ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, September 19, 2021

Mahabharata Tatparya Nirnaya Kannada 20154_20158

 

ಯುಧಿಷ್ಠಿರಾದ್ಯೈಃ ಸೌಹೃದಾದ್ ವಾರಿತೋsಪಿ ಯಯೌ ಸತ್ಯಾರ್ತ್ಥಂ ಸ ಕದಾಚಿದ್ ದ್ಯುನದ್ಯಾಮ್ ।

ಕುರ್ವನ್ ಸ್ನಾನಂ ಮಾಯಯಾ ನಾಗವಧ್ವಾ ಹೃತೋ ಲೋಕಂ ಭುಜಗಾನಾಂ ಕ್ಷಣೇನ ॥೨೦.೧೫೪॥

 

ಯುಧಿಷ್ಠಿರ ಮೊದಲಾದವರಿಂದ ಸ್ನೇಹದಿಂದ ತಡೆಯಲ್ಪಟ್ಟರೂ  ಕೂಡಾ, ಅರ್ಜುನ ತೀರ್ಥಯಾತ್ರೆಗೆ ತೆರಳಿದ. ತೀರ್ಥಯಾತ್ರಾಕಾಲದಲ್ಲಿ ಒಮ್ಮೆ ಗಂಗೆಯಲ್ಲಿ ಸ್ನಾನಮಾಡುತ್ತಿರುವಾಗ ನಾಗಸ್ತ್ರೀ ಉಲೂಪಿಯ ವಿಶಿಷ್ಟ ವಿದ್ಯೆಯಿಂದಾಗಿ ಕ್ಷಣಾರ್ಧದಲ್ಲಿ ನಾಗಲೋಕಕ್ಕೆ ಅಪಹರಿಸಲ್ಪಟ್ಟ.

[‘ನಾನು ನಿನ್ನ ಅಣ್ಣ, ಹಾಗಾಗಿ  ನಿನಗೆ ತಂದೆಯ ಸಮಾನ, ಇವಳು ಈಗ ನಿನ್ನ ಅತ್ತಿಗೆ, ಅಂದರೆ ತಾಯಿಯ ಸಮಾನ. ತಂದೆ ತಾಯಿಯರು ಏಕಾಂತದಲ್ಲಿ ಇದ್ದಾಗ ಮಗ ಬಂದರೆ ಏನೂ ಸಮಸ್ಯೆ ಇಲ್ಲ ಮತ್ತು  ಅದು ಅಪರಾಧವಲ್ಲ, ಆದ್ದರಿಂದ ನೀನು ತೀರ್ಥಯಾತ್ರೆಗೆ ಹೋಗುವುದು ಬೇಡ’ ಎಂದು ಯುಧಿಷ್ಠಿರ  ತಡೆಯುತ್ತಾನೆ. ಆದರೆ ಅರ್ಜುನ ತಮ್ಮ ನಡುವಿನ ಒಪ್ಪಂದವನ್ನು ನೆನಪಿಸಿ ತೀರ್ಥಯಾತ್ರೆಗೆ ತೆರಳುತ್ತಾನೆ ಮತ್ತು ಗಂಗೆಯಲ್ಲಿ ಸ್ನಾನ ಮಾಡುತ್ತಿರುವಾಗ ಉಲೂಪಿಯಿಂದ ಅಪಹರಿಸಲ್ಪಡುತ್ತಾನೆ] 

 

ತಸ್ಯಾಃ ಪಿತಾ ಗರುಡೇನಾsತ್ತಪತ್ಯುಃ ಪುತ್ರಾಕಾಙ್ಕ್ಷೀ ಚೋದಯಾಮಾಸ ಪಾರ್ತ್ಥಮ್ ।

ಸಂವತ್ಸರಬ್ರಹ್ಮಚರ್ಯ್ಯೇ ತು ಪಾರ್ತ್ಥೈಃ ಕೃಷ್ಣಾಹೇತೋಃ ಸಮಯೇ ಸಾಧು ಬದ್ಧಮ್ ॥೨೦.೧೫೫॥

 

ನಾಗಲೋಕದ ಶ್ರೇಷ್ಠರಲ್ಲಿ ಒಬ್ಬನಾದ ಉಲೂಪಿಯ ತಂದೆ, ಗರುಡನಿಂದ ತಿನ್ನಲ್ಪಟ್ಟ ಗಂಡನನ್ನು ಉಳ್ಳ ತನ್ನ ಮಗಳ ಪುತ್ರ ಬಯಕೆಗಾಗಿ, ‘ಒಂದು ವರ್ಷಗಳ ಕಾಲ ಬ್ರಹ್ಮಚರ್ಯದಲ್ಲಿರುತ್ತೇನೆ’ ಎನ್ನುವ ಒಪ್ಪಂದದಲ್ಲಿ ಗಟ್ಟಿಯಾಗಿ ಬದ್ಧನಾದ ಅರ್ಜುನನ್ನು ಕುರಿತು ಬೇಡುತ್ತಾನೆ.

[ಉಲೂಪಿ ಒಬ್ಬ ನಾಗಾಂಗನೆ. ಅವಳ ಪತಿಯನ್ನು ಗರುಡ ತಿಂದುಬಿಟ್ಟಿದ್ದ. ಮಕ್ಕಳಿಲ್ಲದ ಆಕೆ ಗುಣಶ್ರೇಷ್ಠನಿಂದ ಮಗನನ್ನು ಪಡೆಯಬೇಕು ಎನ್ನುವ ಬಯಕೆಯಿಂದ ಅರ್ಜುನನನ್ನು ಅಪಹರಿಸಿದ್ದಳು. ಹೀಗಾಗಿ ಉಲೂಪಿ ಅರ್ಜುನನ ಪತ್ನಿಯಲ್ಲ. ಅವನಿಂದ ನಿಯೋಗ ಪದ್ಧತಿಯಿಂದ ಸಂತಾನವನ್ನು ಪಡೆದವಳು]. 

 

 

ಪುನಃಪುನರ್ಯ್ಯಾಚ್ಯಮಾನಃ ಸ ಪಾರ್ತ್ಥಃ ಪುತ್ರಾರ್ತ್ಥಮಸ್ಯಾ ಭುಜಗೇನ ತಸ್ಯಾಮ್ ।

ಉತ್ಪಾದಯಾಮಾಸ ಸುತಂ ಕುಜಾಂಶಂ ನಾಮ್ನೇರಾವನ್ತಂ ವರುಣಾವೇಶಯುಕ್ತಮ್ ॥೨೦.೧೫೬॥

 

ಪುತ್ರೋತ್ಪತ್ತಿಗಾಗಿ ಮತ್ತೆಮತ್ತೆ ಬೇಡಲ್ಪಟ್ಟ ಅರ್ಜುನನು ಅವಳ ಸಂತತಿಗಾಗಿ, ಮಂಗಳಾಂಶನೂ, ವರುಣನ ಆವೇಶವನ್ನೂ ಹೊಂದಿರುವ, ಹೆಸರಿನಿಂದ ಇರಾವಂತ(ಇರಾವಾನ್) ಎನ್ನುವವನಾಗಿದ್ದ ಮಗನನ್ನು ಅವಳಲ್ಲಿ ಹುಟ್ಟಿಸಿದ.

 

[ಮುಂದಿನ ಶ್ಲೋಕದಲ್ಲಿ ಮಹಾಭಾರತ, ವೇದ, ಮೊದಲಾದವುಗಳಲ್ಲಿ ಹೇಳಿರುವ ಮಾನವಶಾಸ್ತ್ರದ ಬಗ್ಗೆ ಆಚಾರ್ಯರು ಬೆಳಕುಚೆಲ್ಲುವುದನ್ನು ಕಾಣುತ್ತೇವೆ:]

 

ಗುಣಾಃ ಪಿತುರ್ಮ್ಮಾತೃಜಾತಿಃ ಸುತಾನಾಂ ಯಸ್ಮಾತ್ ಸತಾಂ ಪ್ರಾಯಶಸ್ತೇನ ನಾಗಃ ।

ಬಲೀ ಚ ಪಾರ್ತ್ಥಪ್ರಥಮೋದ್ಭತ್ವಾನ್ ಮಾಯಾವಿದಸ್ತ್ರೀ ಚ ಸುಧಾರ್ಮ್ಮಿಕಶ್ಚ ॥೨೦.೧೫೭॥

 

ಯಾವಕಾರಣದಿಂದ ಸಾಮಾನ್ಯವಾಗಿ(ಪ್ರಾಯಶಃ) ಮಕ್ಕಳಿಗೆ ತಂದೆಯಿಂದ ಗುಣ ಹಾಗೂ ತಾಯಿಯ ಜಾತಿ ಬರುತ್ತದೋ, ಆ ಕಾರಣದಿಂದ ಇರಾವಾನ್ ನಾಗಜಾತಿಯವನಾಗಿದ್ದ. ಅರ್ಜುನನ ಮೊದಲ ಮಗನಾಗಿದ್ದುದರಿಂದ ಆತ ಅತ್ಯಂತ ಬಲಿಷ್ಠನಾಗಿದ್ದ. ಮಾಯಾ ವಿದ್ಯೆಗಳನ್ನು ಬಲ್ಲವನಾಗಿದ್ದ ಅವನು ಒಳ್ಳೆಯ ಅಸ್ತ್ರಜ್ಞನೂ, ಸುಧಾರ್ಮಿಕನೂ ಆಗಿದ್ದ.

 

ತತೋ ಯಯಾವರ್ಜ್ಜುನಸ್ತೀರ್ತ್ಥಯಾತ್ರಾಕ್ರಮೇಣ ಪಾಣ್ಡ್ಯಾಂಸ್ತನಯೋsಸ್ಯ ಮಾತ್ರಾ ।

ಸಹ ತ್ಯಕ್ತೋ ಭುಜಗೈರ್ದ್ದೇವಲೋಕೇ ಸಮ್ಪೂಜಿತೋ ನ್ಯವಸದ್ ದೈವತೈಶ್ಚ ॥೨೦.೧೫೮॥

 

ತದನಂತರ ಅರ್ಜುನನು ತೀರ್ಥಯಾತ್ರಾ ಕ್ರಮದಿಂದ ಪಾಂಡ್ಯದೇಶವನ್ನು ಕುರಿತು ತೆರಳಿದ. ಅರ್ಜುನನ ಮಗನಾಗಿರುವ ಇರಾವಾನ್ ತಾಯಿಯ ಜೊತೆಗೆ ನಾಗಗಳಿಂದ ದೇವಲೋಕದಲ್ಲಿ ಬಿಡಲ್ಪಟ್ಟವನಾಗಿ, ದೇವತೆಗಳಿಂದ ಪೂಜೆಗೊಂಡು ಸ್ವರ್ಗಲೋಕದಲ್ಲಿಯೇ ವಾಸಮಾಡಿದ.


No comments:

Post a Comment