ತತೋ ವಿಮುಕ್ತಾಃ
ಪ್ರಯಯುಶ್ಚ ಪಾರ್ತ್ಥಾ ಗುರೂನ್ ಪ್ರಣಮ್ಯ ಸ್ವಪುರಂ ಸಕೃಷ್ಣಾಃ ।
ದುರ್ಯ್ಯೋಧನಾನನ್ತರಜೋ
ಜಗಾದ ತಾತಂ ನಿಜಂ ಪಾಪಕೃತಾಂ ಪ್ರಧಾನಃ ॥೨೧.೩೮೯॥
ತದನಂತರ, ಬಿಡುಗಡೆಗೊಂಡ ಪಾಂಡವರು ದ್ರೌಪದಿಯಿಂದ ಕೂಡಿಕೊಂಡು, ಎಲ್ಲಾ
ಹಿರಿಯರಿಗೆ ನಮಸ್ಕರಿಸಿ ತಮ್ಮ ಪಟ್ಟಣಕ್ಕೆ ತೆರಳಿದರು. ಇತ್ತ ದುರ್ಯೋಧನನ ತಮ್ಮನಾದ, ಪಾಪಿಗಳಲ್ಲೇ
ಅಗ್ರಗಣ್ಯನಾದ ದುಶ್ಯಾಸನನು ತನ್ನ ಅಪ್ಪನನ್ನು ಕುರಿತು ಮಾತನಾಡಿದ:
ಸಮಸ್ತಪಾಣ್ಡವಶ್ರಿಯಂ
ಸಮಾಗತಾಮಹೋ ಪುನಃ ।
ವ್ಯಮೋಚಯೋ ವೃಕೋದರಾದ್
ವಧಶ್ಚ ನೋ ದ್ಧ್ರುವೋ ಭವೇತ್ ॥೨೧.೩೯೦॥
(ಎಂಥಾ ಕೆಲಸ ಮಾಡಿದೆ ಅಪ್ಪಾ - ಎನ್ನುವ ಭಾವದಿಂದ) ‘ಅನಾಯಾಸವಾಗಿ ಕೈಗೆ ಸಿಕ್ಕಿದ ಎಲ್ಲಾ
ಪಾಂಡವರ ಸಂಪತ್ತನ್ನು ನೀನು ಸುಲಭವಾಗಿ ಬಿಟ್ಟುಕೊಟ್ಟೇ. ಭೀಮಸೇನನಿಂದ ನಮ್ಮ ಕೊಲೆಯು ಖಂಡಿತವಾಗಿ
ನಡೆಯುತ್ತದೆ.
ಅತಃ ಪುನಶ್ಚ
ಪಾಣ್ಡವಾನ್ ಸಮಾಹ್ವಯಸ್ವ ನಃ ಕೃತೇ ।
ಪುನಶ್ಚ ದೇವನಂ ಭವೇಜ್ಜಿತೋ ವನಂ ಪ್ರಯಾತು ಚ ॥೨೧.೩೯೧॥
ಅದರಿಂದ ಮತ್ತೆ ಪಾಂಡವರನ್ನು ನಮಗಾಗಿ (ನಮ್ಮ
ಉಳಿವಿಗಾಗಿ/ಬದುಕಿಗಾಗಿ) ಕರೆ. ಮತ್ತೆ ಜೂಜಾಗಲಿ. ಪರಾಜಿತರಾದವರು ಕಾಡಿಗೆ ತೆರಳಲಿ’.
ತೇನೋಕ್ತಃ ಸ ತದಾ ರಾಜಾ
ಪಾಣ್ಡವಾನ್ ಪುನರಾಹ್ಯಯತ್ ।
ಪುನಃ ಪಿತ್ರಾ ಸಮಾಹೂತೋ
ದೇವನಾಯ ಯುಧಿಷ್ಠಿರಃ ।
ಭ್ರಾತೃಭಿರ್ವಾರ್ಯ್ಯಮಾಣೋsಪಿ ಕೃಷ್ಣಯಾ ಚಾSಗಮತ್ ಸಭಾಮ್ ॥೨೧.೩೯೨॥
ಈ ರೀತಿ ದುಶ್ಯಾಸನನಿಂದ ಹೇಳಲ್ಪಟ್ಟ ಧೃತರಾಷ್ಟ್ರನು
ಪಾಂಡವರನ್ನು ಪುನಃ ಜೂಜಿಗೆಂದು ಕರೆದ. ಮತ್ತೆ ದೊಡ್ಡಪ್ಪನಿಂದ ಜೂಜಿಗಾಗಿ ಕರೆಯಲ್ಪಟ್ಟ
ಯುಧಿಷ್ಠಿರನು ತಮ್ಮಂದಿರಿಂದ, ದ್ರೌಪದಿಯಿಂದ ತಡೆಯಲ್ಪಟ್ಟರೂ ಕೂಡಾ, ಸಭೆಯನ್ನು ಕುರಿತು ತೆರಳಿದನು.
ದ್ವಾದಶಾಬ್ದಂ ವನೇ
ವಾಸಮಜ್ಞಾತತ್ವೇನ ವತ್ಸರಮ್ ।
ವಾಸಂ ಪ್ರಸಿದ್ಧನೃಪತೇಃ
ಪುರೇ ನೈವಾತಿದೂರತಃ ॥೨೧.೩೯೩॥
ಕೃಷ್ಣಾಯಾಃ
ಪಾಣ್ಡವಾನಾಂ ವಾ ದರ್ಶನೇSಜ್ಞಾತವಾಸಿನಾಮ್ ।
ಏಕಸ್ಯಾಪಿ ಸಮಸ್ತಾನಾಂ
ದ್ವಾದಶಾಬ್ದಂ ಪುನರ್ವನಮ್ ॥೨೧.೩೯೪॥
ವತ್ಸರಾಜ್ಞಾತವಾಸಂ ಚ
ತ್ಯಾಗೇSಪ್ಯುಕ್ತವಿಧೇಸ್ತಥಾ ।
ದುರ್ಯ್ಯೋಧನಃ ಪಣಂ
ಚಕ್ರೇ ಬುದ್ಧ್ಯಾ ದುಃಶಾಸನೋಕ್ತಯಾ ॥೨೧.೩೯೫॥
ಯಾರು ಸೋಲುತ್ತಾನೋ ಅವನು ೧೨ ವರ್ಷಗಳ ಕಾಲ ಕಾಡಿನಲ್ಲಿ
ವಾಸವನ್ನೂ, ಯಾರಿಗೂ ತಿಳಿಯದಂತೆ ಮತ್ತೆ ಒಂದು ವರ್ಷ ಕಾಲ ಅತ್ಯಂತ ಪ್ರಸಿದ್ಧನಾದ ರಾಜನಲ್ಲಿ
ಇರಬೇಕು. ಹಸ್ತಿನಾವತಿಗೆ ಹತ್ತಿರದಲ್ಲಿರಬೇಕು. ಇದರಲ್ಲಿ ದ್ರೌಪದಿಯ ಅಥವಾ ಪಾಂಡವರ ದರ್ಶನವಾದರೆ (ಅಜ್ಞಾತವಾಸದಲ್ಲಿದ್ದಾಗ
ಒಬ್ಬರು ಕಂಡರೂ ಕೂಡಾ) ಎಲ್ಲರೂ ಕೂಡಾ ಮತ್ತೆ ೧೨ ವರ್ಷ ಕಾಡಿನಲ್ಲಿ ವಾಸಮಾಡಬೇಕು, ಮತ್ತೆ ೧ ವರ್ಷ
ಅಜ್ಞಾತವಾಸ ಮಾಡಬೇಕು. ಮಧ್ಯದಲ್ಲಿ ವನವಾಸ ಬಿಟ್ಟು ಪಟ್ಟಣಕ್ಕೆ ಬಂದರೂ ಕೂಡಾ ಮತ್ತೆ ಯಥಾಪ್ರಕಾರ ಕಾಡಿನಲ್ಲಿ
ವಾಸ, ೧ ವರ್ಷ ಅಜ್ಞಾತವಾಸ. ಈರೀತಿಯಾದ ಪಣವನ್ನು ದುರ್ಯೋಧನ ಇಟ್ಟ. ಇದರ ಹಿಂದೆ ದುಶ್ಯಾಸನ
ಚಿಂತನೆ ಇತ್ತು.
No comments:
Post a Comment