ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, March 15, 2022

Mahabharata Tatparya Nirnaya Kannada 21: 357-362

 

ದುಃಶಾಸನೈಷಾಂ ವಾಸಾಂಸಿ ದಾಸಾನಾಂ ನೋ ವ್ಯಪಾಕುರು ।

ಇತ್ಯುಕ್ತೋSಭ್ಯಗಮತ್ ಪಾರ್ತ್ಥಾನ್ ಸ್ವವಾಸಾಂಸ್ಯಥ ತೇ ದದುಃ             ॥೨೧.೩೫೭॥

 

ತೇ ಚರ್ಮ್ಮವಸನಾ ಭೂತ್ವಾ ತಾನಶಿಷ್ಟಾನ್ ಪ್ರಕಾಶ್ಯ ಚ ।

ನಿಷೇದುಶ್ಚ ಕ್ಷಮಾಯಾನ್ತೇ ಕ್ಷಮಾಮಾಲಮ್ಬ್ಯ ವಿಸ್ತೃತಾಮ್                    ॥೨೧.೩೫೮॥

 

‘ಎಲೈ ದುಶ್ಯಾಸನನೇ, ಈ ನಮ್ಮ ಆಳುಗಳಾದ ಇವರೆಲ್ಲರ ಬಟ್ಟೆಗಳನ್ನು ತೆಗೆ’ ಎಂದು ಹೇಳಲ್ಪಟ್ಟ ದುಶ್ಯಾಸನನು ಪಾಂಡವರನ್ನು ಕುರಿತು ತೆರಳಿದ. ಆಗ ಪಾಂಡವರು ತಮ್ಮ-ತಮ್ಮ ಬಟ್ಟೆಗಳನ್ನು ಕೊಟ್ಟು (ರಾಜಯೋಗ್ಯ ಬಟ್ಟೆಯನ್ನು ಕೊಟ್ಟು) ಒರಟಾದ, ಚರ್ಮದಿಂದ ಮಾಡಿದ ಬಟ್ಟೆಯನ್ನು ಸುತ್ತಿಕೊಂಡರು. ಅವರು ದುರ್ಯೋಧನಾದಿಗಳು ಎಷ್ಟು ದುಷ್ಟರು ಎನ್ನುವುದನ್ನು ತೋರಿಸಿ, ತಾವು ಕುಳಿತಿದ್ದ ಉತ್ಕೃಷ್ಟ ಆಸನಗಳಿಂದ ಕೆಳಗಿಳಿದು, ನೆಲದಲ್ಲಿ ಅಗಾಧವಾದ ಸಹನೆಯನ್ನು ಹೊಂದಿ ಕುಳಿತರು.

 

ಪುನರ್ದ್ದುರ್ಯ್ಯೋಧನೇನೋಕ್ತಃ ಪಾರ್ತ್ಥಾನಾಮಥ ಪಶ್ಯತಾಮ್ ।

ಚಕರ್ಷ ವಾಸೋ ದ್ರೌಪದ್ಯಾಸ್ತದಾSವಾದೀದ್ ವೃಕೋದರಃ             ॥೨೧.೩೫೯॥

 

ಪುನಃ ದುರ್ಯೋಧನನಿಂದ (ದ್ರೌಪದಿಯ ವಸ್ತ್ರವನ್ನು ಅಪಹರಿಸು ಎಂದು) ಪ್ರಚೋದಿತನಾದ ದುಶ್ಯಾಸನನು ಪಾಂಡವರೆಲ್ಲ ನೋಡುತ್ತಿರುವಾಗಲೇ, ದ್ರೌಪದಿಯ ಬಟ್ಟೆಯನ್ನು ಎಳೆದನು. ಆಗ ಭೀಮಸೇನನು ಹೇಳಿದನು:

 

ಪಾಪೇಷು ಪೂರ್ವಸ್ಯ ತಥಾSಧಮಸ್ಯ ವಂಶೇ ಕುರೂಣಾಮುರುಧರ್ಮ್ಮಶೀಲಿನಾಮ್ ।

ದುಃಶಾಸನಸ್ಯಾಸ್ಯ ವಿದಾರ್ಯ್ಯ ವಕ್ಷಃ ಪಿಬಾಮಿ ರಕ್ತಂ ಜಗತಃ ಸಮಕ್ಷಮ್             ॥೨೧.೩೬೦॥

 

‘ಪಾಪಿಗಳಲ್ಲೇ ಅಗ್ರಗಣ್ಯನಾಗಿರುವ, ಉತ್ಕೃಷ್ಟವಾದ ಧರ್ಮವನ್ನು ಆಚರಿಸುವ ಕುರುವಂಶದಲ್ಲಿ ಬಂದಿರುವ, ಅತ್ಯಂತ ಅಧಮನಾದ ದುಶ್ಯಾಸನನ ಎದೆಯನ್ನು ಬಗೆದು ಎಲ್ಲರೂ ನೋಡುತ್ತಿರುವಂತೇ(ಜಗತ್ತಿನ ಸಮಕ್ಷಮದಲ್ಲಿ) ರಕ್ತವನ್ನು ಕುಡಿಯುತ್ತೇನೆ.

 

ವಿಕೃಷ್ಯಮಾಣೇ ವಸನೇ ತು ಕೃಷ್ಣಾ ಸಸ್ಮಾರ ಕೃಷ್ಣಂ ಸುವಿಶೇಷತೋSಪಿ ।

ತದಾSನ್ಯದಾಸೀದ್ ವಸನಂ ಚ ತಸ್ಯಾ ದಿವ್ಯಂ ಸುಸೂಕ್ಷ್ಮಂ ಕನಕಾವದಾತಮ್             ॥೨೧.೩೬೧॥

 

ಸದಾ ಕೃಷ್ಣನನ್ನು ಸ್ಮರಿಸುವ ದ್ರೌಪದಿಯು ತನ್ನ ಬಟ್ಟೆಯು ದುಶ್ಯಾಸನನಿಂದ ಎಳೆಯಲ್ಪಡುತ್ತಿರಲು ದ್ರೌಪದಿಯು ಅತ್ಯಂತ ವಿಶೇಷವಾಗಿ ಕೃಷ್ಣನನ್ನು ಸ್ಮರಣೆ ಮಾಡಿದಳು. ಆಗ ಅವಳಿಗೆ ಅಲೌಕಿಕವಾದ ಅತ್ಯಂತ ಮೃದುವಾಗಿರುವ ಹಳದಿ ಬಣ್ಣದ ಇನ್ನೊಂದು ಬಟ್ಟೆಯು ಅಲ್ಲಿತ್ತು. (ಒಂದೇ ಬಟ್ಟೆ ಉದ್ದವಾಗಿರುವುದಲ್ಲ. ಆಕೆ ಒಂದು ತುಂಡು ಬಟ್ಟೆ ಉಟ್ಟುಕೊಂಡಿದ್ದಳು, ಅದನ್ನು ಎಳೆದು ತೆಗೆದಾಗ ಅಲ್ಲಿ ಇನ್ನೊಂದು ಬಟ್ಟೆ ಇರುತ್ತಿತ್ತು)

 

ಪುನಃಪುನಶ್ಚೈವ ವಿಕರ್ಷಮಾಣೇ ದುಃಶಾಸನೇSನ್ಯಾನಿ ಚ ತಾದೃಶಾನಿ ।

ಬಭೂವುರನ್ತಂ ನ ಜಗಾಮ ಪಾಪಃ ಶ್ರಾನ್ತೋ ನ್ಯಷೀದತ್ ಸ್ವಿನ್ನಗಾತ್ರಃ ಸಭಾಯಾಮ್ ॥೨೧.೩೬೨॥

 

ಮತ್ತೆ ಮತ್ತೆ ಬಟ್ಟೆಯನ್ನು ಎಳೆಯುತ್ತಿರಲು, ಅಂತಹದ್ದೇ ಬಟ್ಟೆಗಳು ಅಲ್ಲಿ ಪ್ರಾದುರ್ಭವಿಸಿದವು. ಪಾಪಿಷ್ಠನಾದ ದುಶ್ಯಾಸನನಿಗೆ ಬಟ್ಟೆಯ ಕೊನೆಯೇ ಕಾಣಲಿಲ್ಲ. ಕೊನೆಗೆ ಬೆವರಿಳಿದ ಮೈಯುವನಾದ ಅವನು, ಬಹಳ ಬಳಲಿದವನಾಗಿ ಕುಕ್ಕರಿಸಿದನು.

No comments:

Post a Comment