ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, September 27, 2020

Mahabharata Tatparya Nirnaya Kannada 1996_19100

 

ಉತ್ಪತ್ತಿಪೂರ್ವಕಕಥಾಂ ದ್ರುಪದಾತ್ಮಜಾಯಾ ವ್ಯಾಸೋ ಹ್ಯನೂಚ್ಯ ಜಗತಾಂ ಗುರುರೀಶ್ವರೇಶಃ ।

ಯಾತೇತ್ಯಚೋದಯದಥಾಪ್ಯಪರೇ ದ್ವಿಜಾಗ್ರ್ಯಾಸ್ತಾನ್ ಬ್ರಾಹ್ಮಣಾ ಇತಿ ಭುಜಿರ್ಭವತೀತಿ ಚೋಚುಃ ॥೧೯.೯೬॥

 

ಜಗತ್ತಿಗೇ ಜ್ಞಾನೋಪದೇಶಕರಾದ, ಒಡೆಯರಿಗೇ ಒಡೆಯರಾದ ವೇದವ್ಯಾಸರು, ಪಾಂಡವರಿಗೆ ದ್ರೌಪದಿಯ ಹುಟ್ಟು ಮೊದಲಾದ ಎಲ್ಲಾ ಕಥೆಗಳನ್ನೂ ಕೂಡಾ ವಿವರಿಸಿ ಹೇಳಿ, ಹೊರಡಿ(ದ್ರುಪದರಾಜನಲ್ಲಿಗೆ ಹೋಗಿ)  ಎಂದು ಪ್ರಚೋದಿಸಿದರು. ತದನಂತರ, ಬೇರೆ ಬ್ರಾಹ್ಮಣರು  ಇವರನ್ನು ಬ್ರಾಹ್ಮಣರೆಂದೇ ತಿಳಿದು, ‘ಅಲ್ಲಿ ಉತ್ತಮವಾದ ಭೋಜನವಾಗುತ್ತದೆ’ ಎಂದು ಹೇಳಿದರು.   

 

ಪೂರ್ವಂ ಹಿ ಪಾರ್ಷತ ಇಮಾನ್ ಜತುಗೇಹದಗ್ಧಾನ್ ಶ್ರುತ್ವಾsತಿದುಃಖಿತಮನಾಃ ಪುನರೇವ ಮನ್ತ್ರಃ ।

ಯಾಜೋಪಯಾಜಮುಖನಿಸ್ಸೃತ ಏವಮೇಷ ನಾಸತ್ಯತಾರ್ಹ ಇತಿ ಜೀವನಮೇಷು ಮೇನೇ ॥೧೯.೯೭॥

 

ಇತ್ತ ‘ಪಾಂಡವರು ಅರಗಿನ ಮನೆಯಲ್ಲಿ ಸುಟ್ಟುಹೋದರು’ ಎಂಬ ವಿಷಯವನ್ನು ಕೇಳಿದ ದ್ರುಪದನು ಮೊದಲು ಅತ್ಯಂತ ಖತಿಗೊಂಡ ಬಗೆಯುಳ್ಳವನಾದನು. ಆದರೆ ತದನಂತರ ಯಾಜೋಪಯಾಜರ ಮುಖದಿಂದ ಬಂದ ಮಂತ್ರವು ಸುಳ್ಳಾಗುವುದಕ್ಕೆ ಸಾಧ್ಯವಿಲ್ಲಾ^ ಎಂದರಿತು, ಅವರಲ್ಲಿ ಜೀವನವನ್ನು ತಿಳಿದನು(ಪಾಂಡವರು ಜೀವಂತವಾಗಿದ್ದಾರೆ ಎಂದು ತಿಳಿದನು).

[^ಅರ್ಜುನನನ್ನು ತನ್ನ ಅಳಿಯನನ್ನಾಗಿ ಮಾಡಿಕೊಳ್ಳುವ ಸಲುವಾಗಿಯೇ, ಯಾಜ ಮತ್ತು ಉಪಯಾಜರ ಮುಖೇನ ಯಜ್ಞವನ್ನು ಮಾಡಿಸಿ, ಮಗಳನ್ನು ಪಡೆದಿದ್ದ ದ್ರುಪದ, ಸ್ವಾಭಾವಿಕವಾಗಿ ಪಾಂಡವರು ಸತ್ತಿಲ್ಲಾ ಎನ್ನುವ ಸತ್ಯವನ್ನರಿತನು].

 

ಯತ್ರಕ್ವಚಿತ್ ಪ್ರತಿವಸನ್ತಿ ನಿಲೀನರೂಪಾಃ ಪಾರ್ತ್ಥಾ ಇತಿ ಸ್ಮ ಸ ತು ಫಲ್ಗುನಕಾರಣೇನ ।

ಚಕ್ರೇ ಸ್ವಯಮ್ಬರವಿಘೋಷಣಮಾಶು ರಾಜಸ್ವನ್ಯೈರಧಾರ್ಯ್ಯಧನುರೀಶವರಾಚ್ಚ ಚಕ್ರೇ ॥೧೯.೯೮॥

 

‘ಎಲ್ಲೋ ಒಂದೆಡೆ ತಮ್ಮ ರೂಪವನ್ನು ಮರೆಮಾಚಿಕೊಂಡು ಪಾಂಡವರು ವಾಸಮಾಡುತ್ತಿದ್ದಾರೆ’ ಎಂದು ತಿಳಿದ ದ್ರುಪದನು, ಅರ್ಜುನನನ್ನು ಮನಸ್ಸಿನಲ್ಲಿಟ್ಟುಕೊಂಡು ದ್ರೌಪದಿಯ ಸ್ವಯಮ್ಬರದ ಘೋಷಣೆಯನ್ನು ಮಾಡಿದನು. ಅರ್ಜುನನಲ್ಲದೇ ಬೇರೆ ಯಾರಿಗೂ ಧರಿಸಲಾಗದ ಧನುಸ್ಸನ್ನು ರುದ್ರದೇವರ ವರದಿಂದ ಸ್ವಯಮ್ಬರಕ್ಕಾಗಿ  ದ್ರುಪದ ಸಿದ್ಧಪಡಿಸಿದನು.  

[ಮಹಾಭಾರತದ ಆದಿಪರ್ವದಲ್ಲಿ ಈ ಧನುಸ್ಸಿನ ಕುರಿತಾದ ವಿವರಣೆ ಕಾಣಸಿಗುತ್ತದೆ: ಸೊsನ್ವೇಷಮಾಣಃ  ಕೌನ್ತೇಯಾನ್  ಪಾಞ್ಚಾಲೋ ಜನಮೇಜಯ । ದೃಢಂ ಧನುರಥಾನಮ್ಯಂ ಕಾರಯಾಮಾಸ ಭಾರತ’ (೨೦೦.೧೨). ‘ತದ್ಧನುಃ ಕಿಂಧುರಂ ನಾಮ ದೇವದತ್ತಮುಪಾನಯತ್ ।  ಜ್ಯಾಯಸಿ ತಸ್ಯ ಚ ಜ್ಯಾssಸೀತ್ ಪ್ರತಿಬದ್ಧಾ ಮಹಾಬಲಾ । ನತು ಜ್ಯಾಂ ಪ್ರಸಹೇದನ್ಯಸ್ತದ್ಧನುಃಪ್ರವರಂ ಮಹತ್      ಶಙ್ಕರೇಣ ವರಂ ದತ್ತಂ ಪ್ರೀತೇನ ಚ ಮಹಾತ್ಮನಾ । ತನ್ನಿಷ್ಫಲಂ ಸ್ಯಾನ್ನತು ಮೇ ಇತಿ  ಪ್ರಾಮಾಣ್ಯಮಾಗತಃ’ (೨೦೦.೧೩-೧೫)

ಕಿಂಧುರ ಎನ್ನುವ ಆ ಧನುಸ್ಸು ಅರ್ಜುನನನ್ನು ಹೊರತುಪಡಿಸಿ ಬೇರೆ ಯಾರಿಂದಲೂ ಕೂಡಾ ಎತ್ತಲಾಗುವುದಿಲ್ಲ ಎಂದು ರುದ್ರದೇವರ ವರವಿತ್ತು. ಹೀಗಾಗಿ, ರುದ್ರದೇವರ ವರ ಸುಳ್ಳಾಗುವುದಿಲ್ಲ, ಯಾಜೋಪಯಾಜರ ಮಂತ್ರವೂ ಸುಳ್ಳಾಗುವುದಿಲ್ಲ ಎಂದು ದ್ರುಪದನಿಗೆ ದೃಢವಾದ ವಿಶ್ವಾಸವಿತ್ತು].

 

[ಅರಗಿನಮನೆ  ಬೆಂಕಿಗೆ ಆಹುತಿಯಾದ ಸಂದರ್ಭದಲ್ಲಿ ಶ್ರೀಕೃಷ್ಣ ಏನು ಮಾಡುತ್ತಿದ್ದ ಎನ್ನುವುದನ್ನು ವಿವರಿಸುತ್ತಾರೆ:]

 

ತತ್ಕಾಲ ಏವ ವಸುದೇವಸುತೋsಪಿ ಕೃಷ್ಣಃ ಸಮ್ಪೂರ್ಣ್ಣನೈಜಪರಿಬೋಧತ ಏವ ಸರ್ವಮ್ ।

ಜಾನನ್ನಪಿ ಸ್ಮ ಹಲಿನಾ ಸಹಿತೋ ಜಗಾಮ ಪಾರ್ತ್ಥಾನ್ ನಿಶಮ್ಯ ಚ ಮೃತಾನಥ ಕುಲ್ಯಹೇತೋಃ ॥೧೯.೯೯॥

 

ಅದೇ ಕಾಲದಲ್ಲಿಯೇ ವಸುದೇವನ ಮಗನಾದ ಶ್ರೀಕೃಷ್ಣನು ತನ್ನ ಸ್ವರೂಪಭೂತವಾದ, ಉತ್ಕೃಷ್ಟವಾದ ತಿಳುವಳಿಕೆಯಿಂದ ಎಲ್ಲವನ್ನೂ ತಿಳಿದವನಾದರೂ ಕೂಡಾ, ಬಲರಾಮನಿಂದ ಕೂಡಿಕೊಂಡು ಪಾಂಡವರು ಸತ್ತುಹೋಗಿದ್ದಾರೆ ಎನ್ನುವ ಕಾರಣವನ್ನಿತ್ತು, ಧರ್ಮೋದಕವನ್ನು ಬಿಡಲು ತೆರಳಿದ.

[ಎಲ್ಲವನ್ನೂ ತಿಳಿದೂ ಶ್ರೀಕೃಷ್ಣ ಈರೀತಿ ಬಂದ ಎನ್ನುವುದನ್ನು ಭಾಗವತದಲ್ಲಿ(೧೦.೬೧.೧) ವಿವರಿಸಿದ್ದಾರೆ: ‘ವಿಜ್ಞಾತಾರ್ಥೋsಪಿ ಗೋವಿಂದೋ ದಗ್ಧಾನಾಕರ್ಣ್ಯ ಪಾಣ್ಡವಾನ್ । ಕುಂತೀಂ ಚ ಕುಲ್ಯಕರಣೇ ಸಹರಾಮೋ ಯಯೌ ಕುರೂನ್’ - ಪಾಂಡವರು ಬದುಕಿದ್ದಾರೆ ಎಂದು ಬಲ್ಲವನಾದರೂ ಕೂಡಾ ಶ್ರೀಕೃಷ್ಣ ಅಲ್ಲಿಗೆ ತೆರಳಿದ].  

ಸ ಪ್ರಾಪ್ಯ ಹಸ್ತಿನಪುರಂ ಧೃತರಾಷ್ಟ್ರಪುತ್ರಾನ್ ಸಂವಞ್ಚಯಂಸ್ತದನುಸಾರಿಕಥಾಶ್ಚ ಕೃತ್ವಾ ।

ಭೀಷ್ಮಾದಿಭಿಃ ಪರಿಗತಾಪ್ರಿಯವಜ್ಜಗಾಮ ದ್ವಾರಾವತೀಮುದಿತಪೂರ್ಣ್ಣಸುನಿತ್ಯಸೌಖ್ಯಃ ॥೧೯.೧೦೦॥

 

ನಿತ್ಯದಲ್ಲಿಯೂ ಪೂರ್ಣವಾದ ಸೌಕ್ಯವುಳ್ಳ ಶ್ರೀಕೃಷ್ಣನು ಹಸ್ತಿನಪುರಕ್ಕೆ ಬಂದು, ದುರ್ಯೋಧನ ಮೊದಲಾದವರನ್ನು ಮೋಸಗೊಳಿಸುವವನಾಗಿ, ಅದಕ್ಕೆ ಅನುಕೂಲವಾದ ಮಾತುಗಳನ್ನಾಡಿದನು. ಭೀಷ್ಮ ಮೊದಲಾದವರಿಂದ ಸುತ್ತುವರಿಯಲ್ಪಟ್ಟವನಾದ ಶ್ರೀಕೃಷ್ಣ ಬಹಳ ಖತಿಗೊಂಡವನಂತೆ ತೋರಿ  ದ್ವಾರಾವತೀ ಪಟ್ಟಣಕ್ಕೆ ಮರಳಿದನು. 

No comments:

Post a Comment