ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, March 19, 2022

Mahabharata Tatparya Nirnaya Kannada 21: 383-388

 

ಇತೀರಿತೋ ವಿನಿರ್ಭತ್ಸ್ಯ ಪುತ್ರಂ ದುಃಶಾಸನಂ ನೃಪಃ ।

ಅಮೋಚಯದ್ ವರೈಶ್ಚೈನಾಂ ಛನ್ದಯಾಮಾಸ ಪಾರ್ಷತೀಮ್             ॥೨೧.೩೮೩॥

 

ಈರೀತಿಯಾಗಿ ಹೇಳಲ್ಪಟ್ಟ ಧೃತರಾಷ್ಟ್ರನು ತನ್ನ ಮಗನಾದ ದುಶ್ಯಾಸನನ್ನು ಚೆನ್ನಾಗಿ ಬೈದು, ದ್ರೌಪದಿಯನ್ನು ಬಿಡುಗಡೆ ಮಾಡಿದ ಮತ್ತು  ಅವಳಲ್ಲಿ ‘ನೀನು ಯಾವ ವರವನ್ನಾದರೂ ಕೇಳು’ ಎಂದು ಹೇಳಿದ.

 

ಛನ್ದಿತಾ ಸಾ ವರೈಸ್ತೇನ ಧರ್ಮ್ಮೇ ಭಾಗವತೇ ಸ್ಥಿತಾ ।

ನೈವಾSತ್ಮನೋ ವರಾನ್ ವವ್ರೇ ವವ್ರೇ ತೇಷಾಂ ವಿಮೋಕ್ಷಣಮ್             ॥೨೧.೩೮೪॥

 

ಅವಳು ವರ ಕೇಳುವಂತೆ ಹೇಳಲ್ಪಟ್ಟರೂ ಕೂಡಾ, ಭಾಗವತ ಧರ್ಮದಲ್ಲಿ ಇರುವವಳಾಗಿ ತನಗಾಗಿ ವರಗಳನ್ನು ಕೇಳಲಿಲ್ಲ. ತನ್ನ ಗಂಡಂದಿರ ವಿಮೋಕ್ಷವನ್ನಷ್ಟೇ ಕೇಳಿದಳು.

 

ಯುಧಿಷ್ಠಿರಸ್ಯ ಸಭ್ರಾತುಃ ಸರಾಷ್ಟ್ರಸ್ಯ ವಿಮೋಕ್ಷಣಮ್ ।

ದದೌ ನೃಪೋSಸ್ಯಾ ನ ಪುನಶ್ಚನ್ದ್ಯಮಾನಾSಪಿ ಸಾsವೃಣೋತ್                         ॥೨೧.೩೮೫॥

 

ಅಣ್ಣತಮ್ಮಂದಿರರಿಂದ ಕೂಡಿದ, ಇಡೀ ದೇಶದಿಂದ ಕೂಡಿದ ಯುಧಿಷ್ಠಿರನ ಬಿಡುಗಡೆಯನ್ನು ಧೃತರಾಷ್ಟ್ರ ಅವಳಿಗಾಗಿ ಕೊಟ್ಟ. ಮತ್ತೆ ಪುನಃ ವರವನ್ನು ಕೇಳೆಂದು ಒತ್ತಾಯಿಸಿದರೂ ಕೂಡಾ ಅವಳು ಕೇಳಲಿಲ್ಲ.

 

[ದ್ರೌಪದಿ ಭಾಗವತ ಧರ್ಮದಲ್ಲಿ ಇದ್ದುದರಿಂದ ವರವನ್ನು ಕೇಳಲಿಲ್ಲ. ಈ ಭಾಗವತ ಧರ್ಮದ ಕುರಿತು ಹೇಳುತ್ತಾರೆ:]

 

ಭರ್ತ್ತುರ್ವಿಷ್ಣೋಶ್ಚ ನಾನ್ಯಸ್ಮಾದ್ ವರಸ್ವೀಕಾರ ಇಷ್ಯತೇ ।

ಏವಂ ಹಿ ಭಗವದ್ಧರ್ಮ್ಮಸ್ತಸ್ಮಾತ್ ಸಾ ನಾವೃಣೋತ್ ಪರಮ್             ॥೨೧.೩೮೬॥

 

ಹೆಣ್ಣಿಗೆ ಗಂಡನಿಂದ ಅಥವಾ ನಾರಾಯಣನಿಂದ ಹೊರತಾಗಿ ಬೇರೆಯವರಿಂದ ವರವನ್ನು ಪಡೆಯುವುದು ಭಗವದ್ಧರ್ಮ ಅಲ್ಲ. ಆ ಕಾರಣದಿಂದ ಅವಳು ಬೇರೆ ವರವನ್ನು ಕೇಳಲಿಲ್ಲ.

 

[ಹಾಗಿದ್ದರೆ ಗಂಡಂದಿರ ವಿಮೋಕ್ಷವನ್ನೂ, ರಾಜ್ಯವನ್ನೂ ಪಡೆದಳಲ್ಲ, ಅದು ಭಾಗವತ ಧರ್ಮಕ್ಕೆ ಒಪ್ಪುತ್ತದೆಯೇ ಎಂದರೆ:]

 

ಅಧರ್ಮ್ಮತೋ ಹೃತತ್ವಾತ್ತು ತದ್ ದಾನಂ ನ ವರೋ ಭವೇತ್ ।

ಇತಿ ಮತ್ವಾ ಪಾಣ್ಡವಾನಾಂ ವವ್ರೇ ಕೃಷ್ಣಾ ವಿಮೋಕ್ಷಣಮ್                     ॥೨೧.೩೮೭॥

 

ಅದು ಅಧರ್ಮದಿಂದ ಕಸಿದದ್ದಾಗಿದ್ದುದರಿಂದ, ಅವುಗಳನ್ನು ಹಿಂತಿರುಗಿಸುವುದು ವರ ಎನಿಸುವುದಿಲ್ಲ. ಈರೀತಿಯಾಗಿ ಚಿಂತಿಸಿಯೇ ಪಾಂಡವರ ಬಿಡುಗಡೆಯನ್ನು ದ್ರೌಪದಿ ಕೇಳಿದ್ದಳು.

 

[ಪ್ರಕಾರಾಂತರವಾಗಿಯೂ ಕೂಡಾ ಭಾಗವತ ಧರ್ಮಕ್ಕೆ ಹಾನಿಯಾಗಿಲ್ಲ ಏಕೆಂದರೆ: ]

 

ಶ್ವಶುರಾದೈಹಿಕವರಾಃ ಕ್ಷತ್ರಿಯಾಯಾಸ್ತ್ರಯೋ ಯತಃ ।

ಉಕ್ತಾಃ ಶತಂ ಚ ವಿಪ್ರಾಯಾ ಧರ್ಮ್ಮೇ ಭಾಗವತೇ ತತಃ ।

ಹೇತುನಾSನೇನ ವವ್ರೇ ಸಾ ನಾನ್ಯತ್ ಕಿಞ್ಚಿದತಃ ಪರಮ್                    ॥೨೧.೩೮೮॥

 

ಕ್ಷತ್ರಿಯ ಸ್ತ್ರೀಯರಿಗೆ ಮಾವನಿಂದ ಈಲೋಕಕ್ಕೆ ಸಂಬಂಧಿಸಿದ (ಐಹಿಕ) ಮೂರು ವರಗಳಿಗೆ ಅವಕಾಶವಿದ್ದರೆ, ಬ್ರಾಹ್ಮಣ ಸ್ತ್ರೀಗೆ ನೂರು ಐಹಿಕ ವರಗಳು ಗ್ರಾಹ್ಯ ಎಂದು ಭಾಗವತ ಧರ್ಮದಲ್ಲಿ ಹೇಳಲ್ಪಟ್ಟಿದೆ. ಈ ಕಾರಣದಿಂದಲೂ  ಅವಳು ವರವನ್ನು ಪಡೆದಳೇ ವಿನಃ ಬೇರೆ ಯಾವ ಅಭೀಷ್ಟವನ್ನೂ ಅವಳು ಬೇಡಲಿಲ್ಲ.

No comments:

Post a Comment