ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, August 13, 2018

Mahabharata Tatparya Nirnaya Kannada 9.60-9.62


ಅಥ ರಾಘವಃ ಸ್ವಭವನೋಪಗತೌ ವಿದಧೇ ಮತಿಂ ಸಹ ಜನೈರಖಿಲೈಃ
ಸಮಘೋಷಯಚ್ಚ ಯ ಇಹೇಚ್ಛತಿ ತತ್ ಪದಮಕ್ಷಯಂ ಸಪದಿ ಮೈತ್ವಿತಿ ಸಃ ೯.೬೦

ತದನಂತರ ರಾಮಚಂದ್ರನು ತಾನೂ ಕೂಡಾ ಸ್ವಧಾಮಕ್ಕೆ  ತೆರಳಬೇಕು  ಎಂದು ನಿಶ್ಚಯ ಮಾಡಿದನು. (ಒಬ್ಬನೇ ಅಲ್ಲ, ಯೋಗ್ಯರಾದ ಯಾವ-ಯಾವ ಜೀವರಿದ್ದಾರೆ  ಅವರ ಜೊತೆಗೆ ಹೊರಡಬೇಕು ಎಂದು ನಿಶ್ಚಯಿಸಿದನು).
‘ಇಲ್ಲಿರುವ ಯಾರು,  ಎಂದೂ ನಾಶವಿಲ್ಲದ ಲೋಕವನ್ನು ಬಯಸುತ್ತೀರೋ, ಅವರು ಕೂಡಲೇ ನನ್ನನ್ನು ಹಿಂಬಾಲಿಸಿ ಬನ್ನಿ’ ಎಂದು ರಾಮಚಂದ್ರ ಘೋಷಣೆಯನ್ನು ಮಾಡಿಸಿದನು.

ಶ್ರುತ್ವಾ ತು ತದ್ ಯ ಇಹ ಮೋಕ್ಷಪದೇಚ್ಛವಸ್ತೇ ಸರ್ವೇ ಸಮಾಯಯುರಥಾsತೃಣಮಾಪಿಪೀಲಮ್
ರಾಮಾಜ್ಞಯಾ ಗಮನಶಕ್ತಿರಭೂತ್ ತೃಣಾದೇರ್ಯ್ಯೇ ತತ್ರ ದೀರ್ಘಭವಿನೋ ನಹಿ ತೇ ತದೈಚ್ಛನ್ ೯.೬೧

ರಾಮಚಂದ್ರನ ವಿಶಿಷ್ಟವಾದ ಘೋಷಣೆಯನ್ನು ಕೇಳಿದ, ಮೋಕ್ಷವನ್ನು ಬಯಸಿದ ತೃಣಾದಿ ಸ್ಥಾವರ ಜೀವಗಳು, ಇರುವೆಯ ಪರ್ಯಂತವಾದ ಜಂಗಮ ಜೀವಗಳೆಲ್ಲ ಹೊರಟು ಬಂದವು.  ಹುಲ್ಲು ಮೊದಲಾದ ಸ್ಥಾವರಗಳಿಗೂ ಕೂಡಾ ನಡೆಯುವ ಶಕ್ತಿ(ಗಮನಶಕ್ತಿ) ಭಗವಂತನ ಕೃಪೆಯಿಂದ ಒದಗಿ ಬಂತು. ಅಲ್ಲಿ ಧೀರ್ಘಕಾಲ ಸಂಸಾರವನ್ನು ಹೊಂದಿರುವ ಯೋಗ್ಯತೆ ಯಾರಿಗಿತ್ತೋ ಅವರು ರಾಮಚಂದ್ರನ ಜೊತೆಗೆ ಬರಲು  ಬಯಸಲಿಲ್ಲಾ.

ಸಂಸ್ಥಾಪಯಾಮಾಸ ಕುಶಂ ಸ್ವರಾಜ್ಯೇ ತೈಃ ಸಾಕಮೇವ ಚ ಲವಂ ಯುವರಾಜಮೀಶಃ
ಸಂಸ್ಥಾಪ್ಯ ವಾಲಿತನಯಂ ಕಪಿರಾಜ್ಯ ಆಶು ಸೂರ್ಯ್ಯಾತ್ಮಜೋsಪಿ ರಘುವೀರಸಮೀಪಮಾಯಾತ್ ೯.೬೨

ಶ್ರೀರಾಮಚಂದ್ರನು ತನ್ನ ರಾಜ್ಯದಲ್ಲಿ ಕುಶನನ್ನು ರಾಜನನ್ನಾಗಿ ಅಭಿಷೇಕ ಮಾಡಿದನು. ಜೊತೆಗೇ, ಲವನನ್ನು  ಯುವರಾಜನನ್ನಾಗಿ ಮಾಡಿದನು. ಆಗಲೇ ಸುಗ್ರೀವನೂ ಕೂಡಾ ಅಂಗದನನ್ನು ಕಪಿಯ ರಾಜ್ಯದ ರಾಜನನ್ನಾಗಿ  ಅಭಿಷೇಕ ಮಾಡಿ, ರಾಮಚಂದ್ರನ ಬಳಿ ಬಂದನು.

ಕನ್ನಡ ಪದ್ಯರೂಪ:   https://go-kula.blogspot.com/2018/08/9-60-62.html

No comments:

Post a Comment