ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, September 16, 2020

Mahabharata Tatparya Nirnaya Kannada 1933_1937

 

ಪೂರ್ವಂ ಪ್ರಹಸ್ತ ಇತಿ ಯಸ್ತ್ವಭವತ್ ಸುಪಾಪಃ ಸೋsಭ್ಯೇತ್ಯ ಪಾಣ್ಡುತನಯಾನಭವಚ್ಚ ಮನ್ತ್ರೀ ।

ದುರ್ಯ್ಯೋಧನಂ ಪ್ರತಿವಿಹಾಯ ಭವತ್ಸಕಾಶಮಾಯಾತ ಇತ್ಯವದದೇಷು ಸ ಕೂಟವಾಕ್ಯಮ್ ॥೧೯.೩೩॥

 

ರಾಮಾಯಣಕಾಲದಲ್ಲಿ ಯಾರು ರಾವಣನ ಸೇನಾಮುಖ್ಯಸ್ತನಾದ ಪ್ರಹಸ್ತನಾಗಿದ್ದನೋ, ಆ ಪಾಪಿಯೇ  ಈಗ  ಪುರೋಚನಾ ಎಂಬ ಹೆಸರಿನಿಂದ ಹುಟ್ಟಿದ್ದ.  ಅವನು ಪಾಂಡವರ ಬಳಿ ಬಂದು, ‘ನಾನು ದುರ್ಯೋಧನನನ್ನು ಬಿಟ್ಟು, ನಿಮ್ಮ ಸಮೀಪಕ್ಕೆ ಬಂದಿದ್ದೇನೆ’ ಎಂದು ಅವರಲ್ಲಿ ಮೋಸದ ಮಾತುಗಳನ್ನು ಆಡಿ ಅವರ ಮಂತ್ರಿಯೂ ಆದ.

 

ದಿವ್ಯಂ ಗೃಹಂ ಚ ಭವತಾಂ ಹಿ ಮಯೋಪನೀತಂ ಪ್ರೀತ್ಯೈವ ಪಾಪಮನುಯಾತುಮಹಂ ನ ಶಕ್ತಃ ।

ಯುಷ್ಮಾಸು ಧರ್ಮ್ಮಧೃತಿಮತ್ಸು ಸದಾ ನಿವತ್ಸ್ಯ ಇತ್ಯೂಚಿವಾಂಸಮಮುಮಾಹುರಹೋ ಸುಭದ್ರಮ್ ॥೧೯.೩೪॥

 

‘ನಿಮಗಾಗಿ ಅಲೌಕಿಕವಾದ ಒಂದು ಮನೆಯು ನನ್ನಿಂದ ಕೇವಲ ನಿಮ್ಮಮೇಲಿನ ಪ್ರೀತಿಯಿಂದ ಕಟ್ಟಲ್ಪಟ್ಟಿದೆ. ನಾನು ಪಾಪಿಷ್ಠನಾದ ದುರ್ಯೋಧನನನ್ನು ಅನುಸರಿಸಲು ಶಕ್ತನಲ್ಲ. ಧರ್ಮದಲ್ಲಿ ನಿಶ್ಚಯವುಳ್ಳ ನಿಮ್ಮಂತವರೊಂದಿಗೆ ಯಾವಾಗಲೂ ವಾಸಮಾಡುತ್ತೇನೆ.’ ಈರೀತಿಯಾಗಿ ಹೇಳುತ್ತಿರುವ ಆ ಪುರೋಚನನ್ನು ಕುರಿತು ಪಾಂಡವರು ಮಂಗಲವೆಂದು ಹೇಳಿ ಅಚ್ಚರಿಯನ್ನೂ ವ್ಯಕ್ತಪಡಿಸಿದರು. 

 

ದೃಷ್ಟ್ವೈವ ಜಾತುಷಗೃಹಂ ವಸಯಾ ಸಮೇತಂ ತದ್ಗನ್ಧತೋ ವೃಷಸುತಃ ಪವಮಾನಜಾತಮ್ ।

ತಂ ಚಾತಿಪಾಪಮವದತ್ ಸುಮುಖೈಷ ಪಾಪೋ ಹನ್ತುಂ ನ ಇಚ್ಛತಿ ಸದಾ ಭವ ಚ ಪ್ರತೀತಃ ॥೧೯.೩೫॥

 

ಕೊಬ್ಬಿನ ಪದಾರ್ಥಗಳಿಂದ ತುಂಬಿರುವ ಅರಗಿನ ಮನೆಯನ್ನು ಕಂಡೇ, ಅದರ ಪರಿಮಳದಿಂದ ಧರ್ಮರಾಜನು ಭೀಮಸೇನನನ್ನು ಕುರಿತು ಹೇಳುತ್ತಾನೆ, ಎಲೋ ಸುಮುಖನೇ, ಈ ಪಾಪಿಷ್ಠನಾದ ಪುರೋಚನನು ನಮ್ಮನ್ನು ಕೊಲ್ಲಲು ಬಯಸುತ್ತಿದ್ದಾನೆ. ಹಾಗಾಗಿ ನೀನು ಯಾವಾಗಲೂ ಎಚ್ಚರದಿಂದ ಇರು’ ಎಂದು.

 

 

ಕ್ಷತ್ತಾsಥ ನೀತಿಬಲತೋsಖಿಲಲೋಕವೃತ್ತಂ ಜಾನನ್ತ್ಸ್ವಚಾರಮುಖತಃ ಖನಕಾಯ ಚೋಚೇ ।

ಉಕ್ತ್ವೈವ ಧರ್ಮ್ಮತನಯಾಯ ಮದೀಯವಾಕ್ಯಂ ಪೂರ್ವೋಕ್ತಮಾಶು ಕುರು ತತ್ರ ಬಿಲಂ ಸುದೂರಮ್ ॥೧೯.೩೬॥

 

ತದನಂತರ, ನೀತಿಯ ಬಲದಿಂದ ವಿದುರನು ಎಲ್ಲಾ ಲೋಕದ ನಡೆಯನ್ನು ತನ್ನ ಚಾರರ ಮೂಲಕವಾಗಿ ತಿಳಿದವನಾಗಿ, ಸುರಂಗ ತೋಡುವವನಿಂದ ತಾನು ಧರ್ಮರಾಜನಿಗೆ ಹಿಂದೆ ಹೇಳಿದ ಮಾತುಗಳನ್ನು ನೀನೂ ಕೂಡಾ ಧರ್ಮರಾಜನಿಗೋಸ್ಕರ ಹೇಳಿಯೇ ಅಲ್ಲಿ ಬಹಳ ದೂರದ ತನಕ  ಬಿಲವನ್ನು(ಸುರಂಗ ಮಾರ್ಗವನ್ನು) ಮಾಡು ಎಂದು ಹೇಳಿದನು.

[ಧರ್ಮರಾಜನಿಗೆ ಆ ಸುರಂಗ ತೋಡುವ ವ್ಯಕ್ತಿ ವಿದುರನ ಕಡೆಯವನು ಎಂದು ತಿಳಿಯುವುದಕ್ಕಾಗಿ, ತಾನು ಹಿಂದೆ ಗುಹ್ಯಭಾಷೆಯಲ್ಲಿ ಪಾಂಡವರಿಗೆ ಏನನ್ನು ಹೇಳಿದ್ದನೋ, ಅದನ್ನೇ ಆ ವ್ಯಕ್ತಿಯೂ ಕೂಡಾ ಸಂಕೇತ ಭಾಷೆಯಾಗಿ  ಧರ್ಮರಾಜನಿಗೆ ಹೇಳಿ ಕೆಲಸ ಆರಂಭಿಸುವಂತೆ ವಿದುರ ವ್ಯವಸ್ಥೆ ಮಾಡಿದ್ದ. ಇದರಿಂದ ಪಾಂಡವರಿಗೆ ಆ ವ್ಯಕ್ತಿ ವಿದುರನ ಕಡೆಯವನು ಎನ್ನುವುದು ತಿಳಿದು ಅವನನ್ನು ನಂಬಲು ಸಾಧ್ಯವಾಯಿತು].    

 

ಚಕ್ರೇ ಸ ಚೈವಮಥ ವರ್ತ್ಮ ವೃತಿಚ್ಛಲೇನ ದ್ವಾರಂ ಚ ತಸ್ಯ ಸ ಪಿಧಾಯ ಯಯೌ ಗೃಹಂ ಸ್ವಮ್ ।

ಭೀಮಃ ಪೂರೋಚನ ಉಭಾವಪಿ ತೌ ವಧಾಯ ಚ್ಛಿದ್ರಾರ್ತ್ಥಿನೌ ಮಿಥ ಉತೋಷತುರಬ್ದಕಾರ್ದ್ಧಮ್ ॥೧೯.೩೭॥

 

ಆ ಸುರಂಗ ತೋಡುವವನು(ಖನಕನು) ಪ್ರಾಕಾರ ಮಾಡುವ ನೆಪವನ್ನು ನೀಡಿ, ವಿದುರ ಹೇಳಿದಂತೆಯೇ ಸುರಂಗ ಮಾರ್ಗವನ್ನು ಮಾಡಿ, ಸುರಂಗದ ದ್ವಾರವನ್ನು ಮುಚ್ಚಿ, ತನ್ನ ಮನೆಗೆ ತೆರಳಿದನು. ಇತ್ತ ಭೀಮಸೇನ ಹಾಗೂ ಪುರೋಚನ ಇವರಿಬ್ಬರೂ ಕೂಡಾ ಸಂಹಾರಕ್ಕಾಗಿ ಅವಕಾಶವನ್ನು ಪರಸ್ಪರವಾಗಿ ಹುಡುಕುತ್ತಾ, ಆರು ತಿಂಗಳುಗಳ ಕಾಲ ಅಲ್ಲೇ ಆವಾಸಮಾಡಿದರು.  

No comments:

Post a Comment