ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, August 14, 2018

Mahabharata Tatparya Nirnaya Kannada 9.63-9.68


ಅಥಾsಹ ವಾಯುನನ್ದನಂ ಸ ರಾಘವಃ ಸಮಾಶ್ಲಿಷನ್
ತವಾಹಮಕ್ಷಗೋಚರಃ ಸದಾ ಭವಾಮಿ ನಾನ್ಯಥಾ ೯.೬೩

ಹೀಗೆ ರಾಮಚಂದ್ರನು ಸ್ವಧಾಮಕ್ಕೆ ತೆರಳಬೇಕು ಎಂದು ತೀರ್ಮಾನಮಾಡಿ, ಭೇರಿ ಘೋಷಣೆಯನ್ನು ಮಾಡಿದ ನಂತರ, ಅದಕ್ಕನುಗುಣವಾಗಿ ಎಲ್ಲರೂ ಬಂದು ಸೇರಿದ ಮೇಲೆ, ಹನುಮಂತನನ್ನು ಆಲಂಗಿಸುತ್ತಾ ಹೇಳುತ್ತಾನೆ: “ನಾನು ಸದಾ  ನಿನ್ನ ಕಣ್ಣಿಗೆ ಕಾಣುತ್ತಿರುತ್ತೇನೆ” ಎಂದು.

ತ್ವಯಾ ಸದಾ ಮಹತ್ ತಪಃ ಸುಕಾರ್ಯ್ಯಮುತ್ತಮೋತ್ತಮಮ್
ತದೇವ ಮೇ ಮಹತ್ ಪ್ರಿಯಂ ಚಿರಂ ತಪಸ್ತ್ವಯಾ ಕೃತಮ್ ೯.೬೪

‘ನಿನ್ನಿಂದ ಹೀಗೆಯೇ ಮಹಾತಪಸ್ಸು ಮಾಡಲ್ಪಡಬೇಕು. ಆ ತಪಸ್ಸು ಜೀವಗಣದಲ್ಲಿ ಯಾರಿಗೂ ಮಾಡಲು ಸಾಧ್ಯವಿಲ್ಲ. ಅದೇ ನನಗೆ ಅತ್ಯಂತ ಪ್ರಿಯವಾದುದು. ಅದನ್ನು ನಿರಂತರವಾಗಿ ನೀನು ಮಾಡುತ್ತಿದ್ದೀಯ. ಮುಂದೆಯೂ ಕೂಡಾ ಮಾಡುತ್ತೀ.

ದಶಾಸ್ಯಕುಮ್ಭಕರ್ಣ್ಣಕೌ ಯಥಾ ಸುಶಕ್ತಿಮಾನಪಿ
ಜಘನ್ಥ ನ ಪ್ರಿಯಾಯ ಮೇ ತಥೈವ ಜೀವ ಕಲ್ಪಕಮ್ ೯.೬೫

ಶಕ್ತನಾದರೂ ಕೂಡಾ, ರಾವಣ–ಕುಂಭಕರ್ಣರನ್ನು ನನ್ನ ಪ್ರೀತಿಗಾಗಿ ನೀನು ಕೊಲ್ಲಲಿಲ್ಲಾ. ಆದುದರಿಂದ ನನ್ನ ಪ್ರೀತಿಗಾಗಿ  ನೀನು ಕಲ್ಪಾಂತ್ಯದ ತನಕ ಜೀವಿಸು.

ಪಯೋಬ್ಧಿಮಧ್ಯಗಂ ಚ ಮೇ ಸುಸದ್ಮ ಚಾನ್ಯದೇವ ವಾ
ಯಥೇಷ್ಟತೋ ಗಮಿಷ್ಯಸಿ ಸ್ವದೇಹಸಂಯುತೋsಪಿ ಸನ್ ೯.೬೬

ಕ್ಷೀರ ಸಮುದ್ರದ ಮಧ್ಯದಲ್ಲಿರುವ ನನ್ನ ಮನೆಯನ್ನು, ಹಾಗೇ ಇತರ ಮನೆಯನ್ನು (ಅನಂತಾಸನ, ವೈಕುಂಠ, ಇತ್ಯಾದಿ), ನಿನಗೆ ಬಯಕೆ ಬಂದಾಗ ನಿನ್ನ ಈ ದೇಹವನ್ನು ಧರಿಸಿಯೂ ನೀನು ಪ್ರವೇಶ ಮಾಡಬಲ್ಲೆ. 

ಯಥೇಷ್ಟಭೋಗಸಂಯುತಃ ಸುರೇಶಗಾಯಕಾದಿಭಿಃ
ಸಮೀಢ್ಯಮಾನಸದ್ಯಶಾ ರಮಸ್ವ ಮತ್ಪುರಃ ಸದಾ ೯.೬೭

ತವೇಪ್ಸಿತಂ ನ ಕಿಞ್ಚನ ಕ್ವಚಿತ್ ಕುತಶ್ಚಿದೇವ ವಾ
ಮೃಷಾ ಭವೇತ್ ಪ್ರಿಯಶ್ಚ ಮೇ ಪುನಃಪುನರ್ಭವಿಷ್ಯಸಿ ೯.೬೮ 

ನಿನಗೆ ಬಯಸಿದ್ದನ್ನು ನೀನು ಪಡೆಯಬಹುದು. ಗಂಧರ್ವರೆಲ್ಲಾ ನಿನ್ನ ಯಶಸ್ಸನ್ನು  ಗಾನ ಮಾಡುತ್ತಿರುತ್ತಾರೆ. ಅಂಥಹ ಯಶಸ್ಸುಳ್ಳವನಾದ ನೀನು, ನನ್ನ ಎದುರು  ಯಾವಾಗಲೂ ಸಂತಸದಿಂದ ಕ್ರೀಡಿಸುತ್ತಿರು.
ನೀನು ಬಯಸಿದ್ದು ಯಾರಿಂದಲೂ ವ್ಯರ್ಥವಾಗುವುದಿಲ್ಲಾ ಮತ್ತು ನೀನು ಸದಾ ನನಗೆ ಪ್ರಿಯನಾಗಿರುತ್ತೀಯ’.

ಕನ್ನಡ ಪದ್ಯರೂಪ:  https://go-kula.blogspot.com/2018/08/9-63-68.html

No comments:

Post a Comment