ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, September 10, 2021

Mahabharata Tatparya Nirnaya Kannada 20116_20120

 

ಸಮನ್ತತೋ ಯೋಜನಾನಾಂ ಶತೇ ದ್ವೇ ಪ್ರವೃದ್ಧಮಿನ್ದ್ರಸ್ಯ ಸ ರತ್ನಪರ್ವತಮ್ ।

ನಿತ್ಯಾಮೃತಸ್ರಾವಿ ಜಲೇಶ್ವರಸ್ಯ ಚ್ಛತ್ರಂ ಚ ದೋರ್ಭ್ಯಾಂ ಗರುಡೇ ನ್ಯಧಾದ್ಧರಿಃ ॥೨೦.೧೧೬

 

ನಾರಾಯಣನು ಇನ್ನೂರು ಯೋಜನಗಳ ಪರ್ಯಂತ ಬೆಳೆದಿರುವ ಇಂದ್ರನ ರತ್ನಪರ್ವತವನ್ನು ಮತ್ತು ಅಮೃತವನ್ನೇ ಸುರಿಸುವ ವರುಣನ ಛತ್ರವನ್ನೂ ತನ್ನ ಕೈಗಳಿಂದ ಎತ್ತಿ ಗರುಡನಲ್ಲಿಟ್ಟನು.

 

[ಭಾಗವತದಲ್ಲಿ(೧೦.೬೪.೧೪-೧೫) ಈ ಕುರಿತಾದ ವಿವರ ಕಾಣಸಿಗುತ್ತದೆ: ‘ತತ್ರಾಪಶ್ಯದ್ ಯದುಶ್ರೇಷ್ಠೋ ವಿಚಿತ್ರಂ ಮಣಿಪರ್ವತಮ್ ಛತ್ರಂ ಚ ವಾರುಣಂ ಹೃದ್ಯಂ ಸಲಿಲಸ್ರಾವಿ ಭಾರತ ಶಕ್ರಾಯ ಪ್ರಾಹಿಣೋತ್  ಭೂಯಃ ಕೇಶವೋ ಮಣಿಪರ್ವತಮ್ ವರುಣಾಯ ತಥಾ ಚ್ಛತ್ರಂ  ಪ್ರಾಹಿಣೋದ್ ದೈತ್ಯಕಿಙ್ಕರೈಃ’]   

 

ಸ್ವಯಂ ಚ ಸತ್ಯಾಸಹಿತಃ ಸಮಾರುಹತ್ ಸ ಚಾಶ್ರಮೇಣೈವ ಯಯೌ ತ್ರಿವಿಷ್ಟಪಮ್ ।

ಅಭಿಪ್ರಯಾತೋsಖಿಲಲೋಕಪಾಲೈರ್ಜ್ಜನಾರ್ದ್ದನಃ ಶಕ್ರಗೃಹಂ ವಿವೇಶ ॥೨೦.೧೧೭

 

ಸತ್ಯಭಾಮೆಯಿಂದ ಕೂಡಿಕೊಂಡ ಶ್ರೀಕೃಷ್ಣ, ತಾನೂ ಕೂಡಾ ಗರುಡನ ಹೆಗಲೇರಿದ. ಅವನಾದರೋ, ಯಾವುದೇ ಶ್ರಮವಿಲ್ಲದೇ ಎಲ್ಲವನ್ನೂ ಹೊತ್ತು ಸ್ವರ್ಗಲೋಕಕ್ಕೆ ತೆರಳಿದ. ಸಮಸ್ತ ಲೋಕಪಾಲಕರಿಂದ (ಕುಬೇರ, ವರುಣ ಮೊದಲಾದವರಿಂದ) ಅನುಸೃತನಾದ ಜನಾರ್ದನನು ಇಂದ್ರನ ಮನೆಯನ್ನು ಪ್ರವೇಶಿಸಿದ.

 

ಸಮ್ಪೂಜಿತಃ ಸತ್ಯಭಾಮಾಸಹಾಯಃ ಶಕ್ರೇಣ ಶಚ್ಯಾ ಸಹಿತೇನ ಸಾದರಮ್ ।

ದದಾವದಿತ್ಯಾ ಅಪಿ ಕುಣ್ಡಲೇ ಶುಭೇ ಸಮಸ್ತದೇವೈರ್ಮ್ಮುನಿಭಿಶ್ಚ ವನ್ದಿತಃ ॥೨೦.೧೧೮

 

ಸತ್ಯಭಾಮೆಯಿಂದೊಡಗೂಡಿದ ಆ ಕೃಷ್ಣನು ಶಚಿಯಿಂದ ಕೂಡಿರುವ ಇಂದ್ರನಿಂದ ಆದರಪೂರ್ವಕವಾಗಿ ಪೂಜಿತನಾಗಿ, ಸಮಸ್ತ ದೇವತೆಗಳಿಂದಲೂ, ಮುನಿಗಳಿಂದಲೂ ವಂದಿಸಲ್ಪಟ್ಟವನಾಗಿ, ಮಂಗಳಕರವಾದ ಆ ಎರಡು ಕುಂಡಲಗಳನ್ನು ಅದಿತಿಗೆ ನೀಡಿದನು.   

 

ತಮಾಸುರಾವೇಶವಶಾದಜಾನತೀ ಸತ್ಯಾಂ ಚ ಸರ್ವಪ್ರಭವೌ ಜಗತ್ಪ್ರಭೂ ।

ನಿರ್ದ್ದೋಷಸೌಖ್ಯೈಕತನೂ ಶುಭಾಶಿಷಸ್ತಾಭ್ಯಾಂ ದದೌ ಸಾsದಿತಿರಾತ್ಮಪುತ್ರವತ್ ॥೨೦.೧೧೯

 

ಅದಿತಿಯಾದರೋ, ಅಸುರಾವೇಶದಿಂದಾಗಿ, ದೋಷವೇ ಇಲ್ಲದ, ಆನಂದಪೂರ್ಣವಾಗಿರುವ ಶರೀರವುಳ್ಳ, ಎಲ್ಲವುದರ ಹುಟ್ಟಿಗೆ ಕಾರಣರಾಗಿರುವ, ಜಗತ್ತಿಗೇ ತಂದೆ-ತಾಯಿಯಾಗಿರುವ ಕೃಷ್ಣ-ಸತ್ಯಭಾಮೆಯರಿಗೆ, ತನ್ನ ಮಕ್ಕಳನ್ನು ಆಶೀರ್ವದಿಸುವಂತೆ ಒಳ್ಳೆಯ ಆಶೀರ್ವಾದವನ್ನು ಮಾಡಿದಳು.

 

[‘ನ ತೇ ಜರಾ ನ ವೈರೂಪ್ಯಂ ಕಾನ್ತೇನ ಸಹ ವಿಪ್ರೀಯಮ್ ಭೂಯಾತ್  ಕಲ್ಯಾಣಿ ಸುವ್ಯಕ್ತಂ ಮತ್ಪ್ರಸಾದಾತ್ ಕದಾಚನ’ (ಭಾಗವತ ೧೦.೬೫.೧೦)- ‘ನಿನಗೆ ಮುದಿತನ ಬರದಿರಲಿ, ವೈರೂಪ್ಯ ಬರದಿರಲಿ, ನಿನಗೆ ಗಂಡನ ಜೊತೆಗೆ ಯಾವುದೇ ಅನಿಷ್ಟಗಳು ಬರದಿರಲಿ, ನನ್ನ ಅನುಗ್ರಹದಿಂದ ಇವೆಲ್ಲವೂ ಆಗಲಿದೆ’ ಎಂದು ಅದಿತಿ ಜಗತ್ತಿಗೇ ತಂದೆ-ತಾಯಿಯರಾದ ಕೃಷ್ಣ-ಸತ್ಯಭಾಮೆಯರಿಗೆ ಆಶೀರ್ವದಿಸಿದಳು! ಇದಕ್ಕೆ ಕಾರಣ ಅಸುರಾವೇಶ ಎನ್ನುವ ನಿರ್ಣಯವನ್ನು ಆಚಾರ್ಯರು ಇಲ್ಲಿ ನೀಡಿದ್ದಾರೆ].   

 

ಅಥೋ ಸದಾನನ್ದಚಿದಾತ್ಮದೇಹಃ ಸ ನನ್ದನೋದ್ಯಾನಮಜೋsನುರೂಪಯಾ ।

ಅನನ್ತಶಕ್ತಿಃ  ಸಹ ಸತ್ಯಭಾಮಯಾ ವಿವೇಶ ರನ್ತುಂ ಪ್ರಿಯಯಾsಖಿಲೇಶ್ವರಃ ॥೨೦.೧೨೦ 

 

ತದನಂತರ,  ಸರ್ವಸಮರ್ಥನಾಗಿರುವ, ದೋಷವಿಲ್ಲದ ಜ್ಞಾನಾನಂದಗಳೇ ಮೈವೆತ್ತು ಬಂದಿರುವ, ಎಲ್ಲರ ಒಡೆಯನಾಗಿರುವ, ಎಣೆಯಿರದ ಶಕ್ತಿಯುಳ್ಳ ನಾರಾಯಣನು ತನ್ನಂತೇ ಇರುವ  ಸತ್ಯಭಾಮೆಯಿಂದ ಕೂಡಿಕೊಂಡು, ಕ್ರೀಡಿಸಲೆಂದು ನಂದನೋದ್ಯಾನವನ್ನು (ದೇವತೆಗಳ ಉದ್ಯಾನವನ್ನು) ಪ್ರವೇಶಿಸಿದನು .


No comments:

Post a Comment