ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, August 10, 2018

Mahabharata Tatparya Nirnaya Kannada 9.44-9.49


ತಸ್ಯೈವಮಬ್ಜಭವಲೋಕಸಮಾಮಿಮಾಂ ಕ್ಷ್ಮಾಂ ಕೃತ್ವಾsನುಶಾಸತ ಉದೀಕ್ಷ್ಯ ಗುಣಾನ್ ಧರಾಯಾಃ
ವೈಶೇಷ್ಯಮಾತ್ಮಸದನಸ್ಯ ಹಿ ಕಾಙ್ಕ್ಷಮಾಣಾ ವೃನ್ದಾರಕಾಃ ಕಮಲಜಂ ಪ್ರತಿ ತಚ್ಛಶಂಸುಃ   ೯.೪೪

ಈರೀತಿಯಾಗಿ ರಾಮಚಂದ್ರನು  ಭೂಮಿಯನ್ನು  ಬ್ರಹ್ಮ ಲೋಕಕ್ಕೆ ಸಮವನ್ನಾಗಿ ಮಾಡಿ ರಕ್ಷಿಸುತ್ತಿರಲು, (ಶ್ರೀರಾಮನ ಆಡಳಿತ ಭೂಮಿಯನ್ನು ಬ್ರಹ್ಮಲೋಕಕ್ಕೆ ಸಮವನ್ನಾಗಿ ಮಾಡಿದ್ದನ್ನು ಕಂಡು),  ಭೂಮಿಯ ಗುಣಗಳನ್ನು ಕಂಡು, ತಮ್ಮ ಲೋಕದ ಹೆಚ್ಚುಗಾರಿಕೆಯನ್ನು(ಉತ್ತಮತ್ತ್ವವನ್ನು) ಬಯಸುವವರಾದ ದೇವತೆಗಳು ಬ್ರಹ್ಮನನ್ನು ಕುರಿತು  ಹೇಳಿದರು.

ಆಮನ್ತ್ರ್ಯ ತೈಃ ಸಹ ವಿಭುರ್ಭಗವತ್ಪ್ರಯಾಣಂ ಸ್ವೀಯಾಯ ಸದ್ಮನ ಇಯೇಷ ದಿದೇಶ ಚೈವ
ರುದ್ರಂ ಸ್ವಲೋಕಗಮನಾಯ ರಘೂತ್ತಮಸ್ಯ ಸಮ್ಪ್ರಾರ್ತ್ಥನೇ ಸ ಚ ಸಮೇತ್ಯ ವಿಭುಂ ಯಯಾಚೇ ೯.೪೫

ಆ ಎಲ್ಲಾ ದೇವತೆಗಳೊಂದಿಗೆ ಚಿಂತನೆ ಮಾಡಿದ ಬ್ರಹ್ಮದೇವರು, ಭಗವಂತನು ತನ್ನ ಲೋಕಕ್ಕೆ ತೆರಳಬೇಕು ಎಂದು ಶ್ರೀರಾಮಚಂದ್ರನಲ್ಲಿ  ಪ್ರಾರ್ಥನೆ ಮಾಡಲು ರುದ್ರನನ್ನು ಕಳುಹಿಸುತ್ತಾರೆ. ಈರೀತಿ ನಿಯೋಗಿಸಲ್ಪಟ್ಟ ಸದಾಶಿವನು  ರಾಮಚಂದ್ರನ ಬಳಿಗೆ ಬಂದು  ದೇವತೆಗಳ ಕೋರಿಕೆಯನ್ನು ವಿವೇದಿಸಿಕೊಳ್ಳುತ್ತಾನೆ. 

ಏಕಾನ್ತಮೇತ್ಯ ರಘುಪೇಣ ಸಮಸ್ತಕಾಲೋ ರುದ್ರೋ ಜಗಾದ ವಚನಂ ಜಗತೋ ವಿಧಾತುಃ
ವೈಶೇಷ್ಯಮಾತ್ಮಭವನಸ್ಯ ಹಿ ಕಾಙ್ಕ್ಷಮಾಣಾಸ್ತ್ವಾಮರ್ತ್ಥಯನ್ತಿ ವಿಬುಧಾಃ ಸಹಿತಾ ವಿಧಾತ್ರಾ       ೯.೪೬

ಸಂಹಾರಕಾರಕನಾದ ರುದ್ರನು ರಾಮಚಂದ್ರನಿದ್ದ ಏಕಾಂತ ಪ್ರದೇಶವನ್ನು ಹೊಂದಿ, ಬ್ರಹ್ಮದೇವರ ಮಾತನ್ನು ನಿವೇದಿಸಿಕೊಳ್ಳುತ್ತಾ ಹೇಳುತ್ತಾನೆ: “‘ಭೂಮಿಗಿಂತ ತಮ್ಮ ಲೋಕದ ಉತ್ತಮತ್ತ್ವವನ್ನು ಬೇಡುತ್ತಾ ದೇವತೆಗಳು ನಿನ್ನನ್ನು ಬೇಡುತ್ತಿದ್ದಾರೆ” ಎಂದು.
[ಇಲ್ಲಿ ‘ಸಮಸ್ತಕಾಲೋ ರುದ್ರಃ’ ಎಂದು ಹೇಳಿದ್ದಾರೆ. ಇದರ ಹಿನ್ನೆಲೆಯಾಗಿ  ವಾಲ್ಮೀಕಿ ರಾಮಾಯಣದಲ್ಲಿ ಹೀಗೊಂದು ಮಾತಿದೆ: ಕಾಲಸ್ತಾಪಸರೂಪೇಣ  ರಾಜದ್ವಾರಮುಪಾಗಮತ್’(ಉತ್ತರಕಾಂಡ, ೧೦೩.೧)  , ಮಾಯಾಸಂಭಾವಿತೋ ವೀರ ಕಾಲಃ ಸರ್ವಸಮಾಹರಃ(ಉತ್ತರಕಾಂಡ, ೧೦೪.೨)     ಇಲ್ಲಿ   ‘ಕಾಲ’ ಎಂದು  ಯಾರನ್ನು ಸಂಬೋಧಿಸಿದ್ದಾರೆ  ಎನ್ನುವುದು ನಮಗೆ ತಿಳಿಯುವುದಿಲ್ಲ. ಏಕೆಂದರೆ ಕಾಲಾಭಿಮಾನಿ ದೇವತೆಯನ್ನೂ ಕಾಲ ಎಂದು ಕರೆಯುತ್ತಾರೆ. ಯಮನನ್ನೂ ಕಾಲ ಎಂದು ಕರೆಯುತ್ತಾರೆ, ರುದ್ರನನ್ನೂ ಕಾಲ ಎಂದು ಕರೆಯುತ್ತಾರೆ. ಇದಕ್ಕೆ ನಿರ್ಣಯವನ್ನು ನೀಡುತ್ತಾ ಆಚಾರ್ಯರು ಸಮಸ್ತಕಾಲೋ ರುದ್ರಃ’ ಎಂದು ಹೇಳಿದ್ದಾರೆ.  ಹಾಗಾಗಿ ಇಲ್ಲಿ ಸರ್ವ ಸಮಾಹರಃ ಎನ್ನುವ ವಾಲ್ಮೀಕಿ ರಾಮಾಯಣದ ಮಾತನ್ನು ಮತ್ತು ಕಾಲಃ ಎನ್ನುವುದನ್ನು ಜೋಡಿಸಿಕೊಳ್ಳಬೇಕು. ತಥಾಚ :  ಸರ್ವನಾಶಕತ್ವ ಎನ್ನುವ ಲಿಂಗ ಮುಖ್ಯವಾಗಿ ಇರುವುದು ಸದಾಶಿವನಿಗೇ ,  ತಥಾಚ :ಸರ್ವಸಮಾಹರತ್ವ ಎನ್ನುವ ಲಿಂಗವನ್ನು ಇಟ್ಟುಕೊಂಡು ಕಾಲ ಶಬ್ದದ ವಿವೇಚನೆ ಮಾಡಿದಾಗ ಬಂದವನು ಯಮ ಅಲ್ಲ, ರುದ್ರ ಎನ್ನುವುದು ಸ್ಪಷ್ಟವಾಗುತ್ತದೆ].

ಪುತ್ರಸ್ತವೇಶ ಕಮಲಪ್ರಭವಸ್ತಥಾsಹಂ ಪೌತ್ರಸ್ತು ಪೌತ್ರಕವಚೋ ಯದಪಿ ಹ್ಯಯೋಗ್ಯಮ್
ಸಮ್ಭಾವಯನ್ತಿ ಗುಣಿನಸ್ತದಹಂ ಯಯಾಚೇ ಗನ್ತುಂ ಸ್ವಸದ್ಮ ನತಿಪೂರ್ವಮಿತೋ ಭವನ್ತಮ್         ೯.೪೭

ಶಿವ ಶ್ರೀರಾಮನಲ್ಲಿ ಈರೀತಿ ನಿವೇದಿಸಿಕೊಳ್ಳುತ್ತಾನೆ:  “ಒಡೆಯನೇ, ಬ್ರಹ್ಮನು ನಿನ್ನ ಮಗನಾಗಿದ್ದಾನೆ. ನಾನು ನಿನ್ನ  ಮೊಮ್ಮಗನಾಗಿದ್ದೇನೆ. ನಿಜವಾಗಿಯೂ ಮೊಮ್ಮಗನ ಮಾತು ಅಯೋಗ್ಯವಾದರೂ ಕೂಡಾ, ಗುಣಿಗಳು, ಅವನ ಮೇಲೆ ಪ್ರೀತಿ ಉಳ್ಳವರು, ಅದನ್ನು ಗೌರವಿಸುತ್ತಾರೆ. ಆ ಕಾರಣದಿಂದ ನಾನು ನಮಸ್ಕಾರಪೂರ್ವಕವಾಗಿ ನಿನ್ನನ್ನು ಇಲ್ಲಿಂದ ಸ್ವಧಾಮಕ್ಕೆ ತೆರಳುವಂತೆ ಬೇಡುತ್ತಿದ್ದೇನೆ”.

ಯತ್ಕಾರ್ಯ್ಯಸಾಧನಕೃತೇ ವಿಬುಧಾರ್ತ್ಥಿತಸ್ತ್ವಂ ಪ್ರಾದುಶ್ಚಕರ್ತ್ಥ ನಿಜರೂಪಮಶೇಷಮೇವ
ತತ್ ಸಾಧಿತಂ ಹಿ ಭವತಾ ತದಿತಃ ಸ್ವಧಾಮ ಕ್ಷಿಪ್ರಂ ಪ್ರಯಾಹಿ ಹರ್ಷಂ ವಿಬುಧೇಷು ಕುರ್ವನ್     ೯.೪೮

“ಯಾವ ಕಾರ್ಯವನ್ನು ಮಾಡಲೋಸುಗ ನೀನು ದೇವತೆಗಳಿಂದ ಪ್ರಾರ್ಥಿತನಾಗಿ, ಇಲ್ಲಿ ನಿನ್ನ ಸ್ವರೂಪವನ್ನು ಪ್ರಾದುರ್ಭಾವಗೊಳಿಸಿದೆಯೋ, ಅದು ನಿನ್ನಿಂದ ಸಾಧಿಸಲ್ಪಟ್ಟಿದೆ. (ಅವತಾರ ಮಾಡಿದ ಉದ್ದೇಶ ಪೂರ್ಣಗೊಂಡಿದೆ) ಆ ಕಾರಣದಿಂದ, ಇಲ್ಲಿಂದ  ಶೀಘ್ರದಲ್ಲಿ, ದೇವತೆಗಳಲ್ಲಿ ಹರ್ಷವನ್ನು ಉಂಟುಮಾಡುತ್ತಾ,  ನಿನ್ನ ಧಾಮಕ್ಕೆ ತೆರಳಬೇಕು ಎನ್ನುವುದು ನಮ್ಮ ಪ್ರಾರ್ಥನೆ”.

ಓಮಿತ್ಯುವಾಚ ಭಗವಾಂಸ್ತದಶೇಷಮೇವ ಶ್ರುತ್ವಾ ರಹಸ್ಯಥ ತನುಸ್ತ್ವಪರಾ ಹರಸ್ಯ
ದುರ್ವಾಸನಾಮಯುಗಿಹಾsಗಮದಾಶು ರಾಮ ಮಾಂ ಭೋಜಯ ಕ್ಷುಧಿತಮಿತ್ಯಸಕೃದ್ ಬ್ರುವಾಣಾ೯.೪೯

ಶಿವನಿಂದ ಎಲ್ಲವನ್ನೂ ಕೂಡಾ ರಹಸ್ಯದಲ್ಲಿ ಕೇಳಿದ ಶ್ರೀರಾಮಚಂದ್ರ,  ‘ಹಾಗೆಯೇ ಆಗಲಿ’ ಎಂದು ಹೇಳಿದನಂತೆ. ಅದೇ ಸಮಯದಲ್ಲಿ ಅಲ್ಲಿ ಶಿವನ ಇನ್ನೊಂದು ರೂಪದ ಪ್ರವೇಶವಾಗುತ್ತದೆ.  ‘ರಾಮಚಂದ್ರನೇ, ಶೀಘ್ರವಾಗಿ ಹಸಿದಿರುವ ನನಗೆ  ಉಣ್ಣಿಸು’ ಎಂದು ಮತ್ತೆ ಮತ್ತೆ ಹೇಳುವ ದುರ್ವಾಸ ಎನ್ನುವ ಶಿವನ   ರೂಪ ಅದಾಗಿರುತ್ತದೆ.

ಕನ್ನಡ ಪದ್ಯರೂಪ: https://go-kula.blogspot.com/2018/08/9-44-49.html

No comments:

Post a Comment