ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 18, 2018

Mahabharata Tatparya Nirnaya Kannada 9.89-9.93


ದಧ್ರೇ ಚ್ಛತ್ರಂ ಹನೂಮಾನ್ ಸ್ರವದಮೃತಮಯಂ ಪೂರ್ಣ್ಣಚನ್ದ್ರಾಯುತಾಭಂ
ಸೀತಾ ಸೈವಾಖಿಲಾಕ್ಷ್ಣಾಂ ವಿಷಯಮುಪಗತಾ ಶ್ರೀರಿತಿ ಹ್ರೀರಥೈಕಾ
ದ್ವೇಧಾ ಭೂತ ದಧಾರ ವ್ಯಜನಮುಭಯತಃ ಪೂರ್ಣ್ಣಚನ್ದ್ರಾಂಶುಗೌರಂ
ಪ್ರೋದ್ಯದ್ಭಾಸ್ವತ್ಪ್ರಭಾಭಾ ಸಕಲಗುಣತನುರ್ಭೂಷಿತಾ ಭೂಷಣೈಃ ಸ್ವೈಃ ೯.೮೯

ಪೂರ್ಣಚಂದ್ರರ ಕಾಂತಿಯಂತೆ ಕಾಂತಿಯುಳ್ಳ, ಅಮೃತವನ್ನು ಸುರಿಸುವ ಶ್ವೇತ ಚ್ಛತ್ರವನ್ನು ಹನುಮಂತ ಹಿಡಿದನು. ಸೂರ್ಯನಂತೆ ಕಾಂತಿಯುಳ್ಳವಳಾಗಿ, ಸಮಸ್ತ ಗುಣವೇ ಮೈವೆತ್ತು ಬಂದವಳಾಗಿ, ತನ್ನ ಭೂಷಣಗಳಿಂದ ದೇವರ ಪಕ್ಕದಲ್ಲೇ, ಹಿಂದೆ ಅದೃಶ್ಯಳಾಗಿದ್ದ ಸೀತಾದೇವಿ  ಶ್ರೀ ಮತ್ತು ಭೂ (ಹ್ರೀ)ಎನ್ನುವ ಎರಡು ರೂಪದಿಂದ ಎಲ್ಲರ ಕಣ್ಣಿಗೆ ಕಾಣಿಸಿಕೊಂಡಳು. ಹೀಗೆ ಎರಡು ರೂಪದಿಂದ ಎರಡು ಕಡೆಯಿಂದ ಎರಡು ಚಾಮರವನ್ನು ಹಿಡಿದು ಸೀತೆ  ನಿಂತಳು.
[ಸ್ಕಂಧ ಪುರಾಣದಲ್ಲಿ(ವೈಷ್ಣವ ಖಂಡ, ಅಯೋಧ್ಯಾ ಮಹಾತ್ಮೇ, ೬.೧೩೬.-೮) ಈ ವಿವರ ಬರುತ್ತದೆ:  ರಾಮಸ್ಯ ಸವ್ಯಪಾರ್ಶ್ವೇ ತು ಸಪದ್ಮಾ ಶ್ರೀಃ  ಸಮಾಶ್ರಿತಾ ದಕ್ಷಿಣೇ  ಹ್ರೀರ್ವಿಶಾಲಾಕ್ಷೀ  ವ್ಯವಸಾಯಸ್ತಥಾSಗ್ರತಃ ನಾನಾವಿಧಾ-ಯುಧಾನ್ಯತ್ರ ಧನುರ್ಜ್ಯಪ್ರಭ್ರುತೀನಿ ಚ   ಅನುವೃಜಂತಿ ಕಾಕುತ್ಸ್ಥಂ  ಸರ್ವೇಪುರುಷವಿಗ್ರಹಾಃ ವೇದೋ ಬ್ರಾಹ್ಮಣರೂಪೇಣ ಸಾವಿತ್ರೀ ಸವ್ಯದಕ್ಷಿಣೇ ಓಙ್ಕಾರೋSಥ ವಷಟ್ಕಾರಃ ಸರ್ವೇ ರಾಮಂ ತದಾSವೃಜನ್’ 
ವಾಲ್ಮೀಕಿ ರಾಮಾಯಣದಲ್ಲೂ(ಉತ್ತರ ಕಾಂಡ, ೧೨೨. ೬-೮) ಇದೇ ಮಾತನ್ನು ಸ್ವಲ್ಪ ವ್ಯತ್ಯಾಸವಾಗಿ  ಹೇಳಿದ್ದಾರೆ: ರಾಮಸ್ಯ ದಕ್ಷಿಣೇ ಪಾರ್ಶ್ವೇ ಸಪದ್ಮಾ ಶ್ರೀರೂಪಾಶ್ರಿತಾ  ಸವ್ಯೇ ತು ಹ್ರೀರ್ಮಹಾದೇವಿ ವ್ಯವಸಾಯಸ್ತಥಾSಗ್ರತಃ ಶರಾ  ನಾನಾವಿಧಾಶ್ಚಾಪಿ ಧನುರಾಯತಮುತ್ತಮಮ್   ತಥಾSSಧಾನಿ ತೇ ಸರ್ವೇ ಯಯುಃ  ಪುರುಷವಿಗ್ರಹಾಃ ವೇದಾ  ಬ್ರಾಹ್ಮಣರೂಪೇಣ  ಗಾಯತ್ರೀ  ಸರ್ವರಕ್ಷಿಣೀ ಓಙ್ಕಾರೋSಥ ವಷಟ್ಕಾರಃ ಸರ್ವೇ ರಾಮಮನುವ್ರತಾಃ ]

ಸಾಕ್ಷಾಚ್ಚಕ್ರತನುಸ್ತಥೈವ ಭರತಶ್ಚಕ್ರಂ ದಧದ್ ದಕ್ಷಿಣೇ-
ನಾsಯಾತ್ ಸವ್ಯತ ಏವ ಶಙ್ಖವರಭೃಚ್ಛಙ್ಕಾತ್ಮಕಃ ಶತ್ರುಹಾ
ಅಗ್ರೇ ಬ್ರಹ್ಮಪುರೋಗಮಾಃ ಸುರಗಣಾ ವೇದಾಶ್ಚ ಸೋಙ್ಕಾರಕಾಃ
ಪಶ್ಚಾತ್ ಸರ್ವಜಗಜ್ಜಗಾಮ ರಘುಪಂ ಯಾನ್ತಂ ನಿಜಂ ಧಾಮ ತಮ್ ೯.೯೦

ಚಕ್ರದ ಅಭಿಮಾನಿಯಾಗಿರುವ ಭರತನು  ಶ್ರೀರಾಮನ  ಬಲಬದಿಯಲ್ಲಿ ಸುದರ್ಶನ ಚಕ್ರವನ್ನು ಹಿಡಿದು ನಡೆದನು. ಶಂಖಾಭಿಮಾನಿಯಾಗಿ ಶತ್ರುಘ್ನನು ಎಡಗಡೆಯಿಂದ ಪಾಂಚಜನ್ಯ ಶಂಖವನ್ನು ಹಿಡಿದು ನಡೆದನು. ರಾಮಚಂದ್ರನ ಮುಂದೆ ಚತುರ್ಮುಖ ಬ್ರಹ್ಮನೇ ಮೊದಲಾದ ದೇವತೆಗಳು, ಪ್ರಣವದಿಂದ ಸಹಿತರಾದ  (ಓಙ್ಕಾರ ಅಭಿಮಾನಿ ದೇವತೆಗಳ ಸಹಿತರಾದ) ವೇದಾಭಿಮಾನಿ ದೇವತೆಗಳು  ನಡೆದರು. ದೇವರ ಹಿಂದೆ, ಸಮಸ್ತ ಮುಕ್ತಿಯೋಗ್ಯ ಜೀವರಿದ್ದರು.

ತಸ್ಯ ಸೂರ್ಯ್ಯಸುತಪೂರ್ವವಾನರಾ ದಕ್ಷಿಣೇನ ಮನುಜಾಸ್ತು ಸವ್ಯತಃ
ರಾಮಜನ್ಮಚರಿತಾನಿ ತಸ್ಯ ತೇ ಕೀರ್ತ್ತಯನ್ತ ಉಚಥೈರ್ದ್ದ್ರುತಂ ಯಯುಃ ೯.೯೧

ಸುಗ್ರೀವ ಮೊದಲಾದ ಕಪಿಗಳು ಬಲಗಡೆಯಿಂದ ತೆರಳಿದರು.  ಸೇವಕರು, ಆತ್ಮೀಯರು, ಮೊದಲಾದ ಮನುಷ್ಯರು ಎಡಗಡೆಯಿಂದ ನಡೆದರು. ಎಲ್ಲರೂ ವೈದಿಕಸೂಕ್ತಗಳಿಂದ ಮನೋಹರವಾದ  ರಾಮನ ಜನ್ಮಚರಿತೆಯನ್ನು  ಕೀರ್ತನೆ ಮಾಡುತ್ತಾ ಸಾಗಿದರು.

ಗನ್ಧರ್ವೈರ್ಗ್ಗೀಯಮಾನೋ ವಿಬುಧಮುನಿಗಣೈರಬ್ಜಸಮ್ಭೂತಿಪೂರ್ವೈ-
ರ್ವೇದೋದಾರಾರ್ತ್ಥವಾಗ್ಭಿಃ ಪ್ರಣಿಹಿತಸುಮನಃ ಸರ್ವದಾ ಸ್ತೂಯಮಾನಃ
ಸರ್ವೈರ್ಭೂತೈಶ್ಚ ಭಕ್ತ್ಯಾ ಸ್ವನಿಮಿಷನಯನೈಃ ಕೌತುಕಾದ್ ವೀಕ್ಷ್ಯಮಾಣಃ
ಪ್ರಾಯಾಚ್ಛೇಷಗರುತ್ಮದಾದಿಕನಿಜೈಃ ಸಂಸೇವಿತಃ ಸ್ವಂ ಪದಮ್              ೯.೯೨

ಗಂಧರ್ವರೆಲ್ಲಾ ಸ್ತೋತ್ರಮಾಡುತ್ತಿದ್ದರು. ಬ್ರಹ್ಮಾದಿ ದೇವತೆಗಳು ವೇದದ ಉತ್ಕೃಷ್ಟವಾದ ವಚನಗಳಿಂದ ಸ್ತೋತ್ರಮಾಡುತ್ತಾ,  ಪುಷ್ಪವನ್ನು  ಭಗವಂತನ ಮೇಲೆ ಸುರಿಸುತ್ತಾ ಸಾಗುತ್ತಿದ್ದರು. ಎಲ್ಲರೂ ಅಚ್ಚರಿ ತುಂಬಿದ ಕಣ್ಗಳಿಂದ ಭಗವಂತನನ್ನು ನೋಡುತ್ತಿದ್ದರು. ಶ್ರೀರಾಮನು ಗರುಡ-ಶೇಷ ಮೊದಲಾದ ಎಲ್ಲರಿಂದ ಕೂಡಿಕೊಂಡು ತನ್ನ ಧಾಮವನ್ನು ಕುರಿತು ನಡೆದ.

ಬ್ರಹ್ಮರುದ್ರಗರುಡೈಃ ಸಶೇಷಕೈಃ ಪ್ರೋಚ್ಯಮಾನಸುಗುಣೋರುವಿಸ್ತರಃ
ಆರುರೋಹ ವಿಭುರಮ್ಬರಂ ಶನೈಸ್ತೇ ಚ ದಿವ್ಯವಪುಷೋsಭವಂಸ್ತದಾ      ೯.೯೩

ಹೀಗೆ ಎಲ್ಲರ ಜೊತೆಗೆ ಸಾಗುತ್ತಾ, ಬ್ರಹ್ಮ, ರುದ್ರ ಮೊದಲಾದವರಿಂದ ಭಗವಂತನ ಗುಣಗಾನವಾಗುತ್ತಿರುವಂತೆಯೇ, ಮೆಲ್ಲಗೆ ಭೂಮಿಯನ್ನು ಬಿಟ್ಟ ಶ್ರೀರಾಮ, ನಿಧಾನವಾಗಿ ಆಕಾಶವನ್ನು ಏರಿದ. ಜೊತೆಗಿದ್ದವರೆಲ್ಲರೂ ರಾಮಚಂದ್ರನ ಪ್ರಭಾವದಿಂದ ತಮ್ಮ ಪ್ರಾಕೃತ ದೇಹದ ದೋಷಗಳನ್ನೆಲ್ಲವನ್ನು ಕಳಚಿಕೊಂಡು ಮೆಲ್ಲನೆ ಭಗವಂತನೊಂದಿಗೆ ಮೇಲಕ್ಕೇರಿದರು.

ಕನ್ನಡ ಪದ್ಯರೂಪ: https://go-kula.blogspot.com/2018/08/9-89-93.html

No comments:

Post a Comment