ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, September 23, 2021

Mahabharata Tatparya Nirnaya Kannada 20174_20177

 

ಸಂಯಾಚಿತಃ ಫಲ್ಗುನೇನಾsಹ ವಾಕ್ಯಂ ಯದ್ ವಾಸುದೇವಸ್ತನ್ನ ಜಾನಾತಿ ಕಶ್ಚಿತ್ ।

ಋತೇ ಪಿತ್ರೋರ್ವಿಪೃಥೋಃ ಸಾತ್ಯಕೇರ್ವಾಸುಭದ್ರಾಂ ತೇ ಪ್ರದದಾನೀತಿ ಸತ್ಯಮ್ ॥೨೦.೧೭೪॥

 

ಬೇಡಲ್ಪಟ್ಟ ಅರ್ಜುನನಿಗೆ ವಾಸುದೇವನು ‘ಖಂಡಿತವಾಗಿ ನಿನಗೆ ಸುಭದ್ರೆಯನ್ನು ಕೊಡುತ್ತೇನೆ’ ಎನ್ನುವ   ಯಾವಮಾತನ್ನು ಕೊಟ್ಟಿದ್ದ, ಅದು ವಸುದೇವ-ದೇವಕಿ,  ವಿಪೃಥ(ಪಟ್ಟಣವನ್ನು ರಕ್ಷಣೆ ಮಾಡುವವ) ಮತ್ತು  ಸಾತ್ಯಕಿಯನ್ನು ಬಿಟ್ಟು ಇನ್ನ್ಯಾರಿಗೂ ತಿಳಿದಿರಲಿಲ್ಲ.    

 

ಅಸ್ತ್ರೇ ಶಸ್ತ್ರೇ ತತ್ವವಿದ್ಯಾಸು ಚೈವ ಶಿಷ್ಯಃ ಶೈನೇಯೋ ವಾಸುದೇವೇನ್ದ್ರಸೂನ್ವೋಃ ।

ತಸ್ಮಾದಸ್ಮೈ ಕಥಯಾಮಾಸ ಕೃಷ್ಣಃ ಸ್ವಶಿಷ್ಯತ್ವಾದ್ ವಿಪೃಥೋಶ್ಚಾಪಿ ಸರ್ವಮ್ ॥೨೦.೧೭೫॥

 

ಅಸ್ತ್ರದಲ್ಲಿ, ಶಸ್ತ್ರದಲ್ಲಿ, ತತ್ವಶಾಸ್ತ್ರದಲ್ಲಿ ಸಾತ್ಯಕಿಯು ಕೃಷ್ಣಾರ್ಜುನರ ಶಿಷ್ಯನಾಗಿದ್ದ. ಆ ಕಾರಣದಿಂದ ಕೃಷ್ಣನು ಅವನಿಗೆ ಈ ವಿಷಯವನ್ನು ಹೇಳಿದ್ದ.  ವಿಪೃಥು ತನ್ನ ಶಿಷ್ಯನಾದ್ದರಿಂದ ಅವನಿಗೂ ಕೂಡಾ ಎಲ್ಲವನ್ನೂ ಶ್ರೀಕೃಷ್ಣ ಹೇಳಿದ್ದ.

 

ಅನ್ಯೇ ಸರ್ವೇ ವಾಸುದೇವಸ್ಯ ಪಾರ್ತ್ಥಾನ್ ಪ್ರಿಯಾನ್ ನಿತ್ಯಂ ಜಾನಮಾನಾ ಅಪಿ ಸ್ಮ ।

ರಾಮೇಣಾsದಿಷ್ಟಾ ಉದ್ಧವೋsಥಾsಹುಕಾದ್ಯಾ ಹಾರ್ದ್ದಿಕ್ಯಾದ್ಯಾ ನೈವ ದಿತ್ಸನ್ತಿ ಜಿಷ್ಣೋಃ ॥೨೦.೧೭೬॥

 

ಉಳಿದವರೆಲ್ಲರೂ ‘ಕೃಷ್ಣನಿಗೆ ಪಾಂಡವರು ಪ್ರಿಯರು’ ಎಂದು ಯಾವಾಗಲೂ ತಿಳಿದವರಾದರೂ ಕೂಡಾ, ಬಲರಾಮನ ಆದೇಶಕ್ಕೆ ಒಳಗಾದ ಉದ್ಧವ, ಆಹುಕ, ಕೃತವರ್ಮ ಮೊದಲಾದವರು ಸುಭದ್ರೆಯನ್ನು ಅರ್ಜುನನಿಗೆ ಕೊಡಲು ಬಯಸುತ್ತಿರಲಿಲ್ಲ!

 

[ಕೃಷ್ಣ ಏಕೆ ಈ ಲೀಲೆಯನ್ನು ತೋರಿದ ಎನ್ನುವುದನ್ನು ವಿವರಿಸುತ್ತಾರೆ:]

 

ದುರ್ಯ್ಯೋಧನೇ ದಾತುಮಿಚ್ಛನ್ತಿ ಸರ್ವೇ ರಾಮಪ್ರಿಯಾರ್ತ್ಥಂ ಜಾನಮಾನಾ ಹರೇಸ್ತತ್ ।

ಅಪ್ಯಪ್ರಿಯಂ ರಾಕ್ಷಸಾವೇಶಯುಕ್ತಾಸ್ತಸ್ಮಾತ್ ಸರ್ವಾನ್ ವಞ್ಚಯಾಮಾಸ ಕೃಷ್ಣಃ ॥೨೦.೧೭೭॥

 

ಎಲ್ಲರೂ, ಕೃಷ್ಣನಿಗೆ ಅಪ್ರಿಯ ಎಂದು ತಿಳಿದಿದ್ದರೂ ಕೂಡಾ,  ಬಲರಾಮನಿಗೆ ಪ್ರಿಯವಾಗಲೆಂದು, ರಾಕ್ಷಸಾವೇಷದಿಂದ ಕೂಡಿರುವ ದುರ್ಯೋಧನನಿಗೆ ಸುಭದ್ರೆಯನ್ನು ಕೊಡಬೇಕೆಂದು ಬಯಸಿದರು. ಆ ಕಾರಣಕ್ಕಾಗಿಯೇ ಕೃಷ್ಣ ಎಲ್ಲರನ್ನೂ ವಂಚಿಸಿದ.

 

No comments:

Post a Comment