ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, September 21, 2020

Mahabharata Tatparya Nirnaya Kannada 1963_1971

 

[ಭೀಮ-ಹಿಡಿಮ್ಬೀ ಪುತ್ರ ಯಾರೆಂದು ವಿವರಿಸುತ್ತಾರೆ]

 

ದೇವೋsಪಿ ರಾಕ್ಷಸತನುರ್ನ್ನಿರೃತಿಃ ಪುರಾ ಯ ಆವೇಶಯುಕ್ ಚ ಗಿರಿಶಸ್ಯ ಘಟೋತ್ಕಚಾಖ್ಯಃ ।

ಪೂರ್ವಂ ಘಟೋಪಮಮಮುಷ್ಯ ಶಿರೋ ಬಭೂವ ಕೇಶಾ ನಿಮೇಷತ ಉದಾಸುರತೋ ಹಿ ನಾಮ ॥೧೯.೬೩॥

 

ಸ್ವಭಾವದಿಂದ ದೇವತೆಯಾದರೂ, ರಾಕ್ಷಸ ಶರೀರವನ್ನು ಹೊಂದಿರುವ ನಿರೃತಿಯು ರುದ್ರನ ಆವೇಶದಿಂದ ಕೂಡಿ, ಘಟೋತ್ಕಚ ಎನ್ನುವ ಹೆಸರಿನವನಾದನು. ಹುಟ್ಟಿದಾಗ ಅವನ ತಲೆಯು ಕೂದಲಿಲ್ಲದೆ ಮಡಿಕೆಯಂತಿತ್ತು. ಆದರೆ ನಿಮಿಷದಲ್ಲೇ ಅವನಿಗೆ ಕೂದಲು ಬೆಳೆಯಿತು. ಆ ಕಾರಣದಿಂದ ಅವನಿಗೆ ಘಟೋತ್ಕಚ ಎಂಬ ಹೆಸರು ಬಂತು.

 

ಜಾತೇ ಸುತೇ ಸಮಯತೋ ಭಗವತ್ಕೃತಾತ್ ಸ ಭೀಮೋ ಜಗಾದ ಸಸುತಾಂ ಗಮನಾಯ ತಾಂ ಚ ।

ಸ್ಮೃತ್ಯಾsಭಿಯಾನ ಉಭಯೋರಪಿ ಸಾ ಪ್ರತಿಜ್ಞಾಂ ತೇಷಾಂ ವಿಧಾಯ ಚ ಯಯೌ ಸುರಲೋಕಮೇವ ॥೧೯.೬೪॥

 

ಹೀಗೆ ಮಗನು ಹುಟ್ಟಲು, ವೇದವ್ಯಾಸರು ಹೇಳಿದ ಸಮಯದಂತೆ ಭೀಮಸೇನನು ಮಗನಿಂದ ಕೂಡಿರುವ ಹಿಡಿಮ್ಬೀಯನ್ನು  ಹೊರಡುವಂತೆ ಹೇಳಿದ. ‘ನೆನಪಿಸಿಕೊಂಡ ಮಾತ್ರದಿಂದಲೇ ನಾವಿಬ್ಬರೂ ಬರುತ್ತೇವೆ’ ಎಂದು ಅವರೆಲ್ಲರ ಮುಂದೆ ಪ್ರತಿಜ್ಞೆಮಾಡಿದ ಅವಳು ಸುರಲೋಕಕ್ಕೆ ತೆರಳಿದಳು.

 

ವ್ಯಾಸೋsಪಿ ಪಾಣ್ಡುತನಯೈಃ  ಸಹಿತೋ ಬಕಸ್ಯ ರೌದ್ರಾದ್ ವರಾಜ್ಜಯವಧಾಪಗತಸ್ಯ ನಿತ್ಯಮ್ ।

ಯಾತೋ ವಧಾಯ ಪರಮಾಗಣಿತೋರುಧಾಮಾ ಪೂರ್ಣ್ಣಾಕ್ಷಯೋರುಸುಖ ಆಶು ತದೈಕಚಕ್ರಾಮ್ ॥೧೯.೬೫॥

 

ಅಗಣಿತವಾದ ಗುಣಗಳೆಂಬ ಕಾಂತಿಯುಳ್ಳ, ಪೂರ್ಣವಾಗಿರುವ, ಎಂದೂ ನಾಶವಾಗದ ಸುಖವುಳ್ಳ ವೇದವ್ಯಾಸರು, ಪಾಂಡುತನಯರಿಂದ ಕೂಡಿಕೊಂಡು,  ರುದ್ರದೇವರ ವರದಿಂದಾಗಿ ನಿರಂತರ ಪರಾಜಯವೂ ಇಲ್ಲದೇ, ಸಾವೂ ಇಲ್ಲದೇ ಇರುವ ಬಕಾಸುರನನ್ನು ಸಂಹರಿಸುವುದಕ್ಕಾಗಿ ಶೀಘ್ರದಲ್ಲೇ ಏಕಚಕ್ರನಗರಿಗೆ ತೆರಳಿದರು.   

 

ತಾನ್ ಬ್ರಾಹ್ಮಣಸ್ಯ ಚ ಗೃಹೇ ಪ್ರಣಿಧಾಯ ಕೃಷ್ಣಃ ಶಿಷ್ಯಾ ಮಮೈತ ಇತಿ ವಿಪ್ರಕುಮಾರರೂಪಾನ್ ।

ಆಯಾಮಿ ಕಾಲ ಇತಿ ತಾನನುಶಾಸ್ಯ ಚಾಯಾತ್ ತೇ ತತ್ರ ವಾಸಮಥ ಚಕ್ರುರನೂಚ್ಯ ವೇದಾನ್ ॥೧೯.೬೬॥

 

ಬ್ರಾಹ್ಮಣಕುಮಾರರ ವೇಷವನ್ನು ಧರಿಸಿರುವ ಅವರನ್ನು ಏಕಚಕ್ರನಗರದಲ್ಲಿನ ಬ್ರಾಹ್ಮಣನೊಬ್ಬನ ಮನೆಯಲ್ಲಿ ‘ಇವರು ನನ್ನ ಶಿಷ್ಯರು’ ಎಂದು ಹೇಳಿ, ‘ನಾನು ಕಾಲಾಂತರದಲ್ಲಿ ಬರುತ್ತೇನೆ’  ಎಂದು ಪಾಂಡವರನ್ನು ಕುರಿತು ಹೇಳಿದ ವೇದವ್ಯಾಸರು ಅಲ್ಲಿಂದ ತೆರಳಿದರು. ವೇದವ್ಯಾಸರು ತೆರಳಿದಮೇಲೆ ಅವರೆಲ್ಲರೂ ವೇದದ ಬಗೆಗೆ ಚಿಂತನೆ ಮಾಡುತ್ತಾ ಅಲ್ಲಿ ವಾಸಮಾಡಿದರು.

 

 

ಭಿಕ್ಷಾಮಟತ್ಸು ಸತತಂ ಪ್ರತಿಹುಙ್ಕೃತೇನ ಭೀಮೇ ವಿಶಾಂ ಸದನ ಏವ ಗೃಹಪ್ರಮಾಣಮ್ ।

ಭಾಣ್ಡಂ  ಕುಲಾಲವಿಹಿತಂ ಪ್ರತಿಗೃಹ್ಯ ಗಚ್ಛತ್ಯಾಶಙ್ಕಯಾsವಗಮನಸ್ಯ ತಮಾಹ ಧಾರ್ಮ್ಮಃ ॥೧೯.೬೭॥

 

ಸ್ಥೂಲಂ ಹಿ ಸದ್ಮ ಪೃಥಿವೀಸಹಿತಂ  ತ್ವರಕ್ಷ ಉದ್ಧೃತ್ಯ ವಹ್ನಿಮುಖತಸ್ತದು ಚೈಕದೋಷ್ಣಾ ।

ಭಾಣ್ಡಂ ತದರ್ತ್ಥಮುರು ಕುಮ್ಭಕರೇಣ ದತ್ತಂ ಭಿಕ್ಷಾಂ ಚ ತೇನ ಚರಸಿ ಪ್ರತಿಹುಙ್ಕೃತೇನ ॥೧೯.೬೮॥

 

ಬ್ರಾಹ್ಮಣವೇಷದಲ್ಲಿರುವ ಅವರು ಭಿಕ್ಷೆ ಬೇಡುತ್ತಿರಲು, ಭೀಮಸೇನನು ವೈಶ್ಯರ ಮನೆಯಮುಂದೆ ಮಾತ್ರ, ಒಂದು ಮನೆಯ ಎತ್ತರದ, ಕುಂಬಾರ ಮಾಡಿಕೊಟ್ಟ ಮಡಿಕೆಯನ್ನು ಹಿಡಿದುಕೊಂಡು ಭಿಕ್ಷೆಗೆ ತೆರಳುತ್ತಿರಲು, ಬೇರೊಬ್ಬರು ಇವನನ್ನು ‘ಭೀಮಾ’ ಎಂದು ತಿಳಿದಾರು ಎಂಬ ಭಯದಿಂದ ಯುಧಿಷ್ಠಿರನು ಹೇಳುತ್ತಾನೆ:

‘ಎಲೈ ಭೀಮಸೇನನೇ, ಭೂಮಿಯಿಂದ ಕೂಡಿರುವ ಬಹಳ ದೊಡ್ಡ ಮನೆಯನ್ನು ಒಂದೇ ಕೈಯಿಂದ ಎತ್ತಿ, ಬೆಂಕಿಯಿಂದ ರಕ್ಷಿಸಿದ ಉಪಕಾರದ ನೆನಪಿಗಾಗಿ ಕುಮ್ಭಾಕಾರನಿಂದ ಆ ದೊಡ್ಡದಾದ ಮಡಿಕೆಯು ನಿನಗೆ ಕೊಡಲ್ಪಟ್ಟಿದೆ. ಅದನ್ನು ಹಿಡಿದು ಪ್ರತಿಯೊಂದು ಮನೆಯಿಂದ ಹುಂಕಾರದಿಂದಲೇ ಭಿಕ್ಷೆಯನ್ನು ಬೇಡುತ್ತಿದ್ದೀಯಾ.

[ಈಕುರಿತಾದ ವಿವರ ಮಹಾಭಾರತದ ಆದಿಪರ್ವದಲ್ಲಿ ಕಾಣಸಿಗುತ್ತದೆ. ‘ಕುಮ್ಭಾಕಾರೋsದದಾತ್ ಪಾತ್ರಂ ಮಹತ್ ಕೃತ್ವಾsತಿಮಾತ್ರಕಮ್ । ಪ್ರಹಸನ್ ಭೀಮಸೇನಾಯ ವಿಸ್ಮಿತಸ್ತಸ್ಯ ಕರ್ಮಣಾ’ (೧೭೧.೧೯). ‘ಮೌನವ್ರತೇನ ಸಂಯುಕ್ತಾ ಭೈಕ್ಷಂ ಗೃಹ್ಣನ್ತಿ ಪಾಣ್ಡವಾಃ’ (೧೭೧.೯). ‘ತಸ್ಯಾದ್ಭುತಂ ಕರ್ಮ ಕೃತ್ವಾ ಮಹಾನ್ತಂ ಭಾರಮಾದದೇ’ (೧೭೧.೨೦)]

 

ಧರ್ಮ್ಮಸ್ಯ ತೇ ಸುನಿಯತೇರ್ಬಲತಶ್ಚ ಬೋಧೋ ಭೂಯಾತ್ ಸುಯೋಧನಜನಸ್ಯ ತತೋ ಭಯಂ ಮೇ ।

ಮಾತ್ರಾ ಸಹೈವ ವಸ ಫಲ್ಗುನಪೂರ್ವಕೈಸ್ತ್ವಮಾನೀತಮೇವ ಪರಿಭುಙ್ಕ್ಷ್ವನತು ವ್ರಜೇಥಾಃ ॥೧೯.೬೯॥

 

ನಿನ್ನ ಧರ್ಮನಿಷ್ಠೆ ಮತ್ತು ನಿನ್ನಲ್ಲಿರುವ ಈ ಪರಿಯಾದ ಬಲದಿಂದಲೂ ಕೂಡಾ ದುರ್ಯೋಧನನ ಚಾರರಿಗೆ ನೀನು ಭೀಮಸೇನ ಎನ್ನುವ ಪ್ರಜ್ಞೆಯಾದೀತು ಎಂಬ ಭಯವು ನನಗೆ ಕಾಡುತ್ತಿದೆ. ಅದರಿಂದ ನೀನು ನಿನ್ನ ಅಮ್ಮನ ಜೊತೆಗೇ ವಾಸಮಾಡು. ಅರ್ಜುನನೇ ಮೊದಲಾಗಿರುವ ನಮ್ಮಿಂದ ತಂದಿರುವ ಭಿಕ್ಷೆಯನ್ನು ನೀನು ಸ್ವೀಕರಿಸು. ಮನೆಯಿಂದ ಹೊರಗಡೆ ಕಾಲಿಡಬೇಡ.   

 

ಇತ್ಯುಕ್ತ ಆಶು ಸ ಚಕಾರ ತಥೈವ ಭೀಮಸ್ತೇsಪಿ ಸ್ವಧರ್ಮ್ಮಪರಿರಕ್ಷಣಹೇತುಮೌನಾಃ ।

ಭಿಕ್ಷಾಂ ಚರನ್ತ್ಯಥ ಚತುರ್ಷ್ವಪಿ ತೇಷು ಯಾತೇಷ್ವೇಕತ್ರ ಮಾತೃಸಹಿತಃ ಸ ಕದಾಚಿದಾಸ್ತೇ ॥೧೯.೭೦॥

 

ಈರೀತಿಯಾಗಿ ಹೇಳಲ್ಪಟ್ಟ ಭೀಮಸೇನನು ‘ಆಯಿತು’ ಎಂದು ಹೇಳಿ, ಹಾಗೆಯೇ ಮಾಡಿದನು. ಅವರೂ ಕೂಡಾ ತಮ್ಮ ಧರ್ಮದ ಪರಿರಕ್ಷಣೆಯನ್ನು ಮಾಡುತ್ತಾ, ಮೌನದಿಂದ ಭಿಕ್ಷೆಯನ್ನು ಬೇಡುತ್ತಿದ್ದರು.  ಒಮ್ಮೆ ಆ ನಾಲ್ಕೂ ಜನರು ಭಿಕ್ಷೆಗೆಂದು ಹೋಗಿರಲು ಭೀಮಸೇನನು  ತಾಯಿಯೊಂದಿಗೆ ಮನೆಯಲ್ಲಿದ್ದನು.

 

ತತ್ಕಾಲ ಏವ ರುದಿತಂ ನಿಜವಾಸಹೇತೋರ್ವಿಪ್ರಸ್ಯ ದಾರಸಹಿತಸ್ಯ ನಿಶಮ್ಯ ಭೀಮಃ ।

ಸ್ತ್ರೀಬಾಲಸಂಯುತಗೃಹೇ ಶಿಶುಲಾಳನಾದೌ ಲಜ್ಜೇದಿತಿ ಸ್ಮ ಜನನೀಮವದನ್ನಚಾಗಾತ್ ॥೧೯.೭೧॥

 

ಅದೇಕಾಲದಲ್ಲಿ ತನ್ನ ಆವಾಸಕ್ಕೆ ಕಾರಣನಾದ ಬ್ರಾಹ್ಮಣ ಮತ್ತು ಅವನ  ಹೆಂಡತಿಯು ಅಳುವುದನ್ನು  ಕೇಳಿ, ಹೆಂಗಸರು-ಮಕ್ಕಳು ಇರುವ ಮನೆಯಲ್ಲಿ ಮಕ್ಕಳನ್ನು ಮುದ್ದಿಸುವುದು ಇತ್ಯಾದಿ ಇರುವುದರಿಂದ, ಪುರುಷರು ಅಲ್ಲಿಗೆ ಹೋದರೆ ಅವರಿಗೆ ನಾಚಿಕೆಯಾಗುತ್ತದೆ ಎಂದು, ತಾನು ಹೋಗದೇ,  ತಾಯಿಯನ್ನು ಕುರಿತು ‘ಹೋಗಿ ನೋಡಿಕೊಂಡು ಬಾ’ ಎಂದು ಹೇಳುತ್ತಾನೆ ಭೀಮಸೇನ.

No comments:

Post a Comment