ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, August 2, 2018

Mahabharata Tatparya Nirnaya Kannada 9.12-9.16


ಸ ಬ್ರಹ್ಮರುದ್ರಮರುದಶ್ವಿದಿವಾಕರಾದಿಮೂರ್ದ್ಧನ್ಯರತ್ನಪರಿಘಟ್ಟಿತಪಾದಪೀಠಃ  
ನಿತ್ಯಂ ಸುರೈಃ ಸಹ ನರೈರಥ ವಾನರೈಶ್ಚ ಸಮ್ಬೂಜ್ಯಮಾನಚರಣೋ ರಮತೇ ರಮೇಶಃ      ೯.೧೨

ಬ್ರಹ್ಮ-ರುದ್ರ-ಇಂದ್ರ-ಅಶ್ವೀದೇವತೆಗಳು, ಸೂರ್ಯ, ಮೊದಲಾದ ಎಲ್ಲರ ಕಿರೀಟದ ರತ್ನಗಳು ಸ್ಪರ್ಶಿಸುವ ಪಾದಕಮಲವುಳ್ಳವನು ಶ್ರೀರಾಮಚಂದ್ರ.  ಇಂತಹ ಶ್ರೀರಾಮ ಯಾವಾಗಲೂ ದೇವತೆಗಳಿಂದ, ಮನುಷ್ಯರಿಂದ, ಕಪಿಗಳಿಂದಲೂ , ಪಾದಪೂಜೆ ಹೊಂದಿದವನಾಗಿ ಕ್ರೀಡಿಸುತ್ತಿದ್ದನು.

ತಸ್ಯಾಖಿಲೇಶಿತುರನಾದ್ಯನುಗೈವ ಲಕ್ಷ್ಮೀಃ ಸೀತಾಬಿಧಾ ತ್ವರಮಯತ್ ಸ್ವರತಂ ಸುರೇಶಮ್
ನಿತ್ಯಾವಿಯೋಗಿಪರಮೋಚ್ಚನಿಜಸ್ವಭಾವಾ ಸೌನ್ದರ್ಯವಿಭ್ರಮಸುಲಕ್ಷಣಪೂರ್ವಭಾವಾ        ೯.೧೩

ಎಲ್ಲದ್ದಕ್ಕೂ ಒಡೆಯನಾದ ಶ್ರೀರಾಮನಿಗೆ  ವಿಯೋಗರಹಿತಳಾದ ಶ್ರೀಲಕ್ಷ್ಮಿ ಅನಾಧಿಕಾಲದಿಂದಲೂ ಜೊತೆಗೇ ಇರುವವಳು. ಅಂತಹ ಶ್ರೀಲಕ್ಷ್ಮಿಯ ಅವತಾರವಾದ ಸೀತಾದೇವಿ ತನ್ನಿಂದ ತಾನೇ ಸಂತೋಷಪಡುವ ಶ್ರೀರಾಮನನ್ನು  ಸಂತಸಗೊಳಿಸುತ್ತಿದ್ದಳು.  ಉತ್ಕೃಷ್ಟವಾಗಿರುವ, ಆನಂದಾದಿಗಳಿಂದ ಅಭಿವ್ಯಕ್ತವಾಗಿರುವ ಸ್ವರೂಪವುಳ್ಳ, ಸೌಂದರ್ಯ, ಕಾಂತಿ,  ಮೊದಲಾದ  ಉತ್ಕೃಷ್ಟ ಗುಣಲಕ್ಷಣಗಳಿಂದ ಕೂಡಿದವಳಾದ ಸೀತಾಮಾತೆ  ಪರಮಾತ್ಮನೊಂದಿಗೆ  ವಿಹರಿಸಿದಳು.

ರೇಮೇ ತಯಾ ಸ ಪರಮಃ ಸ್ವರತೋsಪಿ ನಿತ್ಯಂ ನಿತ್ಯೋನ್ನತಪ್ರಮದಭಾರಭೃತಸ್ವಭಾವಃ
ಪೂರ್ಣ್ಣೋಡುರಾಜಸುವಿರಾಜಿತಸನ್ನಿಶಾಸು ದೀಪ್ಯನ್ನಶೋಕವನಿಕಾಸು ಸುಪುಷ್ಟಿತಾಸು      ೯.೧೪

ತಾನು ಸಂತಸಪಡಲು ಬೇರೊಬ್ಬರ ಅಗತ್ಯವಿಲ್ಲದೇ ಹೋದರು, ಉತ್ಕೃಷ್ಟನಾದ ಆ ನಾರಾಯಣನು, ಯಾವಾಗಲೂ ಕೂಡಾ, ಉನ್ನತವಾಗಿರುವ, ಸ್ವರೂಪಭೂತವಾದ ಸಂತೋಷದಿಂದ ತುಂಬಿದ್ದರೂ, ಪೂರ್ಣಚಂದ್ರನಿಂದ ಕೂಡಿರುವ ಬೆಳದಿಂಗಳಲ್ಲಿ, ಪುಷ್ಪಗಳಿಂದ ಕೂಡಿರುವ ಅಶೋಕವನದಲ್ಲಿ ಶೋಭಿಸುತ್ತಾ, ಸೀತಾದೇವಿಯೊಂದಿಗೆ ವಿಹರಿಸಿದನು.

ಗಾಯನ್ತಿ ಚೈನಮನುರಕ್ತಧಿಯಃ ಸುಕಣ್ಠಾ ಗನ್ಧರ್ವಚಾರಣಗಣಾಃ ಸಹ ಚಾಪ್ಸರೋಭಿಃ
ತಂ ತುಷ್ಟುವುರ್ಮ್ಮುನಿಗಣಾಃ ಸಹಿತಾಃ ಸುರೇಶೈ ರಾಜಾನ ಏನಮನುಯಾನ್ತಿ ಸದಾsಪ್ರಮತ್ತಾಃ        ೯.೧೫

ಇವನನ್ನು ಗಂಧರ್ವರು, ಚಾರಣರು , ಮೊದಲಾದವರ ಸಮೂಹವು, ಅಪ್ಸರೆಯರಿಂದ ಕೂಡಿಕೊಂಡು, ಪ್ರೀತಿಯುಕ್ತರಾಗಿ,  ದೇವರ ಮಹಿಮೆಯಿಂದ ತೊಯ್ದ ಮನಸ್ಸುಳ್ಳವರಾಗಿ ಗಾನ ಮಾಡುತ್ತಿದ್ದರು. ದೇವತೆಗಳಿಂದ ಕೂಡಿರುವ ಮುನಿ ಗಣಗಳು ಸ್ತೋತ್ರಮಾಡಿದರು. ಸಾಮಂತ ರಾಜರು ಅತ್ಯಂತ ಜಾಗರೂಕರಾಗಿ(ಅಹಂಕಾರ/ಮದ ರಹಿತರಾಗಿ) ಇವನನ್ನು ಅನುಸರಿಸುತ್ತಿದ್ದರು.

ಏವಂ ತ್ರಯೋದಶಸಹಸ್ರಮಸೌ ಸಮಾಸ್ತು ಪೃಥ್ವೀಂ ರರಕ್ಷ ವಿಜಿತಾರಿರಮೋಘವೀರ್ಯ್ಯಃ
ಆನನ್ದಮಿನ್ದುರಿವ ಸನ್ದಧದಿನ್ದಿರೇಶೋ ಲೋಕಸ್ಯ ಸಾನ್ದ್ರಸುಖವಾರಿಧಿರಪ್ರಮೇಯಃ ೯.೧೬

ಈರೀತಿಯಾಗಿ, ಹದಿಮೂರು ಸಾವಿರ ವರ್ಷಗಳ ತನಕ ಶ್ರೀರಾಮ ಭೂಮಿಯನ್ನು ರಕ್ಷಣೆ ಮಾಡುತ್ತಿದ್ದನು. ಲಕ್ಷ್ಮಿಗೆ ಒಡೆಯನಾದ ರಾಮನು ಚಂದ್ರನಂತೆ ಲೋಕಕ್ಕೆ ಆನಂದವನ್ನು ತರುತ್ತಿದ್ದನು. ಲೋಕಕ್ಕೆ ಆನಂದವನ್ನು ಕೊಡುತ್ತಾ, ಭೂಮಿಯನ್ನು ಭಗವಂತ ರಕ್ಷಣೆ ಮಾಡಿದನು.
ಇಲ್ಲಿ ಭಗವಂತನನ್ನು ‘ಸಾನ್ದ್ರಸುಖವಾರಿಧಿಃ’  ಎನ್ನುವ ವಿಶೇಷಣದಿಂದ ಸಂಬೋಧಿಸಿದ್ದಾರೆ. ನಿಭಿಡವಾದ ಆನಂದಗಳಿಗೆ ಸಮುದ್ರದಂತೆ ಇರುವ ಭಗವಂತ ಸಾನ್ದ್ರಸುಖವಾರಿಧಿಃ. ಇಂತಹ ಭಗವಂತ ‘ಅಪ್ರಮೇಯಃ’. ಅವನನ್ನು ‘ಹೀಗೇ’ ಎಂದು ತಿಳಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ.

ಕನ್ನಡ ಪದ್ಯರೂಪ: https://go-kula.blogspot.com/2018/08/9-12-16.html

No comments:

Post a Comment