ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, September 11, 2021

Mahabharata Tatparya Nirnaya Kannada 20126_20131

 

ಸ ತೇನ ವೃಕ್ಷೇಣ ಸಹೈವ ಕೇಶವಸ್ತಯಾ ಚ ದೇವ್ಯಾssರುಹದಗ್ರ್ಯಪೌರುಷಮ್ ।

ಖಗೇಶ್ವರಂ ತಚ್ಚ ನಿಶಮ್ಯ ಶಚ್ಯಾ ಪ್ರಚೋದಿತೋ ವಾಸವ ಆಗಮತ್ ಸುರೈಃ ॥ ೨೦.೧೨೬  

 

ನಾರಾಯಣನು ಪಾರಿಜಾತ ವೃಕ್ಷ ಹಾಗೂ ಸತ್ಯಭಾಮೆಯಿಂದ ಕೂಡಿಕೊಂಡು ಶ್ರೇಷ್ಠವಾದ ಪರಾಕ್ರಮವುಳ್ಳ ಗರುಡನನ್ನೇರಿದನು. ಅದನ್ನು ಕೇಳಿದ, ಶಚಿಯಿಂದ ಪ್ರಚೋದಿಸಲ್ಪಟ್ಟ ಇಂದ್ರನು ದೇವತೆಗಳಿಂದ ಒಡಗೂಡಿ ಯುದ್ಧಕ್ಕೆಂದು ಬಂದ.

 

ತಾನಾಸುರಾವೇಶಯುತಾನ್ ಹರೇಶ್ಚ ಬಲಪ್ರಕಾಶಾಯ ಸಮುದ್ಯತಾನ್ ಸುರಾನ್ ।

ನ್ಯವಾರಯಚ್ಛಾರ್ಙ್ಗಶರಾಸನಚ್ಯುತೈರ್ಹರಿಪ್ರಿಯಾ ಬಾಣವರೈಃ ಸಮಸ್ತಶಃ ॥ ೨೦.೧೨೭  

 

ಅಸುರಾವೇಶದಿಂದ ಕೂಡಿರುವ, ಅದಕ್ಕಾಗಿಯೇ ಪರಮಾತ್ಮನ ಎದುರು ಬಲವನ್ನು ತೋರಿಸಲೆಂದು ಉದ್ಯತರಾಗಿರುವ ಆ ಎಲ್ಲಾ ದೇವತೆಗಳನ್ನು ಸತ್ಯಭಾಮೆಯು ಶಾರ್ಙ್ಗವೆಂಬ ಬಿಲ್ಲಿನಿಂದ ಬಿಡಲ್ಪಟ್ಟ ಶ್ರೇಷ್ಠವಾದ ಬಾಣಗಳಿಂದ ತಡೆದಳು.

 

ನಿರಾಯುಧಂ ವೈಶ್ರವಣಂ ಚಕಾರ ಚಿಕ್ಷೇಪ ಚಾಬ್ಧೌ ಗರುಡೋ ಜಲೇಶ್ವರಮ್ ।

ಪ್ರಧಾನವಾಯೋಸ್ತನಯಂ ತು ವಾಯುಂ ಕೋಣಾಧಿಪಂ ವಹ್ನಿಯಮಾದಿಕಾನಪಿ ॥ ೨೦.೧೨೮  

 

ಸತ್ಯಭಾಮೆಯು ಕುಬೇರನನ್ನು ನಿರಾಯುಧನನ್ನಾಗಿ ಮಾಡಿದರೆ, ಗರುಡನು ವರುಣನನ್ನು ಸಮುದ್ರದಲ್ಲಿ ಎಸೆದನು. ಮುಖ್ಯಪ್ರಾಣನ ಮಗನಾಗಿರುವ ಪ್ರವಾಹ ವಾಯುವನ್ನು (ಮರೀಚಿ ಎನ್ನುವ ವಾಯುವನ್ನು),  ದಿಕ್ಕಿಗೆ ಅಧಿಪತಿಯಾದ  ಅಗ್ನಿ, ಯಮ ಮೊದಲಾದವರನ್ನೂ ಕೂಡಾ ಸತ್ಯಭಾಮೆ ಎದುರಿಸಿದಳು.

 

ವಿಬೋಧ್ಯ ಶಾರ್ಙ್ಗೋತ್ಥರವೈಃ ಸ್ವಕಾಂ ತನುಮಾವೇಶಿತಾನಾಮಸುರೈರಗಾದ್ಧರಿಃ ।

ತೇ ಬೋಧಿತಾಸ್ತೇನ ರಣಂ ವಿಸೃಜ್ಯ ಯಯುರ್ವಿದಿತ್ವಾ ತಮನಾದಿಪೂರುಷಮ್ ॥ ೨೦.೧೨೯  

 

ಹೀಗೆ ಶಾರ್ಙ್ಗಧನಸ್ಸಿನ ಠೇಂಕಾರದಿಂದಲೇ ತಾನು ಯಾರು ಎನ್ನುವುದನ್ನು ಅಸುರಾವೇಶಕ್ಕೊಳಗಾದ ದೇವತೆಗಳಿಗೆ ತೋರಿಸಿ, ಪರಮಾತ್ಮನು ತೆರಳಿದನು. ಶ್ರೀಕೃಷ್ಣನಿಂದ  ಪ್ರಭೋದಕ್ಕೆ ಒಳಗಾದ(ಅಸುರಾವೇಶವನ್ನು ಕಳಚಿಕೊಂಡ) ದೇವತೆಗಳು  ಯುದ್ಧವನ್ನು ಬಿಟ್ಟು, ಅವನನ್ನು ಅನಾದಿಪುರುಷ ಎಂದು ತಿಳಿದು, ತೆರಳಿದರು.

 

ಶಿವಂ ಚ ಶಕ್ರಾರ್ತ್ಥಮುಪಾಗತಂ ಹರಿರ್ವ್ಯದ್ರಾವಯಚ್ಛಾರ್ಙ್ಗವಿನಿಃಸೃತೈಃ ಶರೈಃ ।

ಸವಾಹನೋ ದೂರತರೇ ನಿಪಾತಿತೋ ಗರುತ್ಮತಾ ಶಮ್ಭುರಗಾಚ್ಛರಾಹತಃ ॥ ೨೦.೧೩೦  

 

ಇಂದ್ರನ ಸಹಾಯಕ್ಕಾಗಿ ಬಂದಿದ್ದ ಸದಾಶಿವನನ್ನು ಪರಮಾತ್ಮನು ಶಾರ್ಙ್ಗದಿಂದ ಬಿಡಲ್ಪಟ್ಟ ಬಾಣಗಳಿಂದ ಓಡಿಸಿದನು. ನಂದಿಯ ಸಹಿತನಾದ ಶಿವನು ಗರುಡನಿಂದ ದೂರದಲ್ಲಿ ಬೀಸಲ್ಪಟ್ಟನು. ತದನಂತರ ಸದಾಶಿವನು ಅಲ್ಲಿಂದ ಹೊರಟುಹೋದನು. 

 

ವಿದ್ರಾವಿತೇ  ಬಾಣಗಣೈಶ್ಚ ಶೌರಿಣಾ ಹರೇ ಹರೌ ವಜ್ರಮವಾಸೃಜದ್ ದ್ರುತಮ್ ।

ಶಕ್ರೋsಗ್ರಹೀತ್ ತಂ ಪ್ರಹಸನ್ ಜನಾರ್ದ್ದನಃ ಕರೇಣ ವಾಮೇನ ಸ ಚಾಪಜಗ್ಮಿವಾನ್ ॥೨೦.೧೩೧

 

ಈರೀತಿ ಬಾಣಗಳಿಂದ ಸದಾಶಿವನು ಓಡಿಸಲ್ಪಡಲು ಇಂದ್ರನು ಪರಮಾತ್ಮನ ಮೇಲೆ ವಜ್ರಾಯುಧವನ್ನು ಪ್ರಯೋಗಿಸಿದನು. ಕೃಷ್ಣನು ನಗುತ್ತಾ, ತನ್ನ ಎಡಗೈಯಿಂದ ವಜ್ರವನ್ನು ಹಿಡಿದುಕೊಂಡ. ಆಗ ಇಂದ್ರ ಅಲ್ಲಿಂದ  ಪಲಾಯನ ಮಾಡಿದನು.

No comments:

Post a Comment