ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, September 12, 2021

Mahabharata Tatparya Nirnaya Kannada 20132_20137

 

ಅಪಾಹಸತ್ ತಂ ಜಗದೇಕಸುನ್ದರೀ ಹರಿಪ್ರಿಯಾsಥೋ ಜಗದೇಕಮಾತರಮ್ ।

ಉವಾಚ ಶಕ್ರೋ ಜಗತಾಂ ಜನಿತ್ರೇ ಪ್ರದರ್ಶಯಾಮೋ ವಯಮಾತ್ಮಶೈಶವಮ್ ೨೦.೧೩೨

 

ಇಂದ್ರನು ಓಡುತ್ತಿರಲು, ಜಗತ್ತಿನಲ್ಲಿಯೇ ಅತ್ಯಂತ ಸುಂದರಿಯಾಗಿರುವ, ಜಗತ್ತಿನ ತಾಯಿಯಾಗಿರುವ   ಸತ್ಯಭಾಮೆಯು ಅವನನ್ನು ಕುರಿತು [ಬರಿಗೈಯಲ್ಲಿ ಹಿಂತಿರುಗಿದರೆ ಶಚಿ ನಿನ್ನನ್ನು ಗೌರವಿಸುವುದಿಲ್ಲ,  ಬಾ ಯುದ್ಧಕ್ಕೆ ಎಂದು] ಅಪಹಾಸ್ಯ ಮಾಡಿದಳು. ಆಗ ಇಂದ್ರನು ‘ಜಗತ್ತಿನ ತಂದೆಯಾಗಿರುವ ಶ್ರೀಕೃಷ್ಣನಿಗೋಸ್ಕರ ನಾವು ನಮ್ಮ  ಬಾಲಿಷತನವನ್ನು ತೋರಿಸುತ್ತಿದ್ದೇವೆ’ ಎನ್ನುತ್ತಾನೆ.

 

ಜಗಾಮ ಚಾಥೋ ಶರಣಂ ಜನಾರ್ದ್ದನಂ ಸುರೈರ್ವೃತೋ ದೇವಪತಿಃ ಕ್ಷಮಾಪಯನ್

ಶೃಙ್ಗಂ ಚ ದತ್ವಾ ಮಣಿಪರ್ವತಸ್ಯ ಪ್ರಣಮ್ಯ ದೇವ್ಯಾ ಸಹಿತಂ ಜಗದ್ಗುರುಮ್ ೨೦.೧೩೩

 

ತದನಂತರ[ಸಮಸ್ತ ದೇವತೆಗಳ ಅಸುರಾವೇಶ ಕೊನೆಗೊಳ್ಳಲು], ದೇವತೆಗಳಿಂದ ಕೂಡಿರುವ ಇಂದ್ರನು ಕ್ಷಮೆ ಬೇಡುತ್ತಾ ಜನಾರ್ದನನಲ್ಲಿ  ಶರಣು ಬಂದ. ಅಷ್ಟೇ ಅಲ್ಲಾ, ದೇವಿಯಿಂದ ಕೂಡಿರುವ ಕೃಷ್ಣನಿಗೆ ಮಣಿಗಳಿಂದ ಕೂಡಿದ ಶಿಖರವನ್ನು ಕೊಟ್ಟು ನಮಸ್ಕರಿಸಿದ.

 

ಯಯಾಚ ಏನಂ ಪರಿರಕ್ಷಣಾಯ ಶಚೀಪತಿಃ ಕೇಶವಮರ್ಜ್ಜುನಸ್ಯ ।

ಜಗಾದ ಕೃಷ್ಣೋsಪಿ ಧರಾತಳಸ್ಥಿತೇ ನ ಮಯ್ಯಮುಂ ಕಶ್ಚನ ಜೇಷ್ಯತೀತಿ ೨೦.೧೩೪

 

ಶಚೀಪತಿ ಇಂದ್ರನು ಅರ್ಜುನನ ರಕ್ಷಣೆಗಾಗಿ ಶ್ರೀಕೃಷ್ಣನನ್ನು ಬೇಡಿದನು. ಕೃಷ್ಣನಾದರೋ ‘ನಾನು ಭೂಮಿಯಲ್ಲಿ ಇರಬೇಕಾದರೆ ಅರ್ಜುನನನ್ನು ಯಾರೊಬ್ಬರೂ ಗೆಲ್ಲಲಾರರು’ ಎನ್ನುವ ಮಾತನ್ನು ಕೊಟ್ಟ.

 

ತಮರ್ಜ್ಜುನಾರ್ತ್ಥಂ ವರಮಾಪ್ಯ ವಾಸವಃ ಪುನಃಪುನಶ್ಚಕ್ರಧರಂ ಪ್ರಣಮ್ಯ ।

ಪ್ರಸನ್ನದೃಷ್ಟ್ಯಾಹರಿಣಾsಭಿವೀಕ್ಷಿತೋ ಯಯೌ ಮಹಾಭಾಗವತಃ ಸ್ವಮಾಲಯಮ್ ॥ ೨೦.೧೩೫

 

ಅರ್ಜುನನಿಗಾಗಿ ಆ ವರವನ್ನು ಪಡೆದ ಮಹಾಭಾಗವತನಾದ ಇಂದ್ರನು ಮತ್ತೆಮತ್ತೆ ಕೃಷ್ಣನಿಗೆ ನಮಸ್ಕರಿಸಿ, ಪ್ರಸನ್ನವಾದ ದೃಷ್ಟಿಯಿಂದ ಪರಮಾತ್ಮನಿಂದ ನೋಡಲ್ಪಟ್ಟವನಾಗಿ ತನ್ನ ಮನೆಯನ್ನು ಕುರಿತು ತೆರಳಿದ.

 

ಕೃಷ್ಣೋsಪ್ಯನುಜ್ಞಾಪ್ಯ ಪುರನ್ದರಂ ಪುರೀಂ ನಿಜಾಂ ವ್ರಜನ್ನಭ್ಯಧಿಕಂ ವ್ಯರೋಚತ ।

ಕಿರೀಟಧಾರೀ ವರಕುಣ್ಡಲೋಲ್ಲಸನ್ಮುಖಾಮ್ಬುಜಃ ಪೀತಪಟಃ ಸಕೌಸ್ತುಭಃ ॥೨೦.೧೩೬ ॥

 

ಉತ್ಕೃಷ್ಟವಾದ ಕಿರೀಟಧಾರಿ, ಒಳ್ಳೆಯ ಕುಂಡಲದಿಂದ ಶೋಭಿಸುವ ಮುಖಕಮಲವುಳ್ಳ, ಹಳದಿ ಬಣ್ಣದ ಬಟ್ಟೆಯುಳ್ಳ, ಕೌಸ್ತುಭಾಭರಣದಿಂದ  ಮಿಗಿಲಾಗಿ ಶೋಭಿಸುತ್ತಿರುವ ಶ್ರೀಕೃಷ್ಣನೂ ಕೂಡಾ, ಇಂದ್ರನನ್ನು ಅನುಜ್ಞೆಕೊಟ್ಟು ಕಳುಹಿಸಿ, ತನ್ನ ಪಟ್ಟಣವನ್ನು ಕುರಿತು ತೆರಳಿದನು.

 

ವಿರೋಚಮಾನಸ್ಯ ಸದಾ ಜಗದ್ಪ್ರಭೋರ್ನ್ನವೈ ವಿಶೇಷಃ ಕ್ವಚಿದಚ್ಯುತಸ್ಯ ।

ತಥಾsಪಿ ತತ್ ಸ್ಮಾರಯಿತುಂ ವಚೋ ಭವೇದಪೇಕ್ಷ್ಯ ಚಾಲ್ಪಜ್ಞಮತಿಂ ಪುರಾಣಗಮ್ ॥೨೦.೧೩೭ ॥

 

ಯಾವಾಗಲೂ ಅಮಿತವಾದ ಸೌಂದರ್ಯದಿಂದ ಹೊಳೆಯುತ್ತಿರುವ ಜಗದೊಡೆಯನಾದ ಅಚ್ಯುತನಿಗೆ  ಯಾವಾಗಲೋ ಒಮ್ಮೆ ವಿಶೇಷ ಎನ್ನುವುದಿಲ್ಲ(ಅವನು ಯಾವಾಗಲೋ ಒಮ್ಮೆ ಶೋಭಿಸುವುದಲ್ಲ). ಆದರೂ ಕೂಡಾ, ಅಲ್ಪಜ್ಞರಾದ ಮನುಷ್ಯರಿಗೆ ನೆನಪಿಸಲೋಸುಗ, ಪುರಾಣಗಳಲ್ಲಿ ಅಂತಹ ಮಾತು ಬರುತ್ತದೆ. [ಕೇವಲ ಸ್ಮರಿಸುವುದಕ್ಕಾಗಿ ಅಲ್ಲಲ್ಲಿ ಈರೀತಿಯ ವಿವರಣೆ ಬರುತ್ತದೆ – ಆದರೆ ಭಗವಂತ ಸದಾ ಶೋಭಿಸುತ್ತಿರುತ್ತಾನೆ]

No comments:

Post a Comment