಮಾಡಿದಳು. ಅವಳಿಂದ (ಯಾರನ್ನೂ ಘಾಸಿಗೊಳಿಸಬಾರದು ಎಂದು) ತಡೆಯಲ್ಪಟ್ಟ ಅರ್ಜುನನು ಯಾರೊಬ್ಬನನ್ನೂ ಕೂಡಾ ಗಾಯಗೊಳಿಸಲಿಲ್ಲ. 

 

ಸ ಶಿಕ್ಷಯಾ ತ್ವದ್ಭುತಯಾ ಶರೌಘೈರ್ವಿದ್ರಾಪ್ಯ ತಾನ್ ಭೀಷಯಿತ್ವೈವ ಸರ್ವಾನ್

ನಿರ್ಗ್ಗತ್ಯ ಪುರ್ಯ್ಯಾ ವಿಪೃಥುಂ ದದರ್ಶ ರಾಮೇಣ ಪುರ್ಯ್ಯಾರಕ್ಷಣೇ ಸನ್ನಿಯುಕ್ತಮ್ ೨೦.೧೯೧

 

ಅರ್ಜುನನು ತನ್ನ ಅದ್ಭುತವಾಗಿರುವ ಅಭ್ಯಾಸಬಲದಿಂದ, ಬಾಣಗಳ ಸಮೂಹದಿಂದ ಅವರೆಲ್ಲರನ್ನೂ  ಹೆದರಿಸಿ(ಓಡಿಸಿ), ಪಟ್ಟಣದಿಂದ ಹೊರಬಂದು, ಬಲರಾಮನಿಂದ ಪಟ್ಟಣದ ರಕ್ಷಣೆಯಲ್ಲಿ ನೇಮಕವಾಗಿರುವ ವಿಪೃಥುವನ್ನು ಕಂಡ.

 

ಪ್ರಿಯಂ ಕುರ್ವನ್ನಿವ ರಾಮಸ್ಯ ಸೋsಪಿ ವ್ಯಾಜೇನ ಪಾರ್ತ್ಥಂ ಸೇನಯೈವಾsವೃಣೋತ್ ತಮ್ ।

ಕೃಷ್ಣಾದೇಶಾನ್ನೈವ ಪಾರ್ತ್ಥಸ್ಯ ಚಕ್ರೇ ಸಮ್ಯಗ್ರೋಧಂ ಯುಯುಧೇ ಚ ಚ್ಛಲೇನ ॥೨೦.೧೯೨॥

 

ಆ ವಿಪೃಥುವಾದರೋ, ಬಲರಾಮನಿಗೆ ಪ್ರಿಯವನ್ನು ಮಾಡುವನೋ ಎಂಬಂತೆ, ನೆಪಮಾತ್ರದಿಂದ ಅರ್ಜುನನನ್ನು ಸೇನೆಯೊಂದಿಗೆ ತಡೆದ. ಆದರೆ ಕೃಷ್ಣನ ಆದೇಶವಿರುವುದರಿಂದ ಚೆನ್ನಾಗಿ ಯುದ್ಧ ಮಾಡಲಿಲ್ಲ. ಕೇವಲ ಯುದ್ಧಮಾಡಿದವನಂತೆ ತೋರಿದ. 

 

ಏಕೋ ಹ್ಯಸೌ ಮರುತಾಂ ಸೌಮ್ಯನಾಮಾ ಶುಶ್ರೂಷಾರ್ಥಂ ವಾಸುದೇವಸ್ಯ ಜಾತಃ ।

ತಂ ಯಾದವಂ ಶರವರ್ಷೈರ್ವವರ್ಷ ಯಥಾ ಕ್ಷತಂ ನ ಭವೇತ್ ಸವ್ಯಸಾಚೀ ॥೨೦.೧೯೩

 

ಮೂಲತಃ ಸೌಮ್ಯ ಎನ್ನುವ ಮರುತ್ ದೇವತೆಯಾದ ವಿಪೃಥು ಪರಮಾತ್ಮನ ಶುಶ್ರೂಷೆಗಾಗಿಯೇ ಹುಟ್ಟಿದ್ದ. ಆ ಯಾದವನ ಮೇಲೆ ಅರ್ಜುನನು ಯಾವುದೇ ಗಾಯವಾಗದಂತೆ ಬಾಣಗಳ ಮಳೆಗರೆದ.

 

ನಿರಾಯುಧಂ ವಿರಥಂ ಚೈವ ಚಕ್ರೇ ಪಾರ್ತ್ಥಃ ಸೇನಾಂ ತಸ್ಯ ನೈವಾಹನಚ್ಚ ।

ದೃಷ್ಟ್ವಾ ಶರಾಂಸ್ತಸ್ಯತೀಕ್ಷ್ಣಾಂಸ್ತ್ವಚೋsಪಿ ನಚ್ಛೇದಕಾನ್ ವಿಪೃಥುಃ ಸನ್ತುತೋಷ ॥೨೦.೧೯೪॥

 

ಯುದ್ಧದಲ್ಲಿ ಅರ್ಜುನನು ವಿಪೃಥುವನ್ನು ಆಯುಧಹೀನನನ್ನಾಗಿಯೂ, ರಥಹೀನನನ್ನಾಗಿಯೂ ಮಾಡಿದ. ಆದರೆ ಅವನ ಸೇನೆಯನ್ನು ಕೊಲ್ಲಲಿಲ್ಲ. ಅರ್ಜುನನ ತೀಕ್ಷ್ಣವಾಗಿರುವ ಬಾಣಗಳು ತನ್ನ ಚರ್ಮವನ್ನೂ ಕೂಡಾ ಭೇದಿಸದಿರುವುದನ್ನು ಕಂಡ ವಿಪೃಥು ಬಹಳ ಸಂತೋಷಪಟ್ಟ.

 

ಶಿಕ್ಷಾಂ ಪಾರ್ತ್ಥಸ್ಯಾಧಿಕಂ ಮಾನಯಾನ ಉಪೇತ್ಯ ಪಾರ್ತ್ಥಂ ಚ ಶಶಂಸ ಸರ್ವಮ್ ।

ಆಜ್ಞಾಂ ವಿಷ್ಣೋಃ ಸನ್ನಿಯುದ್ಧ್ಯನ್ನಿವಾಸ್ಮೈ ಕೃತ್ತಾಯುಧಃ ಫಲ್ಗುನೇನೈವ ಪೂರ್ವಮ್ ॥೨೦.೧೯೫॥

 

ಅರ್ಜುನನಿಂದ ಆಯುಧಹೀನನೂ, ರಥಹೀನನೂ ಆದ ವಿಪೃಥುವು ತನ್ನ ಬಾಹುಗಳಿಂದಲೇ ಅರ್ಜುನನೊಂದಿಗೆ ಯುದ್ಧಮಾಡಲು ಧಾವಿಸುತ್ತಿರುವಂತೆ ತೋರುತ್ತಾ, ಅರ್ಜುನನ ಬಳಿ ಬಂದು,   ಅರ್ಜುನನ ನಿರಂತರವಾದ ಅಭ್ಯಾಸವನ್ನು ಶ್ಲಾಘಿಸುವವನಾಗಿ, ಕೃಷ್ಣನ ಆಜ್ಞೆ ಏನಿದೆ, ಅದರಂತೆ ನಾನು ಕಾರ್ಯ ನಿರ್ವಹಿಸಿದೆ ಎಂದು ಎಲ್ಲವನ್ನೂ ಅರ್ಜುನನಿಗೆ ಹೇಳಿದನು.