ತೇನ ಚಾನ್ಧತಮ ಈಯುರಾಸುರಾ
ಯಜ್ಞಮಾಹ್ವಯದಸೌ ಚ ಮೈಥಿಲೀಮ್ ।
ತತ್ರ ಭೂಮಿಶಪಥಚ್ಛಲಾನ್ನೃಣಾಮ್
ದೃಷ್ಟಿಮಾರ್ಗ್ಗಮಪಹಾಯ ಸಾ ಸ್ಥಿತಾ ॥೯.೩೪॥
ಸೀತಾರಾಮರ ಬಾಹ್ಯ ವಿಯೋಗದಿಂದ ಸುರಾಣಕ ದೈತ್ಯರು ಅಂದಂತಮಸ್ಸಿಗೆ
ತೆರಳಿದರು. ರಾಮಚಂದ್ರನಾದರೋ, ಸೀತೆಯನ್ನು ಅಶ್ವಮೇಧ ಯಜ್ಞಕ್ಕೆ ಕರೆದನು. ಅಲ್ಲಿ ‘ನಾನು ಶುದ್ಧಳೇ
ಆಗಿದ್ದರೆ, ಈ ಕೂಡಲೇ ಭೂಮಿ ನನ್ನನ್ನು
ಎಳೆದುಕೊಳ್ಳಲಿ’ ಎಂಬುದಾಗಿ ಶಪಥವನ್ನು ಮಾಡಿದ ಸೀತಾದೇವಿ, ಮುಂದೆ ಮನುಷ್ಯರ ದೃಷ್ಟಿಗೋಚರತ್ವದಿಂದ ಮರೆಯಾಗಿ ರಾಮಚಂದ್ರನೊಂದಿಗಿದ್ದಳು. [ಈ ಕ್ರಿಯೆಯಿಂದ, ಸಾಮಾಜಿಕವಾಗಿ ಸುರಾಣಕರು ಹಬ್ಬಿಸಿದ್ದ
ತಪ್ಪು ವಿಚಾರಗಳಿಂದ ಸಜ್ಜನರನ್ನು ಈಚೆ ತಂದಂತಾಯಿತು.
ಸೀತೆ ಪರಿಶುದ್ಧಳೆನ್ನುವ ಸತ್ಯ ಜನಸಾಮಾನ್ಯರಿಗೆ ತಿಳಿದಂತಾಯಿತು]
[ರಾಮಾಯಣದಲ್ಲಿ (ಉತ್ತರಕಾಂಡ ೯೪.೧೪-೨೦) ಹೇಳುವಂತೆ: ಯಥಾऽಹಂ ರಾಘವಾದನ್ಯಂ ಮನಸಾऽಪಿ ನ ಚಿಂತಯೇ । ತಥಾ ಮೇ ಮಾಧವೀ ದೇವೀ ವಿವರಂ ದಾತುಮರ್ಹತಿ । ತಥಾ
ಶಪಂತ್ಯಾಂ ವೈದೇಹ್ಯಾಂ ಪ್ರಾದುರಾಸೀತ್ತದದ್ಭುತಮ್
।
ಭೂತಲಾದುತ್ಥಿತಂ ದಿವ್ಯಂ ಸಿಂಹಾಸನಮನುತ್ತಮಮ್ । ತಸ್ಮಿಂಸ್ತು ಧರಣೀ ದೇವೀ
ಬಾಹುಭ್ಯಾಂ ಗೃಹ್ಯ ಮೈಥಿಲೀಮ್ । ಸ್ವಾಗತೇನಾಭಿನಂದ್ಯೈನಾಮಾಸನೇ ಚೋಪವೇಶಯತ್। ತಮಾಸನಗತಾಂ ದೃಷ್ಟ್ವಾಪ್ರವಿಶಂತೀಂ
ರಸಾತಳಂ ।
ಪುಷ್ಪವೃಷ್ಟಿರವಿಚ್ಛಿನ್ನಾ ದಿವ್ಯಾ ಸೀತಾಮವಾಕಿರತ್’ ‘ನಾನು ರಾಮಚಂದ್ರನಲ್ಲದೇ ಬೇರೆ ಯಾರನ್ನೂ ಕೂಡಾ ಮನಸ್ಸಿನಲ್ಲಿ
ಚಿಂತನೆಯೂ ಮಾಡಿಲ್ಲ. ಇದು ಸತ್ಯವಾದರೆ ಭೂಮಿಯು
ನನಗೆ ಆಸನವನ್ನು ಕೊಡಲಿ’ ಎಂದು ಸೀತೆ ಹೇಳುತ್ತಿದ್ದಂತೆ, ಭೂಮಿಯಿಂದ ಒಂದು ದಿವ್ಯಾಸನ
ಪ್ರಕಟವಾಯಿತು. ಸಿಂಹಾಸನದ ಜೊತೆಗೆ ಪ್ರಕಟಗೊಂಡ ಪೃಥ್ವೀದೇವತೆಯು ಸ್ವಾಗತಪೂರ್ವಕವಾಗಿ ಸೀತೆಯನ್ನು
ಸಿಂಹಾಸನದಲ್ಲಿ ಕುಳ್ಳಿರಿಸಿದಳು. ಹೀಗೆ
ರಸಾತಳಕ್ಕೆ ಪ್ರವೇಶಿಸುತ್ತಿರುವ ಸೀತಾದೇವಿಯ ಮೇಲೆ ದಿವ್ಯಪುಷ್ಪಗಳ ಮಳೆ ಸುರಿಯಿತು. ಈ ರೀತಿ
ಸೀತಾದೇವಿ ಮನುಷ್ಯರ ದೃಷ್ಟಿಗೋಚರತ್ವದಿಂದ ಮರೆಯಾದಳು. ].
[ಇಲ್ಲಿ(೯.೩೩) ‘ಬ್ರಹ್ಮವಾಕ್ಯಮೃತಮೇವ ಕಾರಯನ್’ ಎಂದಿದ್ದಾರೆ.
ಅಂದರೆ: ‘ಬ್ರಹ್ಮನ ವಾಕ್ಯವನ್ನು ಸತ್ಯವಾಗಿಸಲು’ ಎಂದರ್ಥ. ಆದರೆ ಈ ಹಿಂದೆ, ಬ್ರಹ್ಮನ ವರವನ್ನು ಪ್ರಾಣ-ನಾರಾಯಣರು
ಮುರಿದಿರುವುದನ್ನೂ ಹೇಳಿದ್ದಾರೆ!
ಏಕೆ ಇಲ್ಲಿ
ಬ್ರಹ್ಮ ಸುರಾಣರಿಗೆ ನೀಡಿದ ವರವನ್ನು ಭಗವಂತ
ಮುರಿಯಲಿಲ್ಲಾ? ಈ ಹಿಂದೆ ಏಕೆ ಬ್ರಹ್ಮ, ಶಿವ ಮೊದಲಾದವರ ವರವನ್ನು ಭಗವಂತ ಮುರಿದ? ಇತ್ಯಾದಿ
ಪ್ರಶ್ನೆಗಳು ನಮಗಿಲ್ಲಿ ಸಹಜವಾಗಿ ಹುಟ್ಟುತ್ತವೆ.
ಈ ಪ್ರಶ್ನೆಗಳಿಗೆ ಆಚಾರ್ಯರೇ ಉತ್ತರ ನೀಡುವುದನ್ನು ನಾವು ಮುಂದೆ ಕಾಣಬಹುದು:]
ಗುರುಂ ಹಿ ಜಗತೋ
ವಿಷ್ಣುರ್ಬಹ್ಮಾಣಮಸೃಜತ್ ಸ್ವಯಮ್ ।
ತೇನ ತದ್ವಚನಂ ಸತ್ಸು ನಾನೃತಂ ಕರುತೇ
ಕ್ವಚಿತ್ ॥೯.೩೫॥
ನಾಸತ್ಸ್ವಪ್ಯನೃತಂ ಕುರ್ಯ್ಯಾದ್
ವಚನಂ ಪಾರಲೌಕಿಕಮ್ ।
ಐಹಿಕಂ ತ್ವಸುರೇಷ್ವೇವ
ಕ್ವಚಿದ್ಧನ್ತಿ ಜನಾರ್ದ್ದನಃ ॥೯.೩೬ ॥
ಚತುರ್ಮುಖನನ್ನು ಜಗತ್ತಿನ ಗುರುವಾಗಿ ಸೃಷ್ಟಿ ಮಾಡಿರುವ ಭಗವಂತನು, ಆತನ
ಮಾತನ್ನು ಸಜ್ಜನರಲ್ಲಿ ಒಮ್ಮೆಯೂ ಕೂಡಾ ಸುಳ್ಳು ಮಾಡುವುದಿಲ್ಲ. ಆ ಬ್ರಹ್ಮನ ಮಾತು ಅಸಜ್ಜನರಲ್ಲಿ
ಏನು ನಡೆದಿರುತ್ತದೋ, ಅದನ್ನೂ ಕೂಡಾ ಸುಳ್ಳು ಮಾಡುವುದಿಲ್ಲ. ಅವನು ಪರಲೋಕದ ಬಗ್ಗೆ ಏನು
ಹೇಳಿರುತ್ತಾನೋ, ಅದನ್ನೂ ಕೂಡಾ ಸುಳ್ಳು ಮಾಡುವುದಿಲ್ಲಾ.
ಆದರೆ, ವಿಶೇಷತಃ, ದೇವತೆಗಳಿಗೆ ವಿರುದ್ಧವಾದವರಾದ, ಭೂಮಿಯಲ್ಲಿ
ದೇವತೆಗಳ ವಿರುದ್ಧ ಕಾದುವ ಅಸುರರಲ್ಲಿ, ಐಹಿಕವಾದ ವರವನ್ನು ಸುಳ್ಳು ಮಾಡುತ್ತಾನೆ. ಅಂದರೆ: ಅದೃಷ್ಯತ್ವ, ಅಜೇಯತ್ವ,
ಅವಧ್ಯತ್ವ, ಈರೀತಿಯಾದ ವರಗಳನ್ನು ಭಗವಂತ ಸುಳ್ಳು ಮಾಡುತ್ತಾನೆ.
ನಿಜಾಧಿಕ್ಯಸ್ಯ ವಿಜ್ಞಪ್ತ್ಯೈ
ಕ್ವಚಿದ್ ವಾಯುಸ್ತದಾಜ್ಞಯಾ ।
ಹನ್ತಿಬ್ರಹ್ಮತ್ವಮಾತ್ಮೀಯಮದ್ಧಾ
ಜ್ಞಾಪಯಿತುಂ ಪ್ರಭುಃ ॥೯.೩೭॥
ಬ್ರಹ್ಮ ದೇವರ ವರವನ್ನು ಮುಖ್ಯಪ್ರಾಣನೂ ಕೆಲವೊಮ್ಮೆ ಭಗವಂತನ ಆಜ್ಞೆ
ಇದ್ದರೆ ಮುರಿಯುತ್ತಾನೆ. ಇದರ ಉದ್ದೇಶ ಮುಖ್ಯವಾಗಿ ಎರಡು: (೧). ತನ್ನ ಆಧಿಕ್ಯವನ್ನು ತೋರಿಸುವುದು(ಇತರ
ದೇವತೆಗಳಿಗೆ ಹೋಲಿಸಿದರೆ) ಹಾಗೂ (೨). ತನ್ನ ಬ್ರಹ್ಮತ್ವವನ್ನು ಚನ್ನಾಗಿ ನೆನಪಿಸುವುದು. ಹೀಗೆ
ಮುಂದೆ ಬ್ರಹ್ಮ ಪದವಿಗೆ ಬರುವವನೇ ಆದ
ಮುಖ್ಯಪ್ರಾಣ ಬ್ರಹ್ಮನ ವರವನ್ನುಈ ಕಾರಣದಿಂದ ಮುರಿಯುತ್ತಾನೆ.
ನಾನ್ಯಃ ಕಶ್ಚಿತ್ ತದ್ವರಾಣಾಂ
ಶಾಪಾನಾಮಪ್ಯತಿಕ್ರಮೀ ।
ಅಯೋಗ್ಯೇಷು ತು ರುದ್ರಾದಿವಾಕ್ಯಂ ತೌ
ಕುರುತೋ ಮೃಷಾ ॥೯.೩೮॥
ಬ್ರಹ್ಮದೇವರ ವರವನ್ನಾಗಲೀ, ಶಾಪವನ್ನಾಗಲೀ, ಮುಖ್ಯಪ್ರಾಣ ಹಾಗು ನಾರಾಯಣರ ಹೊರತಾಗಿ ಬೇರೆ ಯಾರೂ
ಕೂಡಾ ಮೀರಲಾರರು. ಪ್ರಾಣ-ನಾರಾಯಣರು ಅತ್ಯಂತ
ಅಯೋಗ್ಯರಾದವರಲ್ಲಿ ರುದ್ರ ಮೊದಲಾದವರ ವಾಕ್ಯವನ್ನು(ವರವನ್ನು) ಸುಳ್ಳು ಮಾಡುತ್ತಾರೆ.
ಏಕದೇಶೇನ ಸತ್ಯಂ ತು ಯೋಗ್ಯೇಷ್ವಪಿ ಕದಾಚನ
।
ನ ವಿಷ್ಣೋರ್ವಚನಂ ಕ್ವಾಪಿ ಮೃಷಾ
ಭವತಿ ಕಸ್ಯಚಿತ್ ।
ಏತದರ್ತ್ಥೋsವತಾರಶ್ಚ ವಿಷ್ಣೋರ್ಭವತಿ ಸರ್ವದಾ ॥೯.೩೯॥
ಇನ್ನು ಕೆಲವೊಮ್ಮೆ, ರುದ್ರಾದಿಗಳ ಮಾತನ್ನು ಯೋಗ್ಯರಲ್ಲಿಯೂ ಕೂಡಾ ಭಾಗಶಃ^ (ಕೆಲವೊಂದು ಭಾಗವನ್ನು ಮಾತ್ರ) ಸತ್ಯವನ್ನಾಗಿ
ಮಾಡುತ್ತಾರೆ. ಆದರೆ ನಾರಾಯಣನ ಮಾತು ಮಾತ್ರ ಎಂದೂ
ಯಾರ ಪಾಲಿಗೂ ಸುಳ್ಳಾಗುವುದಿಲ್ಲಾ. ಅದಕ್ಕಾಗಿಯೇ ನಾರಾಯಣನ ಅವತಾರವಾಗುತ್ತದಲ್ಲವೇ?
[^ಉದಾ: ರುದ್ರ ದೇವರು ದ್ರುಪದನ ಮಗಳಿಗೆ (ಶಿಖಂಡಿನಿಗೆ) ಪುಂಸ್ತ್ವ
ಬರಲಿ ಎಂದು ಆಶೀರ್ವಾದ ಮಾಡಿದರು. ಅದು ಮದುವೆಯಾಗುವ ತನಕ ನಿಜವಾಗಿತ್ತು. ಮದುವೆಯಾದ ಮೇಲೆ ಆಕೆ
ಸೂನಾಕರಣ ಎನ್ನುವ ಗಂಧರ್ವನ ಬಳಿ ಹೋಗಿ ತನ್ನ ದೇಹವನ್ನು ಬದಲಿಸಿಕೊಂಡಳು. ಹೆಣ್ಣುಮಕ್ಕಳಿಗೆ ಗಂಡು
ದೇಹವಿಲ್ಲ. ಅದು ಸ್ವಾಭಾವಿಕ ನಿಯಮ. ಅದರಿಂದಾಗಿ ಗಂಡಿನ ದೇಹದೊಳಗೆ ಪ್ರವೇಶ ಮಾಡಿದಳು
ಎನ್ನುತ್ತಾರೆ. ಅದು ಏಕದೇಶೇನ ಸತ್ಯ. ಸಂಪೂರ್ಣ ಇವಳು ಗಂಡಾಗುತ್ತಾಳೆ ಎನ್ನುವುದು ಸಂಪೂರ್ಣ
ಸತ್ಯವಾಗಲಿಲ್ಲಾ. ಅಸತ್ಯವೂ ಆಗಲಿಲ್ಲಾ. ]
ಕನ್ನಡ ಪದ್ಯರೂಪ: https://go-kula.blogspot.com/2018/08/9-34-39.html
ಕನ್ನಡ ಪದ್ಯರೂಪ: https://go-kula.blogspot.com/2018/08/9-34-39.html
No comments:
Post a Comment