ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, September 14, 2021

Mahabharata Tatparya Nirnaya Kannada 20143_20148

 

ತಸ್ಯಾಂ ಸಮಸ್ತೈರಭಿಪೂಜ್ಯಮಾನೇ ದೇವೇ ಸ್ವಪುರ್ಯ್ಯಾಂ ನಿವಸತ್ಯನನ್ತೇ ।

ಯಯೌ ಕದಾಚಿತ್ ಸ ತು ರೌಗ್ಮಿಣೇಯಃ ಸಾಮ್ಬೇನ ಸಾರ್ದ್ಧಂ ಭುಜಗೇನ್ದ್ರಲೋಕಮ್ ॥೨೦.೧೪೩॥

 

ಹೀಗೆ ಶ್ರೀಕೃಷ್ಣ ದ್ವಾರಕೆಯಲ್ಲಿ ಎಲ್ಲರಿಂದಲೂ ಪೂಜ್ಯನಾಗಿ ವೈಭವದಿಂದ ಆವಾಸ ಮಾಡುತ್ತಿರಲು, ಒಮ್ಮೆ ರುಗ್ಮಿಣಿಯ ಮಗನಾದ ಪ್ರದ್ಯುಮ್ನನು ಸಾಮ್ಬನ ಜೊತೆಗೂಡಿ ನಾಗಲೋಕಕ್ಕೆ ತೆರಳಿದನು.

 

ಅಜ್ಞಾನತಸ್ತೈರಭಿಯೋಧಿತಃ ಸ ಜಿಗಾಯ ಸರ್ವಾನಪಿ ವಾಸುಕಿಂ ಚ ।

ವಿದ್ರಾಪ್ಯ ಬಾಣೈರಥ ರತ್ನಸಞ್ಚಯಾನ್ ಸಮಾದದೇ ನೇಮುರಮುಂ ತತಸ್ತೇ ॥೨೦.೧೪೪ ॥

 

ಅಜ್ಞಾನದಿಂದ(ಕೃಷ್ಣಪುತ್ರ ಎಂದು ತಿಳಿಯದೇ),  ನಾಗಗಳಿಂದ ಎದುರಿಸಲ್ಪಟ್ಟವನಾದ ಪ್ರದ್ಯುಮ್ನನು  ನಾಗಾಧಿಪನಾದ ವಾಸುಕಿಯ ಸಹಿತ ಎಲ್ಲರನ್ನೂ ಗೆದ್ದ. ಎಲ್ಲರನ್ನೂ ಬಾಣಗಳಿಂದ ಓಡಿಸಿದ ಪ್ರದ್ಯುಮ್ನ, ಅಲ್ಲಿನ ರತ್ನ ಸಮೂಹವನ್ನು ತೆಗೆದುಕೊಂಡ. ತದನಂತರ ಪರಾಜಯ ಹೊಂದಿದ ಅವರೆಲ್ಲರೂ ಪ್ರದ್ಯುಮ್ನನಿಗೆ ನಮಸ್ಕರಿಸಿದರು.

 

ತೈಃ ಪೂಜಿತಃ ಸಾಮ್ಬಸಹಾಯ ಆಶು ಮಯಂ ಚ ಮಾಯಾವಿನಮಸ್ತ್ರವರ್ಷೈಃ ।

ವಿಜಿತ್ಯ ರುನ್ಧಾನಮನೇನ ಪೂಜಿತೋ ಯಯೌ ರಥೇನಾಮ್ಬರಗೇನ ನಾಕಮ್ ॥೨೦.೧೪೫॥

 

ನಾಗಲೋಕದಲ್ಲಿ ಸನ್ಮಾನಕ್ಕೊಳಪಟ್ಟು ಸಾಮ್ಬನ ಜೊತೆಗೂಡಿದ ಪ್ರದ್ಯುಮ್ನ, ಅವರನ್ನು ಮಾರ್ಗದಲ್ಲಿ  ತಡೆಯತಕ್ಕ ಮಾಯಾವಿಯಾಗಿರುವ ಮಯನನ್ನು ಅಸ್ತ್ರಗಳ ವೃಷ್ಟಿಯಿಂದ ಗೆದ್ದು, ಅವನಿಂದ ಪೂಜಿತನಾಗಿ, ಆಕಾಶದಲ್ಲಿ ಸಂಚರಿಸುವ ರಥದಿಂದ ಸ್ವರ್ಗಕ್ಕೆ ತೆರಳಿದನು.

 

ತತ್ರೈವ ಕೃಷ್ಣೇನ ತು ಪಾರಿಜಾತೇ ಹೃತೇ ಜಯನ್ತಂ ಪ್ರಜಿಗಾಯ ಚಾsಜೌ 

ಸಂಸ್ಪರ್ದ್ದಯಾssಯಾತಮಮುಷ್ಯ ಚಾನುಜಂ ಸಾಮ್ಬೋsಜಯದ್ ವೃಷಭಂ ನಾಮ ಶಸ್ತ್ರೈಃ ॥೨೦.೧೪೬॥

 

ಕೃಷ್ಣನಿಂದ ಪಾರಿಜಾತವು ಅಪಹರಿಸಲ್ಪಟ್ಟದ್ದರಿಂದ, ಸ್ಪರ್ಧೆಯಿಂದ ಈಗ ಯುದ್ಧಕ್ಕೆ ಬಂದಿರುವ ಇಂದ್ರನ ಮಗನಾದ ‘ಜಯಂತನನ್ನು’ ಪ್ರದ್ಯುಮ್ನ ಗೆದ್ದರೆ, ಜಯಂತನ ತಮ್ಮನಾದ ‘ವೃಷಭನನ್ನು’ ಸಾಮ್ಬ ಗೆದ್ದ.

 

[ಜಯಂತ ಮತ್ತು ವೃಷಭ ಇಂದ್ರನ ಮಕ್ಕಳು. ಜಯಂತನಿಗೆ ತನ್ನ ತಂದೆಯನ್ನು ಅವಮಾನ ಮಾಡಿದ್ದರಿಂದ ಕೋಪವಿತ್ತು. ಅದಕ್ಕಾಗಿ ಅವನು ಶ್ರೀಕೃಷ್ಣನ ಮಗನನ್ನು ಗೆದ್ದು ಕೃಷ್ಣನನ್ನು ಅವಮಾನ ಮಾಡಬೇಕು ಎಂದುಕೊಂಡಿದ್ದ. ಇವೆಲ್ಲವನ್ನೂ ಹರಿವಂಶ ಹಾಗೂ ವಿಷ್ಣುಪುರಾಣದಲ್ಲಿ ವಿವರಿಸಲಾಗಿದೆ. ಇಲ್ಲಿ ಆಚಾರ್ಯರು ಘಟನೆಗಳನ್ನು ಕಾಲಾನುಕ್ರಮದಲ್ಲಿ ಹೇಳಿದ್ದಾರೆ].


ಅಸ್ತ್ರಾಣಿ ತಾವಸ್ತ್ರವರೈರ್ನ್ನಿಹತ್ಯ ತಯೋಶ್ಚ ತಾಭ್ಯಾಂ ಪ್ರತಿದಗ್ಧಯಾನೌ ।

ವಿದ್ರಾಪ್ಯ ತೌ ಬಾಣವರೈಃ ಸುರೇನ್ದ್ರಸಮ್ಪೂಜಿತೌ ಯಯತುರ್ವಿದ್ಯಯಾ ಖೇ ॥೨೦.೧೪೭॥

 

ಪ್ರದ್ಯುಮ್ನ-ಸಾಮ್ಬರು ಜಯಂತ ಹಾಗೂ ವೃಷಭನ ಅಸ್ತ್ರಗಳನ್ನು ತಮ್ಮ ಅಸ್ತ್ರಗಳಿಂದ ನಿಗ್ರಹಿಸಿ, ಅವರ ರಥವನ್ನು ನಾಶಮಾಡಿ, ಅವರಿಂದ ನಾಶಮಾಡಲ್ಪಟ್ಟ ರಥವುಳ್ಳವರಾಗಿ, ಕೊನೆಗೆ ಶ್ರೇಷ್ಠ ಬಾಣಗಳಿಂದ ಅವರಿಬ್ಬರನ್ನೂ ಓಡಿಸಿ, ಇಂದ್ರನಿಂದ ಪೂಜಿತರಾಗಿ, ವಿದ್ಯೆಯಿಂದ ಆಕಾಶದಲ್ಲಿ ಸಾಗಿದರು.

 

ಸ ವಿದ್ಯಯಾ ಸಾಮ್ಬಮುದೂಹ್ಯ ರತ್ಯಾ ಪ್ರದತ್ತಯಾ ರುಗ್ಮಿಣಿನನ್ದನಃ ಪುರೀಮ್ ।

ಯಯೌ ತತೋ ನಾರದ ಆಗಮದ್ ದ್ರುತಂ ಜ್ಞಾತುಂ ಹರೇರ್ಬಹುಭಾರ್ಯ್ಯಾಸು ವೃತ್ತಿಮ್ ॥೨೦.೧೪೮॥

 

ಪ್ರದ್ಯುಮ್ನನು ರತಿಯಿಂದ ಕೊಡಲ್ಪಟ್ಟ ವಿದ್ಯೆಯಿಂದ ಸಾಮ್ಬನನ್ನು ಹೊತ್ತು, ದ್ವಾರಕಾಪಟ್ಟಣಕ್ಕೆ ತೆರಳಿದನು. ತದನಂತರ ನಾರದರು ಕೃಷ್ಣನು ಬಹಳ ಪತ್ನಿಯರ ಜೊತೆಯಲ್ಲಿ ಹೇಗೆ ಇರುತ್ತಾನೆ ಎನ್ನುವುದನ್ನು ತಿಳಿಯಲು ಶೀಘ್ರವಾಗಿ ದ್ವಾರಕೆಗೆ ಬಂದರು.

No comments:

Post a Comment