ವಿಪ್ರಾಪಹಾಸಾತ್ ಕುತ್ಸಿತಯೋನಿತಸ್ತಾಃ ಕನ್ಯಾತೀರ್ತ್ಥೇ ಪಾಣ್ಡವಃ ಸಮ್ಪ್ರಮುಚ್ಯ ।
ಪ್ರಾಪ್ತಃ ಪ್ರಭಾಸಂ ವಾಸುದೇವಾನುಜಾತಾಂ ಶುಶ್ರಾವ ರಾಮೇಣ ಸುಯೋಧನೋದ್ಯತಾಮ್ ॥೨೦.೧೬೫॥
ಹೀಗೆ ಕನ್ಯಾತೀರ್ಥದಲ್ಲಿ ಬ್ರಾಹ್ಮಣರನ್ನು ಅಪಹಾಸ್ಯ
ಮಾಡಿದ್ದರಿಂದ ಕೆಟ್ಟ ಜನ್ಮವನ್ನು ಹೊಂದಿದ್ದ ಅಪ್ಸರೆಯರನ್ನು ಶಾಪವಿಮೋಚನೆಗೊಳಿಸಿದ ಅರ್ಜುನ, ಅಲ್ಲಿಂದ
ಪ್ರಭಾಸಕ್ಷೇತ್ರಕ್ಕೆ ಬಂದ. ಅಲ್ಲಿ ಕೃಷ್ಣನ ತಂಗಿಯಾದ ಸುಭದ್ರೆಯನ್ನು ಬಲರಾಮ ದುರ್ಯೋಧನನಿಗೆ ಕೊಡಬೇಕೆಂದು
ಉದ್ದೇಶಿಸಿರುವ ವಿಷಯವನ್ನು ತಿಳಿದ.
ವಿಚಿನ್ತ್ಯ ಕಾರ್ಯ್ಯಂ
ಯತಿರೂಪಂ ಗೃಹೀತ್ವಾ ಕುಶಸ್ಥಲೀಂ ಪ್ರಯಯೌ ತಂ ಸಮೀಪೇ ।
ಪ್ರಾಪ್ತಂ ಕೃಷ್ಣಃ
ಪ್ರಾಹಸತ್ ಸಂವಿಜಾನನ್ ಸತ್ಯಾಸಹಾಯಃ ಶಯನೀಯಾಧಿರೂಢಃ ॥೨೦.೧೬೬॥
ಏನು ಮಾಡಬೇಕೆಂದು ಚಿಂತಿಸಿದ ಅರ್ಜುನ ಸನ್ಯಾಸಿ ವೇಷವನ್ನು ಧರಿಸಿ
ರಾಜಧಾನಿ ಕುಶಸ್ಥಲೀಗೆ(ದ್ವಾರಕೆಗೆ) ತೆರಳಿದ. ತನ್ನ ಬಳಿ ಬಂದಿರುವ ಅರ್ಜುನನನ್ನು ಸತ್ಯಭಾಮೆಯ
ಜೊತೆಯಲ್ಲಿ ಶಯನೀಯಾಧಿರೂಢನಾಗಿರುವ ಶ್ರೀಕೃಷ್ಣ ನೋಡಿ ನಕ್ಕ.
ಸರ್ವಜ್ಞಾ ಸಾ ಲೀಲಯಾ
ಹಾಸಹೇತುಮಪೃಚ್ಛತ್ ತಂ ಸೋsಪಿ ತಸ್ಯೈ ಬಭಾಷೇ ।
ಲೀಲಾಭಾಜೌ ದರ್ಶನಾರ್ತ್ಥಂ
ಪುನಸ್ತಾವಗಚ್ಛತಾಂ ರೈವತಂ ಶೈಲರಾಜಮ್ ॥೨೦.೧೬೭॥
ಸತ್ಯಭಾಮೆ ಎಲ್ಲವನ್ನೂ ಬಲ್ಲವಳಾಗಿದ್ದರೂ ಕೂಡಾ, ಲೀಲೆಯಿಂದ
ಶ್ರೀಕೃಷ್ಣನಲ್ಲಿ ಅವನ ನಗುವಿಗೆ ಕಾರಣವನ್ನು ಕೇಳಿದಳು. ಅವನಾದರೋ, ಅವಳಿಗೆ ಎಲ್ಲವನ್ನೂ ಹೇಳಿದ. ಲೀಲೆಗಾಗಿ ಸತ್ಯಭಾಮಾ-ಕೃಷ್ಣರು
ಆ ಯತಿಯ ದರ್ಶನಕ್ಕೆಂದು ಶ್ರೇಷ್ಠ ಪರ್ವತವಾಗಿರುವ
ರೈವತವನ್ನು ಕುರಿತು ಬಂದರು.
ಆಕ್ರೀಡೋsಸೌ
ವೃಷ್ಣಿಭೋಜಾನ್ಧಕಾನಾಂ ತತ್ರಾಪಶ್ಯತ್ ಕೇಶವಃ ಫಲ್ಗುನಂ ತಮ್ ।
ಸ್ವಸುರ್ದ್ದಾನೇ ಸಃ
ಪ್ರತಿಜ್ಞಾಂ ರಹೋsಸ್ಮೈ ಚಕ್ರೇ ಕೃಷ್ಣೋsಥಾsಸದತ್ ಸರ್ವವೃಷ್ಣೀನ್ ॥೨೦.೧೬೮॥
ಈ ಪರ್ವತವು ವೃಷ್ಣಿ-ಭೋಜ-ಅನ್ಧಕ ಎನ್ನುವ ಯಾದವ
ವಂಶದವರಿಗೆ ಕ್ರೀಡಾಸ್ಥಳವಾಗಿತ್ತು. ಅಲ್ಲಿ ಕೃಷ್ಣನು ಅರ್ಜುನನನ್ನು ರಹಸ್ಯವಾಗಿ ಕಂಡು, ತನ್ನ
ತಂಗಿಯನ್ನು ಅವನಿಗೆ ಕೊಡುವ ವಿಚಾರದಲ್ಲಿ ಪ್ರತಿಜ್ಞೆ ಮಾಡಿದನು. ತದನಂತರ ಕೃಷ್ಣನು ಸಮಸ್ತ
ಯಾದವರನ್ನು ಹೊಂದಿದ.
ದೃಷ್ಟ್ವಾ ಗಿರೌ ರೌಹಿಣೇಯೋ
ಯತೀನ್ದ್ರವೇಷಂ ಪಾರ್ತ್ಥಂ ಜ್ಞಾತಿಯುಕ್ತಃ ಪ್ರಣಮ್ಯ ।
ಚಕ್ರೇ ಪೂಜಾಂ ಫಲ್ಗುನೋsಪಿ ಪ್ರಣಾಮಂ
ಗುಣಜ್ಯೇಷ್ಠೋsಸೀತಿ ಚಕ್ರೇ ಬಲಾಯ ॥೨೦.೧೬೯॥
ರೈವತಪರ್ವತದಲ್ಲಿ ಯತಿ ವೇಷಧಾರಿ ಅರ್ಜುನನನ್ನು ಕಂಡ ಬಲರಾಮನು, ಬಾಂಧವರಿಂದ ಕೂಡಿಕೊಂಡು,
ನಮಸ್ಕಾರ ಮಾಡಿ ಸತ್ಕರಿಸಿದನು. ಆಗ ಅರ್ಜುನನು ‘ನೀನು ಗುಣದಲ್ಲಿ ನನಗಿಂತ ಶ್ರೇಷ್ಠನು’ ಎಂದು
ಹೇಳಿ, ಹಿರಿಯನಾದ ಬಲರಾಮನಿಗೆ ನಮಸ್ಕರಿಸಿದನು.
No comments:
Post a Comment