ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, March 16, 2022

Mahabharata Tatparya Nirnaya Kannada 21: 363-367

 

ವಸ್ತ್ರೋಚ್ಚಯೇ ಶೈಲನಿಭೇ ಪ್ರಜಾತೇ ದುರ್ಯ್ಯೋಧನಃ ಪ್ರಾಹ ಸಞ್ಜಾತಕೋಪಃ ।

ಪ್ರವೇಶಯೇಮಾಂ ಗೃಹಮೇವ ಶೀಘ್ರಂ ಕಿಂ ನಶ್ಚಿರೇಣೇತಿ ಸುಮನ್ದಬುದ್ಧಿಃ             ॥೨೧.೩೬೩॥

 

ಹೀಗೆ ವಸ್ತ್ರಗಳ ಸಮೂಹವು ಗುಡ್ಡದಂತಾಗಲು, ಅತ್ಯಂತ ಕೋಪಗೊಂಡ ಮಂದಬುದ್ಧಿಯ ದುರ್ಯೋಧನನು ‘ಈ ದ್ರೌಪದಿಯನ್ನು ಶೀಘ್ರದಲ್ಲಿ ನಮ್ಮ ಮನೆಗೆ ಕರೆದುಕೊಂಡು ಹೋಗು, ವಿಳಂಬದಿಂದೇನು ಪ್ರಯೋಜನ’ ಎಂದನು.

 

ತಚ್ಛ್ರುತ್ವಾ ವಚನಂ ಕೃಷ್ಣಾ ಪ್ರತಿಜ್ಞಾಮಕರೋತ್ ತದಾ ।

ಭೀಮೋ ದುರ್ಯ್ಯೋಧನಂ ಹನ್ತಾ ಕರ್ಣ್ಣಂ ಹನ್ತಾ ಧನಞ್ಜಯಃ             ॥೨೧.೩೬೪॥

 

ಶಕುನಿಂ ತ್ವಕ್ಷಕಿತವಂ ಸಹದೇವೋ ವಧಿಷ್ಯತಿ ।

ಇತ್ಯುಕ್ತೇ ತತ್ ತಥೇತ್ಯಾಹ ಭೀಮಸೇನಃ ಸಭಾತಳೇ                ॥೨೧.೩೬೫॥

 

ಆ ಮಾತನ್ನು ಕೇಳಿ ದ್ರೌಪದಿಯು ಆಗಲೇ ಪ್ರತಿಜ್ಞೆಯನ್ನು ಮಾಡಿದಳು: ‘ಭೀಮಸೇನನು ದುರ್ಯೋಧನನನ್ನು ಕೊಲ್ಲುತ್ತಾನೆ, ಅರ್ಜುನನು ಕರ್ಣನನ್ನು ಕೊಲ್ಲುತ್ತಾನೆ, ದಾಳ ಎಸೆಯುವುದರಲ್ಲಿ ನಿಪುಣನಾಗಿರುವ ಜೂಜುಕೋರ ಶಕುನಿಯನ್ನು ಸಹದೇವನು ಕೊಲ್ಲುತ್ತಾನೆ’. ಈರೀತಿಯಾಗಿ ಹೇಳಲು ‘ಹಾಗೇ ಆಗುತ್ತದೆ’ ಎಂದು ಸಭಾತಳದಲ್ಲಿ ಭೀಮಸೇನ ಹೇಳಿದ.

[ಮಹಾಭಾರತದಲ್ಲಿ (ಸಭಾಪರ್ವದಲ್ಲಿ ೯೨.೬೦) ಈ ಮಾತು ಬರುತ್ತದೆ: ‘ಅಹಂ ದುರ್ಯೋಧನಂ ಹನ್ತಾ ಕರ್ಣಂ ಹನ್ತಾ ಧನಞ್ಜಯಃ ।  ಶಕುನಿಂ ತ್ವಕ್ಷಕಿತವಂ ಸಹದೇವೋ ವದಿಷ್ಯತಿ’ ಇದು ಭೀಮಸೇನನ ಅಂಗೀಕಾರದ ಮಾತು. ಈ ಮಾತನ್ನು ಮೊದಲು ಹೇಳಿರುವುದು ದ್ರೌಪದಿ ಎನ್ನುವುದನ್ನು ಆಚಾರ್ಯರು ಇಲ್ಲಿ ತಿಳಿಸಿದ್ದಾರೆ].

 

ಪ್ರತಿಜ್ಞಾಮಾದದೇ ಪಾರ್ತ್ಥಸ್ತಾಂ ಮಾದ್ರೀನನ್ದನಸ್ತಥಾ ।

ನಕುಲಃ ಪ್ರತಿಜಜ್ಞೇSಥ ಶಾಕುನೇಯವಧಂ ಪ್ರತಿ           ॥೨೧.೩೬೬॥

 

ಅರ್ಜುನನೂ ಕೂಡಾ ಅವಳ ಪ್ರತಿಜ್ಞೆಯನ್ನು ಸ್ವೀಕರಿಸಿದ(ನಿನ್ನ ಪ್ರತಿಜ್ಞೆ ನನ್ನ ಪ್ರತಿಜ್ಞೆ ಎಂದ). ಅದೇ ತರದ ಪ್ರತಿಜ್ಞೆಯನ್ನು ಸಹದೇವನೂ ಮಾಡಿದ. ತದನಂತರ ನಕುಲನು ಶಕುನಿ ಪುತ್ರನ ಸಂಹಾರದ ಕುರಿತು   ಪ್ರತಿಜ್ಞೆ ಮಾಡಿದ.

 

ತತಃ ಸುಯೋಧನಾನುಜಶ್ಚಕರ್ಷ ಪಾರ್ಷತಾತ್ಮಜಾಮ್ ।

ಗೃಹಾಯ ತನ್ನಿಶಾಮ್ಯ ತು ಕ್ರುಧಾSSಹ ಮಾರುತಾತ್ಮಜಃ             ॥೨೧.೩೬೭॥

 

ತದನಂತರ ದುಶ್ಯಾಸನನು ದ್ರೌಪದಿಯನ್ನು ಮನೆಗೆ ಕರೆದುಕೊಂಡು ಹೋಗಲೆಂದು ಎಳೆದನು. ಅದನ್ನು ಕಂಡು ಭೀಮಸೇನ ಸಿಟ್ಟಿನಿಂದ ಹೇಳಿದ:

No comments:

Post a Comment