ನರಾಧಿಪಾನ್
ದೇವಗನ್ಧರ್ವನಾಗಾನ್ ಜಿತ್ವಾssನೀತಂ ಹೇಮರತ್ನೋಚ್ಚರಾಶಿಮ್ ।
ಶತದ್ವಯಂ ಯೋಜನಾನಾಂ
ಸಮೃದ್ಧಂ ಸಮನ್ತತಃ ಪ್ರಾಹಿಣೋತ್ ಸ್ವಾಂ ಪುರೀಂ ಸಃ ॥೨೦.೧೦೯॥
ನರಕಾಸುರನು ಮನುಷ್ಯಶ್ರೇಷ್ಠರನ್ನು, ದೇವತೆಗಳನ್ನು, ಗಂಧರ್ವರನ್ನು,
ನಾಗರನ್ನೂ ಗೆದ್ದು ತಂದಿಟ್ಟಿದ್ದ ಸುಮಾರು ಇನ್ನೂರು ಯೋಜನಾ ಪರ್ಯಂತ ಸಮೃದ್ಧವಾಗಿರುವ ಬಂಗಾರ
ಹಾಗೂ ರತ್ನಗಳ ರಾಶಿಯನ್ನು ಶ್ರೀಕೃಷ್ಣ ತನ್ನ ಪಟ್ಟಣಕ್ಕೆ ಕಳುಹಿಸಿದ.
ಮಹಾವೀರ್ಯ್ಯೈರ್ನ್ನೈಋತೈ
ರಾಕ್ಷಸೇನ್ದ್ರೈರ್ಭೌಮಾನೀತೈರ್ನ್ನಿರುತಿಂ ಯೋಧಯಿತ್ವಾ ।
ಸ ಪ್ರಾಹಿಣೋತ್
ಸರ್ವರತ್ನೋಚ್ಚರಾಶಿಂ ಗಜಾಂಶ್ಚ ನಾರಾಯಣ ಆದಿದೇವಃ ॥೨೦.೧೧೦ ॥
ಮಹಾವೀರ್ಯವುಳ್ಳ ನಿರ್ಋತಿಯನ್ನು ಗೆದ್ದು ತರಲ್ಪಟ್ಟ, ಅವನ ಅಧೀನರಾಗಿದ್ದ
(ನಿರ್ಋತಿ ಅಧಿಪತಿಯನ್ನಾಗಿ ಉಳ್ಳ) ರಾಕ್ಷಸ ಶ್ರೇಷ್ಠರ ಮುಖೇನ ನರಕಾಸುರ ತಂದಿರುವ ಎಲ್ಲಾ ರತ್ನಗಳ ಸಮೂಹವನ್ನು, ಆನೆಗಳನ್ನೂ,
ಆದಿದೇವ ನಾರಾಯಣನು ದ್ವಾರಕೆಗೆ ಕಳುಹಿಸಿದ.
[ನಿರ್ಋತಿಯನ್ನು ಗೆದ್ದು, ಅಮೋಘವಾದ ಮುತ್ತು-ರತ್ನಗಳ ರಾಶಿಯನ್ನು, ಅವನ ಅಧೀನರಾಗಿದ್ದ
ರಾಕ್ಷಸ ಶ್ರೇಷ್ಠರನ್ನೂ ನರಕಾಸುರ ಪ್ರಾಗ್ಜ್ಯೋತಿಷಕ್ಕೆ ತಂದಿದ್ದ. ಆ ಎಲ್ಲವನ್ನೂ ಕೂಡಾ ಕೃಷ್ಣ ದ್ವಾರಕೆಗೆ
ಕಳುಹಿಸಿದ].
ತತ್ರಾಪಶ್ಯತ್ ಕನ್ಯಕಾ
ಭೂಮಿಪಾನಾಂ ಭೌಮಾನೀತಾಃ ಸಮರೇ ತಾನ್ ವಿಜಿತ್ಯ ।
ದ್ವ್ಯಷ್ಟೌ ಸಹಸ್ರಾಣಿ
ಶತಂ ಚ ರೂಪಶೀಲೋದಾರಾ ಅಕ್ಷತಾಃ ಸದ್ವ್ರತಸ್ಥಾಃ ॥ ೨೦.೧೧೧ ॥
ಯುದ್ಧದಲ್ಲಿ ರಾಜರನ್ನು ಗೆದ್ದು ನರಕಾಸುರನಿಂದ ತರಲ್ಪಟ್ಟ, ರೂಪದಿಂದಲೂ
ಶೀಲದಿಂದಲೂ ಉತ್ಕೃಷ್ಟರಾಗಿರುವ, ಶ್ರೇಷ್ಠವ್ರತದಲ್ಲಿರುವ
ಹದಿನಾರು ಸಾವಿರದ ನೂರು ಕನ್ಯೆಯರನ್ನು (ಅಕ್ಷತಾಃ) ಪರಮಾತ್ಮ ಕಂಡ.
[ಮಹಾಭಾರತ (ಸಭಾಪರ್ವ ೫೬.೧೭) ಹಾಗೂ ಹರಿವಂಶದಲ್ಲಿ(ವಿಷ್ಣುಪರ್ವ
೬೪.೨೭) ಹೀಗೆ ಹೇಳಿದ್ದಾರೆ: ‘ಸರ್ವಾಃ ಕಾಷಾಯಧಾರಿಣ್ಯಃ ಸರ್ವಾಶ್ಚ ನಿಯತೇನ್ದ್ರಿಯಾಃ’.
ಇದು ‘ಕನ್ಯೆಯರು ಶ್ರೇಷ್ಠವಾದ ವ್ರತದಲ್ಲಿದ್ದರು’ ಎನ್ನುವುದನ್ನು ತಿಳಿಸುತ್ತದೆ. ಇನ್ನು ಭಾಗವತದಲ್ಲಿ(೧.೧೦.೩೧)
ಹೇಳುವಂತೆ: ‘ಏತಾಃ ಪುರಾ ಸ್ತ್ರೀತ್ವಮವಾಪ್ತಯೇ
ಸಮಂ ನಿರಸ್ತಶೋಕಂ ಬತ ಸಾಧು ಕುರ್ವತೇ’ ‘ಸ್ತ್ರೀತ್ವ
ಪ್ರಾಪ್ತಿಗಾಗಿ ತಪಸ್ಸನ್ನು ಮಾಡುತ್ತಿದ್ದರು’ ಎನ್ನುವುದು ಇಲ್ಲಿ ತಿಳಿಯುತ್ತದೆ. ಮತ್ಸ್ಯಪುರಾಣ(೭೦.೨೧) ಇವರು ಅಗ್ನಿಪುತ್ರರು ಎನ್ನುವುದನ್ನು
ತಿಳಿಸುತ್ತದೆ: ‘ಹುತಾಶನಸುತಾಃ ಸರ್ವಾ ಭವತ್ಯೋsಪ್ಸರಸಃ ಪುರಾ’].
ಕಾಶ್ಚಿತ್ ತತ್ರಾsಸನ್
ದೇವಗನ್ಧರ್ವಕನ್ಯಾಸ್ತಾಸಾಂ ಪ್ರಧಾನ ತ್ವಷ್ಟೃಪುತ್ರೀ ಕಶೇರುಃ ।
ಪುತ್ರಾ ಅಗ್ನೇಃ
ಪೂರ್ವಮಾಸಂಶ್ಚ ತೇsಥ ಸ್ತ್ರೀತ್ವಾಪ್ರಾಪ್ತ್ಯೈ ಚಕ್ರುರುಗ್ರಂ ತಪಶ್ಚ॥ ೨೦.೧೧೨॥
ಅಲ್ಲಿದ್ದ ಹದಿನಾರು ಸಾವಿರದ ನೂರು ಮಂದಿ ಕನ್ಯೆಯರ ಸಮೂಹದಲ್ಲಿ
ಕೆಲವರು ದೇವತೆಗಳ ಮತ್ತು ಗಂಧರ್ವರ ಕನ್ನಿಕೆಯರಾಗಿದ್ದರು.
ಅವರಲ್ಲಿ ಶ್ರೇಷ್ಠಳಾದವಳು ತ್ವಷ್ಟೃವಿನ
ಮಗಳಾಗಿರುವ ಕಶೇರು. ಇವರೆಲ್ಲರೂ ಪೂರ್ವದಲ್ಲಿ
ಅಗ್ನಿಪುತ್ರರಾಗಿದ್ದರು. ಅವರು ಸ್ತ್ರೀತ್ವ ಪ್ರಾಪ್ತಿಗಾಗಿ ಅತ್ಯಂತ ಉಗ್ರವಾಗಿರುವ
ತಪಸ್ಸನ್ನು ಮಾಡಿದವರಾಗಿದ್ದರು.
[ಏಕೆ ಈ ಅಗ್ನಿಪುತ್ರರು ಸ್ತ್ರೀತ್ವ ಬಯಸಿದರು ಎನ್ನುವುದನ್ನು ವಿವರಿಸುತ್ತಾರೆ:]
ಭಾರ್ಯ್ಯಾತ್ವಾರ್ತ್ಥೇ
ವಾಸುದೇವಸ್ಯ ಯೋಷಿತ್ತನುಂ ತಾಸಾಮಿಚ್ಛತೀನಾಂ ಸಮೀರಃ ।
ಅದಾದ್ ವರಂ ತಪಸಾssರಾಧಿತಃ ಸನ್
ಸ್ತ್ರೀಭೂತಾಸ್ತೇ ಬದರೀಂ ಸಮ್ಪ್ರಜಗ್ಮುಃ ॥೨೦.೧೧೩॥
ವಾಸುದೇವನ ಹೆಂಡಿರಾಗಬೇಕು ಎನ್ನುವ ಬಯಕೆಯಿಂದ ಅವರೆಲ್ಲರೂ ಹೆಣ್ಣಿನ
ಶರೀರ ಪ್ರಾಪ್ತಿಗಾಗಿ ತಪಸ್ಸನ್ನಾಚರಿಸಿದ್ದರು. ಅವರ ತಪಸ್ಸಿನಿಂದ ಆರಾಧ್ಯನಾದ ಮುಖ್ಯಪ್ರಾಣನು ಅವರಿಗೆ
ವರವನ್ನು ನೀಡಿದ. ಹೀಗೆ ಹೆಣ್ಣಿನ ದೇಹವನ್ನು ಪಡೆದ ಅವರು ಬದರಿಗೆ ತೆರಳಿದರು.
ನಾರಾಯಣಂ ತತ್ರ
ಶುಶ್ರೂಷಮಾಣಾಃ ಪ್ರಾಪ್ಯಾಪ್ಸರಸ್ತ್ವಂ ರಾಜಕುಲೇಷು ಜಾತಾಃ ।
ಕಾಶ್ಚಿತ್ ಸ್ವರ್ಗ್ಗೇ
ತಾ ನಿಶಾಮ್ಯೈವ ಕೃಷ್ಣಂ ವವ್ರುಃ ಪತಿಂ ಸರ್ವಗುಣಾಭಿರಾಮಮ್ ॥೨೦.೧೧೪॥
ಅಲ್ಲಿ ನಾರಾಯಣನನ್ನು ಸೇವಿಸುತ್ತಾ ಅವರೆಲ್ಲರೂ ಅಪ್ಸರತ್ವವನ್ನು
ಹೊಂದಿ, ಕೆಲವರು ರಾಜರಲ್ಲಿ ಹುಟ್ಟಿದರೆ. ಇನ್ನು ಕೆಲವರು ಸ್ವರ್ಗದಲ್ಲಿ ಹುಟ್ಟಿದ್ದರು. ಅವರೆಲ್ಲರೂ
ಸಮಸ್ತ ಗುಣಗಳಿಂದ ಕೂಡಿರುವ ಕೃಷ್ಣನನ್ನು ಕಂಡು ಅವನನ್ನು ಗಂಡನನ್ನಾಗಿ ಹೊಂದಿದರು.
ಆಜಾನದೇವೈಃ ಸರ್ವಗುಣೈಃ ಸಮಾಸ್ತಾಃ ಸ್ವಭಾವತೋsಥೇನ್ದಿರಾವೇಶತೋsತಃ ।
ಗುಣಾಧಿಕಾಸ್ತಾಃ
ಶಿಭಿಕಾಸು ಕೃಷ್ಣ ಆರೋಪಯಿತ್ವಾ ಪ್ರಾಹಿಣೋದ್ ದ್ವಾರವತ್ಯೈ ॥೨೦.೧೧೫॥
ಎಲ್ಲಾ ಗುಣಗಳಿಂದಲೂ, ಸ್ವಭಾವದಿಂದಲೂ ಆಜಾನ ದೇವತೆಗಳಿಗೆ
ಸಮರಾಗಿರುವ ಆ ಕನ್ನಿಕೆಯರು, ಇಂದಿರೆಯ ಆವೇಶ
ಇರುವುದರಿಂದ ಶ್ರೇಷ್ಠವಾದ ಗುಣಗಳನ್ನು ಹೊಂದಿದ್ದರು. ಅಂತಹ ಅವರನ್ನು ಶ್ರೀಕೃಷ್ಣನು
ಪಲ್ಲಕ್ಕಿಗಳಲ್ಲಿ ಕುಳ್ಳಿರಿಸಿ ದ್ವಾರಾವತಿಗೆ ಕಳುಹಿಸಿದ.
No comments:
Post a Comment