[ಒಂದು ವರ್ಷಗಳ ಕಾಲ ಬ್ರಹ್ಮಚಾರಿಯಾಗಿರಬೇಕು ಎನ್ನುವುದು ಪಾಂಡವರ ನಡುವಿನ ಒಪ್ಪಂದವಾಗಿತ್ತು. ಆದರೆ ಉಲೂಪಿಯಲ್ಲಿ ಮಗನನ್ನು ಹುಟ್ಟಿಸಿ ಅರ್ಜುನ ಅದನ್ನು ಮುರಿದನಲ್ಲವೇ ಎಂದರೆ:]
ಸತ್ಯಾತ್ಯಯಾನ್ನೈವ ದೋಷೋsರ್ಜ್ಜುನಸ್ಯ
ತೇಜೀಯಸಶ್ಚಿನ್ತನೀಯಃ ಕಥಞ್ಚಿತ್ ।
ಶ್ರೇಷ್ಠಾಪರಾಧಾನ್ನಾನ್ಯದೋಷಸ್ಯ ಲೇಪಸ್ತೇಜೀಯಸಾಂ ನಿರ್ಣ್ಣಯೋsಯಂ ಹಿ ಶಾಸ್ತ್ರೇ ॥೨೦.೧೫೯॥
ಒಪ್ಪಂದವನ್ನು ಮೀರಿದ್ದರಿಂದ ಅತ್ಯಂತ ತೇಜಸ್ವಿಯಾದ
ಅರ್ಜುನನಿಗೆ ಯಾವ ದೋಷವೂ ಇಲ್ಲ. ದೋಷವಿದೆ ಎಂದು
ಚಿಂತನೆ ಕೂಡಾ ಮಾಡಬಾರದು. ಅರ್ಜುನಂತಹ ಅತ್ಯಂತ
ಶ್ರೇಷ್ಠರಾದವರಿಗೆ ಸ್ವೋತ್ತಮಾಪರಾಧ ಬಿಟ್ಟರೆ ಬೇರೆ ದೋಷದ ಲೇಪವೂ ಇಲ್ಲ. ಇದು ಶಾಸ್ತ್ರದಲ್ಲಿ
ನಿರ್ಣಯವಾಗಿದೆ.[ತಥಾಚà ದೇವತೆಗಳಿಗೆ ಮತ್ತು ಋಷಿಗಳಿಗೆ ದೋಷ
ಯಾವುದು ಎಂದರೆ ಸ್ವೋತ್ತಮ ದ್ರೋಹ (ತಮಗಿಂತ ಉತ್ತಮರಿಗೆ ಮಾಡುವ ದ್ರೋಹ). ಇದು ಧರ್ಮಾಧರ್ಮಗಳ
ಗುಟ್ಟು. ಬೇರೆ ಯಾವುದೂ ದೋಷವಲ್ಲ].
[ಇದೆಲ್ಲವೂ ಕೂಡಾ ಅನೇಕ ಕಡೆ ಹೇಳಲ್ಪಟ್ಟಿದೆ.
ಅನುವ್ಯಾಖ್ಯಾನದಲ್ಲಿ(೩.೪.೬) ಶ್ರೇಷ್ಠಾಪರಾಧದಿಂದಲೇ ದೋಷ ಎಂದು ಹೇಳಿದ್ದಾರೆ. ಶ್ರೇಷ್ಠ ಎಂದರೆ
ಕೇವಲ ಗಂಡು ಮಾತ್ರವಲ್ಲ, ಹೆಣ್ಣೂ ಕೂಡಾ. ತನಗಿಂತ ಯೋಗ್ಯತೆಯಲ್ಲಿ ಹಿರಿಯಳಿಗೆ ಮಾಡುವ ಅಪರಾಧವೂ
ದೋಷ. ‘ಚನ್ದ್ರಸುಗ್ರೀವಯೋಶ್ಚೈವ ಸ್ವೋಚ್ಚದಾರಪರಿಗ್ರಹಾತ್ । ಪ್ರಾಪ್ತಹಾನಿರಭೂನ್ನೈವ
ಕ್ಲಪ್ತಹಾನಿಃ ಕಥಞ್ಚನ’. ಚಂದ್ರ ಹಾಗೂ ಸುಗ್ರೀವರು ತಮಗಿಂತಲೂ
ಯೋಗ್ಯತೆಯಲ್ಲಿ ಹಿರಿಯರಾದ ಬೃಹಸ್ಪತಿ ಮತ್ತು ವಾಲಿಯರ ಹೆಂಡತಿಯರನ್ನು ಗ್ರಹಿಸಿದ್ದರಿಂದ ಅವರ
ಆನಂದೋದ್ರೇಕ ನಾಶವಾಯಿತು. ಮಹಾಭಾರತದಲ್ಲಿ(ಆದಿಪರ್ವ
೨೩೪.೩೭-೩೯) ಕೂಡಾ ಸೂಕ್ಷ್ಮವಾಗಿ ಶ್ರೇಷ್ಠಾಪರಾಧದ ಕುರಿತು ಹೇಳಿರುವುದನ್ನು ಕಾಣುತ್ತೇವೆ: ಪರಿತ್ರಾಣಂ
ಚ ಕರ್ತವ್ಯಮಾರ್ತಾನಾಂ ಪೃಥುಲೋಚನ । ಕೃತ್ವಾ ಮಮ ಪರಿತ್ರಾಣಂ ತವ ಧರ್ಮ ನ ಲುಪ್ಯತೇ । ಯದಿವಾsಪ್ಯಸ್ಯ
ಧರ್ಮಸ್ಯ ಸೂಕ್ಷ್ಮೋsಪಿ ಸ್ಯಾದ್ ವ್ಯತಿಕ್ರಮಃ । ಸ ಚ ತೇ ಧರ್ಮೋ ಏವ
ಸ್ಯಾದ್ ದತ್ವಾ ಪ್ರಾಣಾನ್ ಮಮಾರ್ಜುನ । ಭಕ್ತಾಂ
ಚ ಭಜ ಮಾಂ ಪಾರ್ಥ ಸತಾಮೇತನ್ಮತಂ ಪ್ರಭೋ’. ಉಲೂಪಿ ಹೇಳುವ ಮಾತು
ಇದಾಗಿದೆ: ‘ನೀನು ಸಂಕಟದಲ್ಲಿರುವ ನಮ್ಮಂತವರ ರಕ್ಷಣೆ ಮಾಡಬೇಕು. ಧರ್ಮದ ಗತಿ ಸೂಕ್ಷ್ಮ. ಹಾಗಾಗಿ ನನ್ನ
ರಕ್ಷಣೆ ಮಾಡಿ ನಿನಗೆ ಧರ್ಮಲೋಪ ಆಗುವುದಿಲ್ಲ. ಒಂದು ವೇಳೆ ನಿನಗೆ ಧರ್ಮಲೋಪ ಆಗುವುದಾದರೆ ನಾನು
ಪ್ರಾಣವನ್ನು ಕೊಡಲೂ ಸಿದ್ದಳಿದ್ದೇನೆ. ಆರ್ತರಿಗೆ
ನೆರವು ನೀಡುವುದು ಸಜ್ಜನರ ಲಕ್ಷಣ ಹೊರತು ಅಪರಾಧವಲ್ಲ’.
ಒಟ್ಟಿನಲ್ಲಿ ಹೇಳಬೇಕೆಂದರೆ ಅಪರಾಧ ಮೀಮಾಂಸೆಯ ನಿರ್ಣಯ-ಶ್ರೇಷ್ಠಾಪರಾಧ. ಅದೇ ದೋಷ.
ಅದಕ್ಕಿಂತ ಹೊರತಾಗಿ ಇನ್ನ್ಯಾವ ದೋಷವೂ ಇಲ್ಲ. ಹೀಗೆ ಅಪರಾಧದ ಸೂಕ್ಷ್ಮವನ್ನು ಆಚಾರ್ಯರು ಮೇಲಿನ
ಶ್ಲೋಕದಲ್ಲಿ ನಿರ್ಣಯ ಮಾಡಿ ಹೇಳಿದ್ದಾರೆ].
ಅತಿಸ್ನೇಹಾಚ್ಚಾಗ್ರಜಾಭ್ಯಾಂ ತದಸ್ಯ ಕ್ಷಾನ್ತಂ ಸುತಾ ಪಾಣ್ಡ್ಯರಾಜೇನ ದತ್ತಾ ।
ಸಂವತ್ಸರಾನ್ತೇ
ಫಲ್ಗುನಸ್ಯಾಭಿರೂಪಾ ಚಿತ್ರಾಙ್ಗದಾ ವೀರಸೇನೇನ ತೋಷಾತ್ ॥೨೦.೧೬೦॥
ಅತ್ಯಂತ ಸ್ನೇಹದಿಂದ ಅಣ್ಣಂದಿರಿಂದ ಅರ್ಜುನನ ನಿಯಮದ
ಮುರಿಯುವಿಕೆಯು ಕ್ಷಮಿಸಲ್ಪಟ್ಟಿತು. [ಯಾರು ಕ್ಷಮಿಸಬೇಕೋ ಅವರು ಕ್ಷಮಿಸಿಯಾಗಿತ್ತು.] ತದನಂತರ ಒಂದು
ವರ್ಷ ಕಳೆಯುತ್ತಿರಲು, ಪಾಣ್ಡ್ಯರಾಜನಾದ ವೀರಸೇನನಿಂದ
ಸಂತೋಷಪೂರ್ವಕವಾಗಿ ಅರ್ಜುನನಿಗೆ ಯೋಗ್ಯಳಾಗಿರುವ ಚಿತ್ರಾಙ್ಗದೆಯು ಕೊಡಲ್ಪಟ್ಟಳು.
[ಪಾಂಡ್ಯರಾಜನಾದ ವೀರಸೇನ, ಅರ್ಜುನನ ಮೇಲಿನ ಪ್ರೀತಿಯಿಂದ ತನ್ನ ಮಗಳಾದ ಚಿತ್ರಾಙ್ಗದೆಯನ್ನು
ಅರ್ಜುನನಿಗೆ ಕೊಟ್ಟ].
[ವೀರಸೇನ ಮತ್ತು ಚಿತ್ರಾಙ್ಗದೆಯ ಮೂಲವನ್ನು
ಪರಿಚಯಿಸುತ್ತಾರೆ:]
ಸ
ವೀರಸೇನಸ್ತ್ವಷ್ಟುರಂಶೋ ಯಮಸ್ಯಾಪ್ಯಾವೇಶಯುಕ್ ಸಾ ಚ ಕನ್ಯಾ ಶಚೀ ಹಿ ।
ತಾರಾದೇಹೇ ಸೂರ್ಯ್ಯಜಸ್ಯಾಙ್ಗಸಙ್ಗಾತ್
ಸ್ವರ್ಗ್ಗಂ ನಾಗಾದನ್ತರಿಕ್ಷಾದಿಹಾsಸೀತ್ ॥೨೦.೧೬೧ ॥
ಪಾಣ್ಡ್ಯರಾಜನಾದ ವೀರಸೇನನು ತ್ವಷ್ಟೃ ದೇವತೆಯ ಅಂಶವಾಗಿದ್ದು ಯಮನ ಆವೇಶವನ್ನು ಹೊಂದಿದ್ದ. ಇನ್ನು ಚಿತ್ರಾಙ್ಗದೆ ಶಚೀದೇವಿ.
ರಾಮಾಯಣ ಕಾಲದಲ್ಲಿ ತಾರೆಯಾಗಿರುವ ಅವಳು ಸುಗ್ರೀವನ ಅಂಗವನ್ನು ಹೊಂದಿದ್ದರಿಂದ ಸ್ವರ್ಗಕ್ಕೆ ಹೋಗದೇ
ಮಧ್ಯದಲ್ಲೇ ಇದ್ದು, ಈಗ ಪಾಣ್ಡ್ಯದೇಶದಲ್ಲಿ ಹುಟ್ಟಿದ್ದಳು.
ತೇನೈವ ಹೇತೋರ್ನ್ನಾತಿಸಾಮೀಪ್ಯಮಾಸೀತ್ ತಸ್ಯಾಃ ಪಾರ್ತ್ಥೇ ಪುತ್ರಿಕಾಪುತ್ರಧರ್ಮಾ ।
ತಸ್ಯಾಂ ಜಾತೋ ಬಭ್ರುವಾಹೋsರ್ಜ್ಜುನೇನ ಪೂರ್ವಂ ಜಯನ್ತಃ
ಕಾಮದೇವಾಂಶಯುಕ್ತಃ ॥೨೦.೧೬೨॥
ಬೇರೊಬ್ಬರನ್ನು ಸಂಗ ಮಾಡಿದ್ದರಿಂದ ಅವಳಿಗೆ ಈಜನ್ಮದಲ್ಲಿ ಬಹಳವಾಗಿ
ಅರ್ಜುನನ ಸಂಸರ್ಗ ಸಿಗಲಿಲ್ಲ. ಅರ್ಜುನನಿಂದ
ಪುತ್ರಿಕಾಪುತ್ರ ಧರ್ಮದಿಂದ ಬಭ್ರುವಾಹನ ಎನ್ನುವ ಮಗನನ್ನು ಅವಳು ಪಡೆದಳು. ಬಭ್ರುವಾಹನ
ಪೂರ್ವದಲ್ಲಿ ಜಯಂತನೇ ಆಗಿದ್ದು, ಕಾಮದೇವನ ಅಂಶದಿಂದ ಕೂಡಿದ್ದ.
[ಮಹಾಭಾರತದ ಆದಿಪರ್ವದಲ್ಲಿ (೨೩೫.೧೫-೧೭) ಈ ರೀತಿ ಹೇಳಿದ್ದಾರೆ: ‘ಸಮುದ್ರತೀರೇಣ ಶನೈರ್ಮಣಲೂರಂ ಜಗಾಮ ಹ । ತತಃ ಸರ್ವಾಣಿ
ತೀರ್ಥಾನಿ ಪುಣ್ಯಾನ್ಯಾಯಾಯತನಾನಿ ಚ । ಅಭಿಗಮ್ಯ ಮಹಾಬಾಹುರಗಚ್ಛನ್ಮಹಿಪತಿಮ್ ।
ಮಣಲೂರೇಶ್ವರಂ ರಾಜನ್ ಧರ್ಮಜ್ಞಂ ಚಿತ್ರವಾಹನಮ್ । ತಸ್ಯ ಚಿತ್ರಾಙ್ಗದಾ ನಾಮ ದುಹಿತಾ ಚಾರುದರ್ಶನಾ’ ಈಗಿನ ಪಾಂಡಿಚೇರಿ
ಅಂದಿನ ಪಾಣ್ಡ್ಯದೇಶ. ಅದನ್ನು ಮಣಲೂರು ಎಂದು ಕರೆಯುತ್ತಿದ್ದರು. ವೀರಸೇನನನ್ನು ಚಿತ್ರವಾಹನ ಎಂದೂ
ಕರೆಯುತ್ತಾರೆ. ಅವನ ಮಗಳೇ ಚಿತ್ರಾಙ್ಗದೆ. ಅವಳ ಮಗನೇ ಬಭ್ರುವಾಹನ. ಇಲ್ಲಿ ನಾವು ಗಮನಿಸಬೇಕಾದ
ಅಂಶವೆಂದರೆ- ಬಭ್ರುವಾಹನ ಪುತ್ರಿಕಾಪುತ್ರಧರ್ಮದಿಂದ[1]
ಹುಟ್ಟಿದವನು. ಹೀಗಾಗಿ ಈತ ಅರ್ಜುನನಿಂದ ಹುಟ್ಟಿದ್ದರೂ ಕೂಡಾ ಪಾಂಡವ ವಂಶದವನಾಗಿರದೇ ಪಾಣ್ಡ್ಯವಂಶದವನಾಗಿದ್ದ.
ಈ ಕಾರಣದಿಂದಲೇ ಮಹಾಭಾರತ ಯುದ್ಧದ ಕೊನೆಯಲ್ಲಿ ಪಾಂಡವರ ವಂಶ ನಾಶಮಾಡಲೆಂದು ಅಶ್ವತ್ಥಾಮ ಬಿಟ್ಟ ಬ್ರಹ್ಮಾಸ್ತ್ರ
ಬಭ್ರುವಾಹನನ ಮೇಲೆ ಪ್ರಭಾವ ಬೀರಲಿಲ್ಲ].
ಪುತ್ರಂ ವೀರಂ
ಜನಯಿತ್ವಾsರ್ಜ್ಜುನೋsತೋ ಗಚ್ಛನ್ ಪ್ರಭಾಸಂ
ಶಾಪತೋ ಗ್ರಾಹದೇಹಾಃ ।
ಅಮೂಮುಚಚ್ಚಾಪ್ಸರಸಃ ಸ
ಪಞ್ಚ ತಾಭಿರ್ಗ್ಗೃಹೀತಃ ಪ್ರವಿಕೃಷ್ಯ ತೀರಮ್ ॥೨೦.೧೬೩॥
ಹೀಗೆ ವೀರನಾದ ಪುತ್ರನನ್ನು
ಹುಟ್ಟಿಸಿ ಪ್ರಭಾಸದತ್ತ ಪ್ರಯಾಣ ಬೆಳೆಸಿದ ಅರ್ಜುನ,
ದಾರಿಯಲ್ಲಿ ಮುನಿಯೊಬ್ಬನ ಶಾಪದಿಂದ ಮೊಸಳೆಗಳ
ದೇಹವನ್ನು ಹೊಂದಿದ್ದ ಐದು ಅಪ್ಸರೆಯರ ಶಾಪ ಪರಿಹಾರ ಮಾಡಿದ. ತಾನು ನೀರೊಳಗೆ ಇಳಿದಾಗ ತನ್ನನ್ನು ಹಿಡಿದ
ಅವರನ್ನು(ಮೊಸಳೆರೂಪದ ಅಪ್ಸರೆಯರನ್ನು) ದಡಕ್ಕೆ ಎಸೆದು ಶಾಪಮುಕ್ತರನ್ನಾಗಿ ಮಾಡಿದ.
[ಒಮ್ಮೆ ಐದು ಜನ ಅಪ್ಸರೆಯರು
ಒಬ್ಬ ಮುನಿಯನ್ನು ಅತಿಯಾಗಿ ಹಾಸ್ಯ ಮಾಡಿದರು. ಆಗ ಆತ ಅವರ ಕಾಟವನ್ನು ತಾಳಲಾರದೇ ‘ನೀವೆಲ್ಲರೂ
ಮೊಸಳೆಗಳಾಗಿ’ ಎಂದು ಶಾಪ ಕೊಟ್ಟ. ತದನಂತರ ಬೇಡಿದ ಅಪ್ಸರೆಯರಿಗೆ ಶಾಪ
ವಿಮೋಚನೆಯ ಉಪಾಯವನ್ನೂ ಆ ಬ್ರಾಹ್ಮಣ ನೀಡಿದ:]
ಏವಂ ಹಿ ತಾಸಾಂ
ಶಾಪಮೋಕ್ಷಃ ಪ್ರದತ್ತೋ ಯದಾsಖಿಲಾ ವೋ ಯುಗಪತ್ ಸಮ್ಪ್ರಕರ್ಷೇತ್ ।
ಏಕಸ್ತದಾ
ನಿಜರೂಪಾಪ್ತಿರೇವೇತ್ಯಲಂ ತುಷ್ಟೇನ ಬ್ರಾಹ್ಮಣೇನಾsನತಾನಾಮ್ ॥೨೦.೧೬೪॥
ಶಾಪಗ್ರಸ್ತರಾದ ಅಪ್ಸರಸ್ತ್ರೀಯರು (ತಮ್ಮ ತಪ್ಪಿನ ಅರಿವಾಗಿ) ನಮಸ್ಕರಿಸಿದಾಗ,
‘ಯಾವಾಗ ಒಬ್ಬ ನಿಮ್ಮೆಲ್ಲರನ್ನೂ ಒಟ್ಟಿಗೆ ಎಳೆದು ಹೊರಗೆ ಹಾಕುತ್ತಾನೋ, ಆಗ ನಿಮ್ಮ ನಿಜರೂಪ ಪುನಃ
ಪ್ರಾಪ್ತಿಯಾಗುತ್ತದೆ’ ಎಂದು ಸಂತುಷ್ಟನಾದ ಬ್ರಾಹ್ಮಣನಿಂದ ಶಾಪ ವಿಮೋಚನೆ ಕೊಡಲ್ಪಟ್ಟಿತ್ತು.
[1] ರಾಜರಿಗೆ ಗಂಡು ಮಗ ಇಲ್ಲದೇ ಇದ್ದಾಗ, ಅವರು ಪುತ್ರಿಕಾಪುತ್ರಧರ್ಮ ಒಪ್ಪಂದದೊಂದಿಗೆ ಮಗಳ ಮದುವೆ ಮಾಡಿಸುತ್ತಿದ್ದರು. ಹೀಗೆ
ಮಗಳಲ್ಲಿ ಹುಟ್ಟುವ ಮಗ ತಂದೆಯ ವಂಶಕ್ಕೆ ಸೇರದೇ, ತಾಯಿಯ ವಂಶದ
ಉತ್ತರಾಧಿಕಾರಿಯಾಗುತ್ತಿದ್ದ.
No comments:
Post a Comment