ತಯಾsಚ್ಯುತೋsಸೌ ಕನಕಾವದಾತಯಾ
ಸುಕುಙ್ಕುಮಾದಿಗ್ಧಪಿಶಙ್ಗವಾಸಸಾ ।
ಪೂರ್ಣ್ಣೇನ್ದುಕೋಟ್ಯೋಘಜಯನ್ಮುಖಾಬ್ಜಯಾ
ರೇಮೇsಮಿತಾತ್ಮಾ ಜಗದೇಕಸುನ್ದರಃ ॥೨೦.೧೨೧ ॥
ಜಗತ್ತಿನಲ್ಲಿಯೇ ಅತ್ಯಂತ ಚೆಲುವನಾದ, ಅನಂತ ರೂಪಗಳುಳ್ಳ, ಚ್ಯುತಿ
ಇರದ ಶ್ರೀಕೃಷ್ಣನು, ಬಂಗಾರದಂತಹ ಕಾಂತಿಯ, ಕುಂಕುಮದಿಂದ ಲೇಪಿಸಲ್ಪಟ್ಟ ಪೀತಾಂಬರವುಳ್ಳ, ಪರಿಪೂರ್ಣವಾಗಿರುವ
ಚಂದ್ರರ ಕೋಟಿಯ ಸಮೂಹವನ್ನೇ ಗೆಲ್ಲಬಲ್ಲ ಮುಖಕಮಲವುಳ್ಳ ಸತ್ಯಭಾಮೆಯೊಂದಿಗೆ ಆನಂದದಿಂದ ವಿಹರಿಸಿದನು.
ಸರ್ವರ್ತ್ತುನಿತ್ಯೋದಿತಸರ್ವವೈಭವೇ
ಸುರತ್ನಚಾಮೀಕರವೃಕ್ಷಸದ್ವನೇ ।
ಸದೈವ ಪೂರ್ಣ್ಣೇನ್ದುವಿರಾಜಿತೇ
ಹರಿಶ್ಚಚಾರ ದೇವ್ಯಾ ಪವನಾನುಸೇವಿತೇ ॥ ೨೦.೧೨೨ ॥
ಎಲ್ಲಾ ಋತುಗಳ, ಎಲ್ಲಾ ತರಹದ ವೈಭವವನ್ನು ಹೊಂದಿರುವ, ಒಳ್ಳೆಯ
ರತ್ನ ಮತ್ತು ಬಂಗಾರಮಯ ವೃಕ್ಷವುಳ್ಳ, ಸದಾ ಚಂದ್ರನ ಕಾಂತಿಯಿರುವ, ಮೆಲುಗಾಳಿಯಿಂದ ಕೂಡಿದ ಆ
ಉದ್ಯಾನದಲ್ಲಿ ಪರಮಾತ್ಮನು ವಿಹರಿಸಿದ.
[ಇಲ್ಲಿ ಆಚಾರ್ಯರು ಬಂಗಾರ ಎನ್ನುವುದನ್ನು ‘ಚಾಮೀಕರ’ ಎನ್ನುವ ವಿಶೇಷ ಶಬ್ದ ಬಳಸಿ ಹೇಳಿರುವುದನ್ನು ಕಾಣುತ್ತೇವೆ. ಈ
ರೀತಿ ಹೇಳಲು ವಿಶೇಷ ಕಾರಣವಿದೆ. ಭೂಮಿಯಲ್ಲಿ ಮನುಷ್ಯರು ಬಳಸುವ ಬಂಗಾರ ಹಾಗೂ ದೇವಲೋಕದ ಬಂಗಾರ
ಒಂದೇ ಸಮನಾಗಿರುವುದಲ್ಲ. ಬಂಗಾರದಲ್ಲಿಯೂ ತಾರತಮ್ಯ ಇದೆ ಎನ್ನುವ ನಿರೂಪಣೆಯನ್ನು ಬೃಹದಾರಣ್ಯಕ
ಭಾಷ್ಯದಲ್ಲಿ(೬.೪.೪) ಆಚಾರ್ಯರು ನೀಡಿರುವುದನ್ನು ಕಾಣಬಹುದು: ‘ಮಯಂ ತು ಮಾನುಷಂ ಸ್ವರ್ಣಂ ಪೀತಂ ಗಾಂಧರ್ವಮೇವ ಚ । ಇಂದ್ರಗೋಪನಿಭಂ
ನಾಮ್ನಾ ಜಾಮ್ಬೂನದಮಿತಿ ಸ್ಮೃತಮ್ । ದೈವಂ ಚಾಮೀಕರಂ ನಾಮ ಪ್ರೋದ್ಯದಾದಿತ್ಯಸನ್ನಿಭಮ್’ ಅಧ್ಯಾತ್ಮವಚನದ ಪ್ರಮಾಣದೊಂದಿಗೆ ಬೃಹದ್ಭಾಷ್ಯದಲ್ಲಿ
ಹೇಳಿರುವ ಈ ಮಾತಿನ ಪ್ರಕಾರ- ಮಾನುಷ ಬಂಗಾರವನ್ನು
‘ಮಯ’ ಎಂದು ಕರೆಯುತ್ತಾರೆ. ಗಂಧರ್ವರ ಬಂಗಾರವನ್ನು ‘ಪೀತ’ ಎಂದು ಕರೆಯುತ್ತಾರೆ. ಇಂದ್ರಗೋಪದಂತೆ ಇರುವ,
ಹೆಸರಿನಿಂದ ಜಾಮ್ಬೂನದ ಎಂದು ಕರೆಸಿಕೊಳ್ಳಲ್ಪಟ್ಟ, ‘ಚಾಮೀಕರ’ ಎಂದೂ ಕರೆಸಿಕೊಳ್ಳಲ್ಪಡುವ ಸ್ವರ್ಣ
ಏನಿದೆ, ಅದು ದೇವತೆಗಳ ಬಂಗಾರ. ರತ್ನಮಯವಾದ, ಚಾಮೀಕರಮಯವಾಗಿರುವ ವೃಕ್ಷಗಳನ್ನು ಒಳಗೊಂಡ, ರತ್ನ-ಚಾಮೀಕರವನ್ನು
ನೀಡುವ ವೃಕ್ಷಗಳುಳ್ಳ ನಂದನೋದ್ಯಾನದಲ್ಲಿ ಶ್ರೀಕೃಷ್ಣ-ಸತ್ಯಭಾಮೆಯರು ವಿಹರಿಸಿದರು].
ವಿದೋಷಸಂವಿತ್ತನುರತ್ರ
ಸತ್ತರುಂ ದದರ್ಶ ಸತ್ಯಾsಮೃತಮನ್ಥನೋದ್ಭವಮ್ ।
ಸ ಪಾರಿಜಾತಂ
ಮಣಿಕಾಞ್ಚನಾತ್ಮಕಂ ಸಮಸ್ತಕಾಮಪ್ರದಮಾರ್ತ್ತಿಹಾರಿಣಮ್ ॥ ೨೦.೧೨೩ ॥
ಈ ಉದ್ಯಾನದಲ್ಲಿ, ಯಾವುದೇ ದೋಷವಿಲ್ಲದ, ಜ್ಞಾನವೇ ಮೈವೆತ್ತು ಬಂದಿರುವ ಮೈಯುಳ್ಳ
ಸತ್ಯಭಾಮೆಯು, ಅಮೃತಮಥನದಲ್ಲಿ ಹುಟ್ಟಿದ ಬಂಗಾರ ಹಾಗೂ ಮುತ್ತಿನಿಂದ ಕೂಡಿರುವ, ಎಲ್ಲಾ ಕಾಮನೆಗಳನ್ನೀಯುವ,
ಸಂಕಟವನ್ನು ಪರಿಹರಿಸುವ ಪಾರಿಜಾತ ಎನ್ನುವ ವೃಕ್ಷವನ್ನು ಕಂಡಳು.
ದೃಷ್ಟ್ವೈವ ತಂ
ಸುಸ್ಮಿತಚನ್ದ್ರಿಕಾಸ್ಫುರನ್ಮುಖಾರವಿನ್ದಾsಸಿತಲೋಲಲೋಚನಾ ।
ಕಪೋಲನಿರ್ಭಾತಚಲತ್ಸುಕುಣ್ಡಲಾ
ಜಗಾದ ದೇವಾಧಿಪತಿಂ ಪತಿಂ ಸತೀ ॥ ೨೦.೧೨೪ ॥
ಮುಗುಳುನಗೆಯಿಂದ ಬೆಳದಿಂಗಳಿನಂತೆ ತೋರುವ ಮುಖಕಮಲವುಳ್ಳ, ಕಪ್ಪಾಗಿರುವ ಚಂಚಲವಾದ
ಕಣ್ಣುಗಳುಳ್ಳ, ಕುಂಡಲಗಳ ಬಿಂಬ ಕಾಣುವ ಕೆನ್ನೆಗಳುಳ್ಳ ಸತ್ಯಭಾಮೆಯು, ಪಾರಿಜಾತ ವೃಕ್ಷವನ್ನು
ಕಂಡು, ದೇವತೆಗಳಿಗೆ ದೊರೆಯಾಗಿರುವ ಶ್ರೀಕೃಷ್ಣನನ್ನು
ಕುರಿತು ಹೀಗೆ ಹೇಳಿದಳು:
ತರುರ್ಜ್ಜಗಜ್ಜೀವದ ಮೇ
ಗೃಹಾಙ್ಗಣೇ ಸಂಸ್ಥಾಪನೀಯೋsಯಮಚಿನ್ತ್ಯಪೌರುಷ ।
ಇತೀರಿತಸ್ತಾಂ
ಕಲಶೋಪಮಸ್ತನೀಮಾಲಿಙ್ಗ್ಯ ದೇವಸ್ತರುಮುದ್ಬಬರ್ಹ ॥ ೨೦.೧೨೫ ॥
‘ಜಗತ್ತಿಗೆ ಜೀವನವನ್ನೀಯುವ, ಚಿಂತಿಸಲು ಅಸಾಧ್ಯವಾದ ಪೌರುಷವುಳ್ಳ
ಶ್ರೀಕೃಷ್ಣನೇ, ನನ್ನ ಮನೆಯ ಮುಂಭಾಗದಲ್ಲಿ ಈ ಮರವು ಇರಿಸಲ್ಪಡಬೇಕು’. ಈರೀತಿಯಾಗಿ ಕೇಳಿಕೊಂಡ ತುಂಬು ಎದೆಯ ಸತ್ಯಭಾಮೆಯನ್ನು
ಆಲಂಗಿಸಿದ ಶ್ರೀಕೃಷ್ಣ, ಆ ಪಾರಿಜಾತ ವೃಕ್ಷವನ್ನು ಕಿತ್ತನು.
No comments:
Post a Comment