ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, September 15, 2020

Mahabharata Tatparya Nirnaya Kannada 1928_1932

 

ಇತ್ಯುಕ್ತವಾಕ್ಯಮಮುಮಗ್ರಜಮನ್ವಗಾತ್ ಸ ಭೀಮಃ ಪ್ರದರ್ಶ್ಯ ನಿಜಧರ್ಮ್ಮಮಥಾನುವೃತ್ಯೈ ।

ದೋಷೋ ಭವೇದುಭಯತೋ ಯತ ಏವ ತೇನ ವಾಚ್ಯಃ ಸ್ವಧರ್ಮ್ಮ ಉತ ನ ಸ್ಥಿತಿರತ್ರ ಕಾರ್ಯ್ಯಾ ॥೧೯.೨೮॥

 

ಕೀರ್ತ್ತ್ಯರ್ತ್ಥಮೇವ ನಿಜಧರ್ಮ್ಮಪರಿಪ್ರಹಾಣೇ ಪ್ರಾಪ್ತೇsಗ್ರಜಸ್ಯ ವಚನಾತ್ ಪ್ರವಿಹಾತುಮೇವ ।

ಭೀಮಸ್ಯ ದೋಷಮುಭಯಂ ಪ್ರತಿಹನ್ತುಮೀಶೋ ಜ್ಯೇಷ್ಠಂ ಚಕಾರ ಹರಿರತ್ರ ಸುತಂ ವೃಷಸ್ಯ ॥೧೯.೨೯॥

 

ಹನ್ತವ್ಯತಾಮುಪಗತೇಷು ಸುಯೋಧನಾದಿಷ್ವನ್ಯೋಪಧಾನ್ನಹಿ ಭವೇನ್ನಿಜಧರ್ಮ್ಮ ಏವ ।

ಪೂರ್ವಂ ವಧೇ ನಹಿ ಸಮಸ್ತಶ ಏವ ದೋಷಾಸ್ತೇಷಾಂ ಪ್ರಯಾನ್ತಿ ವಿವೃತಿಂ ಚ ತದರ್ತ್ಥತೋsಪಿ ॥೧೯.೩೦ ॥

 

ಈರೀತಿಯಾಗಿ ನುಡಿದ ಅಣ್ಣನಾದ ಧರ್ಮರಾಜನಿಗೆ ಭೀಮಸೇನನು ತನ್ನ ಧರ್ಮವೇನು ಎಂದು ಪ್ರದರ್ಶಿಸಿ, ಅನುಸರಿದ. ಇಲ್ಲಿ ಭೀಮಸೇನ ಯಾವುದನ್ನು ಮಾಡಿದರೂ ಅದು ದೋಷವಾಗುತ್ತದೆ. ಎದುರಿಸಿದರೂ ದೋಷ, ಎದುರಿಸದೇ ಹೋದರು ಕೂಡಾ ದೋಷವೇ ಆಗುತ್ತದೆ. ಇಂತಹ ಸಂದರ್ಭದಲ್ಲಿ  ಸತ್ಯಯಾವುದು ಎಂದು ಹೇಳುವುದೇ ಧರ್ಮ’. ಅದನ್ನೇ ಭೀಮಸೇನ ಮಾಡಿ ತೋರಿಸಿದ.

ಇದೇ ಕಾರಣಕ್ಕಾಗಿ, ಈ ಎರಡು ದೋಷಗಳನ್ನು ಕಳೆಯುವುದಕ್ಕಾಗಿ ಭಗವಂತ ಭೀಮಸೇನನನ್ನು ಜ್ಯೇಷ್ಠನನ್ನಾಗಿ ಮಾಡದೇ, ಯಮಧರ್ಮನ ಅಂಶನಾದ ಯುಧಿಷ್ಠಿರನನ್ನು ಜ್ಯೇಷ್ಠನನ್ನಾಗಿ ಮಾಡಿದ. ಕ್ಷತ್ರಿಯ ಧರ್ಮವನ್ನು ಬಿಡಬೇಕಾದ ಪ್ರಸಂಗ ಬರಲು ಭೀಮಸೇನ ನಿಜಧರ್ಮ ಪಾಲನೆಯಾರ್ಥವಾಗಿ  ತಪ್ಪನ್ನು ಎತ್ತಿ ಹೇಳಿದ. ಅದೇ ಸಮಯದಲ್ಲಿ ಅಣ್ಣನಾದ ಧರ್ಮರಾಯನ ಮಾತನ್ನೂ ತಿರಸ್ಕರಿಸಲಿಲ್ಲ. ಇದರಿಂದಾಗಿ ಅಣ್ಣನ ಮಾತನ್ನು ಪಾಲಿಸಿದ ಕೀರ್ತಿಯೂ ಅವನಿಗೆ ಬಂತು.

ಇದಲ್ಲದೇ ಇನ್ನೂ ಒಂದು ಕಾರಣವನ್ನು ಇಲ್ಲಿ ಹೇಳುತ್ತಾರೆ: ದುರ್ಯೋಧನಾದಿಗಳನ್ನು ಪಾಂಡವರು ತಮ್ಮ ಧರ್ಮದಿಂದಲೇ ನಾಶಪಡಿಸಬೇಕು. ಪ್ರಾರಂಭದಲ್ಲೇ ದುರ್ಯೋಧನಾದಿಗಳನ್ನು ಕೊಂದಿದ್ದರೆ,  ಅವರ  ದೋಷಗಳು ಪೂರ್ತಿಯಾಗಿ ಸಾಮಾನ್ಯಜನರ ಪ್ರಜ್ಞೆಗೆ ಗೋಚರವಾಗುತ್ತಿರಲಿಲ್ಲ. ಅವರ ಪಾಪದ ಕೊಡ ತುಂಬಿ ಅವರು ಮುಂದೆ ಅನ್ಧಂತಮಸ್ಸನ್ನು ಪಡೆಯುವಂತಾಗುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಭಗವಂತ ಧರ್ಮರಾಜನನ್ನು  ಹಿರಿಯನನ್ನಾಗಿಯೂ, ಶುದ್ಧ ಭಾಗವತನಾದ ಭೀಮಸೇನನನ್ನು ಕಿರಿಯನನ್ನಾಗಿಯೂ  ಹುಟ್ಟಿಸಿದ.

[ಒಟ್ಟಿನಲ್ಲಿ ಹೇಳಬೇಕೆಂದರೆ ಭೀಮ ಜ್ಯೇಷ್ಠನಾಗಿದ್ದರೆ ಆದಿಪರ್ವದಲ್ಲೇ ಮಹಾಭಾರತ  ಮುಗಿದುಹೋಗಬೇಕಿತ್ತು. ಏಕೆಂದರೆ ಭೀಮನದು ಶುದ್ಧವಾದ ಭಾಗವತ ಧರ್ಮ. ನಿಷ್ಠುರಧರ್ಮ. ತಪ್ಪು ಯಾವುದೋ, ಅದನ್ನು ‘ತಪ್ಪು’ ಎಂದು ಎತ್ತಿ ಹೇಳುತ್ತಾನೆ. ಹಾಗೆಯೇ ಯಾವುದು  ಸರಿಯೋ ಅದಕ್ಕೆ ಸರಿಯಾದ ಮನ್ನಣೆ ಕೊಡುತ್ತಾನೆ. ಇದು  ಭೀಮನ ಲಕ್ಷಣ.  ಜೀವೋತ್ತಮ ಯಾರಿಗೂ ತಲೆ ಬಾಗುವುದಿಲ್ಲ. ಅವನು ದುರ್ಯೋಧನ ದುಃಶಾಸನರು ಮಾಡಿದ ಅಪರಾಧವನ್ನು ಕಂಡು ಅವರನ್ನು ಆಗಲೇ  ಹೊಡೆದುಹಾಕಬೇಕಿತ್ತು. ಆದರೆ ಆರೀತಿ ಆಗಿದ್ದಿದ್ದರೆ ಒಂದು ದೊಡ್ಡ ತಪ್ಪಾಗುತ್ತಿತ್ತು. ದುರ್ಯೋಧನಾದಿ ಸಮಸ್ತ ಪಾಪಿಷ್ಠ ಜೀವರೂ ಕೂಡಾ ಸಾಯಲ್ಪಡಬೇಕಾದವರೇ ಆದರೂ ಕೂಡಾ, ಪಾಪಿಗಳಾದ ಅವರಿಗೆ ಅನ್ಧಂತಮಸ್ಸಿನ ಮರಣ ಬರಬೇಕು.  ಅನ್ಧಂತಮಸ್ಸಾಗುವಂತಹ ಮರಣ ಬರಬೇಕಾದರೆ ಅವರು ಅಷ್ಟೊಂದು ಪಾಪ ಸಂಘಟನೆ ಮಾಡಿಕೊಳ್ಳಬೇಕು. ಅವರನ್ನು ಮೊದಲೇ ಕೊಂದರೆ ಅವರ ಪಾಪದ ಕೊಡ ತುಂಬುತ್ತಿರಲಿಲ್ಲ. ಅವರು ಎಷ್ಟು ನೀಚರು ಎಂಬುದನ್ನು ಜಗತ್ತಿಗೆ ತೋರಿಸಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲಾ, ಯಾವ ಪ್ರವೃತ್ತಿಯಲ್ಲಿ ನಾವು ನಡೆಯಬಾರದು ಎಂದು ಜಗತ್ತಿಗೆ ಶಿಕ್ಷಣ ದೊರಕುತ್ತಿರಲಿಲ್ಲ. ಹಾಗಾಗಿ ಭಗವಂತ ಭೀಮನನ್ನು ಚಿಕ್ಕವನನ್ನಾಗಿ ಮಾಡಿದ. ಹೀಗೆ ಮಾಡಿದ್ದರಿಂದ ಅಣ್ಣನ ಮಾತನ್ನು ಕೇಳುವುದು ಭೀಮನ ಧರ್ಮವಾಯಿತು. ಅಣ್ಣ ಎಲ್ಲವುದರಲ್ಲೂ ನ್ಯಾಯವನ್ನೇ ನೋಡುವವನಾಗಿದ್ದ. ಹೀಗಾಗಿ ಅವನು ಭೀಮನನ್ನು ಸಮಾಧಾನ ಮಾಡುತ್ತಿದ್ದ. ಧೃತರಾಷ್ಟ್ರನ ಮಾತಿಗೆ ವಿರುದ್ಧವಾಗಿ ನಡೆದರೆ ಗುರು-ಹಿರಿಯರಲ್ಲಿ ದ್ರೋಹಮಾಡಿದಂತಾಗುತ್ತದೆ ಹಾಗು ಅದರಿಂದ ಕೀರ್ತಿನಾಶವಾಗುತ್ತದೆ ಎಂದು ಹೇಳಿ ಮೃದುವಾಗಿ ಮಾತನಾಡುತ್ತಿದ್ದ ಯುಧಿಷ್ಠಿರ. ಹೀಗೆ ಮಾಡಿದ್ದರಿಂದ ದುರ್ಯೋಧನ ದುಃಶಾಸನರು ದುಷ್ಟಕಾರ್ಯಗಳನ್ನು ಮುಂದುವರಿಸುವಂತಾಯಿತು. ಅಷ್ಟೇ ಅಲ್ಲಾ, ಅವರಂತಹ ಅನೇಕ ದುಷ್ಟರ ಕೂಟ ಒಟ್ಟಿಗೆ ಸೇರುವಂತಾಯಿತು ಮತ್ತು ಎಲ್ಲರೂ ಮಹಾಭಾರತ ಯುದ್ಧದಲ್ಲಿ ಒಂದೇ ಕಡೆ ಸಾಯುವಂತಾಯಿತು. ಇದರಿಂದ ಜಗತ್ತಿಗೆ ದುಷ್ಟರು ಹೇಗಿರುತ್ತಾರೆ ಮತ್ತು  ಸಜ್ಜನರು ಹೇಗೆ ಅಂತವರಿಂದ ಎಚ್ಚರಿಕೆಯಿಂದ ಇರಬೇಕು ಎನ್ನುವ ಪಾಠವನ್ನೂ ಹೇಳಿಕೊಟ್ಟಂತಾಯಿತು.

ಭೀಮ ಹಿರಿಯನಲ್ಲದಿದ್ದರೂ ತಪ್ಪನ್ನು ಎತ್ತಿ ಹೇಳುವುದನ್ನು ನಿಲ್ಲಿಸಲಿಲ್ಲ. ನಿಜಧರ್ಮವನ್ನು ಅವನು ಸ್ವಧರ್ಮಪಾಲನೆಗಾಗಿ ಹೇಳುತ್ತಾ ಮುಂದೆ ಸಾಗಿದ. ಈರೀತಿ ಸತ್ಯವನ್ನು ಹೇಳಿ, ನಿಜಧರ್ಮ ನಾಶವಾಗಲು ಬಿಡಲಿಲ್ಲ. ಜೊತೆಗೇ ಅಣ್ಣನಾದ ಧರ್ಮರಾಯನ ಮಾತನ್ನು ಅವನು ತಿರಸ್ಕರಿಸಲಿಲ್ಲ. ಹೀಗಾಗಿ ಅಣ್ಣನ ಮಾತನ್ನು ಕೇಳಿದ ಕೀರ್ತಿಯೂ ಅವನಿಗೆ ಬಂತು. ಹಾಗೆಯೇ ದೊಡ್ಡಪ್ಪನ ಮಾತನ್ನು ಅನುಸರಿಸಿದ ಕೀರ್ತಿ ಪಾಂಡವರಿಗೂ ಬಂತು].

 

ಕ್ಷತ್ತಾsಥ ಚಾsಹ ಸುವಚೋsನ್ತ್ಯಜಭಾಷಯೈವ ಧರ್ಮ್ಮಾತ್ಮಜಂ ವಿಷಹುತಾಶಭಯಾತ್ ಪ್ರತೀತಾಃ ।

ಆಧ್ವಂ ತ್ವಿತಿ ಸ್ಮ ಸ ತಥೇತಿ ವಚೋsಪ್ಯುದೀರ್ಯ್ಯ ಪ್ರಾಯಾಚ್ಚ ವಾರಣವತಂ ಪೃಥಯಾsನುಜೈಶ್ಚ ॥೧೯.೩೧॥

 

ತದನಂತರ ವಿದುರನು ಧರ್ಮರಾಜನನ್ನು ಕುರಿತು, `ವಿಷ ಹಾಗೂ ಅಗ್ನಿಯ ಭಯದಿಂದ ಜಾಗೃತರಾಗಿರಿ. ಇದೇ ನಿಮಗೆ ನನ್ನ ದಾರಿಯ ಬುತ್ತಿ’ ಎಂದು ಒಗಟಾಗಿ, ಅನ್ತ್ಯಜ ಭಾಷೆಯಲ್ಲಿ ಹೇಳಿದ. ಧರ್ಮರಾಜನು ‘ಹಾಗೆಯೇ ಆಗಲಿ’ ಎಂದು ಹೇಳಿ, ಕುಂತಿಯಿಂದಲೂ ಹಾಗೂ ತಮ್ಮಂದಿರಿಂದಲೂ ಕೂಡಿಕೊಂಡು ವಾರಣಾವತಕ್ಕೆ ತೆರಳಿದ.

 

ತಾನ್ ಹನ್ತುಮೇವ ಚ ತದಾ ಧೃತರಾಷ್ಟ್ರಸೂನುರ್ಲ್ಲಾಕ್ಷಾಗೃಹಂ ಸಪದಿ ಕಾಞ್ಚನರತ್ನಗೂಢಮ್ ।

ಕೃತ್ವಾsಭ್ಯಯಾತಯದಮುತ್ರ ಹಿ ವಿಷ್ಣುಪದ್ಯಾ ಸ್ವಾಮಾತ್ಯಮೇವ ಚ ಪುರೋಚನನಾಮಧೇಯಮ್ ॥೧೯.೩೨॥

 

ಈರೀತಿ ವಾರಣಾವತಕ್ಕೆ ತೆರಳಿದ ಪಾಂಡವರನ್ನು ಕೊಲ್ಲಲೋಸುಗವೇ ದುರ್ಯೋಧನನು ಕೂಡಲೇ ಬಂಗಾರ ಹಾಗೂ ರತ್ನಗಳಿಂದ ತುಂಬಿರುವ ಅರಗಿನ ಮನೆಯನ್ನು ಮಾಡಿಸಿ,  ಗಂಗಾನದಿಯ ಮೂಲಕ,  ಪುರೋಚನ ಎಂಬ ಹೆಸರಿನ ತನ್ನ ಅಂತರಂಗದ ಅಮಾತ್ಯನನ್ನು ಪಾಂಡವರ ಜೊತೆಗಿರಿಸಿ  ಕಳುಹಿಸಿಕೊಟ್ಟನು.

No comments:

Post a Comment