ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, September 27, 2020

Mahabharata Tatparya Nirnaya Kannada 19101_19106

 

[ಶ್ರೀಕೃಷ್ಣ ಹಸ್ತಿನಪುರಕ್ಕೆ ಬಂದ ಸಮಯದಲ್ಲಿ ದ್ವಾರಕಾಪಟ್ಟಣದಲ್ಲಿ ಪಿತೂರಿಯೊಂದು ನಡೆಯಿತು:]

 

ತಸ್ಯಾನ್ತರೇ ಹೃದಿಕಸೂನುರನನ್ತರಂ ಸ್ವಂ ಶ್ವಾಫಲ್ಕಿಬುದ್ಧಿಬಲಮಾಶ್ರಿತ ಇತ್ಯುವಾಚ ।

ಸತ್ರಾಜಿದೇಷ ಹಿ ಪುರಾ ಪ್ರತಿಜಜ್ಞ ಏನಾಮಸ್ಮತ್ಕೃತೇ ಸ್ವತನಯಾಂ ಮಣಿನಾ ಸಹೈವ ॥೧೯.೧೦೧॥

 

ಸರ್ವಾಂಶ್ಚ ನಃ ಪುನರಸಾವವಮತ್ಯ ಕೃಷ್ಣಾಯಾದಾತ್ ಸುತಾಂ ಜಹಿ ಚ ತಂ ನಿಶಿ ಪಾಪಬುದ್ಧಿಮ್ ।

ಆದಾಯ ರತ್ನಮುಪಯಾಹಿ ಚ ನೌ ವಿರೋಧೇ ಕೃಷ್ಣಸ್ಯ ದಾನಪತಿನಾ ಸಹ ಸಾಹ್ಯಮೇಮಿ ॥೧೯.೧೦೨॥

 

ಈನಡುವೆ ಹೃದಿಕಸೂನುವಾದ ಕೃತವರ್ಮನು ಶ್ವಾಫಲ್ಕನ ಮಗನಾದ  ಅಕ್ರೂರನ ಮಾತನ್ನು ಕೇಳಿಕೊಂಡು, ತನ್ನ ತಮ್ಮನನ್ನು(ಶತಧನ್ವನನ್ನು) ಕುರಿತು ಹೀಗೆ ಹೇಳಿದನು: ‘ಈ ಸತ್ರಾಜಿತನು ಮೊದಲು  ಸತ್ಯಭಾಮೆಯನ್ನು ಮಣಿಯ ಜೊತೆಗೆ ನಮಗಾಗಿ ಕೊಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ.

ಆದರೆ ಆತ ನಮ್ಮೆಲ್ಲರನ್ನೂ ಅವಮಾನಮಾಡಿ(ಕಡೆಗಣಿಸಿ), ಕೃಷ್ಣನಿಗೆ ತನ್ನ ಮಗಳನ್ನು ಕೊಟ್ಟ. ಅದರಿಂದಾಗಿ ಆ ಪಾಪಿಷ್ಠಬುದ್ಧಿಯುಳ್ಳ ಅವನನ್ನು ನೀನು ರಾತ್ರಿಯಲ್ಲಿ ಕೊಂದು, ಮಣಿಯನ್ನು  ತೆಗೆದುಕೊಂಡು ನಮ್ಮ ಬಳಿ ಬಾ. ಒಂದುವೇಳೆ ಇದಕ್ಕೆ ಕೃಷ್ಣನ ವಿರೋಧವಾದರೆ, ದಾನಪತಿ ಅಕ್ರೂರನ ಜೊತೆಗಿದ್ದು, ನಾನು ನಿನ್ನ ಸಹಾಯಕ್ಕೆ ಇರುತ್ತೇನೆ’.

 

ಇತ್ಯುಕ್ತ ಆಶು ಕುಮತಿಃ ಸ ಹಿ ಪೂರ್ವದೇಹೇ ದೈತ್ಯೋ ಯತಸ್ತದಕರೋದಥ ಸತ್ಯಭಾಮಾ ।

ಆನನ್ದಸಂವಿದಪಿ ಲೋಕವಿಡಮ್ಬನಾಯ ತದ್ದೇಹಮಸ್ಯ ತಿಲಜೇ ಪತಿಮಭ್ಯುಪಾಗಾತ್ ॥೧೯.೧೦೩॥

 

ಈರೀತಿಯಾಗಿ ಹೇಳಲ್ಪಟ್ಟವನಾದ, ಪೂರ್ವದೇಹದಲ್ಲಿ ದೈತ್ಯನಾಗಿದ್ದ  ಆ ಕುಮತಿಯು(ಶತಧನ್ವನು), ಹಾಗೇ ಮಾಡಿದ ಕೂಡಾ(ಸತ್ರಾಜಿತನ ಕೊಲೆ ಮಾಡಿಬಿಟ್ಟ). ಸತ್ಯಭಾಮೆಯು ಜ್ಞಾನಾನಂದವುಳ್ಳವಳಾದರೂ, ಲೋಕವನ್ನು ಅನುಸರಿಸಲೋಸುಗ, ತನ್ನ ತಂದೆಯ ಶವವನ್ನು ಎಣ್ಣೆಯ ಕೊಪ್ಪರಿಗೆಯಲ್ಲಿಟ್ಟು, ಗಂಡನನ್ನು ಕುರಿತು ತೆರಳಿದಳು.   

 

ಶ್ರುತ್ವಾ ತದೀಯವಚನಂ ಭಗವಾನ್ ಪುರೀಂ ಸ್ವಾಮಾಯಾತ ಏವ ತು ನಿಶಮ್ಯ ಮಹೋತ್ಸವಂ ತಮ್ ।

ಪಾಞ್ಚಾಲರಾಜಪುರುಷೋದಿತಮಾಶು ವೃಷ್ಣಿವರ್ಯ್ಯೈರಗಾನ್ಮುಸಲಿನಾ ಸಹ ತತ್ಪುರೀಂ ಚ ॥೧೯.೧೦೪॥

 

ಅವಳ ಮಾತನ್ನು ಕೇಳಿ, ಶ್ರೀಕೃಷ್ಣನು ತನ್ನ ಪಟ್ಟಣದತ್ತ ಬರುತ್ತಿರಲು,  ಆ ಹೊತ್ತಿಗೇ, ಪಾಂಚಾಲ ರಾಜ್ಯದ ದೂತರು ಬಂದು, ದ್ರೌಪದಿಯ ಮಹೋತ್ಸವದ(ಸ್ವಯಮ್ಬರದ) ಕುರಿತು ಹೇಳಿದರು. ಅದನ್ನು ಕೇಳಿ, ಯಾದವರಿಂದ ಹಾಗೂ  ಬಲರಾಮನಿಂದಲೂ ಕೂಡಿಕೊಂಡ ಶ್ರೀಕೃಷ್ಣ, ಪಾಂಚಾಲರಾಜನ ಪಟ್ಟಣವನ್ನು ಕುರಿತು ತೆರಳಿದನು.  

 

ಭೀಮೋsಪಿ ರುದ್ರವರರಕ್ಷಿತರಾಕ್ಷಸಂ ತಂ ಹತ್ವಾ ತೃಣೋಪಮತಯಾ ಹರಿಭಕ್ತವನ್ದ್ಯಃ ।

ಉಷ್ಯಾಥ ತತ್ರ ಕತಿಚಿದ್ದಿನಮಚ್ಯುತಸ್ಯ ವ್ಯಾಸಾತ್ಮನೋ ವಚನತಃ ಪ್ರಯಯೌ ನಿಜೈಶ್ಚ ॥೧೯.೧೦೫॥

 

ಇತ್ತ ರುದ್ರನ ವರದಿಂದ ರಕ್ಷಿತನಾಗಿದ್ದ ರಾಕ್ಷಸನನ್ನು ಹುಲ್ಲೋ ಎಂಬಂತೆ ಕೊಂದು, ಪರಮಾತ್ಮನ ಭಕ್ತರಿಂದ ವಂದ್ಯನಾಗಿ, ಕೆಲವು ದಿನಗಳ ಕಾಲ ಅಲ್ಲೇ  ವಾಸಮಾಡಿದ ಭೀಮಸೇನ, ತದನಂತರ ವೇದವ್ಯಾಸರೂಪಿ ನಾರಾಯಣನ ಮಾತಿನಂತೇ, ತನ್ನವರಿಂದ ಕೂಡಿಕೊಂಡು ಪಾಂಚಾಲ ಪಟ್ಟಣಕ್ಕೆ ತೆರಳಿದ.

 

ಮಙ್ಗಲ್ಯಮೇತದತುಲಂ ಪ್ರತಿ ಯಾತ ಶೀಘ್ರಂ ಪಾಞ್ಚಾಲಕಾನ್  ಪರಮಭೋಜನಮತ್ರ ಸಿದ್ಧ್ಯೇತ್ ।

ವಿಪ್ರೈರಿತಸ್ತತ ಇತೀರಿತವಾಕ್ಯಮೇತೇ ಶೃಣ್ವನ್ತ ಏವ ಪರಿ ಚಕ್ರಮುರುತ್ತರಾಶಾಮ್ ॥೧೯.೧೦೬॥

 

‘ಈ ಮಹೋತ್ಸವ ಅತ್ಯಂತ ಮಂಗಳಕರವಾದ ಮಹೋತ್ಸವ. ಅದರಿಂದಾಗಿ ಶೀಘ್ರವಾಗಿ ಪಾಂಚಾಲ ದೇಶವನ್ನು ಕುರಿತು ತೆರಳಿರಿ, ಅಲ್ಲಿ ಒಳ್ಳೆಯ ಊಟ ಸಿಗುವುದು’ ಎಂದು ಅಲ್ಲಲ್ಲಿ ಬ್ರಾಹ್ಮಣರಿಂದ ಹೇಳಲ್ಪಟ್ಟ ಮಾತನ್ನು ಕೇಳುವವರಾದ ಅವರು, ಉತ್ತರದಿಕ್ಕಿಗೆ ತೆರಳಿದರು.

No comments:

Post a Comment