ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, September 13, 2020

Mahabharata Tatparya Nirnaya Kannada 1922_1927

 

[ಇನ್ನು ಪಾಂಡವರನ್ನು ವಾರಣಾವತಕ್ಕೆ ಹೇಗೆ ಕಳುಹಿಸುವುದು ಎನ್ನುವ ಉಪಾಯವನ್ನು ಆಗಲೇ ನಿಶ್ಚಯಿಸಿಕೊಂಡಿದ್ದ ದುರ್ಯೋಧನ, ಅದನ್ನೂ ಧೃತರಾಷ್ಟ್ರನಿಗೆ ವಿವರಿಸುತ್ತಾನೆ].

 

ಭೇದಃ ಕುಲಸ್ಯ ಭವಿತಾ ಕುಲನಾಶಹೇತುರಸ್ಮಾಭಿರೇಷು ಸಹಿತೇಷು ಪುರೇ ವಸತ್ಸು ।

ತಸ್ಮಾದುಪಾಯಬಲತಃ ಪ್ರತಿಯಾತನೀಯಾಸ್ತೇ ವಾರಣಾವತಮಿತೋ ವಿಹಿತೋsಪ್ಯುಪಾಯಃ॥೧೯.೨೨॥

 

ಪಾಂಡವರು ಇದೇ ಪಟ್ಟಣದಲ್ಲಿ ನಮ್ಮ ಜೊತೆಗೇ ವಾಸಮಾಡುತ್ತಿದ್ದರೆ, ಅದರಿಂದ ಕುಲದಲ್ಲಿ ಒಡಕು ಉಂಟಾಗಬಹುದು. ಬೇಧವು ಕುಲವನ್ನೇ ನಾಶಪಡಿಸುವಂತಹದ್ದು. ಆಕಾರಣದಿಂದ, ಬೇರೆ ಯಾವುದೋ ಒಂದು ಉಪಾಯದ ಬಲದಿಂದ, ಅವರು  ವಾರಣಾವತಕ್ಕೆ ಕಳುಹಿಸಲು ಯೋಗ್ಯರಾಗಿದ್ದಾರೆ. ಈ ವಿಚಾರದಲ್ಲಿ ಉಪಾಯವೂ ಕೂಡಾ ನನ್ನಲ್ಲಿ ಸಿದ್ಧವಿದೆ.  

 

ವಿಷ್ಣುರ್ಜ್ಜಯನ್ತ ಇತಿ ಶಮ್ಭುಸಹಾಯ ಆಸ್ತೇ ದೇವೋತ್ಸವಶ್ಚ ಸುಮಹಾನ್ ಭವಿತಾsತ್ರ ಸುಷ್ಠು ।

ಭಕ್ತಾಶ್ಚ ತೇ ಹಿ ನಿತರಾಮರಿಶಙ್ಖಪಾಣೌ ತ್ವಚ್ಚೋದಿತಾಃ ಸಮುಪಯಾನ್ತಿ ತಮುತ್ಸವಂ ದ್ರಾಕ್॥೧೯.೨೩॥

 

ರುದ್ರನೇ ಸಹಾಯಕನಾಗಿ ಉಳ್ಳ, ಜಯಂತ ಎನ್ನುವ ಹೆಸರಿನ ನಾರಾಯಣನು ವಾರಣಾವತದಲ್ಲಿ ಇದ್ದಾನೆ.(ವಾರಣಾವತದಲ್ಲಿ ಜಯನ್ತೇಶ್ವರ ಎನ್ನುವ ವಿಷ್ಣುವಿನ ಸನ್ನಿಧಾನವಿರುವ ದೇವಾಲಯವಿದೆ) ಅಲ್ಲಿ ಬಹಳ ದೊಡ್ಡದಾದ ಹಬ್ಬವು ಚೆನ್ನಾಗಿ ನಡೆಯುತ್ತದೆ. ಪಾಂಡವರಾದರೋ, ಶಂಖ-ಚಕ್ರ-ಗದಾಪಾಣಿಯಾಗಿರುವ ಪರಮಾತ್ಮನಲ್ಲಿ ಸಂಪೂರ್ಣವಾದ ಭಕ್ತರಾಗಿದ್ದಾರೆ. ನಿನ್ನಿಂದ ಪ್ರೇರಿತರಾಗಿ ಅವರು ಕೂಡಲೇ ಆ ಜಾತ್ರೆಯನ್ನು ನೋಡಲು ಶೀಘ್ರದಲ್ಲೇ ತೆರಳುತ್ತಾರೆ.

 

[ಇದ್ದಕ್ಕಿದ್ದಂತೆ ಹೇಳಿದರೆ ಹೇಗೆ ಹೋಗುತ್ತಾರೆ ಎನ್ನುವ ಪ್ರಶ್ನೆಗೂ ತನ್ನ ಪೂರ್ವನಿಯೋಜಿತ ಉಪಾಯವನ್ನು ದುರ್ಯೋಧನ ಧೃತರಾಷ್ಟ್ರನಿಗೆ ವಿವರಿಸುತ್ತಾನೆ].   

 

ಅಜ್ಞಾಪ್ಯ ಮತ್ಪುರುಷತಾಂ ಪುರಷೈರ್ಮ್ಮದೀಯೈರ್ಮ್ಮದ್ಧ್ಯಸ್ಥವದ್ ಬಹುಗುಣಾ ಉದಿತಾಶ್ಚ ತತ್ರ ।

ತೇಷಾಂ ಪುರೋsತ್ರ ಗಮನಾಭಿರುಚಿಶ್ಚ ಜಾತಾ ದ್ರಷ್ಟುಂ ಪುರಂ ಬಹುಗುಣಂ ನನು ಪಾಣ್ಡವಾನಾಮ್ ॥೧೯.೨೪॥

 

ನನ್ನ ಕಡೆಯವರು ಎಂಬ ಸಂಗತಿಯನ್ನು ಮರೆಮಾಚಿದ ನನ್ನ ಕೆಲವು ಪುರುಷರಿಂದ, ದೂರದ ದೇಶದಿಂದ ಬಂದವರಂತೆ ನಟನೆ ಮಾಡಿಸಿ, ಅವರ ಮೂಲಕ ಆ ದೇಶದ ಗುಣಗಳು ಪಾಂಡವರಿಗೆ ಹೇಳಲ್ಪಟ್ಟಿವೆ. ಅಂತಹ ಬಂದವರ ಎದುರು ಇವರು ನಾವು ತೆರಳಬೇಕು ಎನ್ನುವ ಅಭಿರುಚಿಯನ್ನೂ ವ್ಯಕ್ತಪಡಿಸಿದ್ದಾರೆ’ ಎನ್ನುತ್ತಾನೆ ದುರ್ಯೋಧನ.   

 

ಇತ್ಯುಕ್ತವತ್ಯಥ ಸುತೇ ಸ ತಥೇತ್ಯುವಾಚ ಪ್ರಾಪ್ತೇಷು ಪಾಣ್ಡುತನಯೇಷು ತಥೈವ ಚೋಚೇ ।

ಜ್ಞಾತ್ವೈವ ತೇsಪಿ ನೃಪತೇರ್ಹೃದಯಂ ಸಮಸ್ತಂ ಜಗ್ಮುಃ ಪಿತೇತಿ ಪೃಥಯಾ ಸಹ ನೀತಿಹೇತೋಃ ॥೧೯.೨೫॥

 

ಮಗನು ಹೀಗೆ ಹೇಳುತ್ತಿರಲು, ಧೃತರಾಷ್ಟ್ರನು ‘ಹಾಗೇ ಆಗಲಿ’ ಎಂದು ಒಪ್ಪಿಗೆಕೊಟ್ಟನು ಮತ್ತು  ಪಾಂಡವರು ಬರಲು, ಅವರಿಗೆ ಹಾಗೇ ಹೇಳಿದನು ಕೂಡಾ. ಪಾಂಡವರು ಕೂಡಾ, ಧೃತರಾಷ್ಟ್ರನ ಮನೋಭಾವವನ್ನು ತಿಳಿದು,  ಪಿತೃವಾಕ್ಯ ಪಾಲನೆ ಒಂದು ನೀತಿ ಎನ್ನುವ ಕಾರಣಕ್ಕಾಗಿ, ಕುಂತಿಯ ಜೊತೆಗೂಡಿ ವಾರಣಾವತಕ್ಕೆ  ತೆರಳಿದರು.

[ದೊಡ್ಡಪ್ಪನ ಮಾತನ್ನು ಉಲ್ಲಂಘಿಸಿದರೆ ಮುಂದೆ ಅಪಕೀರ್ತಿ ಬರುತ್ತದೆ ಮತ್ತು ಜನರೂ ಅದನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುತ್ತಾರೆ. ಅದು ಆಗಬಾರದು ಎಂದು ಪಾಂಡವರು ವಾರಣಾವತಕ್ಕೆ ತೆರಳಿದರು]. 

 

ಭೀಮಸ್ತದಾ ಹ ಭವಿತಾsತ್ರ ಹಿ ಭೈಕ್ಷಚಾರ ಇತ್ಯೇವ ಸಮ್ಯಗನುವಿದ್ಯ ನಿಜಂ ನ ಕರ್ಮ್ಮ ।

ತ್ಯಾಜ್ಯಂ ತ್ವಿತಿ ಪ್ರತಿಜಗಾದ ನಿಜಾಗ್ರಜಾಯ ಯಾಮೋ ವಯಂ ನತು ಗೃಹಾತ್ ಸ ಹಿ ನ ಸ್ವಧರ್ಮ್ಮಃ ॥೧೯.೨೬॥

 

ಆಗ ಭೀಮಸೇನನು ‘ನಾವು ವಾರಣಾವತಕ್ಕೆ ಹೋದರೆ ಮುಂದೆಲ್ಲೋ ಒಂದೆಡೆ ಭಿಕ್ಷೆ ಬೇಡುವುದು ನಮ್ಮ ವೃತ್ತಿಯಾಗುತ್ತದೆ’ ಎಂದು ಚನ್ನಾಗಿ ತಿಳಿದು, ರಾಜ್ಯವಾಳುವ ಕ್ಷತ್ರಿಯರಾಗಿರುವ ತಮ್ಮ ಕರ್ಮ ತ್ಯಜಿಸತಕ್ಕದ್ದಲ್ಲ ಎಂದು, ತನ್ನ ಅಣ್ಣನಾದ ಧರ್ಮರಾಜನಲ್ಲಿ ‘ನಾವು ನಮ್ಮ ಈ ಮನೆಯಿಂದ ತೆರಳುವುದಿಲ್ಲ. ಪಾಲನೆ ಎನ್ನುವುದು ನಮ್ಮ ಧರ್ಮ ಹೊರತು ಭಿಕ್ಷಾಟನೆ ಅಲ್ಲ’ ಎನ್ನುತ್ತಾನೆ.

 

ನಿಷ್ಕಾಳಯನ್ತಿ ಯದಿ ನೋ ನಿಜಧರ್ಮ್ಮಸಂಸ್ಥಾನ್  ಯೋತ್ಸ್ಯಾಮಹೇsತ್ರ ನಹಿ ದಸ್ಯುವಧೋsಪ್ಯಧರ್ಮ್ಮಃ ।

ಇತ್ಯೂಚಿವಾಂಸಮಮುಮಾಹ ಚ ಧರ್ಮ್ಮಸೂನುಃ ಕೀರ್ತ್ತಿರ್ವಿನಶ್ಯತಿ ಹಿ ನೋ ಗುರುಭಿರ್ವಿರೋಧೇ ॥೧೯.೨೭॥

 

‘ಒಂದುವೇಳೆ ಕ್ಷತ್ರಿಯ ಧರ್ಮದಲ್ಲಿರುವ ನಮ್ಮನ್ನು ದಬ್ಬುತ್ತಾರೆ ಎಂದಾದರೆ, ಈ ವಿಚಾರದಲ್ಲಿ ಯುದ್ಧವನ್ನಾದರೂ ಮಾಡೋಣ. ಕಳ್ಳರ ವಧೆ ಅಧರ್ಮವಲ್ಲ’. ಎಂದು ಭೀಮಸೇನ ಹೇಳಿದಾಗ, ಹಿರಿಯನಾದ   ಯುಧಿಷ್ಠಿರ ಹೇಳುತ್ತಾನೆ: ‘ಗುರು-ಹಿರಿಯರನ್ನು ವಿರೋಧಿಸುವುದರಿಂದ ನಮ್ಮ ಸತ್ಕೀರ್ತಿಯು ನಾಶವಾಗುತ್ತದೆ. ಅದರಿಂದಾಗಿ ನಾವು ಅಲ್ಲಿಗೆ ಹೋಗಬೇಕಾದ ಅನಿವಾರ್ಯತೆ ಇದೆ’ ಎಂದು.

[ರಾಜರನ್ನು ಹೊರಗಡೆ ಕಳುಹಿಸಿ, ಅವರನ್ನು ರಾಜ್ಯಾಧಿಕಾರದಿಂದ ತಪ್ಪಿಸುವುದು ಬಹಳ ಹಳೇ ತಂತ್ರ. ಭರತನನ್ನು ‘ನಿನ್ನ ಸೋದರಮಾವನ ಮನೆಯಲ್ಲಿ ವಿದ್ಯೆ ಕಲಿ ಎಂದು ದಶರಥ ಹೊರಗಡೆ ಕಳುಹಿಸಿದ್ದ. ಇನ್ನು ಆಧುನಿಕ ಭಾರತದ ಚರಿತ್ರೆಗೆ ಬಂದರೆ ದಾರಾಶಿಕೋಹ, ಮುರಾದ್, ಇವರನ್ನೆಲ್ಲಾ ಔರಂಗಜೇಬು ಹೊರಗೆ ಕಳುಹಿರುತ್ತಾನೆ. ಅವರು ಹಿಂತಿರುಗೆ ಬರುವಷ್ಟರಲ್ಲಿ ಇವನು ಪಟ್ಟಭದ್ರನಾಗುತ್ತಾನೆ ಮತ್ತು ನಂತರ ಅವರನ್ನೆಲ್ಲಾ ಕೊಲ್ಲಿಸುತ್ತಾನೆ ಕೂಡಾ. ಹೀಗೆ ಇದು ಅತ್ಯಂತ ಪ್ರಾಚೀನ ಹಾಗೂ ಇಂದಿಗೂ ಬಳಸಲಾಗುವ ಕುತಂತ್ರ].    

No comments:

Post a Comment