ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 26, 2018

Mahabharata Tatparya Nirnaya Kannada 9.130-9.137


ಪುಂವ್ಯತ್ಯಾಸೇನ ಚೋಕ್ತಿಃ ಸ್ಯಾತ್ ಪುರಾಣಾದಿಷು ಕುತ್ರಚಿತ್
ಕೃಷ್ಣಾಮಾಹ ಯಥಾ ಕೃಷ್ಣೋ ಧನಞ್ಜಯಶರೈರ್ಹತಾನ್   ೧೩೦

ಶತಂ ದುರ್ಯ್ಯೋಧನಾದೀಂಸ್ತೇ ದರ್ಶಯಿಷ್ಯ ಇತಿ ಪ್ರಭುಃ
ಭೀಮಸೇನಹತಾಸ್ತೇ ಹಿ ಜ್ಞಾಯನ್ತೇ ಬಹುವಾಕ್ಯತಃ          ೧೩೧

ಇತಿಹಾಸ ಪುರಾಣಾದಿಗಳಲ್ಲಿ, ಕೆಲವೊಂದು ಪ್ರಸಂಗಗಳಲ್ಲಿ  ಪುರುಷವ್ಯತ್ಯಾಸದಿಂದ ಕೂಡಿರುವ  ಹೇಳಿಕೆಗಳಿರುತ್ತದೆ. ಉದಾಹರಣೆಗೆ: ಶ್ರೀಕೃಷ್ಣನು ಕಾಡಿನಲ್ಲಿ ದ್ರೌಪದಿಯನ್ನು ಕುರಿತು “ನೂರು ಜನ ದುರ್ಯೋಧನಾದಿಗಳು  ಅರ್ಜುನನ ಬಾಣದಿಂದ ಸಾಯುವುದನ್ನು ನಿನಗೆ ತೋರಿಸುತ್ತೇನೆ” ಎಂದು ಹೇಳುವ ‘ಸಂಕ್ಷಿಪ್ತ’ ವಾಕ್ಯವನ್ನು ಭಾರತದಲ್ಲಿ ಕಾಣುತ್ತೇವೆ.  ಆದರೆ ಮುಂದೆ ‘ಬಹುವಾಕ್ಯ'ಗಳ ವಿವರಣೆಯನ್ನು ನೋಡಿದಾಗ,  ಮೇಲಿನ ಮಾತು ಪುರುಷವ್ಯತ್ಯಾಸದ ನಿರೂಪಣೆ ಮತ್ತು  ಬಹಳ ಮಂದಿ ಕೌರವರನ್ನು ಕೊಂದಿದ್ದು ಭೀಮಸೇನ ಎನ್ನುವುದು ತಿಳಿಯುತ್ತದೆ.
[ ಈ ಪ್ರಸಂಗದ ವಿವರ ಮಹಾಭಾರತದ ಉದ್ಯೋಗಪರ್ವದಲ್ಲಿದೆ(೫.೧೦):  ತತೋ ದುರ್ಯೋಧನೋ ಮಂದಃ ಸಹಾಮಾತ್ಯಃ ಸಬಾಂಧವಃ ನಿಷ್ಠಾಮಾಪತ್ಸ್ಯತೇ ಮೂಢಃ  ಕ್ರುದ್ಧೇ  ಗಾಂಡೀವಧನ್ವನೀ] 

ವಿಸ್ತಾರೇ ಭೀಮನಿಹತಾಃ ಸಙ್ಕ್ಷೇಪೇsರ್ಜ್ಜನಪಾತಿತಾಃ 
ಉಚ್ಯನ್ತೇ ಬಹವಶ್ಚಾನ್ಯೇ ಪುಂವ್ಯತ್ಯಾಸಸಮಾಶ್ರಯಾತ್  ೯.೧೩೨

ವಿಸ್ತಾರೇ ಕೃಷ್ಣನಿಹತಾ ಬಲಭದ್ರಹತಾ ಇತಿ
ಉಚ್ಯನ್ತೇ ಚ ಕ್ವಚಿತ್ ಕಾಲವ್ಯತ್ಯಾಸೋsಪಿ ಕ್ವಚಿದ್ ಭವೇತ್ ೯.೧೩೩

ಒಟ್ಟಿನಲ್ಲಿ ನೋಡಿದರೆ: ವಿಸ್ತಾರವಾಗಿ ನುಡಿಯಬೇಕಾದರೆ ಭೀಮಸೇನ ದುರ್ಯೋಧನಾಧಿಗಳನ್ನು ಕೊಂದಿದ್ದಾನೆ ಎಂದೂ, ಆದರೆ ಸಂಕ್ಷೇಪದಲ್ಲಿ  ಅರ್ಜುನ ಕೊಂದ ಎಂದಂತೆ  ಕಥೆಯನ್ನು ಹೇಳಿರುವುದು ತಿಳಿಯುತ್ತದೆ. ಈ ರೀತಿ ಸಂಕ್ಷೇಪ ಮತ್ತು ವಿಸ್ತಾರಗಳಲ್ಲಿ ಚಿಕ್ಕ  ವ್ಯತ್ಯಾಸವಿರುತ್ತದೆ. ಇದನ್ನು ತಿಳಿಯಲು  ಸಂಕ್ಷೇಪ ಮತ್ತು ವಿಸ್ತಾರ ಎರಡನ್ನೂ ಅಧ್ಯಯನ ಮಾಡಬೇಕಾಗುತ್ತದೆ. ಇದನ್ನೇ ಪುರುಷ ವ್ಯತ್ಯಾಸ ಎಂದು ಕರೆಯುತ್ತಾರೆ.
(ಇನ್ನೊಂದು ಉದಾಹರಣೆಯನ್ನು ಹೇಳುವುದಾದರೆ) ವಿಸ್ತಾರವಾದ ಕಥೆಯನ್ನು ಹೇಳುವಾಗ ಕೃಷ್ಣ ಕೊಂದಿದ್ದಾನೆ ಎನ್ನುತ್ತಾರೆ. ಆದರೆ ಅದನ್ನೇ ಸಂಕ್ಷೇಪವಾಗಿ ಹೇಳುವಾಗ ಬಲರಾಮ ಕೊಂದಿದ್ದಾನೆ  ಎಂದಿದ್ದಾರೆ. ಅದರಿಂದಾಗಿ, ಬಹಳ ವಾಕ್ಯಗಳನ್ನು ನೋಡಿಯೇ ನಿರ್ಣಯ ಮಾಡಬೇಕು.

ಯಥಾ ಸುಯೋಧನಂ ಭೀಮಃ ಪ್ರಾಹಸತ್ ಕೃಷ್ಣಸನ್ನಿಧೌ
ಇತಿ ವಾಕ್ಯೇಷು ಬಹುಷು ಜ್ಞಾಯತೇ ನಿರ್ಣ್ಣಯಾದಪಿ  ೯.೧೩೪

ಅನಿರ್ಣ್ಣಯೇ ತು ಕೃಷ್ಣಸ್ಯ ಪೂರ್ವಮುಕ್ತಾ ಗತಿಸ್ತತಃ 
ವ್ಯತ್ಯಾಸಾಸ್ತ್ವೇವಮಾದ್ಯಾಶ್ಚ ಪ್ರಾತಿಲೋಮ್ಯಾದಯಸ್ತಥಾ  ೯.೧೩೫

ದೃಶ್ಯನ್ತೇ ಭಾರತಾದ್ಯೇಷು ಲಕ್ಷಣಗ್ರನ್ಥತಶ್ಚ ತೇ
ಜ್ಞಾಯನ್ತೇ ಬಹುಭಿರ್ವಾಕ್ಯೈರ್ನ್ನಿರ್ಣ್ಣಯಗ್ರನ್ಥತಸ್ತಥಾ ೯.೧೩೬

ತಸ್ಮಾದ್ ವಿನಿರ್ಣ್ಣಯಗ್ರನ್ಥಾನಾಶ್ರಿತ್ಯೈವ ಚ ಲಕ್ಷಣಮ್
ಬಹುವಾಕ್ಯಾನುಸಾರೇಣ ನಿರ್ಣ್ಣಯೋsಯಂ ಮಯಾ ಕೃತಃ ೯.೧೩೭


ಕೆಲವೊಮ್ಮೆ ಕಾಲವ್ಯತ್ಯಾಸದ ನಿರೂಪಣೆ ಇರುತ್ತದೆ. ಉದಾಹರಣೆಗೆ: ಇನ್ದ್ರಪ್ರಸ್ಥದಲ್ಲಿ ಜಾರಿಬಿದ್ದ ದುರ್ಯೋಧನನನ್ನು ಕಂಡು  ‘ಕೃಷ್ಣನ ಸನ್ನಿಧಿಯಲ್ಲೇ ಭೀಮಸೇನ ದುರ್ಯೋಧನನನ್ನು ನೋಡಿ ಅಪಹಾಸ ಮಾಡಿದ’ ಎನ್ನುವುದು ಬಹುವಾಕ್ಯಗಳ ನಿರೂಪಣೆ. ಹಾಗಾಗಿ  ನಿರ್ಣಯವನ್ನು ತೆಗೆದುಕೊಂಡಾಗ, ಭೀಮಸೇನ ಕೃಷ್ಣನ ಸನ್ನಿಧಿಯಲ್ಲೇ ದುರ್ಯೋಧನನನ್ನು  ಹಾಸ್ಯ ಮಾಡಿದ್ದು  ಎನ್ನುವುದು ತಿಳಿಯುತ್ತದೆ. ನಿರ್ಣಯ ಮಾಡದೇ ಹೋದರೆ,  ಈ ಘಟನೆ ನಡೆಯುವ ಮೊದಲೇ ಕೃಷ್ಣ ಇಂದ್ರಪ್ರಸ್ಥದಿಂದ  ತೆರಳಿದ್ದ ಎಂದುಕೊಳ್ಳುತ್ತೇವೆ^.  ಆದ್ದರಿಂದ ಬಹಳವಾಕ್ಯಗಳು ಏನನ್ನು ಹೇಳುತ್ತವೆ ಎನ್ನುವುದನ್ನು ನೋಡಿಯೇ  ‘ಕಾಲ ವ್ಯತ್ಯಾಸ ಶೈಲಿಯ ನಿರೂಪಣೆ’ ಯಾವುದು ಎನ್ನುವುದನ್ನು ತಿಳಿಯಬೇಕಾಗುತ್ತದೆ.
ಭಾರತಾದಿಗಳಲ್ಲಿರುವ ವ್ಯತ್ಯಾಸ , ಪ್ರಾತಿಲೋಮ್ಯಾ ಮೊದಲಾದ ಶೈಲಿಯ ನಿರೂಪಣೆ  ‘ಲಕ್ಷಣಗ್ರಂಥ’ದ  ನೆರವಿನಿಂದ ತಿಳಿಯಲ್ಪಡುತ್ತವೆ. ಇದಲ್ಲದೆ ‘ಬಹಳ ವಾಕ್ಯ’ಗಳಿಂದ ಮತ್ತು ‘ನಿರ್ಣಯ ಗ್ರಂಥ’ದಿಂದ ಈ ವಿವರ ತಿಳಿಯುತ್ತದೆ.
“ಆ ಕಾರಣದಿಂದ ನಿರ್ಣಯ ಗ್ರಂಥ, ಲಕ್ಷಣ ಗ್ರಂಥ ಮತ್ತು  ಬಹಳ ವಾಕ್ಯಗಳನ್ನು ಅನುಸರಿಸಿ, ಈ ನಿರ್ಣಯವನ್ನು ನಾನು ಮಾಡಿದ್ದೇನೆ”  ಎಂದಿದ್ದಾರೆ ಆಚಾರ್ಯರು.

[^ಭಾಗವತದಲ್ಲಿ(೧೦.೮೪.೪): ‘ಜಹಾಸ ಭೀಮಸ್ತಂ ದೃಷ್ಟ್ವಾ ಸ್ತ್ರೀಯೋ ಭೂಪಾಶ್ಚ ಕೇಚನ ನಿವಾರ್ಯಮಾಣಾ  ಅಪ್ಯನ್ಗ   ರಾಜ್ಞಾ ಕೃಷ್ಣಾನುಮೋದಿತಾಃ’ :  ಧರ್ಮರಾಜನಿಂದ ತಡೆಯಲ್ಪಟ್ಟವರಾದರೂ ಕೂಡಾ, ಕೃಷ್ಣ ಅನುಮೋದಿಸಿದ್ದುದರಿಂದ ಅವರು ಜೋರಾಗಿ ನಕ್ಕರು’ ಎಂದಿದ್ದಾರೆ. ಆದರೆ ಮಹಾಭಾರತದ ಸಭಾಪರ್ವದಲ್ಲಿ (೪೫.೪೮) :  ಗತೇ ದ್ವಾರಾವತೀಂ ಕೃಷ್ಣೇ ಸಾತ್ವತಪ್ರವರೇ ನೃಪ ಏಕೋ ದುರ್ಯೋಧನೋ ರಾಜಾ ಶಕುನಿಶ್ಚಾಪಿ ಸೌಬಲಃ ‘ಕೃಷ್ಣ ಹೋದಮೇಲೆ, ದುರ್ಯೋಧನ-ಶಕುನಿ ಮೊದಲಾದವರೆಲ್ಲಾ ಸಭೆಯಲ್ಲಿ ಅವಮಾನವನ್ನು ಅನುಭವಿಸಿದರು’ ಎನ್ನಲಾಗಿದೆ.  ಆದರೆ ಮುಂದೆ ದುರ್ಯೋಧನ ದೃತರಾಷ್ಟ್ರನಲ್ಲಿ ಈ ಘಟನೆಯ ಕುರಿತು ಹೇಳುವಾಗ: ‘ಕೃಷ್ಣ, ಭೀಮಸೇನ, ಎಲ್ಲರೂ ನನ್ನನ್ನು  ನೋಡಿ ನಕ್ಕರು.  ಅದರಿಂದಾಗಿ ನನಗೆ ಅವಮಾನವಾಯಿತು’  ಎಂದು ಹೇಳುವುದನ್ನು ಕಾಣುತ್ತೇವೆ. ಆದ್ದರಿಂದ, ಬಹಳವಾಕ್ಯಗಳು ಏನನ್ನು ಹೇಳುತ್ತವೆ ಎನ್ನುವುದನ್ನು ನೋಡಿಯೇ,  ‘ಕಾಲ ವ್ಯತ್ಯಾಸ ಶೈಲಿಯ ನಿರೂಪಣೆ’ ಯಾವುದು ಎನ್ನುವುದನ್ನು ತಿಳಿಯಬೇಕು. ಹೀಗೆ ನಾವು ನಮ್ಮ ಬುದ್ಧಿಯನ್ನು ಉಪಯೋಗಿಸಿ ಕಾಲಾನುಕ್ರಮವನ್ನು ಚಿಂತನೆ ಮಾಡಬೇಕು]. 

No comments:

Post a Comment