ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, September 17, 2020

Mahabharata Tatparya Nirnaya Kannada 1938_1942

 

ತಸ್ಯಾಗ್ರಜಾ ಚ ಸಹಿತಾ ಸುತಪಞ್ಚಕೇನ ತತ್ರಾsಗಮತ್ ತದನು ಮಾರುತಿರೇಷ ಕಾಲಃ ।

ಇತ್ಥಂ ವಿಚಿನ್ತ್ಯ ಸ ನಿಶಾಮ್ಯ ಚ ತಾನ್ ಪ್ರಸುಪ್ತಾನ್ ಭ್ರಾತೄಂಶ್ಚ ಮಾತರಮಥಾsಶು ಬಿಲೇ ನ್ಯಧಾತ್ ಪ್ರಾಕ್ ॥೧೯.೩೮॥

 

ಹೀಗಿರುವಾಗ ಒಮ್ಮೆ ಪುರೋಚನನ ಅಕ್ಕ ತನ್ನ ಐದುಮಂದಿ ಮಕ್ಕಳಿಂದ ಕೂಡಿಕೊಂಡು ಆ ಅರಗಿನ ಮನೆಗೆ ಬಂದಳು. ಆಗ ಮಾರುತಿಯು(ಭೀಮಸೇನನು) ಇದೇ ಸರಿಯಾದ ಕಾಲ ಎಂದು ಚಿಂತಿಸಿ, ಮಲಗಿರುವ ಅವರೆಲ್ಲರನ್ನು ಕಂಡು, ಅಣ್ಣತಮ್ಮಂದಿರನ್ನು, ತಾಯಿಯನ್ನೂ ಕೂಡಾ ಮೊದಲೇ ಬಿಲದಲ್ಲಿ ಇಟ್ಟನು(ಸುರಂಗದೊಳಗೆ ಪ್ರವೇಶಮಾಡಿಸಿದನು)

 

ತಂ ಭಾಗಿನೇಯಸಹಿತಂ ಭಗಿನೀಂ ಚ ತಸ್ಯ ಪಾಪಾನ್ ದದಾಹ ಸಗೃಹಾನ್ ಪವಮಾನಸೂನುಃ ।

ಸಾsಪ್ಯಾಗತಾ ಹಿ ಗರಳೇನ ನಿಹನ್ತುಮೇತಾನ್ ಭೀಮಸ್ಯ ಪೂರ್ವಭುಜಿತೋ ನ ಶಶಾಕ ಚೈತತ್ ॥೧೯.೩೯॥

 

ಸಹೋದರಳಿಯರಿಂದ ಕೂಡಿರುವ ಪಾಪಿಷ್ಠನಾದ  ಪುರೋಚನ ಮತ್ತು ಅವನ ಅಕ್ಕ ಈ ಎಲ್ಲರನ್ನೂ  ಮನೆಯ ಸಮೇತವಾಗಿ ಭೀಮಸೇನನು ಸುಟ್ಟ. ಅವಳಾದರೋ, ವಿಷದಿಂದ ಇವರೆಲ್ಲರನ್ನು ಕೊಲ್ಲಲೆಂದೇ ಬಂದಿದ್ದಳು. ಆದರೆ ಭೀಮಸೇನ ಮೊದಲೇ ಉಂಡದ್ದರಿಂದ ಆ ಕೆಲಸ ಫಲಪ್ರದವಾಗಲಿಲ್ಲ.

 

[ಸಾಮಾನ್ಯವಾಗಿ ಪಾಂಡವರು ಬೆಳಿಗ್ಗೆ ಬೇಟೆಗೆಂದು ಹೋಗುತ್ತಿದ್ದರು ಹಾಗೂ ಅಲ್ಲೇ ಊಟಮಾಡಿಕೊಂಡು ಬಂದು ರಾತ್ರಿ ಏನನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಕುಂತಿ ಪ್ರತಿದಿನ ಅಲ್ಲಿರುವ ಹೆಣ್ಣುಮಕ್ಕಳನ್ನು ಊಟಕ್ಕೆ ಕರೆದು ಅವರೊಂದಿಗೆ ತಾನೂ ಊಟಮಾಡುತ್ತಿದ್ದಳು. ಇದರಿಂದಾಗಿ ಪುರೋಚನನಿಗೆ ವಿಷ ಹಾಕಲು ಅವಕಾಶ ಸಿಗುತ್ತಿರಲಿಲ್ಲ. ಆದರೂ ಕೂಡಾ, ರಾತ್ರಿ ವಿಷಯುಕ್ತ ಆಹಾರ  ಇಟ್ಟು ಹೋಗುತ್ತಿದ್ದ. ಆದರೆ ಭೀಮಸೇನ ಅದೆಲ್ಲವನ್ನೂ ಒಬ್ಬನೇ ತಿನ್ನುತ್ತಿದ್ದ. ಭೀಮನ ಮೇಲೆ ಈ ವಿಷ ಕೆಲಸ ಮಾಡುತ್ತಿರಲಿಲ್ಲವಷ್ಟೇ. ಹಾಗಾಗಿ ಮರುದಿನ ನೋಡಿದರೆ ಆಹಾರ ಖಾಲಿಯಾಗಿರುತ್ತಿತ್ತು ಆದರೆ ಪಾಂಡವರು ಜೀವಂತವಾಗಿರುತ್ತಿದ್ದರು. ಅದನ್ನು ಕಂಡು ಆತ ಮತ್ತೆ ಪುನಃ ವಿಷವಿಡುತ್ತಿದ್ದ. ಈರೀತಿ ವಿಷವಿಟ್ಟು ಪಾಂಡವರನ್ನು ಕೊಲ್ಲಲು ಆತ ತನ್ನ ಅಕ್ಕನನ್ನು ಕರೆಸಿಕೊಂಡಿದ್ದ. ಆ ಬೇಡತಿಯು ದುಷ್ಟಹೃದಯಳಾಗಿ ಪಾಂಡವರನ್ನು ವಿಷವಿಟ್ಟು ಕೊಲ್ಲಲೆಂದೇ ಬಂದಿದ್ದಳು. ಈ ವಿಷಯವನ್ನು  ನಿಷಾದಿ ದುಷ್ಟಹೃದಯಾ  ನಿತ್ಯಮನ್ತರಚಾರಿಣಿ’ ಎಂದು ಮಹಾಭಾರತದಲ್ಲಿ (ಆದಿಪರ್ವ ೧೬೦.೯) ಸೂಕ್ಷ್ಮವಾಗಿ ಉಲ್ಲೇಖಿಸಿರುವುದನ್ನು ನಾವು ಕಾಣಬಹುದು].

 

[ಭೀಮ ಅಷ್ಟೂ ಜನರನ್ನು ಒಟ್ಟಿಗೇ ಏಕೆ ಸಾಯಿಸಿದ ಎಂದರೆ:]

 

ತಪ್ತಂ ತಯಾ ಸಸುತಯಾ ಚ ತಪೋ ನಿತಾನ್ತಂ ಸ್ಯಾಂ ಸೂನುಭಿಃ ಸಹ ಬಲಾದದಿತಿಸ್ತಥಾsಬ್ದಾತ್ ।

ತಸ್ಯಾ ಅದಾಚ್ಚ ಗಿರಿಶೋ ಯದಿ ಪುತ್ರಕೈಸ್ತ್ವಂ ಯುಕ್ತಾ ನ ಯಾಸಿ ಮೃತಿಮೇಷ ವರಸ್ತವೇತಿ ॥೧೯.೪೦॥

 

ಮಕ್ಕಳಿಂದ ಕೂಡಿದ ಆ ಬೇಡತಿಯಿಂದ ಈ ಹಿಂದೆ ಒಂದು ವರ್ಷಗಳ ಕಾಲ ಶಿವನನ್ನು ಕುರಿತು ಉಗ್ರವಾದ ತಪಸ್ಸು ಮಾಡಲ್ಪಟ್ಟಿತ್ತು. ನಾನು ಮಕ್ಕಳಿಂದ ಕೂಡಿಕೊಂಡು ಅದಿತಿಯಾಗಬೇಕು ಎನ್ನುವುದು ಅವಳ ಬಯಕೆಯಾಗಿತ್ತು. ಒಂದು ವರ್ಷ ಕಳೆದ ನಂತರ ಅವಳಿಗೆ ರುದ್ರನು ವರವನ್ನು ಕೊಟ್ಟ. ‘ಒಂದುವೇಳೆ ನೀನು ಮಕ್ಕಳಿಂದ ಕೂಡಿಕೊಂಡು ಸಾವನ್ನು ಹೊಂದದಿದ್ದರೆ ಈ ವರವು ನಿನಗೆ ಸಫಲವಾಗುತ್ತದೆ’ ಎನ್ನುವ ವರ.

 

ಜಾನನ್ನಿದಂ ಸಕಲಮೇವ ಸ ಭೀಮಸೇನೋ ಹತ್ವಾ ಸುತೈಃ ಸಹ ಕುಬುದ್ಧಿಮಿಮಾಂ ಹಿ ತಂ ಚ ।

ಭ್ರಾತೄಂಶ್ಚ ಮಾತರಮುದೂಹ್ಯ ಯಯೌ ಬಿಲಾತ್ ಸ ನಿರ್ಗ್ಗತ್ಯ ಭೀತಿವಶತೋsಬಲತಾಂ ಪ್ರಯಾತಾನ್ ॥೧೯.೪೧॥

 

ಇದೆಲ್ಲವನ್ನೂ ಬಲ್ಲವನಾದ ಭೀಮಸೇನನು, ಮಕ್ಕಳಿಂದ ಕೂಡಿದ ಈ ಕೆಟ್ಟ ಬುದ್ಧಿಯವಳನ್ನು ಕೊಂದು, ಜೊತೆಗೆ ಪಾಪಿಷ್ಠನಾದ ಪುರೋಚನನನ್ನೂ ಕೊಂದು,  ಭಯದಿಂದ ದುರ್ಬಲರಾಗಿದ್ದ ತನ್ನ ತಾಯಿ ಮತ್ತು ನಾಲ್ಕುಮಂದಿ ಅಣ್ಣತಮ್ಮಂದಿರನ್ನು ಹೊತ್ತು, ಬಿಲದ ಮುಖೇನ ಹೊರಬಂದು ಹೊರಟುಹೋದನು.  

 

ಜ್ಞಾತ್ವಾ ಪುರೋಚನವಧಂ ಯದಿ ಭೀಷ್ಮಮುಖ್ಯೈರ್ವೈಚಿತ್ರವೀರ್ಯ್ಯತನಯಾ ಅಭಿಯೋಧಯೇಯುಃ ।

ಕಿಂ ನೋ ಭವೇದಿತಿ ಭಯಂ ಸುಮಹದ್ ವಿವೇಶ ಭೀಮಂ ತ್ವೃತೇ ಚ ತನಯಾನ್ ಸಕಲಾನ್ ಪೃಥಾಯಾಃ ॥೧೯.೪೨॥

 

[ಭೀಮನನ್ನು ಬಿಟ್ಟು ಉಳಿದ ಎಲ್ಲರೂ ಏಕೆ ಭಯದಿಂದ ದುರ್ಬಲರಾಗಿದ್ದರು ಎಂದರೆ: ]

 

ಪುರೋಚನನ ಹತ್ಯೆಯನ್ನು ತಿಳಿದು ಒಂದುವೇಳೆ ಭೀಷ್ಮಾಚಾರ್ಯರೇ ಮೊದಲಾದವರಿಂದ ಕೂಡಿಕೊಂಡು ದುರ್ಯೋಧನಾದಿಗಳು ನಮ್ಮೊಂದಿಗೆ ಯುದ್ಧಮಾಡಿಯಾರು. ಹಾಗೇನಾದರೂ ಯುದ್ಧವಾದರೆ ನಮಗೆ ಏನಾದೀತು ಎನ್ನುವ ಬಹಳವಾದ ಭಯವು ಭೀಮಸೇನನನ್ನು ಬಿಟ್ಟು, ಕುಂತಿಯ ಇತರ ಎಲ್ಲಾ ಮಕ್ಕಳನ್ನೂ ಆವರಿಸಿತ್ತು.

No comments:

Post a Comment