ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, September 26, 2020

Mahabharata Tatparya Nirnaya Kannada 1988_1995

 

ಗತ್ವಾ ತ್ವರನ್ ಬಕವನಸ್ಯ ಸಕಾಶ ಆಶು ಭೀಮಃ ಸ ಪಾಯಸಸುಭಕ್ಷ್ಯಪಯೋಘಟಾದ್ಯೈಃ ।

ಯುಕ್ತಂ ಚ ಶೈಲನಿಭಮುತ್ತಮಮಾದ್ಯರಾಶಿಂ ಸ್ಪರ್ಶಾತ್ ಪುರೈವ ನರಭಕ್ಷಿತುರತ್ತುಮೈಚ್ಛತ್ ॥೧೯.೮೮॥

 

ಬಕನಿರುವ ಕಾಡಿನ ಸಮೀಪಕ್ಕೆ ತೆರಳಿದ ಭೀಮಸೇನನು, ಶೀಘ್ರದಲ್ಲಿ ಪಾಯಸ, ಹಾಲು ಇತ್ಯಾದಿಗಳಿಂದ ಕೂಡಿದ ಮಡಿಕೆ, ದೊಡ್ಡ ಗುಡ್ಡೆಯಂತೆ ಇರುವ, ಉತ್ಕೃಷ್ಟವಾದ, ತಿನ್ನಲು ಯೋಗ್ಯವಾದ ಪದಾರ್ಥದ ರಾಶಿಯನ್ನು, ನರಭಕ್ಷಕನಾದ ಬಕ ಮುಟ್ಟುವುದಕ್ಕೂ ಮೊದಲೇ^ ತಿನ್ನಬಯಸಿದನು.  

[^ನರಭಕ್ಷಕರು ಮುಟ್ಟಿದ ಪದಾರ್ಥವನ್ನು ತಿನ್ನುವುದು ವರ್ಜ್ಯ. ಹೀಗಾಗಿ ಹಿಂದೆ ನರಭಕ್ಷಕರ ಸಂತತಿಯವರನ್ನೂ ಕೂಡಾ ಜನರು ಹತ್ತಿರ ಸೇರಿಸುತ್ತಿರಲಿಲ್ಲ, ಅವರನ್ನು ಮುಟ್ಟುತ್ತಿರಲಿಲ್ಲ].

 

ತೇನೈವ ಚಾನ್ನಸಮಿತೌ ಪರಿಭುಜ್ಯಮಾನ ಉತ್ಪಾಟ್ಯ ವೃಕ್ಷಮಮುಮಾದ್ರವದಾಶು ರಕ್ಷಃ ।

ವಾಮೇನ ಮಾರುತಿರಪೋಹ್ಯ ತದಾ ಪ್ರಹಾರಾನ್ ಹಸ್ತೇನ ಭೋಜ್ಯಮಖಿಲಂ ಸಹಭಕ್ಷ್ಯಮಾದತ್ ॥೧೯.೮೯॥

 

ಭೀಮಸೇನನಿಂದ ಸಮಸ್ತ ಆಹಾರವು ತಿನ್ನಲ್ಪಡುತ್ತಿರಲು, ಅದನ್ನು ಕಂಡ ರಾಕ್ಷಸ ಬಕನು, ಒಂದು ವೃಕ್ಷವನ್ನು ಕಿತ್ತುಕೊಂಡು ಭೀಮಸೇನನತ್ತ ಶೀಘ್ರದಲ್ಲಿ ಧಾವಿಸಿ ಬಂದನು. ಭೀಮಸೇನನಾದರೋ, ಅವನ ಏಟುಗಳನ್ನು ತನ್ನ ಎಡಗೈಯಿಂದ ದೂರಸರಿಸಿ, ಸಮಸ್ತ ಭೋಜ್ಯ, ಸಹಭಕ್ಷ್ಯ,  ಎಲ್ಲವನ್ನೂ ತಿಂದು ಮುಗಿಸಿದನು.  

 

ಪೀತ್ವಾ ಪಯೋ ತ್ವರಿತ ಏನಮವೀಕ್ಷಮಾಣ ಆಚಮ್ಯ ತೇನ ಯುಯುಧೇ ಗುರುವೃಕ್ಷಶೈಲೈಃ ।

ತೇನಾsಹತೋsಥ ಬಹುಭಿರ್ಗ್ಗಿರಿಭಿರ್ಬಲೇನ ಜಗ್ರಾಹ ಚೈನಮಥ ಭೂಮಿತಳೇ ಪಿಪೇಷ ॥೧೯.೯೦॥

 

ಆ ರಾಕ್ಷಸನತ್ತ ತಿರುಗಿ ನೋಡದೆಯೇ, ತ್ವರಿತವಾಗಿ ಪಯವನ್ನು(ಹಾಲು ಇತ್ಯಾದಿ ಕುಡಿಯುವಂತಹ ಆಹಾರವನ್ನು) ಸ್ವೀಕರಿಸಿ, ಆಚಮನ ಮಾಡಿದ ಭೀಮಸೇನನು, ತದನಂತರ ಬಕಾಸುರನ ಜೊತೆಗೆ ಯುದ್ಧಮಾಡಿದನು. ದೊಡ್ಡದೊಡ್ಡ ವೃಕ್ಷ ಹಾಗೂ ಬಂಡೆಗಳಿಂದ ಕೂಡಿಕೊಂಡು ಬಕಾಸುರನಿಂದ ಹೊಡೆಯಲ್ಪಟ್ಟವನಾದ ಭೀಮಸೇನನು, ಕೊನೆಗೊಮ್ಮೆ ಬಲವಾಗಿ ಅವನನ್ನು ಹಿಡಿದುಕೊಂಡು ಭೂಮಿಯಲ್ಲಿ ಕೆಡವಿ ಮರ್ದಿಸಿಬಿಟ್ಟನು.

  

ಆಕ್ರಮ್ಯ ಪಾದಮಪಿ ಪಾದತಳೇನ ತಸ್ಯ ದೋರ್ಭ್ಯಾಂ ಪ್ರಗೃಹ್ಯ ಚ ಪರಂ ವಿದದಾರ ಭೀಮಃ ।

ಮೃತ್ವಾ ಸ ಚೋರು ತಮ ಏವ ಜಗಾಮ ಪಾಪೋ ವಿಷ್ಣುದ್ವಿಡೇವ ಹಿ ಶನೈರನಿವೃತ್ತಿ ಚೋಗ್ರಮ್ ॥೧೯.೯೧ ॥

 

ಭೀಮಸೇನನು ಬಕನ ಒಂದು ಕಾಲನ್ನು ತನ್ನ ಪಾದತಲದಿಂದ ಒತ್ತಿ ಹಿಡಿದು, ಮತ್ತೊಂದು ಕಾಲನ್ನು ತನ್ನ ಎರಡೂ ಕೈಗಳಿಂದ ಹಿಡಿದು, ಅವನ ದೇಹವನ್ನು ಸೀಳಿಬಿಟ್ಟನು. ಈರೀತಿಯಾಗಿ ಸತ್ತ ಪಾಪಿಷ್ಠನೂ, ನಾರಾಯಣದ್ವೇಷಿಯೂ  ಆದ ಆ ಬಕನು, ಕ್ರಮವಾಗಿ ಎಂದೂ ಮರಳಿಬಾರದ, ದುಃಖಭೂಯಿಷ್ಠವಾದ  ಅನ್ಧನ್ತಮಸ್ಸನ್ನು ಹೊಂದಿದನು. 

 

ಹತ್ವಾ ತಮಕ್ಷತಬಲೋ ಜಗದನ್ತಕಂ ಸ  ಯೋ ರಾಕ್ಷಸೋ ನ ವಶ ಆಸ ಜರಾಸುತಸ್ಯ ।

ಭೌಮಸ್ಯ ಪೂರ್ವಮಪಿ ನೋ ಭರತಸ್ಯ ರಾಜ್ಞೋ ಭೀಮೋ ನ್ಯಧಾಪಯದಮುಷ್ಯ ಶರೀರಮಗ್ರೇ ॥೧೯.೯೨ ॥

 

ಹೀಗೆ ಎಂದೂ ನಾಶವಾಗದ ಬಲವುಳ್ಳ, ಜಗತ್ತಿಗೇ ವಿನಾಶಕನಾಗಿದ್ದ ಬಕಾಸುರನನ್ನು ಭೀಮ ಸಂಹಾರಮಾಡಿದನು. ಯಾವ ರಾಕ್ಷಸನು ಜರಾಸಂಧನಿಗೂ ವಶನಾಗಲಿಲ್ಲವೋ, ನರಕಾಸುರನಿಗೂ ಕೂಡಾ ಗೆಳೆಯನಾಗಲಿಲ್ಲವೋ, ಭರತನ ವಶವೂ ಆಗಲಿಲ್ಲವೋ, ಅಂತಹ ರಾಕ್ಷಸನ ಶರೀರವನ್ನು ಭೀಮ ಅಗಸೇ ಬಾಗಿಲಿನಲ್ಲಿ (ಊರು ಪ್ರಾರಂಭವಾಗುವಲ್ಲಿರುವ ಮಹಾದ್ವಾರ/ಪ್ರವೇಶದ್ವಾರದಲ್ಲಿ) ನೇತುಹಾಕಿದನು. 


ದ್ವಾರ್ಯೇವ ತತ್ ಪ್ರತಿನಿಧಾಯ ಪುನಃ ಸ ಭೀಮಃ ಸ್ನಾತ್ವಾ ಜಗಾಮ ನಿಜಸೋದರಪಾರ್ಶ್ವಮೇವ ।

ಶ್ರುತ್ವಾsಸ್ಯ ಕರ್ಮ್ಮ ಪರಮಂ ತುತುಷುಃ ಸಮೇತಾ ಮಾತ್ರಾ ಚ ತೇ ತದನು ವವ್ರುರತಃ ಪುರಸ್ಥಾಃ ॥೧೯.೯೩॥

 

ದೃಷ್ಟ್ವೈವ  ರಾಕ್ಷಸಶರೀರಮುರು ಪ್ರಭೀತಾ  ಜ್ಞಾತ್ವೈವ ಹೇತುಭಿರಥ ಕ್ರಮಶೋ ಮೃತಂ ಚ ।

ವಿಪ್ರಸ್ಯ ತಸ್ಯ ವಚನಾದಪಿ ಭೀಮಸೇನಭಗ್ನಂ ನಿಶಮ್ಯ ಪರಮಂ ತುತುಷುಶ್ಚ ತಸ್ಮೈ ॥೧೯.೯೪॥

 

ಹೀಗೆ ಊರ ಬಾಗಿಲಿನಲ್ಲಿಯೇ ಆ ಶವವನ್ನು ಇಟ್ಟ ಭೀಮಸೇನನು, ಸ್ನಾನಮಾಡಿಕೊಂಡು  ತನ್ನ ಸೋದರರ ಬಳಿಗೆ ತೆರಳಿದನು. ಇವನ ಉತ್ಕೃಷ್ಟವಾದ ಕರ್ಮವನ್ನು ಕೇಳಿ, ತಾಯಿಂದ ಕೂಡಿಕೊಂಡು ಎಲ್ಲರೂ ಸಂತೋಷಪಟ್ಟರು. ಇದೆಲ್ಲವೂ ನಡೆದಮೇಲೆ ಜನರೆಲ್ಲರೂ ಅಲ್ಲಿ ಸೇರಲಾರಮ್ಭಿಸಿದರು. ಅವರೆಲ್ಲರೂ ರಾಕ್ಷಸನ ಶರೀರವನ್ನು ಕಂಡೇ ಬಹಳ ಭಯಗೊಂಡವರಾದರು. ತದನಂತರ, ಕ್ರಮವಾಗಿ ಕೆಲವು ಕಾರಣಗಳಿಂದ ಅವನು ಸತ್ತಿದ್ದಾನೆ ಎನ್ನುವುದನ್ನು ಖಚಿತಪಡಿಸಿಕೊಂಡ ಅವರು, ಬ್ರಾಹ್ಮಣನಿಂದ ‘ಭೀಮಸೇನನಿಂದ ಕೊಲ್ಲಲ್ಪಟ್ಟಿದ್ದಾನೆ’ ಎನ್ನುವುದನ್ನೂ ತಿಳಿದು ಅವನ  ಬಗ್ಗೆ ಅತ್ಯಂತ ಸಂತೋಷವನ್ನು ಹೊಂದಿದರು.

 

ಅನ್ನಾತ್ಮಕಂ  ಕರಮಮುಷ್ಯ ಚ ಸಮ್ಪ್ರಚಕ್ರುಃ ಸೋsಪ್ಯೇತಮಾಶು ನರಸಿಂಹವಪುರ್ದ್ಧರಸ್ಯ।

ಚಕ್ರೇ ಹರೇಸ್ತದನು ಸತ್ಯವತೀಸುತಸ್ಯ ವಿಷ್ಣೋರ್ಹಿ ವಾಕ್ಪ್ರಚುದಿತಾಃ ಪ್ರಯಯುಸ್ತತಶ್ಚ ॥೧೯.೯೫॥

 

ಜನರೆಲ್ಲರೂ ಭೀಮಸೇನನಿಗೆ ಅನ್ನವೆನಿಸುವ ಕಂದಾಯವನ್ನು ನೀಡಿದರು. ಅವನೂ ಕೂಡಾ ಆ ಅನ್ನಾತ್ಮಕವಾದ ಕರವನ್ನು ನರಸಿಂಹರೂಪಿ  ನಾರಾಯಣನಿಗೆ ಅರ್ಪಿಸಿದನು. ತದನಂತರ ಸತ್ಯವತಿಯ ಮಗನಾದ ವ್ಯಾಸರೂಪಿ ನಾರಾಯಣನ ಮಾತಿನಿಂದ ಪ್ರೇರಿತರಾದ ಅವರೆಲ್ಲರೂ, ಏಕಚಕ್ರನಗರದಿಂದ ಹೊರಟು ಮುಂದೆಸಾಗಿದರು.


No comments:

Post a Comment