ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, August 16, 2018

Mahabharata Tatparya Nirnaya Kannada 9.75-9.82


ಸ ತೈ ಸಮಾವೃತೋ ವಿಭುರ್ಯ್ಯಯೌ ದಿಶಂ ತದೋತ್ತರಾಮ್
ಅನನ್ತಸೂರ್ಯ್ಯದೀಧಿತಿರ್ದ್ದುರನ್ತಸದ್ಗುಣಾರ್ಣ್ಣವಃ ೯.೭೫

ಅನಂತ ಸೂರ್ಯರ ಕಾಂತಿಯನ್ನು ಹೊಂದಿರುವ, ಸದ್ಗುಣಗಳಿಗೆ ಕಡಲಿನಂತೆ ಇರುವ, ಸರ್ವಸಮರ್ಥನಾದ ನಾರಾಯಣನು, ಅಲ್ಲಿ ಸೇರಿದ ಸಮಸ್ತರೊಂದಿಗೆ ಅಯೋಧ್ಯಾ ಪಟ್ಟಣದಿಂದ ಉತ್ತರದಿಕ್ಕಿಗೆ ತೆರಳಿದನು.

ಸಹಸ್ರಸೂರ್ಯ್ಯಮಣ್ಡಲಜ್ವಲತ್ಕಿರೀಟಮೂರ್ದ್ಧಜಃ
ಸುನೀಲಕುನ್ತಳಾವೃತಾಮಿತೇನ್ದುಕಾನ್ತಸನ್ಮುಖಃ ೯.೭೬

ಸುರಕ್ತಪದ್ಮಲೋಚನಃ ಸುವಿದ್ಯುದಾಭಕುಣ್ಡಲಃ
ಸುಹಾಸವಿದ್ರುಮಾಧರಃ ಸಮಸ್ತವೇದವಾಗ್ರಸಃ ೯.೭೭

ದಿವಾಕರೌಘಕೌಸ್ತುಭಪ್ರಭಾಸಕೋರುಕನ್ಧರಃ
ಸುಪೀವರೋನ್ನತೋರುಸಜ್ಜಗದ್ಭರಾಂಸಯುಗ್ಮಕಃ ೯.೭೮

ಸುವೃತ್ತದೀರ್ಘಪೀವರೋಲ್ಲಸದ್ಭುಜದ್ವಯಾಙ್ಕಿತಃ 
ಜಗದ್ ವಿಮತ್ಥ್ಯ ಸಮ್ಭೃತಃ ಶರೋsಸ್ಯ ದಕ್ಷಿಣೇ ಕರೇ ೯.೭೯

ಸ್ವಯಂ ಸ ತೇನ ನಿರ್ಮ್ಮಿತೋ ಹತೌ ಮಧುಶ್ಚ ಕೈಟಭಃ
ಶರೇಣ ತೇನ ವಿಷ್ಣುನಾ ದದೌ ಚ ಲಕ್ಷ್ಮಣಾನುಜೇ ೯.೮೦

(ಶ್ರೀರಾಮ ಹೇಗೆ ಕಾಣಿಸುತ್ತಿದ್ದ ಎನ್ನುವ ವರ್ಣನೆ ಇಲ್ಲಿದೆ)  ಶ್ರೀರಾಮಚಂದ್ರ ಸಹಸ್ರ ಸೂರ್ಯಮಂಡಲದಂತೆ ಶೋಭಿಸುವ ಕಿರೀಟವನ್ನು ಶಿರಸ್ಸಿನಲ್ಲಿ ಧರಿಸಿರುವ, ಕಪ್ಪಾದ ಗುಂಗುರು ಕೂದಲಿನಿಂದ ಕೂಡಿರುವ, ಸುಂದರವಾದ ಮುಖ ಕಮಲವುಳ್ಳವನಾಗಿದ್ದ.  
ಆತನ ಕಣ್ಣ ತುದಿ ಕೆಂಪಾಗಿತ್ತು. ಮಿಂಚಿನಂತೆ ತೋರುವ ಕುಂಡಲವನ್ನು ಶ್ರೀರಾಮ ಧರಿಸಿದ್ದ.  ಒಳ್ಳೆಯ ನಗೆಬೀರುವ ಕೆಂಪನೆಯ ತುಟಿ ಆತನದಾಗಿತ್ತು.  ಸಮಸ್ತ ವೇದ ವಚನದ  ರಸವೆಲ್ಲಾ ಅವನ ತುಟಿಯ ಮೇಲಿತ್ತು.
ಸೂರ್ಯನಂತೆ ಕಾಂತಿಯುಳ್ಳ  ಕೌಸ್ತುಭವನ್ನು ಧರಿಸಿದ ಕಂಠ, ದಪ್ಪ ಹಾಗು ಎತ್ತರವಾಗಿರುವ, ಜಗತ್ತನ್ನೇ ಹೊರಬಲ್ಲ ಎರಡು ಭುಜಗಳಿಂದ ಶ್ರೀರಾಮ ಕಂಗೊಳಿಸುತ್ತಿದ್ದ.
ಉರುಟಾಗಿ, ಉದ್ದವಾಗಿರುವ, ದಪ್ಪವಾಗಿರುವ ಎರಡು ತೋಳುಗಳಿಂದ ರಾಮಚಂದ್ರ ಚಿಹ್ನಿತನಾಗಿದ್ದ. ಬಲಗೈನಲ್ಲಿ ಜಗತ್ತಿನಲ್ಲಿರುವ ಎಲ್ಲಾ ದೈತ್ಯರನ್ನು ನಾಶ ಮಾಡಿರುವ ಬಾಣವನ್ನು ಆತ ಹಿಡಿದಿದ್ದ. ಯಾವ ಬಾಣವನ್ನು ಸ್ವಯಂ ರಾಮಚಂದ್ರನೇ ನಿರ್ಮಿಸಿ, ಲಕ್ಷ್ಮಣನ ತಮ್ಮನಾದ ಶತ್ರುಘ್ನನಿಗೆ ಕೊಟ್ಟಿದ್ದನೋ,  ಅದೇ ಬಾಣದಿಂದ  ಮಧು-ಕೈಟಭರು ಸತ್ತಿದ್ದರು.

ಸ ಶತ್ರುಸೂದನೋsವಧೀನ್ಮಧೋಃ ಸುತಂ ರಸಾಹ್ವಯಮ್
ಶರೇಣ ಯೇನ ಚಾಕಾರೋತ್ ಪುರೀಂ ಚ ಮಾಧುರಾಭಿಧಾಮ್ ೯.೮೧

ಸಮಸ್ತಸಾರಸಮ್ಭವಂ ಶರಂ ದಧಾರ ತಂ ಕರೇ
ಸ ವಾಮಬಾಹುನಾ ಧನುರ್ದ್ದಧಾರ ಶಾರ್ಙ್ಗಸಙ್ಜ್ಞಿತಮ್ ೯.೮೨

ಶತ್ರುಘ್ನ ಮಧುವಿನ(ಮಧು ನಾಮಕ ದೈತ್ಯನ) ಮಗನಾದ, ರಸವೊಂದರ ಹೆಸರುಳ್ಳ(ಲವಣ ಎನ್ನುವ ) ದೈತ್ಯನನ್ನು  ಈ ಬಾಣದಿಂದಲೇ ಕೊಂದಿದ್ದ. ಮಧುರಾ  ಪಟ್ಟಣವನ್ನೂ ಆ  ಬಾಣದ ಸಹಾಯದಿಂದಲೇ ಶತ್ರುಘ್ನ ನಿರ್ಮಿಸಿದ್ದ. ಈರೀತಿ ಎಲ್ಲದರ ಸಾರದಿಂದ ಕೂಡಿರುವ ಆ ಬಾಣವನ್ನು ಶ್ರೀರಾಮ ತನ್ನ ಬಲಗೈಯಲ್ಲಿ ಹಿಡಿದಿದ್ದ. ಎಡಗೈಯಲ್ಲಿ ಶಾರ್ಙ್ಗ ಎನ್ನುವ ಧನುಸ್ಸನ್ನು ಹಿಡಿದಿದ್ದ.

ಕನ್ನಡ ಪದ್ಯರೂಪ: https://go-kula.blogspot.com/2018/08/9-75-82.html

No comments:

Post a Comment