ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 5, 2018

Mahabharata Tatparya Nirnaya Kannada 9.22-9.26


ಶ್ವೇತದತ್ತಾಂ ತಥಾ ಮಾಲಾಮಗಸ್ತ್ಯಾದಾಪ ರಾಘವಃ
ಅನನ್ನಯಜ್ಞಾಕೃಚ್ಛ್ವೇತೋ ರಾಜಾ ಕ್ಷುದ್ವಿನಿವರ್ತ್ತನಮ್ ೯.೨೨

ಕುರ್ವನ್ ಸ್ವಮಾಂಸೈರ್ದ್ಧಾತ್ರೋಕ್ತೋ ಮಾಲಾಂ ರಾಮಾರ್ತ್ಥಮ ರ್ಪ್ಪಯತ್
ಅಗಸ್ತ್ಯಾಯ ನ ಸಾಕ್ಷಾತ್ತು ರಾಮೇ ದದ್ಯಾದಯಂ ನೃಪಃ ೯.೨೩

(ಶಂಬೂಕನನ್ನು ಕೊಂದ ಮೇಲೆ ರಾಮಚಂದ್ರನು ಪಕ್ಕದಲ್ಲೇ ಇದ್ದ ಅಗಸ್ತ್ಯಾಶ್ರಮಕ್ಕೆ ತೆರಳಿದನು) ಅಗಸ್ತ್ಯರು ಶ್ವೇತ ಎನ್ನುವ ಗಂಧರ್ವನು ಕೊಟ್ಟ, ಎಂದೂ ಬಾಡದ ಹೂಮಾಲೆಯನ್ನು ರಾಮಚಂದ್ರನಿಗೆ ಅರ್ಪಿಸಿದರು.
ಹಿಂದೆ ಶ್ವೇತ ಎನ್ನುವ ರಾಜನು ಅನ್ನದಾನವಿಲ್ಲದ ಯಾಗವನ್ನು ಮಾಡಿದನು.. ಅನ್ನದಾನವಿಲ್ಲದ ಯಜ್ಞ ಅಪೂರ್ಣ. ಅದರ ಫಲವಾಗಿ ಕೊನೆಗೆ ಅವನು ಹಸಿವಿನ ಬಾಧೆಗಾಗಿ ತನ್ನ ಮಾಂಸವನ್ನೇ ಕಿತ್ತು ತಿನ್ನಬೇಕಾಯಿತು. ಆ ಪಾಪದ ಪರಿಹಾರಕ್ಕಾಗಿ ಅವನು ಬ್ರಹ್ಮದೇವರ ನಿಯೋಗದಂತೆ  ಈ ಮಾಲೆಯನ್ನು ಅಗಸ್ತ್ಯರಿಗೆ ಅರ್ಪಿಸಿದ್ದನು. ಈ ಹೂಮಾಲೆ ಅಗಸ್ತ್ಯರ ಮುಖೇನ ರಾಮಚಂದ್ರನಿಗೆ ಅರ್ಪಿಸಿದ್ದುದರಿಂದ ಶ್ವೆತನಿಗೆ ಆಹಾರ ಸಿಗುವಂತಾಯಿತು.
[ಬ್ರಹ್ಮದೇವರ ಸಂಕಲ್ಪ ಶ್ವೇತ ನೇರವಾಗಿ ರಾಮಚಂದ್ರನಿಗೆ ಈ ಹೂಮಾಲೆಯನ್ನು ಕೊಡಬಾರದು ಎನ್ನುವುದಾಗಿತ್ತು. ಹಾಗಾಗಿ ಆ ಹೊಮಾಲೆ ಅಗಸ್ತ್ಯರ ಮುಖೇನ ಶ್ರೀರಾಮನಿಗೆ ಅರ್ಪಿತವಾಯಿತು. ಅದು ಏಕೆಂದರೆ:] 

ಕ್ಷುದಭಾವಮಾತ್ರಫಲದಂ ನ ಸಾಕ್ಷಾದ್ ರಾಘವೇsರ್ಪ್ಪಿತಮ್
ಕ್ಷುದಭಾವಮಾತ್ರಮಾಕಾಙ್ಕ್ಷನ್ ಮಾಮಸೌ ಪರಿಪೃಚ್ಛತಿ ೯.೨೪

ವ್ಯವಧಾನತಸ್ತತೋ ರಾಮೇ ದದ್ಯಾಚ್ಛ್ವೇತ ಇತಿ ಪ್ರಭುಃ
ಮತ್ವಾ ಬ್ರಹ್ಮಾsದಿಶನ್ಮಾಲಾಂ ಪ್ರದಾತುಂ ಕುಮ್ಭಯೋನಯೇ ೯.೨೫

ರಾಮಚಂದ್ರನಲ್ಲಿ ನೇರವಾಗಿ ಕೊಟ್ಟ ಕಾಣಿಕೆಯ ಫಲ ಕೇವಲ ಹಸಿವೆಯನ್ನು ಮಾತ್ರ ನೀಗಿಸುವುದಿಲ್ಲ. ಅದಕ್ಕಿಂತ ಇನ್ನೂ  ಹೆಚ್ಚಿನ ಫಲ ಅದರಿಂದ ಸಿಗುತ್ತದೆ. ಆದರೆ ಶ್ವೇತನು ಕೇವಲ ಹಸಿವೆ ನೀಗಿಕೊಳ್ಳುವ ಕಾಮ್ಯಫಲವನ್ನಷ್ಟೇ  ಬಯಸಿ ಬೇಡಿದ್ದ.
ಆ ಕಾರಣದಿಂದ, ‘ಈ ಶ್ವೇತನು  ನೇರವಾಗಿ ರಾಮಚಂದ್ರನಿಗೆ ಮಾಲೆಯನ್ನು ಕೊಡದಿರಲಿ’ ಎಂದು ಇಚ್ಛಿಸಿ ಮಾಲೆಯನ್ನು ಕೊಟ್ಟ ಬ್ರಹ್ಮ ದೇವರು, ಅದನ್ನು ಕುಂಭಯೋನಿಯಲ್ಲಿ ಜನಿಸಿದ ಅಗಸ್ತ್ಯರಿಗೆ ಕೊಡಲು ಹೇಳಿದರು.

ತಾಮಗಸ್ತ್ಯಕರಪಲ್ಲವಾರ್ಪ್ಪಿತಾಂ ಭಕ್ತ ಏಷ ಮಮ ಕುಮ್ಭಸಮ್ಭವಃ
ಇತ್ಯವೇತ್ಯ ಜಗೃಹೇ ಜನಾರ್ದ್ದನಸ್ತೇನ ಸಂಸ್ತುತ ಉಪಾಗಮತ್ ಪುರಮ್ ೯.೨೬

‘ಅಗಸ್ತ್ಯ ನನ್ನ ಭಕ್ತ’ ಎಂದು ತಿಳಿದ ಶ್ರೀರಾಮಚಂದ್ರನು ಅಗಸ್ತ್ಯ ಸಮರ್ಪಿಸಿದ ಮಾಲೆಯನ್ನು ಸ್ವೀಕರಿಸಿ, ಅಗಸ್ತ್ಯನಿಂದ ಸ್ತೋತ್ರ ಮಾಡಲ್ಪಟ್ಟವನಾಗಿ, ಅಯೋಧ್ಯೆಗೆ ತೆರಳಿದನು.

ಕನ್ನಡ ಪದ್ಯರೂಪ: https://go-kula.blogspot.com/2018/08/9-22-26.html

No comments:

Post a Comment