ಶ್ರೀಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯಃ(ಭಾಗ-೦೨)
೧೯. ಪಾಣ್ಡವರಾಜ್ಯಲಾಭಃ
ಓಂ ॥
ಏವಂ ಶುಭೋಚ್ಚಗುಣವತ್ಸು ಜನಾರ್ದ್ದನೇನ ಯುಕ್ತೇಷು ಪಾಣ್ಡುಷು ಚರತ್ಸ್ವಧಿಕಂ ಶುಭಾನಿ ।
ನಾಸ್ತಿಕ್ಯನೀತಿಮಖಿಲಾಂ ಗುರುದೇವತಾದಿಸತ್ಸ್ವಞ್ಜಸೈವ ಜಗೃಹುರ್ದ್ಧೃತರಾಷ್ಟ್ರಪುತ್ರಾಃ
॥೧೯.೦೧॥
ಈರೀತಿಯಾಗಿ ಶ್ರೀಕೃಷ್ಣನಿಂದ ಕೂಡಿಕೊಂಡ, ಉತ್ಕೃಷ್ಟವಾದ,
ಮಂಗಳಕರವಾದ ಗುಣವುಳ್ಳ ಪಾಣ್ಡವರು, ಆತ್ಯಂತಿಕವಾದ ಪುಣ್ಯಗಳನ್ನು ಮಾಡುತ್ತಿರಲು, ಧೃತರಾಷ್ಟ್ರನ
ಮಕ್ಕಳಾದರೋ, ಗುರುಗಳು, ದೇವತೆಗಳು, ಮೊದಲಾದ ಒಳ್ಳೆಯ ಕ್ರಿಯೆಗಳನ್ನು ನಿರಾಕರಿಸುತ್ತಾ, ‘ಇದಾವುದೂ
ಇಲ್ಲಾ’ ಎನ್ನುವ ಬುದ್ಧಿಯನ್ನು ಪ್ರತಿಪಾದಿಸುತ್ತಾ, ನಾಸ್ತಿಕ್ಯನೀತಿಯನ್ನು
ಸ್ವೀಕರಿಸಿದರು.
[ಧೃತರಾಷ್ಟ್ರಪುತ್ರರಿಗೆ ನಾಸ್ತಿಕ್ಯನೀತಿ ಬೋಧಿಸಿದ ಗುರು ಯಾರು? ]
ನಾಮ್ನಾ ಕಣಿಙ್ಕ ಇತಿ ಚಾsಸುರಕೋ ದ್ವಿಜೋsಭೂಚ್ಛಿಷ್ಯಃ ಸುರೇತರಗುರೋಃ ಶಕುನೇರ್ಗ್ಗುರುಃ
ಸಃ ।
ನೀತಿಂ ಸ ಕುತ್ಸಿತತಮಾಂ ಧೃತರಾಷ್ಟ್ರಪುತ್ರೇಷ್ವಾಧಾದ್ ರಹೋ ವಚನತಃ
ಶಕುನೇಃ ಸಮಸ್ತಾಮ್ ॥೧೯.೦೨॥
ಹೆಸರಿನಿಂದ ಕಣಿಙ್ಕ ಎಂಬುವವನು ಒಬ್ಬ ಅಸುರ, ದೈತ್ಯಗುರು ಶುಕ್ರಾಚಾರ್ಯರ ಶಿಷ್ಯ, ಶಕುನಿಯ
ಗುರು. ಶಕುನಿಯ ಮಾತಿನಂತೆ ಆತ ಧೃತರಾಷ್ಟ್ರನ ಮಕ್ಕಳಿಗೆ(ಕೌರವರಿಗೆ) ರಹಸ್ಯವಾಗಿ ಅತ್ಯಂತ ಕುತ್ಸಿತವಾದ
ನೀತಿಶಾಸ್ತ್ರವನ್ನು ಉಪದೇಶ ಮಾಡಿದನು.
ಛದ್ಮೈವ ಯತ್ರ ಪರಮಂ ನ ಸುರಾಶ್ಚ ಪೂಜ್ಯಾಃ ಸ್ವಾರ್ತ್ಥೇನ ವಞ್ಚನಕೃತೇ
ಜಗತೋsಖಿಲಂ ಚ ।
ಧರ್ಮ್ಮಾದಿ ಕಾರ್ಯ್ಯಮಪಿ ಯಸ್ಯ ಮಹೋಪಧಿಃ ಸ್ಯಾಚ್ಛ್ರೇಷ್ಠಃ ಸ ಏವ
ನಿಖಿಲಾಸುರದೈತ್ಯಸಙ್ಘಾತ್ ॥೧೯.೦೩॥
ಯಾವ ಶಾಸ್ತ್ರದಲ್ಲಿ
ಮೋಸಮಾಡುವಿಕೆಯೇ ಶ್ರೇಷ್ಠವೋ(ಮುಖ್ಯವಾಗಿರುತ್ತದೋ), ಯಾವುದು ದೇವತೆಗಳು ಪೂಜ್ಯರಲ್ಲಾ
ಎಂದು ಹೇಳುತ್ತದೋ. ಅದೇ ಈ ಕುತ್ಸಿತವಾದ ನೀತಿಶಾಸ್ತ್ರ. ಸ್ವಾರ್ಥಕ್ಕೆ ಅನುಗುಣವಾಗಿ, (ತನಗೆ
ಪ್ರಯೋಜನ ಆಗಬೇಕಾದಾಗ) ಜಗತ್ತಿಗೆ ವಂಚನೆ ಮಾಡುವ ಸಲುವಾಗಿ, ಧರ್ಮಾದಿಗಳನ್ನು ನೆರವೇರಿಸಬೇಕು
ಎನ್ನುತ್ತದೆ ಈ ಶಾಸ್ತ್ರ. ಧಾರ್ಮಿಕತೆ ಇತ್ಯಾದಿಗಳು ಒಂದು ನೆಪ ಅಷ್ಟೇ. ಯಾರ್ಯಾರು ಎಷ್ಟೆಷ್ಟು ಮೋಸ ಮಾಡುತ್ತಾರೋ ಅಷ್ಟಷ್ಟು ಎಲ್ಲಾ ದೈತ್ಯರಿಗಿಂತಲೂ
ಉತ್ಕೃಷ್ಟನಾಗಿರುತ್ತಾರೆ ಎನ್ನುವ ಶಾಸ್ತ್ರ ಇದಾಗಿದೆ.
ಇತ್ಯಾದಿ ಕುತ್ಸಿತತಮಾಂ ಜಗೃಹುಃ ಸ್ಮ ವಿದ್ಯಾಮಜ್ಞಾತ ಏವ
ಧೃತರಾಷ್ಟ್ರಮುಖೈಃ ಸಮಸ್ತೈಃ ।
ತೇಷಾಂ ಸ್ವಭಾವಬಲತೋ ರುಚಿತಾ ಚ ಸೈವ ವಿಸ್ತಾರಿತಾ ಚ
ನಿಜಬುದ್ಧಿಬಲಾದತೋsಪಿ ॥೧೯.೦೪॥
ಇವೇ ಮೊದಲಾದ ಅತ್ಯಂತ ಕೆಟ್ಟದ್ದಾಗಿರುವ ವಿದ್ಯೆಯನ್ನು,
ಧೃತರಾಷ್ಟ್ರ ಮೊದಲಾದ ಕುಲದ ಹಿರಿಯರಿಗೆ ತಿಳಿಯದಂತೆ ಕೌರವರು ಸ್ವೀಕರಿಸಿದರು. ಅವರ ಸ್ವಭಾವಕ್ಕೆ
ಅನುಗುಣವಾಗಿ ಅವರಿಗೆ ಅದು ಪ್ರಿಯವಾದುದು ಮತ್ತು ತಮ್ಮ
ಬುದ್ಧಿಯ ಬಲದಿಂದ ಅದೇ ವಿಸ್ತರಿಸಿಕೊಳ್ಳಲ್ಪಟ್ಟಿತು.
ಸಮ್ಪೂರ್ಣ್ಣದುರ್ಮ್ಮತಿರಥೋ ಧೃತರಾಷ್ಟ್ರಸೂನುಸ್ತಾತಪ್ಯಮಾನಹೃದಯೋ
ನಿಖಿಲಾನ್ಯಹಾನಿ ।
ದೃಷ್ಟ್ವಾ ಶ್ರಿಯಂ ಪರಮಿಕಾಂ ವಿಜಯಂ ಚ ಪಾರ್ತ್ಥೇಷ್ವಾಹೇದಮೇತ್ಯ
ಪಿತರಂ ಸಹ ಸೌಬಲೇನ॥೧೯.೦೫॥
ಹೀಗೆ ಸಮ್ಪೂರ್ಣ ದುರ್ಮತಿಯಾದ ಧೃತರಾಷ್ಟ್ರನ ಮಗ ದುರ್ಯೋಧನನು, ಸದಾ ಕಂಗೆಡುತ್ತಿರುವ ಹೃದಯಯುಳ್ಳವನಾಗಿ, ಪಾಣ್ಡವರಲ್ಲಿರುವ ಉತ್ಕೃಷ್ಟವಾಗಿರುವ ಸಂಪತ್ತನ್ನೂ, ಅವರ
ದಿಗ್ವಿಜಯವನ್ನೂ ಕಂಡು ಸಹಿಸದವನಾಗಿ, ಸಂಕಟಪಡುತ್ತಾ, ಶಕುನಿಯ
ಜೊತೆಗೂಡಿ, ತಂದೆಯ ಬಳಿ ಬಂದು ಈರೀತಿ ಮಾತನಾಡಿದನು:
No comments:
Post a Comment