ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, March 26, 2022

Mahabharata Tatparya Nirnaya Kannada 22: 24-30

 

ಕೃಷ್ಣೇ ಸೋSಪಿ ದ್ರುತಮಾಯಾತ್ ಸಸತ್ಯಃ ಸಮ್ಬನ್ಧಿನೋ ಯೇ ಚ ಪಾಞ್ಚಾಲಮುಖ್ಯಾಃ ।

ಕ್ರುದ್ಧಂ ಕೃಷ್ಣಂ ಧಾರ್ತ್ತರಾಷ್ಟ್ರಾಯ ಪಾರ್ತ್ಥಾಃ  ಕ್ಷಮಾಪಯಾಮಾಸುರುಚ್ಚೈರ್ಗ್ಗೃಣನ್ತಃ ॥ ೨೨.೨೪॥

 

ಗುಣಾಂಸ್ತದೀಯಾನಮಿತಾನ್ ಪ್ರಣಮ್ಯ ತದಾ ರುದನ್ತೀ ದ್ರೌಪದೀ ಚಾSಪ ಪಾದೌ ।

ಸಾ ಪಾದಯೋಃ ಪತಿತಾ ವಾಸುದೇವಮಸ್ತೌತ್ ಸಮಸ್ತಪ್ರಭುಮಾತ್ಮತನ್ತ್ರಮ್ ॥ ೨೨.೨೫॥

 

ಕೃಷ್ಣನಾದರೋ, ತಕ್ಷಣ ಸತ್ಯಭಾಮೆಯಿಂದ ಕೂಡಿಕೊಂಡು ಪಾಂಡವರ ಕಡೆಗೆ ಓಡಿಬಂದ. ಪಾಂಚಾಲ ಮೊದಲಾಗಿರುವ ಪಾಂಡವರ ಸಂಬಂಧಿಕರೂ ಓಡಿಬಂದರು. ದುರ್ಯೋಧನನ ಮೇಲೆ ಶ್ರೀಕೃಷ್ಣ ಕೋಪಗೊಂಡಾಗ ಪಾಂಡವರು ಭಗವಂತನ ಅನಂತವಾದ ಗುಣಗಳನ್ನು ಗಟ್ಟಿಯಾಗಿ ಸ್ತೋತ್ರಮಾಡುತ್ತಾ, ನಮಸ್ಕರಿಸಿ, ಅವನನ್ನು  ಕ್ಷಮಿಸುವಂತೆ ಬೇಡಿದರು. ದ್ರೌಪದಿಯು ಅಳುತ್ತಾ ಅವನ ಕಾಲ್ಗಳಿಗೆ ಬಿದ್ದು, ಎಲ್ಲಕ್ಕೂ ಒಡೆಯನಾಗಿರುವ, ಸ್ವತಂತ್ರನಾಗಿರುವ ಶ್ರೀಕೃಷ್ಣನನ್ನು ಸ್ತೋತ್ರಮಾಡಿದಳು.  

 

ಅಚಿನ್ತ್ಯನಿತ್ಯಾವ್ಯಯಪೂರ್ಣ್ಣಸದ್ಗುಣಾರ್ಣ್ಣವೈಕದೇಹಾಖಿಲದೋಷದೂರ ।

ರಮಾಬ್ಜಜೇಶೇರಸುರೇನ್ದ್ರಪೂರ್ವವೃನ್ದಾರಕಾಣಾಂ ಸತತಾಭಿವನ್ದ್ಯ       ॥ ೨೨.೨೬॥

 

ಸಮಸ್ತಚೇಷ್ಟಾಪ್ರದ ಸರ್ವಜೀವಪ್ರಭೋ ವಿಮುಕ್ತಾಶ್ರಯ ಸರ್ವಸಾರ ।

ಇತಿ ಬ್ರುವನ್ತಿ ಸಕಲಾನುಭೂತಂ ಜಗಾದ ಸರ್ವೇಶಿತುರಚ್ಯುತಸ್ಯ            ॥ ೨೨.೨೭॥

 

ಪೂರ್ತಿ ಚಿಂತಿಸಲಾಗದವನೇ, ಯಾವಾಗಲೂ ಇರುವ, ನಾಶವಾಗದ, ತುಂಬಿದ, ಒಳ್ಳೆಯ ಗುಣಗಳ ಕಡಲೇ, ಗುಣವೇ ಮೈವೆತ್ತುಬಂದ  ಶರೀರದವನೇ, ಎಲ್ಲಾ ಕೊಳೆಗಳಿಂದ ದೂರನಾದವನೇ, ಲಕ್ಷ್ಮೀದೇವಿ, ಬ್ರಹ್ಮ, ರುದ್ರ, ಮುಖ್ಯಪ್ರಾಣ ಇವರೇ ಮೊದಲಾದ ಸಮಸ್ತ ದೇವತೆಗಳಿಂದ ಯಾವಾಗಲೂ ನಮಸ್ಕರಿಸಲ್ಪಡುವವನೇ, ಸಮಸ್ತ ಜಗತ್ತಿಗೆ ಕ್ರಿಯೆಯನ್ನು ಈಯುವವನೇ, ಎಲ್ಲಾ ಜೀವರಿಗೆ ಒಡೆಯನೇ, ಈ ಭವದಿಂದ ಬಿಡುಗಡೆಗೊಂಡವರಿಗೂ ಕೂಡಾ ಆಶ್ರಯನಾದವನೇ, ಎಲ್ಲದರ ಸಾರವೇ, ನಾರಾಯಣನೇ, ಎಂದು ಹೇಳುತ್ತಾ, ಶ್ರೀಕೃಷ್ಣನಿಗೆ ತಾವು ಅನುಭವಿಸಿದ ದುಗುಡದುಮ್ಮಾನಗಳನ್ನು ಹೇಳಿಕೊಂಡಳು.

 

ಯಸ್ಯಾಧಿಕಾನುಗ್ರಹಪಾತ್ರಭೂತಾ ಸ್ವಯಂ ಹಿ ಶೇಷೇಶವಿಪಾದಿಕೇಭ್ಯಃ ।

ಶ್ರುತ್ವಾ ಸಮಸ್ತಂ ಭಗವಾನ್ ಪ್ರತಿಜ್ಞಾಂ ಚಕಾರ ತೇಷಾಮಖಿಲಾಶ್ಚ ಯೋಷಾಃ   ॥ ೨೨.೨೮॥

 

ಅವಳು ಪರಮಾತ್ಮನ ಅಧಿಕವಾದ ಅನುಗ್ರಹಕ್ಕೆ ಪಾತ್ರಳಷ್ಟೇ. ಸದಾಶಿವನಿಗಿಂತಲೂ, ಶೇಷನಿಗಿಂತಲೂ, ಗರುಡನಿಗಂತಲೂ ಹೆಚ್ಚಿನ ಭಗವಂತನ ಅನುಗ್ರಹ ದ್ರೌಪದಿಯಮೇಲಿದೆಯಷ್ಟೇ. ಅಂತಹ ಕೃಷ್ಣನು ಎಲ್ಲವನ್ನೂ ಕೇಳಿ, ಪ್ರತಿಜ್ಞೆಯನ್ನು ಮಾಡಿದ:

 

ಪತೀನ್ ಸಮಾಲಿಙ್ಗ್ಯ ವಿಮುಕ್ತಕೇಶ್ಯಾನ್ ಭೀಮಾಹತಾನ್ ದರ್ಶಯೇ ನಾನ್ಯಥೇತಿ ।

ತಾಂ ಸಾನ್ತ್ವಯಿತ್ವಾ ಮಧುರೈಃ ಸುವಾಕ್ಯೈರ್ನಾರಾಯಣೋ ವಾಚಮಿಮಾಂ ಜಗಾದ ॥ ೨೨.೨೯॥

 

ಆ ದುರ್ಯೋಧನ ಮೊದಲಾದವರ ಹೆಂಡತಿಯರು ಭೀಮಸೇನನಿಂದ ಹತರಾಗಿ ಬಿದ್ದ ತಮ್ಮ ಗಂಡಂದಿರನ್ನು ಅಪ್ಪಿ, ಕೂದಲನ್ನು ಬಿಚ್ಚಿಕೊಂಡು ಅಳುತ್ತಿರುವ ಘಟನೆಯನ್ನು ನಾನು ನಿನಗೆ ತೋರಿಸುತ್ತೇನೆ. ಇದು ನನ್ನ ಪ್ರತಿಜ್ಞೆ ಎಂದು ಹೇಳಿದ. ತದನಂತರ ಅವಳನ್ನು ಮಧುರವಾದ ಮಾತುಗಳಿಂದ ಸಾಂತ್ವಾನಗೊಳಿಸಿದ ಶ್ರೀಕೃಷ್ಣನು ಈ ಮಾತನ್ನು ಹೇಳಿದ:

 

ಯದೀಹಾಹಂ ಸ್ಥಿತೋ ನೈವಂ ಭವಿತಾSಹಂ ತ್ವಯೋಧಯಮ್ ।

ಸಾಲ್ವರಾಜಂ ದುರಾತ್ಮಾನಂ ಹತಶ್ಚಾಸೌ ಸುಪಾಪಕೃತ್           ॥ ೨೨.೩೦॥

 

ಒಂದುವೇಳೆ ನಾನು ನಿಮ್ಮ ಸಮೀಪದಲ್ಲಿಯೇ ಇದ್ದಿದ್ದರೆ  ಈರೀತಿ ಆಗುತ್ತಿರಲಿಲ್ಲ.  ದ್ವಾರಕಾಪಟ್ಟಣಕ್ಕೆ ದುರಾತ್ಮನಾದ ಸಾಲ್ವರಾಜ ಬಂದಿದ್ದ. ಅವನನ್ನು ಕುರಿತು ಯುದ್ಧಮಾಡಿದೆ. ಅತ್ಯಂತ ಪಾಪಿಷ್ಠನಾದ ಅವನು ಹತನಾದ.

No comments:

Post a Comment