ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, September 22, 2021

Mahabharata Tatparya Nirnaya Kannada 20170_20173

 

ಸರ್ವಜ್ಞಂ ತಂ ವಾಗ್ಗ್ಮಿನಂ ವೀಕ್ಷ್ಯ ರಾಮಃ ಕನ್ಯಾಗಾರೇ ವರ್ಷಕಾಲೇ ನಿವಾಸಮ್ ।

ಸತ್ಕಾರಪೂರ್ವಂ ಕಾರಯೇತ್ಯಾಹ ಕೃಷ್ಣಂ ನೈವೇತ್ಯೂಚೇ ಕೇಶವೋ ದೋಷವಾದೀ ॥೨೦.೧೭೦॥

 

ಬಲರಾಮನು ಎಲ್ಲವನ್ನೂ ಬಲ್ಲ, ಒಳ್ಳೆಯ ಮಾತನಾಡುವ ಯತಿ ವೇಷಧಾರಿ ಅರ್ಜುನನನ್ನು ಕಂಡು, ‘ಈ ಮಳೆಗಾಲದಲ್ಲಿ ಈತನಿಗೆ ಸುಭದ್ರೆಯ ಮನೆಯಲ್ಲಿ ಸತ್ಕಾರಪೂರ್ವಕವಾಗಿ ಆವಾಸವನ್ನು ಮಾಡಿಸು’ ಎಂದು ಕೃಷ್ಣನನ್ನು ಕುರಿತು ಹೇಳಿದನು. ಕೇಶವನು ಬಲರಾಮನ ಹೇಳಿದ ವಿಷಯದಲ್ಲಿ ದೋಷವನ್ನು ಹೇಳುತ್ತಾ, ‘ಆ ರೀತಿ ಮಾಡುವುದು ಯುಕ್ತವಲ್ಲಾ’ ಎಂದನು.

 

ಯುವಾ ಬಲೀ ದರ್ಶನೀಯೋsತಿವಾಗ್ಗ್ಮೀ ನಾಯಂ ಯೋಗ್ಯಃ ಕನ್ಯಾಕಾಗಾರವಾಸಮ್ ।

ಇತ್ಯುಕ್ತವನ್ತಂ ರಾಮ ಆಹಾsಪ್ತವಿದ್ಯೇ ನಾಸ್ಮಿಞ್ಛಙ್ಕೇತ್ಯೇವ ಲೋಕಾಧಿನಾಥಮ್ ॥೨೦.೧೭೧

 

‘ಯುವಕನಾಗಿದ್ದಾನೆ, ಕಟ್ಟುಮಸ್ತಾಗಿದ್ದಾನೆ, ನೋಡಲು ಸುಂದರ, ಮಾತಿನಲ್ಲಿ ಚತುರ. ಇಂತಹ ಇವನು ಕನ್ಯಾಕಾಗಾರ ವಸತಿಗೆ ಯೋಗ್ಯನಲ್ಲ’ ಎಂದು ಶ್ರೀಕೃಷ್ಣ ಹೇಳಿದಾಗ, ಬಲರಾಮ- ‘ವಿದ್ಯೆಯನ್ನು ಬಲ್ಲ ಇವನಲ್ಲಿ ಸಂದೇಹ ಪಡಬಾರದು’ ಎಂದು ಲೋಕಾಧಿನಾಥ ಶ್ರೀಕೃಷ್ಣನಿಗೆ ಹೇಳಿದ!

[ಮಹಾಭಾರತದ ಆದಿಪರ್ವದಲ್ಲಿ(೨೪೦.೨೬) ಈ ಕುರಿತಾದ ವಿವರ ಕಾಣಸಿಗುತ್ತದೆ: ‘ಬಲವಾನ್ ದರ್ಶನೀಯಶ್ಚ ವಾಗ್ಗ್ಮೀ ಶ್ರೀಮಾನ್ ಬಹುಶ್ರುತಃ । ಕನ್ಯಾಗಾರಸಮೀಪೇ ತು ನ ಯುಕ್ತಮಿತಿ ಮೇ ಮತಿಃ ]

 

ನಾಸ್ಮನ್ಮತೇ ರೋಚತೇ ತ್ವನ್ಮತಂ ತು ಸರ್ವೇಷಾಂ ನಃ ಪೂಜ್ಯಮೇವಾಸ್ತು ತೇನ ।

ಇತ್ಯುಕ್ತ್ವಾ ತಂ ಕೇಶವಃ ಸೋದರಾಯೈ ಶುಶ್ರೂಷಸ್ವೇತ್ಯಾಹ ಸನ್ತಂ ಯತೀನ್ದ್ರಮ್ ॥೨೦.೧೭೨॥

 

‘ನಿನ್ನ ಅಭಿಪ್ರಾಯ ನಮಗೆ ಹಿಡಿಸುತ್ತಿಲ್ಲ. ಆದರೆ ನಿನ್ನ ಮತ ನಮಗೆಲ್ಲರಿಗೂ ಕೂಡಾ ಗೌರವಾಸ್ಪದವಾಗಿದೆ. ಆ ಕಾರಣದಿಂದ ನಿನ್ನ ಮಾತು ಪೂಜ್ಯವೇ ಆಗಿರಲಿ(ನಿನ್ನ ಮಾತನ್ನು ನಡೆಸುತ್ತೇನೆ)’ ಎಂದು ಹೇಳಿದ ಕೇಶವನು, ತನ್ನ ತಂಗಿಗೆ ಯತಿ ಶ್ರೇಷ್ಠನನ್ನು ಸೇವೆ ಮಾಡು ಎಂದು ಹೇಳಿದ.  

 

ನಿತ್ಯಾಪ್ರಮತ್ತಾ ಸಾಧು ಸನ್ತೋಷಯೇತಿ ಪ್ರೋಕ್ತಾ ತಥಾ ಸಾsಕರೋತ್ ಸೋsಪಿ ತತ್ರ ।

ಚಕ್ರೇ ಮಾಸಾನ್ ವಾರ್ಷಿಕಾನ್ ಸತ್ಕಥಾಭಿರ್ವಾಸಂ ವಾಕ್ಯಂ ಶ್ರದ್ಧಧಾನೋ ಹರೇಸ್ತತ್ ॥೨೦.೧೭೩

 

‘ಕರ್ತವ್ಯಗಳಲ್ಲಿ ಮೈಮರೆಯದೇ ಚೆನ್ನಾಗಿ ಅವರನ್ನು ಸಂತೋಷಗೊಳಿಸು’ ಎಂದು ಹೇಳಲ್ಪಟ್ಟ ಸುಭದ್ರೆ, ಕೃಷ್ಣ ಹೇಳಿದ ಹಾಗೆಯೇ ಮಾಡಿದಳು. ಅರ್ಜುನನು ಶ್ರೀಕೃಷ್ಣನ ಮಾತಿನಂತೆ ಆ ಚಾತುರ್ಮಾಸದಲ್ಲಿ ಒಳ್ಳೆಯ ಕಥೆಗಳನ್ನು ಹೇಳುತ್ತಾ, ಅಲ್ಲಿಯೇ ವಾಸ ಮಾಡಿದನು.

No comments:

Post a Comment