ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, September 29, 2020

Mahabharata Tatparya Nirnaya Kannada 19107_19112

 

ಷಣ್ಣಾಂ ಚ ಮದ್ಧ್ಯಗಮುದೀರ್ಣ್ಣಭುಜಂ ವಿಶಾಲವಕ್ಷಸ್ಥಲಂ ಬಹಳಪೌರುಷಲಕ್ಷಣಂ ಚ ।

ದೃಷ್ಟ್ವೈವ ಮಾರುತಿಮಸಾವುಪಲಪ್ಸ್ಯತೀಹ ಕೃಷ್ಣಾಮಿತಿ ಸ್ಮ ಚ ವಚಃ ಪ್ರವದನ್ತಿ ವಿಪ್ರಾಃ ॥೧೯.೧೦೭॥

 

ಆರು ಜನರ ಮಧ್ಯದಲ್ಲಿರುವ, ಉಬ್ಬಿನಿಂತಿರುವ ತೋಳ್ಗಳುಳ್ಳ, ಹರವಾದ ಎದೆಯುಳ್ಳ,  ಬಹಳ ಪೌರುಷ ಲಕ್ಷಣವುಳ್ಳ ಭೀಮಸೇನನನ್ನು ಕಂಡೇ, ‘ಇವನು ದ್ರೌಪದಿಯನ್ನು ಹೊಂದುತ್ತಾನೆ’ ಎಂದು ಬ್ರಾಹ್ಮಣರು ಮಾತನಾಡುತ್ತಿದ್ದರು.   

[ಮಹಾಭಾರತದ ಆದಿಪರ್ವದಲ್ಲಿ(೧೮೫.೨೦) ಈಕುರಿತ ವಿವರವನ್ನು ಕಾಣುತ್ತೇವೆ.  ‘ಅಯಮೇಕಶ್ಚ ವೋ ಭ್ರಾತಾ ದರ್ಶನೀಯೋ ಮಹಾಭುಜಃ । ನಿಯುಧ್ಯಮಾನೋ ವಿಜಯೇತ್ ಸಙ್ಗತ್ಯ ದ್ರವಿಣಂ ಮಹತ್ ‘] 

 

ರಾತ್ರೌ ದಿವಾ ಚ ಸತತಂ ಪಥಿ ಗಚ್ಛಮಾನಾಃ ಪ್ರಾಪುಃ ಕದಾಚಿದಥ ವಿಷ್ಣುಪದೀಂ ನಿಶಾಯಾಮ್ ।

ಸರ್ವಸ್ಯ ರಕ್ಷಿತುಮಗಾದಿಹ ಪೃಷ್ಠತಸ್ತು ಭೀಮೋsಗ್ರ ಏವ ಶತಮನ್ಯುಸುತೋsನ್ತರಾsನ್ಯೇ ॥೧೯.೧೦೮॥

 

ರಾತ್ರಿಯಲ್ಲಿಯೂ, ಹಗಲಿನಲ್ಲಿಯೂ ನಿರಂತರವಾಗಿ ಪ್ರಯಾಣಿಸತಕ್ಕವರಾದ ಪಾಂಡವರು, ಒಂದಾನೊಂದು ದಿನ ರಾತ್ರಿ ಗಂಗೆಯನ್ನು ಹೊಂದಿದರು. ಭೀಮಸೇನನು ಅವರೆಲ್ಲರ ಹಿಂಭಾಗದಲ್ಲಿ ಎಲ್ಲರ ರಕ್ಷಕನಾಗಿ ಸಾಗುತ್ತಿದ್ದನು. (ಕಾಡಿನಲ್ಲಿ ಹಿಂದಿನಿಂದ ಅಪಾಯಗಳು ಬರುವ ಸಾಧ್ಯತೆ ಹೆಚ್ಚಿರುವುದರಿಂದ, ಭೀಮಸೇನ ಹಿಂದಿನಿಂದ ರಕ್ಷಕನಾಗಿದ್ದ. ಮುಂಭಾಗದಲ್ಲಿ ಅರ್ಜುನನಿದ್ದರೆ, ಉಳಿದವರು ಮಧ್ಯದಲ್ಲಿದ್ದರು.

 

ಪ್ರಾಪ್ತೇ ತದೋಲ್ಮುಕಧರೇsರ್ಜ್ಜುನ ಏವ ಗಙ್ಗಾಂ ಗನ್ಧರ್ವರಾಜ ಇಹ ಚಿತ್ರರಥೋsರ್ದ್ಧರಾತ್ರೇ ।

ದೃಷ್ಟ್ವೈವ ವಿಪ್ರರಹಿತಾನುದಕಾನ್ತರಸ್ಥಃ ಕ್ಷತ್ರಾತ್ಮಜಾ ಇತಿ ಹ ಧರ್ಷಯಿತುಂ ಸ ಚಾsಗಾತ್ ॥೧೯.೧೦೯॥

 

ಆಗ ಪಂಜನ್ನು ಹಿಡಿದುಕೊಂಡಿರುವ ಅರ್ಜುನನು ಮುಂದೆ ಸಾಗುತ್ತಿರಲು, ಗಂಗೆಯಲ್ಲಿ ಗಂಧರ್ವರ ಒಡೆಯನಾದ ಚಿತ್ರರಥನು, ಅರ್ಧರಾತ್ರಿಯಲ್ಲಿ, ಬ್ರಾಹ್ಮಣರಿಂದ ರಹಿತರಾದ ಇವರನ್ನು ನೀರಿನ ಒಳಗಡೆಯಲ್ಲಿ  ಇದ್ದುಕೊಂಡೇ ಕಂಡು, ಇವರು ಕ್ಷತ್ರಿಯರು ಎಂದು ತಿಳಿದು, ಅವರ ಮೇಲೆ ದರ್ಪತೋರಿಸಲು ಉದ್ಯುಕ್ತನಾದನು.

[ಮಹಾಭಾರತದ ಆದಿಪರ್ವದಲ್ಲಿ ಈಕುರಿತಾದ ವಿವರ ಕಾಣಸಿಗುತ್ತದೆ.   ಉಲ್ಮುಕಂ ತು ಸಮುದ್ಯಮ್ಯ ತೇಷಾಮಗ್ರೇ ಧನಞ್ಜಯಃ । ಪ್ರಕಾಶಾರ್ಥಂ ಯಯೌ ತತ್ರ ರಕ್ಷಾರ್ಥಂ ಚ ಮಹಾರಥಃ’ (೧೮೬.೪)   ಚಿತ್ರರಥ ಗಂಗೆಯಲ್ಲಿ ಜಲಕ್ರೀಡೆ ಆಡುತ್ತಿದ್ದ ಎನ್ನುವುದನ್ನೂ ಅಲ್ಲಿ ಹೇಳಿದ್ದಾರೆ. ‘ತತ್ರ ಗಙ್ಗಾಜಲೇ ರಮ್ಯೇ ವಿವಿಕ್ತೇ ಕ್ರೀಡಯನ್ ಸ್ತ್ರಿಯಃ । ಈರ್ಷ್ಯುರ್ಗನ್ಧರ್ವರಾಜೋ ವೈ ಜಲಕ್ರೀಡಾಮುಪಾಗತಃ(೧೮೬.೫)]

 

ಹನ್ತಾsಸ್ಮಿ ವೋ ಹ್ಯುಪಗತಾನುದಕಾನ್ತಮಸ್ಯಾ ನದ್ಯಾಶ್ಚ ಮರ್ತ್ತ್ಯಚರಣಾಯ ನಿಷಿದ್ಧಕಾಲೇ ।

ಇತ್ಥಂ ವದನ್ತಮಮುಮಾಹ ಸುರೇನ್ದ್ರಸೂನುರ್ಗ್ಗನ್ಧರ್ವ ನಾಸ್ತ್ರವಿದುಷಾಂ ಭಯಮಸ್ತಿ ತೇsದ್ಯ ॥೧೯.೧೧೦॥

 

‘ಮನುಷ್ಯರು ಓಡಾಡಬಾರದ ವೇಳೆಯಲ್ಲಿ ಈ ನದಿಯ ನೀರಿನ ಸಮೀಪ ಬಂದಿರುವ ನಿಮ್ಮನ್ನು ಕೊಲ್ಲುತ್ತೇನೆ’ ಎಂದು ಹೇಳಿದ ಅವನನ್ನು ಕುರಿತು ಅರ್ಜುನನು ಹೇಳುತ್ತಾನೆ: ‘ಎಲೈ ಗಂಧರ್ವನೇ, ಅಸ್ತ್ರವೇತ್ತರಾದ ನಮಗೆ ನಿನ್ನಿಂದ ಭಯವಿಲ್ಲಾ’ ಎಂದು. 

 

ಸರ್ವಂ ಹಿ ಫೇನವದಿದಂ ಬಹುಲಂ ಬಲಂ ತೇ ನಾರ್ತ್ಥಪ್ರದಂ ಭವತಿ ಚಾಸ್ತ್ರವಿದಿ ಪ್ರಯುಕ್ತಮ್ ।

ಇತ್ಯುಕ್ತವನ್ತಮಮುಮುತ್ತಮಯಾನಸಂಸ್ಥೋ ಬಾಣಾನ್ ಕ್ಷಿಪನ್ನಭಿ ಸಸಾರ ಸುರೇಶಭೃತ್ಯಃ ॥೧೯.೧೧೧॥

 

ನೀನು ನಿನ್ನೆಲ್ಲಾ ಬಲವನ್ನು ಉಪಯೋಗಿಸಿದರೂ ಕೂಡಾ, ಅದು ನಮ್ಮ ಮುಂದೆ ನೀರಗುಳ್ಳೆಯಂತೆ ವ್ಯರ್ಥವಾಗಿ ಹೋಗುತ್ತದೆ’. ಈರೀತಿಯಾಗಿ ಹೇಳುತ್ತಿರುವ ಅರ್ಜುನನನ್ನು ಕುರಿತು, ಉತ್ಕೃಷ್ಟವಾದ ರಥದಲ್ಲಿ  ಕುಳಿತಿದ್ದ ದೇವತೆಗಳ ಭೃತ್ಯನಾದ ಆ ಗಂಧರ್ವನು, ಬಾಣಗಳನ್ನು ಎಸೆಯುತ್ತಾ ಬಂದ.

[ಮಹಾಭಾರತದಲ್ಲಿ ಈ ವಿವರವನ್ನು ನಾವು ಕಾಣಬಹುದು. ‘ಬಿಭೀಷಿಕಾ ವೈ ಗನ್ಧರ್ವ ನಾಸ್ತ್ರಜ್ಞೇಷು ಪ್ರಯುಜ್ಯತೇ । ಅಸ್ತ್ರಜ್ಞೇಷು ಪ್ರಯುಕ್ತೇಯಂ ಫೇನವತ್ ಪ್ರವಿಲೀಯತೇ(ಆದಿಪರ್ವ ೧೮೬.೨೭)]

 

ಆಗ್ನೇಯಮಸ್ತ್ರಮಭಿಮನ್ತ್ರ್ಯ ತದೋಲ್ಮುಕೇ ಸ ಚಿಕ್ಷೇಪ ಶಕ್ರತನಯೋsಸ್ಯ ರಥಶ್ಚ ದಗ್ಧಃ ।

ತಂ ಚಾಗ್ನಿನಾ ಪರಿಗೃಹೀತಮಭಿಪ್ರಗೃಹ್ಯ  ಕೇಶೇಷು ಸಞ್ಚಕರ್ಷಾSಶು ಸುರೇನ್ದ್ರಸೂನುಃ ॥೧೯.೧೧೨॥

 

ತಕ್ಷಣ ಪಂಜಿನಲ್ಲಿಯೇ ಆಗ್ನೇಯಾಸ್ತ್ರವನ್ನು ಅಭಿಮಂತ್ರಿಸಿದ  ಅರ್ಜುನನು, ಅದನ್ನು ಅವನತ್ತ ಎಸೆದನು. ಆಗ ಗಂಧರ್ವನ ರಥವು ಸುಡಲ್ಪಟ್ಟಿತು. ಬೆಂಕಿಯಿಂದ ಮೈ ಸುಟ್ಟುಕೊಂಡ ಚಿತ್ರರಥನನ್ನು ಅರ್ಜುನನು ಕೂಡಲೇ ಅವನ ಕೇಶವನ್ನು ಹಿಡಿದು ಎಳೆದನು.

[ಮಹಾಭಾರತದಲ್ಲಿ  ಈಕುರಿತ ವಿವರ ಕಾಣಸಿಗುತ್ತದೆ: ಪ್ರದೀಪ್ತಮಸ್ತ್ರಮಾಗ್ನೇಯಮ್ ದದಾಹಾಸ್ಯ ರಥಂ ತು ತತ್ । ವಿರಥಂ ವಿಪ್ಲುತಂ ತಂ ತು ಸ ಗನ್ಧರ್ವಂ ಮಹಾಬಲಃ. । ಅಸ್ತ್ರತೇಜಃಪ್ರಮೂಢಂ ಚ ಪ್ರಪತನ್ತಮವಾಙ್ಮುಖಮ್ । ಶಿರೋರುಹೇಷು ಜಗ್ರಾಹ ಮಾಲ್ಯವತ್ಸು ಧನಞ್ಜಯಃ । ಭ್ರಾತೄನ್   ಪ್ರತಿ ಚಕರ್ಷಾಥ  ಸೋsಸ್ತ್ರಪಾತಾದಚೇತಸಮ್(೩೧-೩೩) ಅಸ್ತ್ರದಿಂದ ತನ್ನ ದೇಹದಮೇಲಿನ ನಿಯಂತ್ರಣವನ್ನು ಕಳೆದುಕೊಂಡ ಅವನನ್ನು ಅರ್ಜುನ ಎಳೆದುಕೊಂಡು ಹೋದ.]

No comments:

Post a Comment