ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, September 6, 2021

Mahabharata Tatparya Nirnaya Kannada 2098_20103

ಶ್ರುತ್ವಾ ಭೌಮಃ ಕೃಷ್ಣಮಾಯಾತಮಾರಾದಕ್ಷೋಹಿಣೀತ್ರಿಂಶಕೇನಾಭ್ಯಯಾತ್ ತಮ್

ಜಘ್ನೇ ಸೇನಾಂ ಗರುಡಃ ಪಕ್ಷಪಾತೈಃ ಪಾದಂ ಶೇಷಾಂ ಕೇಶವಃ ಸಾಯಕೌಘೈಃ ೨೦.೯೮

 

ನರಕಾಸುರನು ಶ್ರೀಕೃಷ್ಣ ಬಂದಿರುವ ವಿಷಯವನ್ನು ಕೇಳಿ ತಿಳಿದು, ತನ್ನ ಮೂವತ್ತು ಅಕ್ಷೋಹಿಣಿ ಸೇನೆಯ ಜೊತೆಗೂಡಿ ಕೃಷ್ಣನನ್ನು ಎದುರುಗೊಂಡಾಗ, ಗರುಡನು ತನ್ನ ರೆಕ್ಕೆಯಿಂದ ಅವನ ಕಾಲು ಭಾಗ ಸೈನ್ಯವನ್ನು ಕೊಂದು ಹಾಕಿದ. ಕೃಷ್ಣನು ತನ್ನ ಬಾಣಗಳಿಂದ ನರಕಾಸುರನ ಉಳಿದ ಸೇನೆಯನ್ನು ಕೊಂದ.

 

ಅಥಾsಸಸಾದಾsಶು ಭೌಮೋsಚ್ಯುತಂ ತಂ ಮುಞ್ಚಛ್ಞರಾನಸ್ತ್ರಸಮ್ಮನ್ತ್ರಿತಾನ್ ದ್ರಾಕ್ ।

ವಿವ್ಯಾಧ ತಂ ಕೇಶವಃ ಸಾಯಕೌಘೈರ್ಭೌಮಃ ಶತಘ್ನೀಂ ಬ್ರಹ್ಮದತ್ತಾಮಮುಞ್ಚತ್ ॥೨೦.೯೯

 

ಸೈನ್ಯ ನಾಶವಾದಮೇಲೆ ನರಕಾಸುರನು ಕೂಡಲೇ ಅಸ್ತ್ರದಿಂದ ಅಭಿಮಂತ್ರಣಕ್ಕೆ ಒಳಗಾದ ಬಾಣಗಳನ್ನು ಎಸೆಯುತ್ತಾ, ಕೃಷ್ಣನನ್ನು ಯುದ್ಧದಲ್ಲಿ ಎದುರುಗೊಂಡ. ಆಗ ಕೇಶವನು ಬಾಣಗಳ ಸಮೂಹದಿಂದ ಅವನನ್ನು ಗಾಯಗೊಳಿಸಿದ. ತಕ್ಷಣ ನರಕಾಸುರನು ಬ್ರಹ್ಮನು ಕೊಟ್ಟ ‘ಶತಘ್ನೀ’ ಎನ್ನುವ ಆಯುಧವನ್ನು ಕೃಷ್ಣನ ಮೇಲೆ ಪ್ರಯೋಗಿಸಿದ.   

 

ಅಚ್ಛೇದ್ಯೋsಭೇದ್ಯೋ ನಿತ್ಯಸಂವಿತ್ಸುಖಾತ್ಮಾ ನಿತ್ಯಾವ್ಯಯಃ ಪೂರ್ಣ್ಣಶಕ್ತಿಃ ಸ ಕೃಷ್ಣಃ ।

ನಿಗೀರ್ಯ್ಯ ತಾಂ ದೇವವರಃ ಶತಘ್ನೀಂ ನಿತ್ಯಾಶ್ರಾನ್ತೋsದರ್ಶಯಚ್ಛ್ರಾನ್ತವಚ್ಚ ॥೨೦.೧೦೦

 

ಪರಿಪೂರ್ಣವಾದ ಶಕ್ತಿಯುಳ್ಳ, ಎಂದೂ ನಾಶವಿಲ್ಲದ, ನಿತ್ಯವಾಗಿರುವ, ಜ್ಞಾನ ಮತ್ತು ಸುಖಗಳೇ ಮೈವೆತ್ತು ಬಂದ, ಭೇದಿಸಲಾರದ,  ಛೇದಿಸಲಾರದ, ದೇವತೆಗಳಲ್ಲೇ ಶ್ರೇಷ್ಠನಾದ  ಶ್ರೀಕೃಷ್ಣನು, ಆ ಶತಘ್ನೀಯನ್ನು ನುಂಗಿ, ಶ್ರಮವಿಲ್ಲದವನಾದರೂ ಕೂಡಾ, ಬಳಲಿದವನಂತೆ ತೋರಿಸಿಕೊಂಡ.

 

ಬಹೂನ್ ವರಾನ್ ಬ್ರಹ್ಮಣೋsನ್ಯೇಷ್ವಮೋಘಾನ್ ಮೋಘೀಕೃತಾನ್ ವೀಕ್ಷ್ಯ ಪರಾತ್ಪರೇಶಃ ।

ಭವೇತ್ ಕಥಞ್ಚಿದ್ ಬಹುಮಾನೇನ ಯುಕ್ತ ಇತ್ಯೇವ ಕೃಷ್ಣೋsದರ್ಶಯಚ್ಛ್ರಾನ್ತವತ್ ಸ್ವಮ್ ॥೨೦.೧೦೧॥

 

ಇತರರ ವಿಷಯದಲ್ಲಿ ಎಂದೂ ವ್ಯರ್ಥವಾಗದ ವರವನ್ನು ನೀಡುವ ಬ್ರಹ್ಮದೇವರ ಮೇಲೆ ನರಕಾಸುರನಲ್ಲಿ ಕನಿಷ್ಠ ಭಾವನೆ ಮೂಡಬಾರದು ಎನ್ನುವ ಉದ್ದೇಶದಿಂದ, ಎಲ್ಲರಿಗಿಂತಲೂ ಮಿಗಿಲಾಗಿರುವ ಶ್ರೀಕೃಷ್ಣನು ಈ ಕ್ಷಣದಲ್ಲಿ ಬಳಲಿದವನಂತೆ ತನ್ನನ್ನು ತೋರಿಸಿಕೊಂಡ. 

 

ತದಾ ದೃಪ್ತಂ ನರಕಂ ವೀಕ್ಷ್ಯ ದೇವೀ ಸತ್ಯಾssದದೇ ಕಾರ್ಮ್ಮುಕಂ ಶಾರ್ಙ್ಗಸಞ್ಜ್ಞಮ್ ।

ಚಕಾರ ತಂ ಯತಮಾನಂ ಚ ಭೌಮಂ ನಿರಾಯುಧಂ ವಿರಥಂ ಚ ಕ್ಷಣೇನ ॥೨೦.೧೦೨ ॥

 

ಆಗ ಸತ್ಯಭಾಮೆಯು ದರ್ಪ ಹೊಂದಿದ ನರಕನನ್ನು ಕಂಡು, ಶಾರ್ಙ್ಗ ಎನ್ನುವ ಹೆಸರಿನ ಬಿಲ್ಲನ್ನು ತೆಗೆದುಕೊಂಡಳು. ಆಕೆಯನ್ನು ಸೋಲಿಸಲು ಪ್ರಯತ್ನಪಟ್ಟು ಯುದ್ಧಮಾಡುತ್ತಿರುವ  ನರಕಾಸುರನನ್ನು ಅವಳು ಕೆಲವೇ ಕ್ಷಣಗಳಲ್ಲಿ ನಿರಾಯುಧನನ್ನಾಗಿಯೂ, ರಥಹೀನನನ್ನಾಗಿಯೂ ಮಾಡಿದಳು.

 

ಆಲಿಙ್ಗ್ಯ ಕೃಷ್ಣಃ ಸತ್ಯಭಾಮಾಂ ಪುನಶ್ಚ ರಥಾನ್ತರೇ ಸಂಸ್ಥಿತಂ ಭೌಮಮುಗ್ರಮ್ ।

ಸೃಜನ್ತಮಸ್ತ್ರಾಣ್ಯರಿಣಾ ನಿಕೃತ್ತಕನ್ಧಂ ಮೃತ್ಯೋರರ್ಪ್ಪಯಾಮಾಸ ಶೀಘ್ರಮ್ ॥೨೦.೧೦೩॥

 

ಕೃಷ್ಣನು ಸತ್ಯಭಾಮೆಯನ್ನು ಆಲಂಗಿಸಿದ. ಇತ್ತ ಇನ್ನೊಂದು ರಥವನ್ನೇರಿ ಬರುತ್ತಿರುವ, ತಾಮಸನಾಗಿರುವ, ಅಸ್ತ್ರಗಳನ್ನು ನಿರಂತರವಾಗಿ ಬಿಡುವ ನರಕಾಸುರನ ಕತ್ತನ್ನು  ಶ್ರೀಕೃಷ್ಣ ತನ್ನ ಚಕ್ರದಿಂದ ಕತ್ತರಿಸಿ, ಅವನನ್ನು ಮೃತ್ಯುವಿಗೆ ದೂಡಿದ.


No comments:

Post a Comment