ದೇವ್ಯಾಂ ಸ ಚಾಜನಯದಿನ್ದ್ರಹುತಾಶನೌ
ದ್ವೌ ಪುತ್ರೌ ಯಮೌ ಕುಶಲವೌ ಬಲಿನೌ ಗುಣಾಢ್ಯೌ ।
ಶತ್ರುಘ್ನತೋ ಲವಣಮುದ್ಬಣಬಾಣದಗ್ಧಂ
ಕೃತ್ವಾ ಚಕಾರ ಮಧುರಾಂ ಪುರಮುಗ್ರವೀರ್ಯ್ಯಃ ॥೯.೧೭॥
ರಾಮಚಂದ್ರನು ಸೀತಾದೇವಿಯಲ್ಲಿ ಇನ್ದ್ರಾಗ್ನಿ ಸ್ವರೂಪರಾದ,
ಬಲಿಷ್ಠರಾಗಿರುವ, ಗುಣಾಢ್ಯರಾಗಿರುವ, ಅವಳಿ
ಜವಳಿಗಳಾದ ಕುಶ ಮತ್ತು ಲವ ಎನ್ನುವ ಇಬ್ಬರು ಮಕ್ಕಳನ್ನು ಹುಟ್ಟಿಸಿದನು. ಉತ್ಕೃಷ್ಟವಾದ
ವೀರ್ಯವುಳ್ಳ ಪರಮಾತ್ಮನು ವಿಶಿಷ್ಟವಾದ ತನ್ನ ಬಾಣವನ್ನು
ಶತ್ರುಘ್ನನಿಗೆ ನೀಡಿ, ಅವನಿಂದ ‘ಲವಣ’ ಎನ್ನುವ ಅಸುರನನ್ನು ಸಂಹಾರ ಮಾಡಿಸಿದನು. ತದನಂತರ, ಲವಣನಿದ್ದ ಮಧುವನವನ್ನು ಮಧುರಾ ಪಟ್ಟಣವಾಗಿ
ಅಭಿವೃದ್ಧಿಪಡಿಸಿದನು.
[‘ಲವಣನನ್ನು ಯಾರು ಕೊಲ್ಲುತ್ತೀರಿ’ ಎಂದು ರಾಮ ಕೇಳಿದಾಗ , ಎಲ್ಲರೂ ಮುಂದೆ ಬರುತ್ತಾರೆ. ಆಗ
ಶತ್ರುಘ್ನ: ‘ಎಲ್ಲರೂ ನಿನ್ನ ಸೇವೆಯನ್ನು ಮಾಡಿದ್ದಾರೆ, ಆದರೆ ನನಗೆ ನಿನ್ನ ಸೇವಯ ಅವಕಾಶ ಸಿಕ್ಕಿಲ್ಲ.
ಆದ್ದರಿಂದ ಈ ಕಾರ್ಯವನ್ನು ತನಗೊಪ್ಪಿಸಬೇಕು ಎಂದು ಕೇಳಿಕೊಳ್ಳುತ್ತಾನೆ. ಶತ್ರುಘ್ನನ
ಪ್ರಾರ್ಥನೆಯಂತೆ ಶ್ರೀರಾಮ ಶತ್ರುಘ್ನನಿಗೆ ವಿಶೇಷ ಬಾಣವೊಂದನ್ನು ನೀಡಿ, ಆತನನ್ನು
ಅಯೋಧ್ಯೆಯಿಂದಲೇ ಮಧುವನದ ರಾಜನಾಗಿ ರಾಜ್ಯಾಭಿಷೇಕ
ಮಾಡಿ, ‘ನೀನು ಅಲ್ಲೇ ಇದ್ದು ರಾಜ್ಯವನ್ನಾಳು’ ಎಂದು ಹೇಳಿ ಕಳುಹಿಸಿಕೊಡುತ್ತಾನೆ. ಈ ರೀತಿ ಬಾಣವನ್ನು ಪಡೆದ ಶತ್ರುಘ್ನ ಮಧುವನಕ್ಕೆ ಹೋಗಿ, ಲವಣನನ್ನು ಆ ಬಾಣದಿಂದ ಕೊಲ್ಲುತ್ತಾನೆ. ಆ ಬಾಣ ನಂತರ ಮರಳಿ ಭಗವಂತನಲ್ಲಿಗೇ ಬಂದು
ಸೇರುತ್ತದೆ. ಅಂತಹ ವಿಶೇಷ ಬಾಣವನ್ನು ಇಲ್ಲಿ ‘ಉದ್ಬಣ’
ಎಂದು ಕರೆದಿದ್ದಾರೆ. ಅಂದರೆ ಅತ್ಯಂತ ಭಯಂಕರವಾದ ಬಾಣ ಎಂದರ್ಥ. ಹೀಗೆ ಲವಣನನ್ನು ಕೊಂದು, ಮಧುರಾ
ಪಟ್ಟಣವನ್ನು ೨೪ನೇ ತ್ರೇತಾಯುಗದಲ್ಲೇ ನಿರ್ಮಿಸಲಾಯಿತು. ಈ ಮಧುರಾ ಪಟ್ಟಣದಲ್ಲೇ ಮುಂದೆ ಕಂಸ
ಹುಟ್ಟಿ ಬಂದಿರುವುದು. ಶ್ರೀಕೃಷ್ಣ ಉಗ್ರಸೇನನ
ಆಳ್ವಿಕೆಯೊಂದಿಗೆ ನೆಲೆಸಿರುವುದೂ ಇದೇ ಪಟ್ಟಣದಲ್ಲಿ. ಹೀಗೆ ಕೃಷ್ಣಾವತಾರದಲ್ಲಿ ಬರುವ ಮಧುರಾಪುರಿ
ರಾಮಚಂದ್ರನ ಕಾಲದಲ್ಲೇ ನಿರ್ಮಾಣವಾಗಿತ್ತು. ‘ಧ’ಕಾರದ ಮೂರನೇ ಅಕ್ಷರ ಎಂದು ಮಧುರಾ ನಗರವನ್ನು ಮಥುರಾ ಎಂದೂ ಕರೆಯುತ್ತಾರೆ. ಆದರೆ
ಮೂಲ ಹೆಸರು ಮಧುರಾ]
ಕೋಟಿತ್ರಯಂ ಸ ನಿಜಘಾನ ತಥಾsಸುರಾಣಾಂ ಗನ್ಧರ್ವಜನ್ಮ ಭರತೇನ ಸತಾ
ಚ ಧರ್ಮ್ಮಮ್ ।
ಸಂಶಿಕ್ಷಯನ್ನಯಜದುತ್ತಮಕಲ್ಪಕೈಃ
ಸ್ವಂ ಯಜ್ಞೈರ್ಭವಾಜಮುಖಸತ್ಸಚಿವಾಶ್ಚ ಯತ್ರ
॥೯.೧೮॥
ಹಾಗೆಯೇ, ರಾಮಚಂದ್ರನು ಭರತನ ಮೂಲಕ, ಗಂಧರ್ವರ ರೂಪದಲ್ಲಿ ಇರುವ (ಶೈವಾಕ್ಷ ಎನ್ನುವ ಗಂಧರ್ವನ
ಮಕ್ಕಳಾದ) ಮೂರು ಕೋಟಿ ಅಸುರ ಸೇನೆಯನ್ನು ನಾಶ ಮಾಡಿದನು. ಸಜ್ಜನರ ಧರ್ಮವನ್ನು ತಿಳಿಸಿಕೊಡುತ್ತಾ,
ಬ್ರಹ್ಮ ರುದ್ರಾದಿಗಳೇ ಸಹಾಯಕರಾಗಿರುವ, ಉತ್ಕೃಷ್ಟವಾದ ಯಜ್ಞದಿಂದ ತನ್ನನ್ನೇ ತಾನು ರಾಮಚಂದ್ರ
ಪೂಜಿಸಿಕೊಂಡನು. (ಲೋಕಶಿಕ್ಷಣಾರ್ಥ)
ಅಥಶೂದ್ರತಪಶ್ಚರ್ಯ್ಯಾನಿಹತಂ
ವಿಪ್ರಪುತ್ರಕಮ್ ।
ಉಜ್ಜೀವಯಾಮಾಸ ವಿಭುರ್ಹತ್ವಾ ತಂ
ಶೂದ್ರತಾಪಸಮ್ ॥೯.೧೯॥
ಕೆಲವು ಕಾಲದ ನಂತರ, (ದುಷ್ಟ ಹಾಗು ಅತಿ ನೀಚ ಕಾರ್ಯ ಸಾಧನೆಗಾಗಿ) ತಪಸ್ಸು
ಮಾಡುತ್ತಿದ್ದ (ಶಂಭೂಕ ಎನ್ನುವ) ಶೂದ್ರನನ್ನು
ಶ್ರೀರಾಮ ಸಂಹಾರ ಮಾಡಿ, ಒಬ್ಬ ವೃದ್ಧ ಬ್ರಾಹ್ಮಣನ ಪುತ್ರನಿಗೆ ಜೀವದಾನ ಮಾಡುತ್ತಾನೆ.
[ಶಂಭೂಕ ಧರ್ಮಕ್ಕೆ ಚ್ಯುತಿ ಬರುವಂತೆ ನಡೆದುಕೊಂಡಿದ್ದರಿಂದ,
ಅಪಮೃತ್ಯು ಇಲ್ಲದೇ ಇದ್ದ ರಾಮರಾಜ್ಯದಲ್ಲಿ, ಇದ್ದಕ್ಕಿದ್ದಂತೆ ಬ್ರಾಹ್ಮಣ ಪುತ್ರನೊಬ್ಬ
ಸಾವನ್ನಪ್ಪುತ್ತಾನೆ. ಈ ವಿಷಯ ರಾಮನ ರಾಜಸಭೆಗೆ ತಿಳಿದಾಗ, ಅಲ್ಲಿದ್ದ ನಾರದ ಮುನಿಗಳು, ಯಾರೋ ತಮ್ಮ ಅಳವಿಗೆ ಮೀರಿದ ಕೆಲಸಕ್ಕೆ
ಕೈ ಹಾಕಿದ್ದಾರೆ. ಆದ್ದರಿಂದ ಹೀಗಾಗಿದೆ
ಎನ್ನುವುದನ್ನು ಶ್ರೀರಾಮಚಂದ್ರನಿಗೆ ತಿಳಿಸುತ್ತಾರೆ.
ಈ ವಿಷಯದ ಮೂಲವನ್ನು ಹುಡುಕಿಕೊಂಡು ಹೋದಾಗ, ಶೈವಲ ಪರ್ವತದ ಉತ್ತರಭಾಗದಲ್ಲಿ, ಒಂದು
ಸರೋವರದ ಬಳಿ ತಲೆಕೆಳಗಾಗಿ ಜೋತು ಬಿದ್ದು, ತಪಸ್ಸುಗೈಯುತ್ತಿರುವ ಒಬ್ಬ ತಪಸ್ವಿ ರಾಮಚಂದ್ರನಿಗೆ ಕಾಣಿಸುತ್ತಾನೆ. ಆತನ ತಪಸ್ಸಿನ ಹಿಂದಿನ
ನೀಚ ಕಾರಣವನ್ನು ತಿಳಿದ ಶ್ರೀರಾಮ, ತಕ್ಷಣ ತನ್ನ ಕತ್ತಿಯಿಂದ ಆ ತಪಸ್ವಿಯ ತಲೆಯನ್ನು
ಕತ್ತರಿಸುತ್ತಾನೆ. ಅಧರ್ಮದ ತಲೆ ಕತ್ತರಿಸಿದಾಗ ಧರ್ಮ ಬದುಕಿಕೊಂಡಿತು. ಒಬ್ಬನ ಸಾವು ಇನ್ನೊಬ್ಬನ
ಬದುಕಾಯಿತು. ಶಂಭೂಕ ಸಾಯುತ್ತಿದ್ದಂತೆ ಬ್ರಾಹ್ಮಣನ ಪುತ್ರ ವೃದ್ಧ ದಂಪತಿಗಳಲ್ಲಿ ಸಂತಸವನ್ನು
ತುಂಬುತ್ತಾ ಎದ್ದುಕುಳಿತನು]
[ಇಷ್ಟಕ್ಕೂ ಈ ಶೂದ್ರ ತಪಸ್ವಿ ಯಾರು? ಆತನ ಅಪರಾಧವೇನು? ಆಚಾರ್ಯರು ಮುಂದಿನ
ಶ್ಲೋಕದಲ್ಲಿ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ: ]
ಜಙ್ಘನಾಮಾsಸುರಃ ಪೂರ್ವಂ ಗಿರಿಜಾವರದಾನತಃ ।
ಬಭೂವ ಶೂದ್ರಃ ಕಲ್ಪಾಯುಃ ಸ
ಲೋಕಕ್ಷಯಕಾಮ್ಯಯಾ ॥೯.೨೦॥
ಜಙ್ಘ ಎನ್ನುವ ಒಬ್ಬ ಅಸುರನಿದ್ದ. ಅವನು ಮೊದಲು ಪಾರ್ವತೀ ದೇವಿಯ
ವರದಿಂದ ಕಲ್ಪದ ಕೊನೆಯ ತನಕ ಬಾಳುವ ಶಕ್ತಿಯನ್ನು
ಪಡೆದುಕೊಂಡಿದ್ದ. ಅವನು ಲೋಕ ನಾಶವಾಗಬೇಕು ಎನ್ನುವ ಬಯಕೆಯಿಂದ ತಪಸ್ಸನ್ನು ಮಾಡಿದ.
ತಪಶ್ಚಚಾರ ದುರ್ಬುದ್ಧಿರಿಚ್ಛನ್
ಮಾಹೇಶ್ವರಂ ಪದಮ್ ।
ಅನನ್ಯವಧ್ಯಂ ತಂ ತಸ್ಮಾಜ್ಜಘಾನ
ಪುರುಷೋತ್ತಮಃ ॥೯.೨೧॥
ಹಾಗೆಯೇ, ರುದ್ರ ಪದವಿಯನ್ನು ಪಡೆಯಬೇಕು ಎನ್ನುವ ಬಯಕೆಯಿಂದ(ಅಂದರೆ:
ತನಗೆ ವರವನ್ನು ನೀಡಿದ ಮಾತೆ ಪಾರ್ವತಿಯನ್ನು , ತಾನು ಶಿವ ಪದವಿಗೇರಿ, ತನ್ನ ಹೆಂಡತಿಯಾಗಿ ಪಡೆಯುವ ನೀಚ ಬಯಕೆಯಿಂದ)
ತಪಸ್ಸನ್ನು ಮಾಡುತ್ತಿದ್ದ. ಇಂತಹ, ಬೇರೆ ಯಾರೂ ಕೊಲ್ಲಲಾಗದ ಅವನನ್ನು, ನಾರಾಯಣನು ಸಂಹಾರ ಮಾಡುತ್ತಾನೆ [ಈ ಹಿನ್ನೆಲೆಯನ್ನೇ ಅರಿಯದ ಕೆಲವರು
ಶ್ರೀರಾಮ ಶೂದ್ರ ತಪಸ್ವಿಯನ್ನು ಏಕೆ ಕೊಂದ ಎಂದು ತಿಳಿಯದೇ ಗೊಂದಲಕ್ಕೊಳಗಾಗುತ್ತಾರೆ]
ಕನ್ನಡ ಪದ್ಯರೂಪ: https://go-kula.blogspot.com/2018/08/9-17-21.html
ಕನ್ನಡ ಪದ್ಯರೂಪ: https://go-kula.blogspot.com/2018/08/9-17-21.html
No comments:
Post a Comment