ತತಃ ಪರಾಜಿತವಚ್ಛೀಘ್ರಮೇತ್ಯ ಶಶಂಸ ಸರ್ವಂ ಹಲಿನೇsಥ ಸೋsಪಿ ।
ಪ್ರದ್ಯುಮ್ನಸಾಮ್ಬಾದಿಯುತೋsಥ ಕೋಪಾದಾಯಾತ್ ಪುರೀಂ ಹನ್ತುಕಾಮೋsರ್ಜ್ಜುನಂ ಚ॥೨೦.೧೯೬॥
ತದನಂತರ ವಿಪೃಥುವು ಅರ್ಜುನನಿಂದ ಸೋತವನಂತೆ ತೋರುತ್ತಾ, ಶೀಘ್ರವಾಗಿ ಪಿಂಡೋದ್ಧಾರ ಕ್ಷೇತ್ರಕ್ಕೆ ಬಂದು ಬಲರಾಮನಿಗೆ ವಿಷಯವನ್ನು ತಿಳಿಸಿದನು. ಬಲರಾಮನಾದರೋ, ಪ್ರದ್ಯುಮ್ನ ಹಾಗೂ ಸಾಮ್ಬರಿಂದ ಕೂಡಿಕೊಂಡು, ಕೋಪದಿಂದ ಅರ್ಜುನನನ್ನು ಕೊಲ್ಲ ಬಯಸಿ ಪಟ್ಟಣಕ್ಕೆ ಬಂದ.
ಕೃಷ್ಣೋsಪಿ ಸರ್ವಂ ವಿಪೃಥೋರ್ನ್ನಿಶಮ್ಯ
ಪ್ರಾಪ್ತಃ ಸುಧರ್ಮ್ಮಾಂ ವಿಮನಾ ಇವಾsಸೀತ್ ।
ಅವಾಙ್ಮುಖಸ್ತತ್ರ
ಯದುಪ್ರವೀರಾಃ ಪ್ರದ್ಯುಮ್ನಾದ್ಯಾ ಆಹುರುಚ್ಚೈರ್ನ್ನದನ್ತಃ
॥೨೦.೧೯೭॥
ಇತ್ತ ಕೃಷ್ಣನು ಎಲ್ಲವನ್ನೂ ವಿಪೃಥುವಿಂದ ಕೇಳಿ,
ಸುಧರ್ಮಸಭೆಯನ್ನು ಹೊಂದಿ, ಅನ್ಯಮನಸ್ಕನಂತೆ ತಲೆತಗ್ಗಿಸಿಕೊಂಡು ಕುಳಿತ. ಪ್ರದ್ಯುಮ್ನ ಮೊದಲಾದ
ಯಾದವರೆಲ್ಲರೂ ಗಟ್ಟಿಯಾಗಿ ಗರ್ಜಿಸುತ್ತಾ ಮಾತನಾಡಿದರು.
ಮಾಯಾವ್ರತಂ ತಂ
ವಿನಿಹತ್ಯ ಶೀಘ್ರಂ ವಯಂ ಸುಭದ್ರಾಮಾನಯಾಮಃ ಕ್ಷಣೇನ ।
ಇತ್ಯುಕ್ತವಾಕ್ಯಾನವದದ್
ಬಲಸ್ತಾನ್ ಕೃಷ್ಣಾಜ್ಞಯಾ ಯಾನ್ತು ನ ಸ್ವೇಚ್ಛಯೈವ ॥೨೦.೧೯೮॥
‘ಸುಳ್ಳು ಸನ್ಯಾಸಿಯ ವೇಷವನ್ನು ಧರಿಸಿದ್ದ ಅರ್ಜುನನನ್ನು
ಕೂಡಲೇ ಕೊಂದು, ನಾವು ಶೀಘ್ರದಲ್ಲಿಯೇ ಸುಭದ್ರೆಯನ್ನು
ತರೋಣ’ ಎಂದು ಅವರು ಹೇಳಿದ ಮಾತನ್ನು ಕೇಳಿಸಿಕೊಂಡ ಬಲರಾಮನು ‘ಕೃಷ್ಣನ ಅಣತಿಯಂತೆ ನಡೆಯಿರಿ, ನಿಮ್ಮ ಇಚ್ಛೆಯಂತೆ ಮಾಡಬೇಡಿ’ ಎಂದ.
ಜ್ಞಾತವ್ಯಮೇತಸ್ಯ ಮತಂ
ಪುರಸ್ತಾದ್ಧರೇರ್ವಿರೋಧೇ ನ ಜಯೋ ಭವೇದ್ ವಃ ।
ಇತ್ಯುಕ್ತವಾಕ್ಯೇ
ಹಲಿನಿ ಸ್ಮ ಸರ್ವೇ ಪಪ್ರಚ್ಛುರಾನಮ್ಯ ಜನಾರ್ದ್ದನಂ ತಮ್ ॥೨೦.೧೯೯॥
‘ಮೊದಲು ಶ್ರೀಕೃಷ್ಣನ ಮತವನ್ನು ತಿಳಿಯಬೇಕು. ಪರಮಾತ್ಮನ ವಿರೋಧವಾದಲ್ಲಿ ನಿಮಗೆ ಜಯ ಸಿಗಲಾರದು’ ಎಂದು ಬಲರಾಮ ಹೇಳಲು, ಎಲ್ಲರೂ ಕೃಷ್ಣನಿಗೆ ನಮಸ್ಕರಿಸಿ, ಏನು ಮಾಡಬೇಕೆಂದು ಕೇಳಿದರು.
ಅಥಾsಬ್ರವೀದ್ ವಾಸುದೇವೋsಮಿತೌಜಾಃ ಶೃಣ್ವನ್ತು ಸರ್ವೇ ವಚನಂ ಮದೀಯಮ್ ।
ಪುರೈವೋಕ್ತಂ ತನ್ಮಯಾ
ಕನ್ಯಕಾಯಾ ಮಾಯಾವ್ರತೋ ನಾರ್ಹತಿ ಸನ್ನಿಧಿಸ್ಥಿತಿಮ್ ॥೨೦.೨೦೦॥
ಆಗ ಎಣಿಯಿರದ ಕಸುವಿನ ಶ್ರೀಕೃಷ್ಣನು - ‘ಎಲ್ಲರೂ ನನ್ನ ಮಾತನ್ನು ಕೇಳಿರಿ. ಕಪಟ ವ್ರತವನ್ನು ಧರಿಸಿದ ಕಪಟ ಸನ್ಯಾಸಿಯು ಕನ್ಯೆಯ ಸನ್ನಿಧಿಯಲ್ಲಿ ಇರುವಿಕೆಯನ್ನು ಹೊಂದಲು ಯೋಗ್ಯನಲ್ಲ ಎಂದು ನನ್ನಿಂದ ಮೊದಲೇ ಹೇಳಲ್ಪಟ್ಟಿತ್ತು’.
ತಾಂ ಮೇ ವಾಚಂ
ನಾಗ್ರಹೀದಗ್ರಜೋsಯಂ ಬಹೂನ್ ದೋಷಾನ್ ವ್ಯಾಹರತೋsಪ್ಯತೋ ಮಯಾ
ಅನುಲ್ಲಙ್ಘ್ಯತ್ವಾದಗ್ರಜೋsನುಪ್ರವೃತ್ತಃ
ಕನ್ಯಾಗೃಹೇ ವಾಸನೇ ಕೂಟಬುದ್ಧೇಃ ॥೨೦.೨೦೧॥
‘ಈ ಅಣ್ಣನು ನನ್ನಿಂದ (ಸನ್ಯಾಸಿಯನ್ನು ಕುರಿತು) ಬಹಳ ದೋಷಗಳು ಹೇಳಲ್ಪಟ್ಟರೂ ಕೂಡಾ ಅದನ್ನು ಸ್ವೀಕರಿಸಲಿಲ್ಲ. ಮೋಸವನ್ನೇ ಮನಸ್ಸಿನಲ್ಲಿ ಇಟ್ಟುಕೊಂಡ ಅವನ ಕನ್ಯಾಗಾರ ವಾಸದ ವಿಷಯವು ಅಣ್ಣನ ಮಾತನ್ನು ಮೀರಲಾರದೇ ನನ್ನಿಂದ ಅನುಸರಿಸಲ್ಪಟ್ಟಿತು’.
ಅತೀತಶ್ಚಾಯಂ ಕಾರ್ಯ್ಯಯೋಗೋsಸಮಕ್ಷಂ ಹೃತಾ ಕನ್ಯಾsತೋ ನೋsತ್ರ ಕಾ ಮಾನಹಾನಿಃ।
ಭೂಯಸ್ತರಾಂ
ಮಾನಿನಸ್ತಸ್ಯ ಸಾ ಸ್ಯಾಜ್ಜ್ಞಾತಾ ಚ ವೋ ವಿಪೃಥೋಃ ಪಾರ್ತ್ಥತಾsಸ್ಯ ॥೨೦.೨೦೨॥
‘ನಾವು ಇಲ್ಲದಿರುವಾಗ ಈರೀತಿಯಾದ ಕಾರ್ಯವು ನಡೆದು ಹೋಗಿದೆ. ಕನ್ಯೆ
ಅಪಹೃತಳಾಗಿದ್ದಾಳೆ. ಆದರೆ ಈ ವಿಚಾರದಲ್ಲಿ ವೀರನೆಂಬ ಅಹಂಕಾರವುಳ್ಳ ಅರ್ಜುನನಿಗೆ ಮಾನಹಾನಿಯೇ ಹೊರತು
ನಮಗಲ್ಲ. ನಮಗೆ ಆ ರೀತಿ ಸುಭದ್ರೆಯನ್ನು ಅರ್ಜುನ ಕರೆದೊಯ್ದ ವಿಷಯ ತಿಳಿದದ್ದು ವಿಪೃಥುವಿನಿಂದ.
ದೇಯಾ ಚ ಕನ್ಯಾ ನಾಸ್ತಿ
ಪಾರ್ತ್ಥೇನ ತುಲ್ಯೋ ವರೋsಸ್ಮಾಕಂ ಕೌರವೇಯಶ್ಚ ಪಾರ್ತ್ಥಃ ।
ಪೌತ್ರಶ್ಚ ಕೃಷ್ಣಸ್ಯ
ಸುಪೂರ್ಣ್ಣಶಕ್ತೇಃ ಪೈತೃಷ್ವಸೇಯೋ ವೀರತಮೋ ಗುಣಾಢ್ಯಃ ॥೨೦.೨೦೩॥
‘ಕನ್ನಿಕೆಯನ್ನು ಕೊಡಬೇಕು ಎಂದಾದಮೇಲೆ ಅರ್ಜುನನಿಗೆ ಸಮನಾದ ವರ
ಇನ್ನೊಬ್ಬ ಇಲ್ಲವೇ ಇಲ್ಲ. ಅವನು ಕುರುವಂಶಕ್ಕೆ ಸೇರಿದವನು. ವೇದವ್ಯಾಸರ ಮೊಮ್ಮಗ. ನಮ್ಮ ಅತ್ತೆಯ
ಮಗನಾಗಿದ್ದಾನೆ. ವೀರನೂ ಗುಣಾಢ್ಯನೂ ಆಗಿದ್ದಾನೆ’.
ಅರ್ತ್ಥ್ಯೋsಸ್ಮಾಭಿಃ ಸ್ವಯಮೇವಾಹರತ್ ಸ ಶಕ್ರಾತ್ಮಜೋ ನಾತ್ರ ನಃ ಕಾರ್ಯ್ಯಹಾನಿಃ ।
ಅನುದ್ರುತ್ಯೈನಂ ಯದಿ ಚ ಸ್ಯಾತ್ ಪರಾಜಯೋ ಹಾನಿರ್ದ್ದೃಢಂ ಯಶಸೋ ವೋ ಭವೇತ ॥೨೦.೨೦೪॥
‘ಕನ್ನಿಕಾಗ್ರಹಣಕ್ಕಾಗಿ ನಮ್ಮಿಂದ ಬೇಡಲ್ಪಡಬೇಕಾದವನು ತಾನಾಗಿಯೇ ಬಂದು ಅಪಹರಿಸಿಕೊಂಡು ಹೋದ. ಅದರಿಂದ ನಾವು ಕಳೆದುಕೊಂಡಿದ್ದೇನೂ ಇಲ್ಲ. ಒಂದು ವೇಳೆ ನಾವು ಅವನನ್ನು ಬೆನ್ನಟ್ಟಿ ಯುದ್ಧಮಾಡಿ ಸೋತರೆ ನಮ್ಮ ಕೀರ್ತಿ-ಯಶಸ್ಸು ನಾಶವಾಗುತ್ತದೆ’.
ಜಿತ್ವಾ ಯದ್ಯೇನಂ
ಕನ್ಯಕಾ ಚಾsಹೃತಾ ಚೇತ್ ಪರಾಮೃಷ್ಟಾಂ ನೈವ ಕಶ್ಚಿದ್ಧಿ ಲಿಪ್ಸೇತ್ ।
ಅತೋ ನ ಮೇ ರೋಚತೇ ವೋsನುಯಾನಮಿತ್ಯೂಚಿವಾನಾಸ
ತೂಷ್ಣೀಂ ಪರೇಶಃ ॥೨೦.೨೦೫ ॥
‘ಒಂದು ವೇಳೆ ಅವನನ್ನು ನಾವು ಗೆದ್ದು ಸುಭದ್ರೆಯನ್ನು ತಂದರೆ,
ಬೇರೊಬ್ಬನ ಜೊತೆ ಓಡಿಹೋದವಳೆಂದು ಅವಳನ್ನು ಯಾರೂ ಕೂಡಾ ಬಯಸುವುದಿಲ್ಲ. ಆ ಕಾರಣದಿಂದ ನಿಮ್ಮ ಗೆಲುವಿಗಾಗಿ
ಅರ್ಜುನನನ್ನು ಹಿಂಬಾಲಿಸಿ ಹೋಗುವುದು ನನಗೆ ಇಷ್ಟವಿಲ್ಲ’. ಈ ರೀತಿಯಾಗಿ ಜಗದೊಡೆಯನಾದ ಕೃಷ್ಣನು ಹೇಳಿ
ಸುಮ್ಮನಾದನು.
ಶ್ರುತ್ವಾ ಹಲೀ
ಕೃಷ್ಣವಾಕ್ಯಂ ಬಭಾಷೇ ಮಾ ಯಾತ ಚಿತ್ತಂ ವಿದಿತಂ ಮಮಾಸ್ಯ ।
ಅಸ್ಯಾನುವೃತ್ತಿರ್ವಿಜಯಾಯ
ನಃ ಸ್ಯಾಚ್ಛುಭಾಯ ಶಾನ್ತ್ಯೈ ಪರತಶ್ಚ ಮುಕ್ತ್ಯೈ ॥೨೦.೨೦೬॥
ಬಲರಾಮನು ಕೃಷ್ಣನ ಮಾತನ್ನು ಕೇಳಿ ಮಾತನಾಡಿದ. ‘ಪ್ರದ್ಯುಮ್ನ ಸಾಮ್ಬರೇ ತೆರಳಬೇಡಿ. ಇವನ ಮನದೊಳಗಣ ಅಭಿಪ್ರಾಯ ಏನು ಎಂಬುದು
ನನಗೆ ತಿಳಿಯಿತು. ಕೃಷ್ಣನ ಅನುಸರಣೆಯು
ನಮಗೆ ವಿಜಯಕ್ಕಾಗಿ, ಶುಭಕ್ಕಾಗಿ,
ಶಾಂತಿಗಾಗಿ. ಅದು ಪರಲೋಕದಲ್ಲಿ ಮುಕ್ತಿಗೂ ಕಾರಣವಾಗುತ್ತದೆ’.
No comments:
Post a Comment