ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, March 17, 2022

Mahabharata Tatparya Nirnaya Kannada 21: 368-373

 

ಅರ್ಜ್ಜುನಾರ್ಜ್ಜುನ ನೈವಾತ್ರ ಕ್ಷಮಾ ಮೇ ತಾತ ರೋಚತೇ ।

ಪತಿತಸ್ಯಾಸ್ಯ ದೇಹಸ್ಯ ಕಾಷ್ಠವಿಷ್ಠಾಸಮಸ್ಯ ಚ                           ॥೨೧.೩೬೮॥

 

'ಫಲಾನಿ ತ್ರೀಣಿ ಶಿಷ್ಯನ್ತೇ ವಿದ್ಯಾ ಕರ್ಮ್ಮ ಸುತಾ ಇತಿ ।

ಇತಿ ವೇದೋದಿತಂ ವಾಕ್ಯಂ ನ ಸುತೋ ದಾರದೂಷಣೇ              ॥೨೧.೩೬೯॥

 

ದುಷ್ಟದಾರೋ ನಚಾSಪ್ನೋತಿ ಲೋಕಾನರ್ದ್ಧೋ ಹಿ ದೂಷಿತಃ ।

ಅರಕ್ಷಣಾದ್ ದೂಷಿತಾಯಾ ನ ತ್ಯಾಗಾಚ್ಚ ಶುಭಂ ಭವೇತ್             ॥೨೧.೩೭೦॥

 

‘ಅರ್ಜುನಾ-ಅರ್ಜುನಾ—(ಎಲೈ ಪ್ರಿಯ ಅರ್ಜುನನೇ), ಈ ವಿಚಾರದಲ್ಲಿ ನನಗೆ ಇನ್ನು ಸಹನೆ ಇಷ್ಟವಾಗುವುದಿಲ್ಲ. (ಎಂದು ಹೇಳಿ ವೇದದ ಮಾತೊಂದನ್ನು ಹೇಳುತ್ತಾನೆ) ಎಂದೋ ಒಮ್ಮೆ ಬೀಳುವ, ಕಟ್ಟಿಗೆಯಂತೆ ಇರುವ ಈ ದೇಹದ ಫಲಗಳು ಮೂರು (ನಾಶವಾಗುವ ದೇಹದ ನಾಶವಾಗದ ಫಲ - ಈ ಮೂರು). ನಾವು ಸಂಪಾದಿಸಿದ ಜ್ಞಾನ, ನಾವು ಮಾಡುವ ಕರ್ಮ ಮತ್ತು ನಮ್ಮ ಮಕ್ಕಳು. ಇದು ವೇದದ ಮಾತು. ಹೆಂಡತಿಯನ್ನು ಇನ್ನೊಬ್ಬ ಸೆಳೆದಲ್ಲಿ (ಅಥವಾ ಹೆಂಡತಿಗೆ ದೋಷ ಉಂಟು ಮಾಡಿದರೆ),  ಹೆಂಡತಿ ಕಣ್ಣ ಮುಂದೆ ಕೆಡುತ್ತಿರುವಾಗ ಒಬ್ಬ ಪ್ರವೃತ್ತಿ ಮಾಡಿಲ್ಲವೆಂದರೆ ಅವನಿಗೆ ಒಳ್ಳೆಯ ಲೋಕ ಸಿಗುವುದಿಲ್ಲ. ಏಕೆಂದರೆ ಅರ್ಧ ಭಾಗವೇ ನಾಶವಾದಂತೆ ಅಲ್ಲವೇ? ನಿನ್ನಿಂದ ರಕ್ಷಣೆ ಮಾಡಲಾಗದೇ ಅವಳು ದೂಷಿತಳಾದರೆ ಅದರಿಂದ ಒಳ್ಳೆಯದಾಗುವುದಿಲ್ಲ. (ನಿನ್ನ ರಕ್ಷಣೆಯಲ್ಲಿದ್ದು, ನೀನು ರಕ್ಷಿಸದಿದ್ದರೆ- ನಿನಗೆ ಒಳ್ಳೆಯದಾಗುವುದಿಲ್ಲ)

 

ಅತೋSದ್ಯ ಸಾನುಬನ್ಧಕಾನ್ ನಿಹನ್ಮಿ ಧಾರ್ತ್ತರಾಷ್ಟ್ರಕಾನ್ ।

ಇತಿ ಬ್ರುವನ್ ವ್ಯಲೋಕಯದ್ ರಿಪೂನ್ ದಹನ್ನಿವೌಜಸಾ             ॥೨೧.೩೭೧॥

 

ಆ ಕಾರಣದಿಂದ ಈಗಲೇ ಎಲ್ಲರಿಂದ ಕೂಡಿರುವ ದುರ್ಯೋಧನ ಮೊದಲಾದವರನ್ನು ಕೊಲ್ಲುತ್ತೇನೆ’. ಈರೀತಿಯಾಗಿ ಹೇಳುತ್ತಾ ಭೀಮಸೇನ ಶತ್ರುಗಳನ್ನು ಸುಟ್ಟುಬಿಡುವನೋ ಎನ್ನುವಂತೆ ನೋಡಿದ.

 

ದದರ್ಶ ಚ ಮಹಾಘೋರಮಾದಾತುಂ ಪರಿಘಂ ರುಷಾ

ಕರ್ತ್ತುಂ ವ್ಯವಸಿತೋ ಬುದ್ಧ್ಯಾ ನಿಶ್ಶೇಷಾನ್ ಧೃತರಾಷ್ಟ್ರಜಾನ್             ॥೨೧.೩೭೨॥

 

ದುರ್ಯೋಧನಾದಿಗಳನ್ನು ನಿಶ್ಶೇಷರನ್ನಾಗಿ  ಮಾಡಲು ಮನಸ್ಸಿನಲ್ಲಿ ಸಂಕಲ್ಪ ಮಾಡಿದ ಭೀಮಸೇನನು, ಬಹಳ ಭಯಂಕರವಾಗಿರುವ, ಸಭಾಮಂಟಪಕ್ಕೆ ಆಧಾರವಾಗಿರುವ ಪರಿಘವನ್ನು(ಸಭಾಮಂಟಪಕ್ಕೆ ಆಧಾರವಾಗಿರುವ ದೊಡ್ಡಕಂಬವನ್ನು) ನೋಡಿದ.

 

ತದಾ ಶಿವಾ ವವಾಶಿರೇ ಸುಯೋಧನಾಗ್ನಿಗೇಹತಃ ।

ತಥೈವ ತತ್ಪಿತುರ್ಗ್ಗೃಹೇSಪ್ಯಭೂದ್ ಭಯಾನಕಂ ಬಹು             ॥೨೧.೩೭೩॥

 

ಆಗ ದುರ್ಯೋಧನನ ಅಗ್ನಿಹೋತ್ರದ ಕೋಣೆಯಿಂದ ಹೆಣ್ಣು ನರಿಗಳು ಊಳಿಟ್ಟವು. ಹಾಗೆಯೇ  ಧೃತರಾಷ್ಟ್ರನ ಮನೆಯಲ್ಲಿ ಅತ್ಯಂತ ಭಯವನ್ನು ಉಂಟುಮಾಡುವ ಬಹಳ ಶಕುನಗಳು ಉಂಟಾದವು.

No comments:

Post a Comment