ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, June 30, 2018

Mahabharata Tatparya Nirnaya Kannada 8.99-8.104

ಸಶೈಲಶೃಙ್ಗಾಸಿಪರಶ್ವಧಾಯುದೈರ್ನ್ನಿಶಾಚರಾಣಾಮಯುತೈರನೇಕೈಃ ।
ತಚ್ಛ್ವಾಸವೇಗಾಭಿಹತೈಃ ಕಥಞ್ಚಿದ್ ಗತೈಃ ಸಮೀಪಂ ಕಥಮಪ್ಯಬೋಧಯತ್         ॥೮.೯೯॥

ರಾವಣನ ಆಜ್ಞೆಯಂತೆ, ಹತ್ತು ಸಹಸ್ರ ರಾಕ್ಷಸರ ಗುಂಪುಗಳು ಸೇರಿ,   ಬೆಟ್ಟದ ತುಂಡು, ಕತ್ತಿ, ಕೊಡಲಿ ಮೊದಲಾದ ಆಯುಧಗಳಿಂದ, ಕುಂಭಕರ್ಣನನ್ನು  ಎಚ್ಚರಿಸತೊಡಗಿದರು. ಆತನ ಉಸಿರಾಟದ ವೇಗಕ್ಕೆ ಸಿಲುಕಿ  ದೂರದೂರ ಹೋಗಿ ಬೀಳುತ್ತಿದ್ದ ರಾಕ್ಷಸರು, ಹೇಗೋ ಅವನ ಬಳಿ ತಲುಪಿ, ಈ ಎಲ್ಲಾ ಆಯುಧಗಳನ್ನು ಬಳಸಿಯಾದಮೇಲೆ, ಆತ ಕಷ್ಟಪಟ್ಟು ಎದ್ದುನಿಂತ.

ಶೈಲೋಪಮಾನಸ್ಯ ಚ ಮಾಂಸರಾಶೀನ್ ವಿಧಾಯ ಭಕ್ಷಾನಪಿ ಶೋಣಿತಹ್ರದಾನ್ ।
ಸುತೃಪ್ತಮೇನಂ ಪರಮಾದರೇಣ ಸಮಾಹ್ವಯಾಮಾಸ ಸಭಾತಳಾಯ                   ॥೮.೧೦೦॥

ರಾವಣನು ಕುಂಭಕರ್ಣನಿಗೆ ಪರ್ವತ ಸದೃಶವಾದ ಮಾಂಸದ ರಾಶಿಯನ್ನು, ರಕ್ತದ ಮಡುವನ್ನು, ಬಗೆಬಗೆಯ  ಭಕ್ಷವನ್ನೂ ನೀಡಿ, ಆತನನ್ನು ಸಂತೃಪ್ತಗೊಳಿಸಿ, ಗೌರವದಿಂದ ತನ್ನ ಸಭೆಗೆ ಕರೆಸಿದನು.

ಉವಾಚ ಚೈನಂ ರಜನೀಚರೇನ್ದ್ರಃ ಪರಾಜಿತೋsಸ್ಮ್ಯದ್ಯ ಹಿ ಜೀವತಿ ತ್ವಯಿ ।
ರಣೇ ನರೇಣೈವ ಚ ರಾಮನಾಮ್ನಾ ಕುರುಷ್ವ ಮೇ ಪ್ರೀತಿಮಮುಂ ನಿಹತ್ಯ            ॥೮.೧೦೧॥

ಸಭೆಗೆ ಬಂದ ಕುಂಭಕರ್ಣನನ್ನುದ್ದೆಶಿಸಿ ರಾವಣ ಹೇಳುತ್ತಾನೆ: “ನೀನು ಬದುಕಿರುವಾಗಲೇ, ರಾಮನೆಂಬ ಹೆಸರಿನ ಮನುಷ್ಯನಿಂದ ಯುದ್ಧದಲ್ಲಿ ಸೋತಿದ್ದೇನೆ. ಅಂತಹ ರಾಮನನ್ನು  ನೀನು ಕೊಂದು ನನಗೆ ಪ್ರಿಯವನ್ನು ಉಂಟುಮಾಡು” ಎಂದು.

ಇತೀರಿತಃ ಕಾರಣಮಪ್ಯಶೇಷಂ ಶ್ರುತ್ವಾ ಜಗರ್ಹಾಗ್ರಜಮೇವ ವೀರಃ ।
ಅಮೋಘವೀರ್ಯ್ಯೇಣ ಹಿ ರಾಘವೇಣ ತ್ವಯಾ ವಿರೋಧಶ್ಚರಿತೋ ಬತಾದ್ಯ        ॥೮.೧೦೨॥

ಈ ರೀತಿಯಾಗಿ ಹೇಳಲ್ಪಟ್ಟವನಾದ ಪರಾಕ್ರಮಶಾಲಿ ಕುಂಭಕರ್ಣನು, ಎಲ್ಲಾ ಹಿನ್ನೆಲೆಯನ್ನು ಕೇಳಿ ತಿಳಿದು, ಅಣ್ಣನನ್ನೇ ನಿಂದಿಸುತ್ತಾನೆ.  “ವ್ಯರ್ಥವಾಗದ ಬಲವುಳ್ಳ ರಾಮನೊಂದಿಗೆ  ನೀನು ವಿರೋಧವನ್ನು ಕಟ್ಟಿಕೊಂಡಿದ್ದೀಯ”  ಎನ್ನುತ್ತಾನೆ ಕುಂಭಕರ್ಣ.

ಪ್ರಶಸ್ಯತೇ ನೋ ಬಲಿಭಿರ್ವಿರೋಧಃ ಕಥಞ್ಚಿದೇಷೋsತಿಬಲೋ ಮತೋ ಮಮ ।
ಇತೀರಿತೋ ರಾವಣ ಆಹ ದುರ್ನ್ನಯೋsಪ್ಯಹಂ ತ್ವಯಾsವ್ಯೋ ಹಿ ಕಿಮನ್ಯಥಾ ತ್ವಯಾ ॥೮.೧೦೩॥

“ಯಾವತ್ತೂ ಕೂಡಾ, ಅತ್ಯಂತ ಬಲಿಷ್ಟರೊಂದಿಗೆ ವಿರೋಧವನ್ನು ಕಟ್ಟಿಕೊಳ್ಳಬಾರದು. ನೀನು ಹೇಳುವುದನ್ನು ಕೇಳುತ್ತಿದ್ದರೆ, ರಾಮನು ಅತ್ಯಂತ ಬಲಶಾಲಿ ಅನಿಸುತ್ತಿದೆ” ಎಂದು ಕುಂಭಕರ್ಣನು ಹೇಳಲು, ರಾವಣ ಹೇಳುತ್ತಾನೆ: “ಹೌದು,  ನಾನು ತಪ್ಪು ಮಾಡಿದ್ದೇನೆ.  ಆದರೆ ಈಗ ನಾನು ನಿನ್ನಿಂದ ರಕ್ಷಿಸಲ್ಪಡತಕ್ಕವನಷ್ಟೇ? ಹಾಗಿಲ್ಲದಿದ್ದರೆ ನಿನ್ನಿಂದ ನನಗೇನು ಪ್ರಯೋಜನ?”

ಚರನ್ತಿ ರಾಜಾನ ಉತಾಕ್ರಮಂ ಕ್ವಚಿತ್ ತ್ವಯೋಪಮಾನ್ ಬನ್ಧುಜನಾನ್ ಬಲಾಧಿಕಾನ್ ।
ಸಮೀಕ್ಷ್ಯ ಹೀತ್ಥಂ ಗದಿತೋsಗ್ರಜೇನ ಸ ಕುಮ್ಭಕರ್ಣ್ಣಃ ಪ್ರಯಯೌ ರಣಾಯ     ॥೮.೧೦೪॥

“ರಾಜರು, ನಿನ್ನಂತಹ ಬಲಶ್ರೇಷ್ಠರಾದ ಬಾಂಧವರನ್ನು ಹೊಂದಿರುವುದರಿಂದ, ಕೆಲವೊಮ್ಮೆ ಮಾಡಬಾರದ ಕೆಲಸವನ್ನೂ ಮಾಡುತ್ತಾರೆ” ಎಂದು ರಾವಣನು ಹೇಳಲು,   ಕುಂಭಕರ್ಣನು ಯುದ್ಧಕ್ಕೆಂದು ತೆರಳಿದನು.

ಕನ್ನಡ ಪದ್ಯರೂಪ:  https://go-kula.blogspot.com/2018/07/8-99-104.html

Friday, June 29, 2018

Mahabharata Tatparya Nirnaya Kannada 8.94-8.98


ರಥಂ ಸಮಾರುಹ್ಯ ಪುನಃ ಸ ಕಾರ್ಮ್ಮುಕಃ  ಸಮಾರ್ಗ್ಗಣೋ ರಾವಣ ಆಶು ರಾಮಮ್ ।
ಅಭ್ಯೇತ್ಯ ಸರ್ವಾಶ್ಚ ದಿಶಶ್ಚಕಾರ ಶರಾನ್ಧಕಾರಾಃ ಪರಮಾಸ್ತ್ರವೇತ್ತಾ ॥೮.೯೪॥

ಶ್ರೀರಾಮನ ನುಡಿಯನ್ನು ಕೇಳಿದ, ಪರಮಾಸ್ತ್ರಗಳನ್ನುತಿಳಿದಿರುವ  ರಾವಣನು ತನ್ನ ಬಿಲ್ಲು-ಬಾಣಗಳೊಂದಿಗೆ ರಥವನ್ನು ಏರಿ, ರಾಮನ ಎದುರು ಬಂದು,  ಸಮಸ್ತ ದಿಕ್ಕುಗಳಲ್ಲಿಯೂ ಬಾಣಗಳನ್ನು ಬಿಟ್ಟು ಕತ್ತಲೆಯನ್ನಾಗಿ ಮಾಡಿದನು. (ಎಲ್ಲಾ ದಿಕ್ಕುಗಳಲ್ಲಿಯೂ ಬಾಣಗಳನ್ನು ಬಿಟ್ಟನು ಎನ್ನುವುದನ್ನು ಆಲಂಕಾರಿಕವಾಗಿ ಕತ್ತಲೆಯನ್ನಾಗಿ ಮಾಡಿದನು ಎಂದು ಹೇಳುತ್ತಾರೆ)   

ರಥಸ್ಥಿತೇsಸ್ಮಿನ್ ರಜನೀಚರೇಶೇ ನ ಮೇ ಪತಿರ್ಭೂಮಿತಳೇ ಸ್ಥಿತಃ ಸ್ಯಾತ್ ।
ಇತಿ ಸ್ಮ ಪುತ್ರಃ ಪವನಸ್ಯ ರಾಮಂ ಸ್ಕನ್ದಂ ಸಮಾರೋಪ್ಯ ಯಯೌ ಚ ರಾಕ್ಷಸಮ್ ॥೮.೯೫॥

ರಾವಣನು ರಥದಲ್ಲಿ ನಿಂತು ಯುದ್ಧ ಮಾಡುತ್ತಿರಲು, ತನ್ನ  ಒಡೆಯನಾದ ರಾಮಚಂದ್ರನು ಭೂಮಿಯಲ್ಲಿ ನಿಂತು ಯುದ್ಧ ಮಾಡಬಾರದು ಎಂದು, ಹನುಮಂತನು, ಶ್ರೀರಾಮಚಂದ್ರನನ್ನು ತನ್ನ ಹೆಗಲಿನಲ್ಲಿ ಏರಿಸಿಕೊಂಡು,  ರಾವಣನತ್ತ ತೆರಳಿದನು.

ಪ್ರಹಸ್ಯ ರಾಮೋsಸ್ಯ ಹಯಾನ್ ನಿಹತ್ಯ ಸೂತಂ ಚ ಕೃತ್ವಾ ತಿಲಶೋ ಧ್ವಜಂ ರಥಮ್ ।
ಧನೂಂಷಿ ಖಡ್ಗಂ ಸಕಲಾಯುಧಾನಿ ಚ್ಛತ್ರಂ ಚ ಸಞ್ಛಿದ್ಯ ಚಕರ್ತ್ತ ಮೌಲಿಮ್ ॥೮.೯೬॥

ರಾಮಚಂದ್ರನು ನಗುತ್ತಾ, ರಾವಣನ ಕುದುರೆಗಳನ್ನು, ಸೂತನನ್ನೂ ಕೊಂದು, ಅವನ ದ್ವಜವನ್ನೂ, ರಥವನ್ನೂ ಪುಡಿಪುಡಿ ಮಾಡಿ, ಅವನ ಬಿಲ್ಲು-ಬಾಣಗಳನ್ನು, ಎಲ್ಲಾ ಆಯುಧಗಳನ್ನೂ, ಚ್ಛತ್ರವನ್ನೂ ಭೇಧಿಸಿ, ಕಿರೀಟವನ್ನು ತುಂಡರಿಸಿದನು.

ಕರ್ತ್ತವ್ಯಮೂಢಂ ತಮವೇಕ್ಷ್ಯ ರಾಮಃ ಪುನರ್ಜ್ಜಗಾದಾsಶು ಗೃಹಂ ಪ್ರಯಾಹಿ ।
ಸಮಸ್ತಭೋಗಾನನುಭೂಯ ಶೀಘ್ರಂ ಪ್ರತೋಷ್ಯ ಬನ್ಧೂನ್ ಪುನರೇಹಿ ಮರ್ತ್ತುಮ್ ॥೮.೯೭॥

ಏನು ಮಾಡಬೇಕು ಎಂದು ತಿಳಿಯದೇ ಧಿಗ್ಭ್ರಾಂತನಾದ ರಾವಣನನ್ನು ಕುರಿತು ಶ್ರೀರಾಮ ಹೇಳುತ್ತಾನೆ:  “ಎಲೈ ರಾವಣನೇ, ಶೀಘ್ರವಾಗಿ ಮನೆಗೆ ತೆರಳು. ಎಲ್ಲಾ ಭೋಗಗಳನ್ನು ಅನುಭವಿಸಿ, ಸತ್ತಮೇಲೆ ಯಾರಿಗೆ ಏನೇನು ಕೊಡಬೇಕು ಎಂದಿದೆಯೋ ಅದನ್ನೆಲ್ಲಾ ಈಗಲೇ ಹಂಚಿ, ಸಾಯಲು ಸಿದ್ಧನಾಗಿ  ಮತ್ತೆ ಬಾ. ಈಗ ಹೊರಡು” ಎಂದು.

ಇತೀರಿತೋsವಾಗ್ವದನೋ ಯಯೌ ಗೃಹಂ ವಿಚಾರ್ಯ್ಯ ಕಾರ್ಯ್ಯಂ ಸಹ ಮನ್ತ್ರಿಭಿಃ ಸ್ವಕೈಃ ।
ಹತಾವಶೇಷೈರಥ ಕುಮ್ಭಕರ್ಣ್ಣಪ್ರಬೋಧನಾಯಾsಶು ಮತಿಂ ಚಕಾರ ॥೮.೯೮॥

ಹೀಗೆ ಹೇಳಲ್ಪಟ್ಟ ರಾವಣನು, ತಲೆ ತಗ್ಗಿಸಿ ತನ್ನ ಮನೆಗೆ ತೆರಳಿದನು. ಅಲ್ಲಿ ಅಳಿದುಳಿದ ತನ್ನ ಮಂತ್ರಿಗಳಿಂದ ಮುಂದೇನು ಮಾಡಬೇಕು ಎನ್ನುವುದನ್ನು ವಿಚಾರಿಸಿ, ಶೀಘ್ರದಲ್ಲಿ, ನಿದ್ರಿಸುತ್ತಿರುವ ತನ್ನ ತಮ್ಮನಾದ ಕುಂಭಕರ್ಣನನ್ನು ಎಚ್ಚರಿಸಲು ನಿಶ್ಚಯಿಸಿದನು.

ಕನ್ನಡ ಪದ್ಯರೂಪ:  https://go-kula.blogspot.com/2018/06/8-94-98.html

Thursday, June 28, 2018

Mahabharata Tatparya Nirnaya Kannada 8.89-8.93


ಪ್ರಕರ್ಷತಿ ತ್ವೇವ ನಿಶಾಚರೇಶ್ವರೇ ತಥೈವ ರಾಮಾವರಜಂ ತ್ವರಾನ್ವಿತಃ ।
ಸಮಸ್ತಜೀವಾಧಿಪತೇಃ ಪರಾ ತನುಃ ಸಮುತ್ಪಪಾತಾಸ್ಯ ಪುರೋ ಹನೂಮಾನ್            ॥೮.೮೯॥

ರಾವಣನು ಲಕ್ಷ್ಮಣನನ್ನು ಎಳೆಯುತ್ತಿರಲು, ವೇಗದಿಂದ ಕೂಡಿದ, ಎಲ್ಲಾ ಜೀವರ ಅಧಿಪತಿಯಾಗಿರುವ ಮುಖ್ಯಪ್ರಾಣನ ಇನ್ನೊಂದು ಶರೀರಭೂತನಾದ ಹನುಮಂತನು ರಾವಣನ ಎದುರು ಬಂದು ನಿಂತನು.  

ಸ ಮುಷ್ಟಿಮಾವರ್ತ್ತ್ಯ ಚ ವಜ್ರಕಲ್ಪಂ ಜಘಾನ ತೇನೈವ ಚ ರಾವಣಂ ರುಷಾ ।
ಪ್ರಸಾರ್ಯ್ಯ ಬಾಹೂನಖಿಲೈರ್ಮ್ಮುಖೈರ್ವಮನ್  ಸ ರಕ್ತಮುಷ್ಣಂ ವ್ಯಸುವತ್ ಪಪಾತ  ॥೮.೯೦॥

ಹನುಮಂತನು ತನ್ನ ಮುಷ್ಟಿಯನ್ನು ಬಿಗಿ ಹಿಡಿದು, ವಜ್ರಕಲ್ಪವಾದ ತನ್ನ ಮುಷ್ಟಿಯನ್ನು ತಿರುವಿ,  ಅದರಿಂದಲೇ ರಾವಣನನ್ನು ಸಿಟ್ಟಿನಿಂದ ಗುದ್ದಿದನು. ರಾವಣನು ಹನುಮಂತನ ಮುಷ್ಟಿಪ್ರಹಾರವನ್ನು ತಡೆಯಲಾಗದೇ, ತನ್ನ ಎಲ್ಲಾ ಮುಖಗಳಿಂದ ಬಿಸಿಯಾದ ರಕ್ತವನ್ನು ಕಕ್ಕುತ್ತಾ ಹೆಣದಂತೆ ಬಿದ್ದನು.

ನಿಪಾತ್ಯರಕ್ಷೋಧಿಪತಿಂ ಸ ಮಾರುತಿಃ ಪ್ರಗೃಹ್ಯ ಸೌಮಿತ್ರಿಮುರಙ್ಗಶಾಯಿನಃ ।
ಜಗಾಮ ರಾಮಾಖ್ಯತನೋಃ ಸಮೀಪಂ ಸೌಮಿತ್ರಿಮುದ್ಧರ್ತ್ತುಮಲಂ ಹ್ಯಸೌ ಕಪಿಃ          ॥೮.೯೧॥

ರಾಕ್ಷಸರ ಒಡೆಯನಾದ ರಾವಣನನ್ನು ಕೆಡವಿದ ಹನುಮಂತನು, ಲಕ್ಷ್ಮಣನನ್ನು ಹಿಡಿದುಕೊಂಡು ರಾಮನೆಂಬ ಹೆಸರಿನ ಶೇಷಶಾಯಿ ನಾರಾಯಣನ ಸಮೀಪಕ್ಕೆ ತೆರಳಿದನು. ಲಕ್ಷ್ಮಣನನ್ನು ಎತ್ತಲು ಈ ಹನುಮಂತನು ಸಮರ್ಥನಷ್ಟೇ?

ಸ ರಾಮಸಮ್ಸ್ಪರ್ಷನಿವಾರಿತಕ್ಲಮಃ ಸಮುತ್ಥಿತಸ್ತೇನ ಸಮುದ್ಧೃತೇ ಶರೇ ।
ಬಭೌ ಯಥಾ ರಾಹುಮುಖಾತ್ ಪ್ರಮುಕ್ತಃ ಶಶೀ ಸುಪೂರ್ಣ್ಣೋ ವಿಕಚಸ್ವರಶ್ಮಿಭಿಃ       ॥೮.೯೨॥

ರಾಮನ ಸಂಸ್ಪರ್ಶದಿಂದ ತನ್ನೆಲ್ಲಾ ಶ್ರಮವನ್ನು ಲಕ್ಷ್ಮಣ ಕಳೆದುಕೊಂಡನು. ರಾಮಚಂದ್ರನಿಂದ ತನ್ನ ಹಣೆಯಲ್ಲಿ ನೆಟ್ಟ ಬಾಣವು ಕೀಳಲ್ಪಡುತ್ತಿರಲು ಆತ ಎದ್ದು ಕುಳಿತನು. ಹೇಗೆ ರಾಹುವಿನ ಮುಖದಿಂದ ಬಿಡುಗಡೆಯಾದ ಚಂದ್ರನು ತನ್ನ ಕಿರಣಗಳಿಂದ ಪೂರ್ಣನಾಗಿ ಶೋಭಿಸುವನೋ  ಹಾಗೇ ಲಕ್ಷ್ಮಣನು ಶೋಭಿಸಿದನು.

ಸ ಶೇಷಭೋಗಾಭಮಥೋ ಜನಾರ್ದ್ದನಃ ಪ್ರಗೃಹ್ಯ ಚಾಪಂ ಸಶರಂ ಪುನಶ್ಚ ।
ಸುಲಬ್ಧಸಙ್ಜ್ಞಂ ರಜನೀಚರೇಶಂ ಜಗಾದ ಸಜ್ಜೀಭವ ರಾವಣೇತಿ                            ॥೮.೯೩॥

ಲಕ್ಷ್ಮಣನು ಸಂಪೂರ್ಣ ಸ್ವಸ್ಥನಾದ ಮೇಲೆ, ರಾಮಚಂದ್ರನು ಹಾವಿನ ಶರೀರದಂತೆ ದಪ್ಪವಾಗಿರುವ ಬಿಲ್ಲನ್ನು ಬಾಣಗಳಿಂದ ಕೂಡಿ ಹಿಡಿದು, ಚನ್ನಾಗಿ ಎಚ್ಚರಗೊಂಡ ಮತ್ತು ಆಯಾಸದಿಂದ ಚೇತರಿಸಿಕೊಂಡ ರಾವಣನನ್ನು ಕುರಿತು “ಎಲೈ ರಾವಣನೇ, ಸಿದ್ಧನಾಗು”  ಎಂದು ಎಚ್ಚರಿಸಿದನು.
ಕನ್ನಡ ಪದ್ಯರೂಪ: https://go-kula.blogspot.com/2018/06/8-89-93.html

Wednesday, June 27, 2018

Mahabharata Tatparya Nirnaya Kannada 8.83-8.88


ತತೋ ಯಯೌ ರಾಘವಮೇವ ರಾವಣೋ ನಿವಾರಯಾಮಾಸ ತಮಾಶು ಲಕ್ಷ್ಮಣಃ ।
ತತಕ್ಷತುಸ್ತಾವಧಿಕೌ ಧನುರ್ಭೃತಾಂ ಶರೈಃ ಶರೀರಾವರಣಾವದಾರಣೈಃ                  ॥೮.೮೩॥

ತದನಂತರ ರಾವಣನು ರಾಮಚಂದ್ರನತ್ತ  ಯುದ್ಧಕ್ಕೆಂದು ಹೊರಟನು. ಹೀಗೆ ಹೊರಟ ರಾವಣನನ್ನು ಶೀಘ್ರವಾಗಿ  ಲಕ್ಷ್ಮಣ ತಡೆದನು. ಧನುರ್ಧಾರಿಗಳಲ್ಲಿಯೇ ಶ್ರೇಷ್ಠರಾಗಿರುವ ಅವರಿಬ್ಬರು, ಶರೀರದ ಕವಚ ಭೇದಿಸತಕ್ಕ ಬಾಣಗಳಿಂದ ಪರಸ್ಪರ ಯುದ್ಧ ಮಾಡಿದರು.

ನಿವಾರಿತಸ್ತೇನ ಸ ರಾವಣೋ ಭೃಶಂ ರುಷಾsನ್ವಿತೋ ಬಾಣಮಮೋಘಮುಗ್ರಮ್ ।
ಸ್ವಯಂಭುದತ್ತಂ ಪ್ರವಿಕೃಷ್ಯ ಚಾsಶು ಲಲಾಟಮಧ್ಯೇ ಪ್ರಮುಮೋಚ ತಸ್ಯ          ॥೮.೮೪॥

ಲಕ್ಷ್ಮಣನಿಂದ ತಡೆಯಲ್ಪಟ್ಟ ರಾವಣನು, ಸಿಟ್ಟಿನಿಂದ ಕೂಡಿ, ಬ್ರಹ್ಮದೇವರು ಕೊಟ್ಟ, ಎಂದೂ ವ್ಯರ್ಥವಾಗದ, ಭಯಂಕರವಾದ ಬಾಣವನ್ನು ಸೆಳೆದು ಅದನ್ನು ಲಕ್ಷ್ಮಣನ ಹಣೆಯ ಮಧ್ಯದಲ್ಲಿ ಬಿಟ್ಟನು. 

ಭೃಶಾಹತಸ್ತೇನ ಮುಮೋಹ ಲಕ್ಷ್ಮಣೋ ರಥಾದವಪ್ಲುತ್ಯ ದಶಾನನೋsಪಿ ।
ಕ್ಷಣಾದಭಿದ್ರುತ್ಯ ಬಲಾತ್ ಪ್ರಗೃಹ್ಯ ಸ್ವಭಾಹುಭಿರ್ನ್ನೆತುಮಿಮಂ ಸಮೈಚ್ಛತ್       ॥೮.೮೫॥

ಆ ಬಾಣದಿಂದ ಗಟ್ಟಿಯಾಗಿ ಹೊಡೆಯಲ್ಪಟ್ಟ ಲಕ್ಷ್ಮಣನು ಮೂರ್ಛಿತನಾದನು. ತಕ್ಷಣ ರಾವಣನು ತನ್ನ ರಥದಿಂದ ಕೆಳಗೆ ಹಾರಿ, ಲಕ್ಷ್ಮಣನಿದ್ದಲ್ಲಿಗೆ ಓಡಿಬಂದು, ತನ್ನ ಇಪ್ಪತ್ತು ಬಾಹುಗಳಿಂದ ಬಲವಾಗಿ ಲಕ್ಷ್ಮಣನನ್ನು ಹಿಡಿದುಕೊಂಡು, ಆತನನ್ನು ಲಂಕೆಗೆ ಕೊಂಡೊಯ್ಯಲು ಬಯಸಿದನು.

ಸಮ್ಪ್ರಾಪ್ಯ ಸಙ್ಜ್ಞಾಂ ಸ ಸುವಿಹ್ವಲೋsಪಿ ಸಸ್ಮಾರ ರೂಪಂ ನಿಜಮೇವ ಲಕ್ಷ್ಮಣಃ ।
ಶೇಷಂ ಹರೇರಂಶಯುತಂ ನಚಾಸ್ಯ ಸ ಚಾಲನಾಯಾಪಿ ಶಶಾಕ ರಾವಣಃ                ॥೮.೮೬॥

ಒಮ್ಮೆ ವಿಚಲಿತನಾದರೂ ಕೂಡಾ, ಸ್ವಲ್ಪಮಟ್ಟಿನ ಸ್ಮೃತಿಯನ್ನು ಪಡೆದ ಲಕ್ಷ್ಮಣನು, ಸಂಕರ್ಷಣರೂಪಿ  ಪರಮಾತ್ಮನ ಅಂಶದಿಂದ ಕೂಡಿರುವ ತನ್ನ ಮೂಲರೂಪವನ್ನು(ಶೇಷರೂಪವನ್ನು) ಸ್ಮರಣೆ ಮಾಡಿದನು. ಆಗ ರಾವಣನು  ಅವನನ್ನು ಆಲುಗಾಡಿಸಲೂ ಸಮರ್ಥನಾಗಲಿಲ್ಲಾ.

ಬಲಾತ್ ಸ್ವದೋರ್ಭಿಃ ಪ್ರತಿಗೃಹ್ಯ ಚಾಖಿಲೈರ್ಯ್ಯದಾ ಸ ವೀರಂ ಪ್ರಚಕರ್ಷ ರಾವಣಃ ।
ಚಚಾಲ ಪೃಥ್ವೀ ಸಹಮೇರುಮನ್ದರಾ ಸಸಾಗರಾ ನೈವ ಚಚಾಲ ಲಕ್ಷ್ಮಣಃ             ॥೮.೮೭॥

ಆಗ ರಾವಣನು ತನ್ನೆಲ್ಲಾ ಕೈಗಳಿಂದ ಲಕ್ಷ್ಮಣನನ್ನು ಬಲಿಷ್ಠವಾಗಿ ಹಿಡಿದು ಎಳೆಯಲು ಪ್ರಯತ್ನಿಸಿದನು. ಇದರಿಂದ ಮೇರು-ಮಂದಾರ ಪರ್ವತಗಳಿಂದ ಕೂಡಿರುವ, ಸಮುದ್ರದಿಂದ ಕೂಡಿರುವ ಭೂಮಿ ಕಂಪಿಸಿತೇ ಹೊರತು,  ಲಕ್ಷ್ಮಣನನ್ನು ಅಲುಗಾಡಿಸಲು ಅವನಿಂದ ಸಾಧ್ಯವಾಗಲಿಲ್ಲಾ.

ಸಹಸ್ರಮೂರ್ಧ್ನೋsಸ್ಯ ಬತೈಕಮೂರ್ಧ್ನಿ ಸಸಪ್ತಪಾತಾಳಗಿರೀನ್ದ್ರಸಾಗರಾ ।
ಧರಾsಖಿಲೇಯಂ ನನು ಸರ್ಷಪಾಯತಿ ಪ್ರಸಹ್ಯ ಕೋ ನಾಮ ಹರೇತ್ ತಮೇನಮ್  ॥೮.೮೮॥

ಸಾವಿರ ಹೆಡೆಗಳುಳ್ಳ  ಶೇಷನ ಒಂದು ಹೆಡೆಯಲ್ಲಿ ಏಳು ಪಾತಾಳ ಲೋಕಗಳು ಮತ್ತು  ದೊಡ್ಡ ಬೆಟ್ಟಗಳು, ಸಾಗರಗಳೂ  ಇರುವ, ಸಮಗ್ರ ಭೂಮಿಯು ಸಾಸಿವೆಯಂತೆ ನಿಂತಿರುತ್ತದೆ. ಅಂತಹ ಶೇಷನ ಅವತಾರಿಯಾದ ಲಕ್ಷ್ಮಣನನ್ನು ಬಲಾತ್ಕಾರವಾಗಿ  ಯಾರು ತಾನೇ ಎಳೆದುಕೊಂಡು ಹೋಗಲು ಸಾಧ್ಯ? 

ಕನ್ನಡ ಪದ್ಯರೂಪ: https://go-kula.blogspot.com/2018/06/8-83-88.html

Tuesday, June 26, 2018

Mahabharata Tatparya Nirnaya Kannada 8.77-8.82


ಅಥೋ ಹನೂಮಾನುರಗೇನ್ದ್ರಭೋಗಸಮಂ ಸ್ವಬಾಹುಂ ಭೃಶಮುನ್ನಮಯ್ಯ ।
ತತಾಡ ವಕ್ಷಸ್ಯದಿಪಂ ತು ರಕ್ಷಸಾಂ ಮುಖೈಃ ಸ ರಕ್ತಂ ಪ್ರವಮನ್ ಪಪಾತ ॥೮.೭೭॥

ತದನಂತರ ಹನುಮಂತನು ರಾವಣನನ್ನು ಎದುರುಗೊಂಡು, ಸರ್ಪದ ಶರೀರದಂತಿರುವ ತನ್ನ ಕೈಯನ್ನು ಎತ್ತಿ, ರಾವಣನ ಎದೆಗೆ ಗುದ್ದಿದನು. ಇದರಿಂದ ರಾವಣನು ತನ್ನ ಹತ್ತೂ ಮುಖಗಳಿಂದ ರಕ್ತವನ್ನು ವಾಂತಿ ಮಾಡಿಕೊಂಡು ಮೂರ್ಛಿತನಾದನು. 

ಸ ಲಬ್ಧಸಙ್ಜ್ಞಃ ಪ್ರಶಶಂಸ ಮಾರುತಿಂ ತ್ವಯಾ ಸಮೋ ನಾಸ್ತಿ ಪುಮಾನ್ ಹಿ ಕಶ್ಚಿತ್ ।
ಕಃ ಪ್ರಾಪಯೇದನ್ಯ ಇಮಾಂ ದಶಾಂ ಮಾಮಿತೀರಿತೋ ಮಾರುತಿರಾಹ ತಂ ಪುನಃ ॥೮.೭೮॥

ಪ್ರಜ್ಞೆ ಬಂದ ನಂತರ ರಾವಣನು ಹನುಮಂತನನ್ನು ಹೊಗಳುತ್ತಾ ಹೇಳುತ್ತಾನೆ: “ನಿನಗೆ ಸಮನಾಗಿರುವ, ಬಲಿಷ್ಠನಾದ ಪುರುಷನು ಇಲ್ಲವೇ ಇಲ್ಲಾ. ನನಗೆ ಈ ಅವಸ್ಥೆಯನ್ನು ಯಾರು ತಾನೇ ಹೊಂದಿಸಬಲ್ಲರು” ಎಂದು.  ಈ ರೀತಿಯಾಗಿ ಹೇಳಲ್ಪಟ್ಟಾಗ ಮಾರುತಿಯು ರಾವಣನನ್ನು ಕುರಿತು ಹೀಗೆ  ಹೇಳುತ್ತಾನೆ:

ಅತ್ಯಲ್ಪಮೇತದ್ ಯದುಪಾತ್ತಜೀವಿತಃ ಪುನಸ್ತ್ವಮಿತ್ಯುಕ್ತ ಉವಾಚ ರಾವಣಃ ।
ಗೃಹಾಣ ಮತ್ತೋsಪಿ ಸಮುದ್ಯತಂ ತ್ವಂ ಮುಷ್ಟಿಪ್ರಹಾರಂ ತ್ವಿತಿ ತಂ ಪುಪೋಥ ॥೮.೭೯॥

“ನಾನು ಹೊಡೆದ ಮೇಲೂ ನೀನು ಬದುಕಿದ್ದೀಯೆಂದರೆ, ನಾನು ಕೊಟ್ಟ ಪ್ರಹಾರವು ಅತ್ಯಲ್ಪವೆಂದು ತಿಳಿ” ಎಂದು ಮಾರುತಿಯು ಹೇಳಲು, ರಾವಣ “ನಾನೂ ಹೊಡೆಯುತ್ತೇನೆ, ನನ್ನಿಂದ ಏಟನ್ನು ಸ್ವೀಕರಿಸು” ಎಂದು ಗಟ್ಟಿಯಾಗಿ ಮಾರುತಿಗೆ ಮುಷ್ಟಿ ಪ್ರಹಾರ ಮಾಡುತ್ತಾನೆ.

ಕಿಞ್ಚಿತ್ ಪ್ರಹಾರೇಣ ತು ವಿಹ್ವಲಾಙ್ಗವತ್ ಸ್ಥಿತೇ ಹಿ ತಸ್ಮಿನ್ನಿದಮನ್ತರಂ ಮಮ ।
ಇತ್ಯಗ್ನಿಸೂನುಂ ಪ್ರಯಯೌ ಸ ರಾವಣೋ ನಿವಾರಿತೋ ಮಾರುತಿನಾsಪಿ ವಾಚಾ ॥೮.೮೦॥

ರಾವಣನು ಬಲವಾಗಿ ಹೊಡೆದುದ್ದರಿಂದ ಹನುಮಂತನು ಸ್ವಲ್ಪ ಭ್ರಾಂತನಂತೆ (ಸುಸ್ತಾದವನಂತೆ) ಇರುತ್ತಿರಲು, ಇದೇ ತಕ್ಕ ಸಮಯ ಎಂದು ತಿಳಿದ ರಾವಣನು, ಹನುಮಂತ ‘ನಿಲ್ಲು’ ಎಂದು ಕೂಗಿದರೂ ಕೇಳದೆ, ಅಗ್ನಿಪುತ್ರ ನೀಲನನ್ನು ಕುರಿತು ತೆರಳುತ್ತಾನೆ.

ತಮಾಪತನ್ತಂ ಪ್ರಸಮೀಕ್ಷ್ಯ ನೀಲೋ ಧನುರ್ಧ್ವಜಾಗ್ರಾಶ್ವರಥೇಷು ತಸ್ಯ ।
ಚಚಾರ ಮೂರ್ದ್ಧಸ್ವಪಿ ಚಞ್ಚಲೋsಲಂ ಜಳೀಕೃತಸ್ತೇನ ಸ ರಾವಣೋsಪಿ ॥೮.೮೧॥

ತನ್ನತ್ತ ಬರುತ್ತಿರುವ  ರಾವಣನನ್ನು ನೋಡಿದ ನೀಲನು, ರಾವಣನ ಧನುಸ್ಸಿನ ಮೇಲೆ, ದ್ವಜದಮೇಲೆ, ರಥದ ಮೇಲೆ, ಹೀಗೆ ಒಂದು ಕಡೆ ನಿಲ್ಲದೇ, ಎಲ್ಲಾ ಕಡೆ ಹಾರಾಡುತ್ತಾನೆ. ಎಷ್ಟೋ ಸಲ ರಾವಣನ ತಲೆಯಮೇಲೂ ಆತ ನೆಗೆದು  ಕುಳಿತು ರಾವಣನನ್ನು ಕಂಗೆಡಿಸುತ್ತಾನೆ. ಹೀಗೆ ಒಂದು ಕಡೆ ನಿಲ್ಲದ ನೀಲನ ಚಟುವಟಿಕೆಯಿಂದ ರಾವಣ ಏನು ಮಾಡಬೇಕು ಎಂದು ತಿಳಿಯದವನಾದನು(ವಿವೇಕಶೂನ್ಯನಾದನು).

ಸ ಕ್ಷಿಪ್ರಮಾದಾಯ ಹುತಾಶನಾಸ್ತ್ರಂ ಮುಮೋಚ ನೀಲೇ ರಜನೀಚರೇಶಃ ।
ಸ ತೇನ ಭೂಮೌ ಪತಿತೋ ನಚೈನಂ ದದಾಹ ವಹ್ನಿಃ ಸ್ವತನುರ್ಯ್ಯತೋsಸೌ ॥೮.೮೨॥

ತದನಂತರ ರಾವಣನು ನೀಲನಿಂದ ಒಂದು ಅಂತರವನ್ನು ಸಾಧಿಸಿ, ತನ್ನ ಆಗ್ನೇಯಾಸ್ತ್ರವನ್ನು ಅಭಿಮಂತ್ರಿಸಿ, ನೀಲನ ಮೇಲೆ ಪ್ರಯೋಗಿಸಿದನು. ಆ ಅಸ್ತ್ರದಿಂದ ಹೊಡೆಯಲ್ಪಟ್ಟ ನೀಲನು ಭೂಮಿಯ ಮೇಲೆ ಬಿದ್ದನು. ಆದರೆ ಸ್ವಯಂ ಅಗ್ನಿಯಾಗಿರುವ ಆತನನ್ನು ಬೆಂಕಿ ಸುಡಲಿಲ್ಲ.
ಅಥೋ ಹನೂಮಾನುರಗೇನ್ದ್ರಭೋಗಸಮಂ ಸ್ವಬಾಹುಂ ಭೃಶಮುನ್ನಮಯ್ಯ ।
ತತಾಡ ವಕ್ಷಸ್ಯದಿಪಂ ತು ರಕ್ಷಸಾಂ ಮುಖೈಃ ಸ ರಕ್ತಂ ಪ್ರವಮನ್ ಪಪಾತ ॥೮.೭೭॥

ತದನಂತರ ಹನುಮಂತನು ರಾವಣನನ್ನು ಎದುರುಗೊಂಡು, ಸರ್ಪದ ಶರೀರದಂತಿರುವ ತನ್ನ ಕೈಯನ್ನು ಎತ್ತಿ, ರಾವಣನ ಎದೆಗೆ ಗುದ್ದಿದನು. ಇದರಿಂದ ರಾವಣನು ತನ್ನ ಹತ್ತೂ ಮುಖಗಳಿಂದ ರಕ್ತವನ್ನು ವಾಂತಿ ಮಾಡಿಕೊಂಡು ಮೂರ್ಛಿತನಾದನು. 

ಸ ಲಬ್ಧಸಙ್ಜ್ಞಃ ಪ್ರಶಶಂಸ ಮಾರುತಿಂ ತ್ವಯಾ ಸಮೋ ನಾಸ್ತಿ ಪುಮಾನ್ ಹಿ ಕಶ್ಚಿತ್ ।
ಕಃ ಪ್ರಾಪಯೇದನ್ಯ ಇಮಾಂ ದಶಾಂ ಮಾಮಿತೀರಿತೋ ಮಾರುತಿರಾಹ ತಂ ಪುನಃ ॥೮.೭೮॥

ಪ್ರಜ್ಞೆ ಬಂದ ನಂತರ ರಾವಣನು ಹನುಮಂತನನ್ನು ಹೊಗಳುತ್ತಾ ಹೇಳುತ್ತಾನೆ: “ನಿನಗೆ ಸಮನಾಗಿರುವ, ಬಲಿಷ್ಠನಾದ ಪುರುಷನು ಇಲ್ಲವೇ ಇಲ್ಲಾ. ನನಗೆ ಈ ಅವಸ್ಥೆಯನ್ನು ಯಾರು ತಾನೇ ಹೊಂದಿಸಬಲ್ಲರು” ಎಂದು.  ಈ ರೀತಿಯಾಗಿ ಹೇಳಲ್ಪಟ್ಟಾಗ ಮಾರುತಿಯು ರಾವಣನನ್ನು ಕುರಿತು ಹೀಗೆ  ಹೇಳುತ್ತಾನೆ:

ಅತ್ಯಲ್ಪಮೇತದ್ ಯದುಪಾತ್ತಜೀವಿತಃ ಪುನಸ್ತ್ವಮಿತ್ಯುಕ್ತ ಉವಾಚ ರಾವಣಃ ।
ಗೃಹಾಣ ಮತ್ತೋsಪಿ ಸಮುದ್ಯತಂ ತ್ವಂ ಮುಷ್ಟಿಪ್ರಹಾರಂ ತ್ವಿತಿ ತಂ ಪುಪೋಥ ॥೮.೭೯॥

“ನಾನು ಹೊಡೆದ ಮೇಲೂ ನೀನು ಬದುಕಿದ್ದೀಯೆಂದರೆ, ನಾನು ಕೊಟ್ಟ ಪ್ರಹಾರವು ಅತ್ಯಲ್ಪವೆಂದು ತಿಳಿ” ಎಂದು ಮಾರುತಿಯು ಹೇಳಲು, ರಾವಣ “ನಾನೂ ಹೊಡೆಯುತ್ತೇನೆ, ನನ್ನಿಂದ ಏಟನ್ನು ಸ್ವೀಕರಿಸು” ಎಂದು ಗಟ್ಟಿಯಾಗಿ ಮಾರುತಿಗೆ ಮುಷ್ಟಿ ಪ್ರಹಾರ ಮಾಡುತ್ತಾನೆ.

ಕಿಞ್ಚಿತ್ ಪ್ರಹಾರೇಣ ತು ವಿಹ್ವಲಾಙ್ಗವತ್ ಸ್ಥಿತೇ ಹಿ ತಸ್ಮಿನ್ನಿದಮನ್ತರಂ ಮಮ ।
ಇತ್ಯಗ್ನಿಸೂನುಂ ಪ್ರಯಯೌ ಸ ರಾವಣೋ ನಿವಾರಿತೋ ಮಾರುತಿನಾsಪಿ ವಾಚಾ ॥೮.೮೦॥

ರಾವಣನು ಬಲವಾಗಿ ಹೊಡೆದುದ್ದರಿಂದ ಹನುಮಂತನು ಸ್ವಲ್ಪ ಭ್ರಾಂತನಂತೆ (ಸುಸ್ತಾದವನಂತೆ) ಇರುತ್ತಿರಲು, ಇದೇ ತಕ್ಕ ಸಮಯ ಎಂದು ತಿಳಿದ ರಾವಣನು, ಹನುಮಂತ ‘ನಿಲ್ಲು’ ಎಂದು ಕೂಗಿದರೂ ಕೇಳದೆ, ಅಗ್ನಿಪುತ್ರ ನೀಲನನ್ನು ಕುರಿತು ತೆರಳುತ್ತಾನೆ.

ತಮಾಪತನ್ತಂ ಪ್ರಸಮೀಕ್ಷ್ಯ ನೀಲೋ ಧನುರ್ಧ್ವಜಾಗ್ರಾಶ್ವರಥೇಷು ತಸ್ಯ ।
ಚಚಾರ ಮೂರ್ದ್ಧಸ್ವಪಿ ಚಞ್ಚಲೋsಲಂ ಜಳೀಕೃತಸ್ತೇನ ಸ ರಾವಣೋsಪಿ ॥೮.೮೧॥

ತನ್ನತ್ತ ಬರುತ್ತಿರುವ  ರಾವಣನನ್ನು ನೋಡಿದ ನೀಲನು, ರಾವಣನ ಧನುಸ್ಸಿನ ಮೇಲೆ, ದ್ವಜದಮೇಲೆ, ರಥದ ಮೇಲೆ, ಹೀಗೆ ಒಂದು ಕಡೆ ನಿಲ್ಲದೇ, ಎಲ್ಲಾ ಕಡೆ ಹಾರಾಡುತ್ತಾನೆ. ಎಷ್ಟೋ ಸಲ ರಾವಣನ ತಲೆಯಮೇಲೂ ಆತ ನೆಗೆದು  ಕುಳಿತು ರಾವಣನನ್ನು ಕಂಗೆಡಿಸುತ್ತಾನೆ. ಹೀಗೆ ಒಂದು ಕಡೆ ನಿಲ್ಲದ ನೀಲನ ಚಟುವಟಿಕೆಯಿಂದ ರಾವಣ ಏನು ಮಾಡಬೇಕು ಎಂದು ತಿಳಿಯದವನಾದನು(ವಿವೇಕಶೂನ್ಯನಾದನು).

ಸ ಕ್ಷಿಪ್ರಮಾದಾಯ ಹುತಾಶನಾಸ್ತ್ರಂ ಮುಮೋಚ ನೀಲೇ ರಜನೀಚರೇಶಃ ।
ಸ ತೇನ ಭೂಮೌ ಪತಿತೋ ನಚೈನಂ ದದಾಹ ವಹ್ನಿಃ ಸ್ವತನುರ್ಯ್ಯತೋsಸೌ ॥೮.೮೨॥

ತದನಂತರ ರಾವಣನು ನೀಲನಿಂದ ಒಂದು ಅಂತರವನ್ನು ಸಾಧಿಸಿ, ತನ್ನ ಆಗ್ನೇಯಾಸ್ತ್ರವನ್ನು ಅಭಿಮಂತ್ರಿಸಿ, ನೀಲನ ಮೇಲೆ ಪ್ರಯೋಗಿಸಿದನು. ಆ ಅಸ್ತ್ರದಿಂದ ಹೊಡೆಯಲ್ಪಟ್ಟ ನೀಲನು ಭೂಮಿಯ ಮೇಲೆ ಬಿದ್ದನು. ಆದರೆ ಸ್ವಯಂ ಅಗ್ನಿಯಾಗಿರುವ ಆತನನ್ನು ಬೆಂಕಿ ಸುಡಲಿಲ್ಲ.
ಕನ್ನಡ ಪದ್ಯರೂಪ: https://go-kula.blogspot.com/2018/06/8-77-82.html

Monday, June 25, 2018

Mahabharata Tatparya Nirnaya Kannada 8.70-8.76


ತತಃ ಸ ಸಜ್ಜೀಕೃತಮಾತ್ತಧನ್ವಾ ರಥಂ ಸಮಾಸ್ಥಾಯ ನಿಶಾಚರೇಶ್ವರಃ ।
ವೃತಃ ಸಹಸ್ರಾಯುತಕೋಟ್ಯನೀಕಪೈರ್ನ್ನಿಶಾಚರೈರಾಶು ಯಯೌ ರಣಾಯ ॥೮.೭೦॥

ತದನಂತರ,  ನಿಶಾಚರರಿಗೆ(ರಾತ್ರಿ ಹೊತ್ತು ಸಂಚರಿಸುವ ರಾಕ್ಷಸರಿಗೆ) ಒಡೆಯನಾದ ರಾವಣನು, ಸಮಸ್ತ ಆಯುಧಗಳಿಂದ ಕೂಡಿದ ರಥವನ್ನೇರಿ, ಬಿಲ್ಲನ್ನು ಹಿಡಿದು, ಹತ್ತು ಸಾವಿರ ಕೋಟಿ ಸೇನಾಧಿಪತಿಗಳಿಂದ  ಕೂಡಿದವನಾಗಿ ಯುದ್ಧಕ್ಕೆಂದು ತೆರಳಿದನು.

ಬಲೈಸ್ತು ತಸ್ಯಾಥ ಬಲಂ ಕಪೀನಾಂ ನೈಕಪ್ರಕಾರಾಯುಧಪೂಗಭಗ್ನಮ್ ।
ದಿಶಃ ಪ್ರದುದ್ರಾವ ಹರೀನ್ದ್ರಮುಖ್ಯಾಃ ಸಮಾರ್ದ್ದಯನ್ನಾಶು ನಿಶಾಚರಾಂಸ್ತದಾ ॥೮.೭೧॥

ರಾವಣನ ಸೈನ್ಯಗಳಿಂದ ಕಪಿಗಳ ಸೈನ್ಯವು ವಿಧವಿಧವಾದ ಆಯುಧಗಳಿಂದ ಧಕ್ಕೆಗೆ ಒಳಗಾಯಿತು. ಆಗ  ಕಪಿಶ್ರೇಷ್ಠರೆಲ್ಲರು ಸೇರಿ ರಾಕ್ಷಸರನ್ನು ಮರ್ದಿಸಿದರು.

ಗಜೋ ಗವಾಕ್ಷೋ ಗವಯೋ ವೃಷಶ್ಚ ಸಗನ್ಧಮಾದಾ ಧನದೇನ ಜಾತಾಃ ।
ಪ್ರಾಣಾದಯಃ ಪಞ್ಚ ಮರುತ್ಪ್ರವೀರಾಃ ಸ ಕತ್ಥನೋ ವಿತ್ತಪತಿಶ್ಚ ಜಘ್ನುಃ ॥೮.೭೨॥

(ಬಾಲಕಾಂಡದ ನಿರೂಪಣೆಯಲ್ಲಿ ಯಾವ ಕಪಿಗಳ ಸ್ವರೂಪವನ್ನು ನಿರೂಪಣೆ ಮಾಡಿರಲಿಲ್ಲವೋ, ಅದನ್ನು ಇಲ್ಲಿ ಪ್ರಾಸಂಗಿಕವಾಗಿ ಆಚಾರ್ಯರು ನಿರೂಪಣೆ ಮಾಡುತ್ತಿದ್ದಾರೆ: )  ಗಜ, ಗವಾಕ್ಷ, ಗವಯ, ವೃಷ, ಗನ್ಧಮಾದಾ, ಇವರೆಲ್ಲರೂ ಕೂಡಾ ಮುಖ್ಯಪ್ರಾಣನ ಮಕ್ಕಳು. ಕುಭೇರನ ‘ಕತ್ಥನ’ ಎಂಬ ಕಪಿರೂಪದಿಂದ ಹುಟ್ಟಿದ ಅವರೆಲ್ಲರೂ, ತಂದೆ ಕತ್ಥನನೊಂದಿಗೆ  ಸೇರಿ, ಸೇನೆಯ ಮುಂದಾಳಾಗಿ ಹೋರಾಡಿದರು.

ಶರೈಸ್ತು ತಾನ್ ಷಡ್ಬಿರಮೋಘವೇಗೈರ್ನ್ನಿಪಾತಯಾಮಾಸ ದಶಾನನೋ ದ್ರಾಕ್ ।
ಅಥಾಶ್ವಿಪುತ್ರೌ ಚ ಸಜಾಮ್ಬವನ್ತೌ ಪ್ರಜಹ್ನತುಃ ಶೈಲವರೈಸ್ತ್ರಿಭಿಸ್ತಮ್ ॥೮.೭೩॥

ಅವರೆಲ್ಲರನ್ನು ರಾವಣನು ಶೀಘ್ರವಾಗಿ ಎಣೆಯಿರದ ವೇಗವುಳ್ಳ, ಆರು ಬಾಣಗಳಿಂದ ಬೀಳಿಸಿದನು. ಅದಾದಮೇಲೆ ಜಾಂಬವಂತನಿಂದ ಕೂಡಿಕೊಂಡ ಅಶ್ವೀದೇವತೆಗಳ ಮಕ್ಕಳಾದ ಮೈಂದ-ವಿವಿದರು ಮೂರು ಪರ್ವತವನ್ನು ಹಿಡಿದು ರಾವಣನನ್ನು ಹೊಡೆಯಲು ಹೋದರು.

ಗಿರೀನ್ ವಿದಾರ್ಯ್ಯಾsಶು ಶರೈರಥಾನ್ಯಾಞ್ಛರಾನ್ ದಶಾಸ್ಯೋsಮುಚದಾಶು ತೇಷು ।
ಏಕೈಕಮೇಭಿರ್ವಿನಿಪಾತಿತಾಸ್ತೇ ಸಸಾರ ತಂ ಶಕ್ರಸುತಾತ್ಮಜೋsಥ ॥೮.೭೪॥

ರಾವಣನು ಶೀಘ್ರವಾಗಿ ಅವರು ಎಸೆದ ಬೆಟ್ಟಗಳನ್ನು ತನ್ನ ಶರಗಳಿಂದ ಸೀಳಿ, ನಂತರ ಬೇರೆ ಬಾಣಗಳನ್ನು ಒಬ್ಬನಿಗೆ ಒಂದೊಂದರಂತೆ ಅವರಲ್ಲಿ ಬಿಟ್ಟನು. ಇದರಿಂದ ಅವರೆಲ್ಲರೂ ಕೆಳಗೆ ಬಿದ್ದರು. ಅದಾದ ಮೇಲೆ, ವಾಲಿಯ ಮಗನಾದ ಅಂಗದನು ರಾವಣನೊಂದಿಗೆ ಯುದ್ಧಕ್ಕೆ ಬಂದನು.

ಶಿಲಾಂ ಸಮಾದಾಯ ತಮಾಪತನ್ತಂ ಬಿಭೇದ ರಕ್ಷೋ ಹೃದಯೇ ಶರೇಣ ।
ದೃಢಾಹತಃ ಸೋsಪ್ಯಗಮದ್ ಧರಾತಳಂ ರವೇಃ ಸುತೋsಥೈನಮಭಿಪ್ರಜಗ್ಮಿವಾನ್ ॥೮.೭೫॥

ದೊಡ್ಡ ಬೆಟ್ಟವನ್ನು ಎತ್ತಿಕೊಂಡು ಬಂದ ಅಂಗದನ ಎದೆಗೆ  ರಾವಣನು ಬಾಣದಿಂದ ಹೊಡೆದನು. ಇದರಿಂದ ಗಟ್ಟಿಯಾಗಿ ಹೊಡೆಯಲ್ಪಟ್ಟವನಾದ ಅಂಗದನು ನೆಲಕ್ಕೆ ಒರಗಿದನು(ಮೂರ್ಛಿತನಾದನು). ಆಗ ಸುಗ್ರೀವನು ರಾವಣನನ್ನು ಎದುರುಗೊಂಡನು.

ತದ್ದಸ್ತಗಂ ಭೂರುಹಮಾಶು ಬಾಣೈರ್ದ್ದಶಾನನಃ ಖಣ್ಡಶ ಏವ ಕೃತ್ವಾ ।
ಗ್ರೀವಾಪ್ರದೇಶೇsಸ್ಯ ಮುಮೋ ಚ ಬಾಣಂ ಭೃಶಾಹತಃ ಸೋsಪಿ ಪಪಾತ ಭೂಮೌ ॥೮.೭೬॥

ಸುಗ್ರೀವನ ಕೈಯಲ್ಲಿರುವ ದೊಡ್ಡ ಮರವನ್ನು ತನ್ನ ಬಾಣಗಳಿಂದ ಕತ್ತರಿಸಿದ ರಾವಣನು, ಅವನ ಕೊರಳಿನ ಭಾಗಕ್ಕೆ ಬಾಣವನ್ನು ಬಿಟ್ಟನು. ಇದರಿಂದ  ಬಲವಾಗಿ ಹೊಡೆಯಲ್ಪಟ್ಟವನಾದ ಸುಗ್ರೀವನೂ ಭೂಮಿಯಲ್ಲಿ ಬಿದ್ದನು.

ಕನ್ನಡ ಪದ್ಯರೂಪ:  https://go-kula.blogspot.com/2018/06/8-70-76.html

Sunday, June 24, 2018

Mahabharata Tatparya Nirnaya Kannada 8.63-8.69


ಹತೇಷು ಪುತ್ರೇಷು ಸ ರಾಕ್ಷಸೇಶಃ ಸ್ವಯಂ ಪ್ರಯಾಣಂ ಸಮರಾರ್ತ್ಥಮೈಚ್ಛತ್ ।
ಸಜ್ಜೀಭವತ್ಯೇವ ನಿಶಾಚರೇಶೇ ಖರಾತ್ಮಜಃ ಪ್ರಾಹ ಧನುರ್ದ್ಧರೋತ್ತಮಃ ॥೮.೬೩॥

ತನ್ನ ಮಕ್ಕಳು ಸಂಹರಿಸಲ್ಪಟ್ಟಿರುವುದರಿಂದ ನೊಂದ ರಾವಣನು ತಾನೇ ಯುದ್ಧಕ್ಕಾಗಿ ಪ್ರಯಾಣವನ್ನು ಇಚ್ಛಿಸಿದನು. ಹೀಗೆ ಆತ ಸಿದ್ಧನಾಗುತ್ತಿರಲು, ಧನುರ್ಧಾರಿಗಳೆಲ್ಲೇ ಅಗ್ರಗಣ್ಯನಾದ ಖರನ ಮಗನು ಅವನನ್ನು ಕುರಿತು ಮಾತನಾಡಿದನು: 

ನಿಯುಙ್ಕ್ಷ್ವ ಮಾಂ ಮೇ ಪಿತುರನ್ತಕಸ್ಯ ವಧಾಯ ರಾಜನ್ ಸಹಲಕ್ಷ್ಮಣಂ ತಮ್ ।
ಕಪಿಪ್ರವೀರಾಂಶ್ಚ ನಿಹತ್ಯ ಸರ್ವಾನ್ ಪ್ರತೋಷಯೇ ತ್ವಾಮಹಮದ್ಯ ಸುಷ್ಠು ॥೮.೬೪॥

“ಎಲೈ ರಾಜನೇ, ನನ್ನ ಅಪ್ಪನಾದ ಖರನ ಕೊಲೆಗಾರನನ್ನು  ಕೊಲ್ಲುವಿಕೆಗಾಗಿ ನನಗೆ ಆಜ್ಞೆಮಾಡು. ನಾನು ಲಕ್ಷ್ಮಣನಿಂದ ಕೂಡಿರುವ ರಾಮನನ್ನು, ಎಲ್ಲಾ ಕಪಿ ಪ್ರವೀರರನ್ನೂ ಕೂಡಾ ಕೊಂದು, ಇಂದೇ ನಿನ್ನನ್ನು ಸಂತಸಗೊಳಿಸುತ್ತೇನೆ”

ಇತೀರಿತೇsನೇನ ನಿಯೋಜಿತಃ ಸ ಜಗಾಮ ವೀರೋ ಮಕರಾಕ್ಷನಾಮಾ ।
ವಿಧೂಯ ಸರ್ವಾಂಶ್ಚ ಹರಿಪ್ರವೀರಾನ್ ಸಹಾಙ್ಗದಾನ್ ಸೂರ್ಯ್ಯಸುತೇನ ಸಾಕಮ್ ॥೮.೬೫॥

ಈ ರೀತಿಯಾಗಿ  ಮಕರಾಕ್ಷನೆಂಬ ಹೆಸರುಳ್ಳ ಆ ದೈತ್ಯವೀರನು ಹೇಳಿದಾಗ, ರಾವಣ ಆತನನ್ನು ಯುದ್ಧಕ್ಕೆ ನಿಯುಕ್ತಗೊಳಿಸಿದನು. ಯುದ್ಧಕ್ಕೆ ಬಂದ ಮಕರಾಕ್ಷ,  ಸುಗ್ರೀವ, ಅಂಗದ, ಮೊದಲಾದ ಎಲ್ಲಾ ಕಪಿಪ್ರವೀರರನ್ನೂ ಕೂಡಾ ನಿರಾಕರಿಸಿ, ನೇರವಾಗಿ ಶ್ರೀರಾಮನ ಬಳಿಗೇ ಹೊರಟನು.

ಅಚಿನ್ತಯನ್  ಲಕ್ಷ್ಮಣಬಾಣಸಙ್ಘಾನವಜ್ಞಯಾ ರಾಮಮಥಾsಹ್ವಯದ್ ರಣೇ ।
ಉವಾಚ ರಾಮಂ ರಜನೀಚರೋsಸೌ ಹತೋ ಜನಸ್ಥಾನಗತಃ ಪಿತಾ ತ್ವಯಾ ॥೮.೬೬॥

ಕೇನಾಪ್ಯುಪಾಯೇನ ಧನುರ್ದ್ಧರಾಣಾಂ ವರಃ ಫಲಂ ತಸ್ಯ ದದಾಮಿ ತೇsದ್ಯ ।
ಇತಿ ಬ್ರುವಾಣಃ ಸ ಸರೋಜಯೋನೇರ್ವರಾದವದ್ಧ್ಯೋsಮುಚದಸ್ತ್ರಸಙ್ಘಾನ್ ॥೮.೬೭॥

ಶ್ರೀರಾಮನತ್ತ ತೆರಳುತ್ತಿರುವ ಮಕರಾಕ್ಷನ ಮೇಲೆ ಲಕ್ಷ್ಮಣ ಬಾಣ ಬಿಡುತ್ತಿದ್ದರೂ ಕೂಡಾ, ಅದನ್ನು ತಿರಸ್ಕಾರದಿಂದ ನಿರ್ಲಕ್ಷಿಸಿದ ಆತ, ರಾಮನನ್ನೇ ಯುದ್ಧಕ್ಕೆ ಆಹ್ವಾನ ಮಾಡಿದ ಮತ್ತು ಹೇಳಿದ ಕೂಡಾ: “ಜನಸ್ಥಾನದಲ್ಲಿರುವ ನನ್ನ ತಂದೆಯನ್ನು ನೀನು ಕೊಂದೆ. ಯಾವುದೋ ಉಪಾಯದಿಂದ ನೀನು ನನ್ನ ತಂದೆಯನ್ನು ಕೊಂದಿರಬಹುದು. (ನನಗಿಂತ ಶ್ರೇಷ್ಠನಾಗಿರುವ ನನ್ನ ತಂದೆಗಿಂತ ನೀನು ಶ್ರೇಷ್ಠ ಎಂದು ನನಗನಿಸುವುದಿಲ್ಲ).  ನನ್ನ ತಂದೆಯನ್ನು ಕೊಂದ  ಫಲವನ್ನು ನಾನು ನಿನಗೆ ಈಗ ಕೊಡುತ್ತೇನೆ”  ಎಂದು ಹೇಳುತ್ತಾ, ಬ್ರಹ್ಮನ ವರದಿಂದ ಅವಧ್ಯನಾದ ಆತ ರಾಮನ ಮೇಲೆ ಅಸ್ತ್ರಗಳನ್ನು ಬಿಟ್ಟನು.

ಪ್ರಹಸ್ಯ ರಾಮೋsಸ್ಯ ನಿವಾರ್ಯ್ಯ ಚಾಸ್ತ್ರೈರಸ್ತ್ರಾಣ್ಯಮೇಯೋsಶನಿಸನ್ನಿಭೇನ ।
ಶಿರಃ ಶರೇಣೋತ್ತಮಕುಣ್ಡಲೋಜ್ಜ್ವಲಂ ಖರಾತ್ಮಜಸ್ಯಾಥ ಸಮುನ್ಮಮಾಥ ॥೮.೬೮॥

ಖರನ ಮಗನಾದ ಮಕರಾಕ್ಷನ ಮಾತನ್ನು ಕೇಳಿದ ರಾಮಚಂದ್ರನು ಮುಗುಳುನಕ್ಕು, ಅವನ ಅಸ್ತ್ರಗಳನ್ನು ತನ್ನ ಅಸ್ತ್ರಗಳಿಂದ ತಡೆದು, ಮಿಂಚಿನಂತೆ ಇರುವ ಬಾಣದಿಂದ ಒಳ್ಳೆ ಕುಂಡಲವನ್ನು ಧರಿಸಿದ್ದ ಆತನ ಶಿರಸ್ಸನ್ನು ಕತ್ತರಿಸಿದನು.

ವಿದುದ್ರುವುಸ್ತಸ್ಯ ತು ಯೇsನುಯಾಯಿನಃ ಕಪಿಪ್ರವೀರೈರ್ನ್ನಿಹತಾವಶೇಷಿತಾಃ ।
ಯಥೈವ ಧೂಮ್ರಾಕ್ಷಮುಖೇಷು ಪೂರ್ವಂ ಹತೇಷು ಪೃಥ್ವೀರುಹಶೈಲಧಾರಿಭಿಃ ॥೮.೬೯॥

ಮಕರಾಕ್ಷ ಸಾಯಲು, ಮರ ಮತ್ತು ಬೆಟ್ಟಗಳನ್ನು ಬಳಸಿ ಯುದ್ಧಮಾಡುತ್ತಿದ್ದ ಕಪಿಗಳಿಂದ ಬದುಕುಳಿದ ಆತನ ಅನುಯಾಯಿಗಳು ಅಲ್ಲಿಂದ ಓಡಿಹೋದರು. ಹೇಗೆ ದೂಮ್ರಾಕ್ಷ ಮೊದಲಾದವರು ಸತ್ತಾಗ ಅವರ ಅನುಯಾಯಿಗಳು ಓಡಿದ್ದರೂ ಹಾಗೇ ಮಕರಾಕ್ಷನ ಅನುಯಾಯಿಗಳೂ ಓಡಿಹೋದರು. 

ಕನ್ನಡ ಪದ್ಯರೂಪ: https://go-kula.blogspot.com/2018/06/8-63-69.html

Friday, June 22, 2018

Mahabharata Tatparya Nirnaya Kannada 8.58-8.62


ವವರ್ಷತುಸ್ತಾವತಿಮಾತ್ರವೀರ್ಯ್ಯೌ ಶರಾನ್ ಸುರೇಶಾಶನಿತುಲ್ಯವೇಗಾನ್ ।
ತಮೋಮಯಂ ಚಕ್ರತುರನ್ತರಿಕ್ಷಂ ಸ್ವಶಿಕ್ಷಯಾ ಕ್ಷಿಪ್ರತಮಾಸ್ತಬಾಣೈಃ ॥೮.೫೮॥

ಬಹಳ ಪರಾಕ್ರಮವುಳ್ಳ ಅವರಿಬ್ಬರೂ ಕೂಡಾ, ವಜ್ರಾಯುಧಕ್ಕೆ ಸಮನಾದ ವೇಗವುಳ್ಳ ಬಾಣಗಳನ್ನು ಪರಸ್ಪರ ಹೊಡೆದುಕೊಂಡರು. ಆ ಬಾಣಗಳ ಮಳೆಯಿಂದ  ಎಲ್ಲವೂ ಕತ್ತಲಾಗಿ ಕಂಡಿತು. ತಮ್ಮ ಅಭ್ಯಾಸ ಬಲದಿಂದ ವೇಗವಾಗಿ ಬಾಣಗಳನ್ನೆಸೆದು ಅವರಿಬ್ಬರು ಯುದ್ಧಮಾಡಿದರು.

ಶರೈಃ ಶರಾನಸ್ಯ ನಿವಾರ್ಯ್ಯ ವೀರಃ ಸೌಮಿತ್ರಿರಸ್ತ್ರಾಣಿ ಮಹಾಸ್ತ್ರಜಾಲೈಃ ।
ಚಿಚ್ಛೇದ ಬಾಹೂ ಶಿರಸಾ ಸಹೈವ ಚತುರ್ಭುಜೋsಭೂತ್ ಸ ಪುನದ್ದ್ವಿಷೀರ್ಷಃ ॥೮.೫೯॥

ಅತಿಕಾಯನ ಬಾಣಗಳನ್ನು ತನ್ನ ಬಾಣಗಳಿಂದ ತಡೆದ ವೀರನಾಗಿರುವ ಲಕ್ಷ್ಮಣನು, ಅವನು ಬಿಟ್ಟ ಅಸ್ತ್ರಗಳನ್ನು ಮಹಾಸ್ತ್ರಗಳಿಂದ ಕತ್ತರಿಸಿದನು. ತದನಂತರ, ಅವನ ಎರಡು ತೋಳುಗಳನ್ನು ಮತ್ತು ಕತ್ತನ್ನು ಒಟ್ಟಿಗೆ ಕತ್ತರಿಸಿದನು. ಆದರೆ ತಕ್ಷಣ ಅತಿಕಾಯನು ಎರಡು ತಲೆ ನಾಲ್ಕು ಬುಜವುಳ್ಳವನಾದನು!

ಛಿನ್ನೇಷು ತೇಷು ದ್ವಿಗುಣಾಸ್ಯಬಾಹುಃ ಪುನಃ ಪುನಃ ಸೋsಥ ಬಭೂವ ವೀರಃ ।
ಉವಾಚ ಸೌಮಿತ್ರಿಮಥಾನ್ತರಾತ್ಮಾ ಸಮಸ್ತಲೋಕಸ್ಯ ಮರುದ್ ವಿಷಣ್ಣಮ್ ॥೮.೬೦॥

ಆ ನಾಲ್ಕು ಭುಜಗಳನ್ನೂ ಮತ್ತು ಎರಡು ತಲೆಗಳನ್ನು ಲಕ್ಷ್ಮಣ ಕತ್ತರಿಸಿದಾಗ, ಅತಿಕಾಯ ನಾಲ್ಕು ತಲೆ ಎಂಟು ಕೈಗಳುಳ್ಳವನಾದನು. ಈ ರೀತಿ ಪ್ರತಿಬಾರಿ ಆ ವೀರನಾಗಿರುವ ಅತಿಕಾಯನು ದ್ವಿಗುಣ ತಲೆ ಕೈಗಳುಳ್ಳವನಾಗಿ ಬೆಳೆಯುತ್ತಿದ್ದನು. ಇದರಿಂದ ದುಃಖಿತಾನಾಗುತ್ತಿರುವ ಲಕ್ಷ್ಮಣನನ್ನು ಕಂಡ ಎಲ್ಲರ ಅಂತರ್ಯಾಮಿಯಾದ ಮುಖ್ಯಪ್ರಾಣನು ಅವನಲ್ಲಿ ಈ ರೀತಿ ಹೇಳಿದನು:

ಬ್ರಹ್ಮಾಸ್ತ್ರತೋsನ್ಯೇನ ನ ವಧ್ಯ ಏಷ ವರಾದ್ ವಿಧಾತುಃ ಸುಮುಖೇತ್ಯದೃಶ್ಯಃ ।
ರಕ್ಷಃಸುತಸ್ಯಾಶ್ರವಣೀಯಮಿತ್ಥಮುಕ್ತ್ವಾ ಸಮೀರೋsರುಹದನ್ತರಿಕ್ಷಮ್ ॥೮.೬೧॥

“ಎಲೈ ಸುಮುಖನೇ, ಬ್ರಹ್ಮಾಸ್ತ್ರಕ್ಕಿಂತ ವಿಲಕ್ಷಣವಾದ ಅಸ್ತ್ರದಿಂದ ಇವನನ್ನು ಕೊಲ್ಲಲಾಗುವುದಿಲ್ಲ. ಏಕೆಂದರೆ: ಈತನಿಗೆ ಬ್ರಹ್ಮದೇವರ ವರವಿದೆ” ಎಂದು. ಈ ರೀತಿ ಅತಿಕಾಯನಿಗೆ  ತಿಳಿಯದಂತೆ  ಲಕ್ಷ್ಮಣನಿಗೆ ಹೇಳಿದ ಹನುಮಂತನು  ಅಂತರಿಕ್ಷಕ್ಕೆ ನೆಗೆದನು.

ಅಥಾನುಜೋ ದೇವತಮಸ್ಯ ಸೋsಸ್ತ್ರಂ ಬ್ರಾಹ್ಮಂ ತನೂಜೇ ದಶಕನ್ಧರಸ್ಯ ।
ಮುಮೋಚ ದಗ್ಧಃ ಸರಥಾಶ್ವಸೂತಸ್ತೇನಾತಿಕಾಯಃ ಪ್ರವರೋsಸ್ತ್ರವಿತ್ಸು ॥೮.೬೨॥

ತದನಂತರ ದೇವತೆಗಳಿಂದ ಸ್ತುತಿಸಲ್ಪಡುವ ಶ್ರೀರಾಮಚಂದ್ರನ  ತಮ್ಮನಾಗಿರುವ ಲಕ್ಷ್ಮಣನು, ರಾವಣನ ಮಗನಾದ ಅತಿಕಾಯನಲ್ಲಿ ಬ್ರಹ್ಮಾಸ್ತ್ರವನ್ನು ಬಿಟ್ಟನು. ಅದರಿಂದಾಗಿ ರಥ-ಅಸ್ತ್ರಗಳಿಂದ ಕೂಡಿಕೊಂಡು, ಅಸ್ತ್ರವಿತ್ಸುಗಳಲ್ಲಿ ಶ್ರೇಷ್ಠನಾದ  ಅತಿಕಾಯನು ಸುಟ್ಟುಹೋದನು.

[ಕುಂಭಕರ್ಣೋsಕರೋದ್ ಯುದ್ಧಂ ನವಮ್ಯಾದಿಚತುರ್ದಿನೈಃ ।  ರಾಮೇಣ ನಿಹತೋ ಯುದ್ಧೇಬಹುವಾನರಭಕ್ಷಕಃ’ ಎಂದು ಬ್ರಹ್ಮಾಂಡ ಪುರಾಣದಲ್ಲಿದೆ.[ಬ್ರಹ್ಮಖಂಡ ಧರ್ಮರಣ್ಯಮಹಾತ್ಮ್ಯೇ-೩೦-೬೩]. ಹೀಗೆ ಕುಂಭಕರ್ಣನನ್ನು ರಾಮ ಕೊಂದಿರುವುದು ಎಂದು ವಾಲ್ಮೀಕಿ ರಾಮಾಯಣದಲ್ಲಿ, ಪುರಾಣದಲ್ಲಿ ಎಲ್ಲಾ ಕಡೆ ಹೇಳಿದ್ದಾರೆ. ಆದರೆ  ಮಹಾಭಾರತದ ವನಪರ್ವದಲ್ಲಿ  ಒಂದು ಕಡೆ ಕುಂಭಕರ್ಣನನ್ನು ಲಕ್ಷ್ಮಣ ಕೊಂದ ಎಂದು ಹೇಳಿದ್ದಾರೆ. ಆ ವಿರೋಧವನ್ನು ಆಚಾರ್ಯರು ಇಲ್ಲಿ ಪರಿಹಾರ ಮಾಡಿದ್ದಾರೆ. ಲಕ್ಷ್ಮಣ ಕೊಂದಿರುವುದು ರಾವಣನ ಮಗನಾದ ಅತಿಕಾಯನನ್ನೇ ಹೊರತು ರಾವಣನ ತಮ್ಮ ಕುಂಭಕರ್ಣನನ್ನಲ್ಲ. ಕುಂಭದಂತೆ ಕಿವಿ ಉಳ್ಳ ಅತಿಕಾಯನನ್ನೂ ಕೂಡಾ  ಕುಂಭಕರ್ಣ ಎಂದು ಕರೆಯುತ್ತಿದ್ದರು ಎನ್ನುವ ಸ್ಪಷ್ಟತೆ ಇಲ್ಲಿ ನಮಗೆ ತಿಳಿಯುತ್ತದೆ.]

ಕನ್ನಡ ಪದ್ಯರೂಪ:  https://go-kula.blogspot.com/2018/06/8-58-62.html

Thursday, June 21, 2018

Mahabharata Tatparya Nirnaya Kannada 8.53-8.57


ವಿದ್ರಾವಿತಾಖಿಲಕಪಿಂ ವರಾತ್ ತ್ರಿಶಿರಸಂ ವಿಭೋಃ ।
ಭಙ್ಕ್ತ್ವಾರಥಂ ಧನುಃ ಖಡ್ಗಮಾಚ್ಛಿದ್ಯಾಶಿರಸಂ ವ್ಯಧಾತ್ ॥೮.೫೩॥

ಬ್ರಹ್ಮನ ವರದಿಂದ ಎಲ್ಲಾ ಕಪಿಗಳನ್ನೂ ಓಡಿಸಿದ  ತ್ರಿಶಿರಸ ಎಂಬ ರಾಕ್ಷಸನ ರಥವನ್ನು, ಧನುಸ್ಸನ್ನು ಮುರಿದ ಹನುಮಂತನು, ಅವನ  ಖಡ್ಗವನ್ನು ಸೆಳೆದು,  ಅವನ ಶಿರಸ್ಸನ್ನು ಕತ್ತರಿಸಿದನು. 

ಯುದ್ಧೋನ್ಮತ್ತಶ್ಚ ಮತ್ತಶ್ಚ ಪಾರ್ವತೀವರದರ್ಪ್ಪಿತೌ ।
ಪ್ರಮಥನ್ತೌ ಕಪೀನ್ ಸರ್ವಾನ್ ಹತೌ ಮಾರುತಿಮುಷ್ಟಿನಾ ॥೮.೫೪॥

ಎಲ್ಲಾ ಕಪಿಗಳನ್ನೂ ನಾಶ ಮಾಡುತ್ತಿರುವ, ಪಾರ್ವತೀದೇವಿಯ ವರದಿಂದ ಅಹಂಕಾರಿಗಳಾಗಿರುವ, ‘ಯುದ್ಧೋನ್ಮತ್ತ’ ಹಾಗು  ‘ಮತ್ತ’ ಎನ್ನುವ ಇಬ್ಬರು ರಾಕ್ಷಸರು ಹನುಮಂತನ ಮುಷ್ಟಿ ಪ್ರಹಾರದಿಂದ ಸತ್ತರು. 

ತತೋsತಿಕಾಯೋsತಿರಥೋ ರಥೇನ ಸ್ವಯಂಭುದತ್ತೇನ ಹರೀನ್ ಪ್ರಮೃದ್ನನ್ ।
ಚಚಾರ ಕಾಲಾನಲಸಿನ್ನಿಕಾಶೋ ಗನ್ಧರ್ವಿಕಾಯಾಂ ಜನಿತೋ ದಶಾಸ್ಯಾತ್ ॥೮.೫೫॥

ತದನಂತರ, ರಾವಣನಿಂದ ಗಂಧರ್ವೀಯಲ್ಲಿ^ ಹುಟ್ಟಿರುವ  ಅತಿಕಾಯನು, ಬ್ರಹ್ಮವರದ ಬಲದಿಂದ  ಕಪಿಗಳನ್ನು ಚಂಡಾಡುತ್ತಾ, ಪ್ರಳಯಕಾಲದ ಬೆಂಕಿಗೆ ಸಮನಾಗಿ ಯುದ್ಧಭೂಮಿಯಲ್ಲಿ ಓಡಾಡಿದನು.
(^ಗಂಧರ್ವೀ  ಎಂದರೆ ಮೊದಲು ಗಂಧರ್ವನ ಹೆಂಡತಿಯಾಗಿದ್ದವಳು. ಅಂತಹ ಗಂಧರ್ವೀಯನ್ನು ಬಲಾತ್ಕಾರದಿಂದ ತಂದು ರಾವಣ ಮದುವೆಯಾಗಿದ್ದ. ಅವಳಲ್ಲಿ ರಾವಣನಿಗೆ ಹುಟ್ಟಿದವನು ಅತಿಕಾಯ )   

ಬೃಹತ್ತನುಃ ಕುಮ್ಭವದೇವ ಕರ್ಣ್ಣಾವಸ್ಯೇತ್ಯತೋ ನಾಮ ಚ ಕುಮ್ಭಕರ್ಣ್ಣಃ ।
ಇತ್ಯಸ್ಯ ಸೋsರ್ಕ್ಕಾತ್ಮಜಪೂರ್ವಕಾನ್ ಕಪೀನ್ ಜಿಗಾಯ ರಾಮಂ ಸಹಸಾsಭ್ಯಧಾವತ್ ॥೮.೫೬॥

ಬಹಳ ದೊಡ್ಡ ದೇಹವುಳ್ಳ ಅತಿಕಾಯನಿಗೆ ಮಡಿಕೆಯಂತಹ ಕಿವಿಗಳಿದ್ದವು. ಈ ಕಾರಣದಿಂದ ಅವನನ್ನು ಕುಂಭಕರ್ಣ^ ಎಂದೂ ಕರೆಯುತ್ತಿದ್ದರು. ಇಂತಹ ಅತಿಕಾಯ  ಸುಗ್ರೀವ ಮೊದಲಾದ ಕಪಿಗಳನ್ನು ಗೆದ್ದು, ವೇಗವಾಗಿ ರಾಮಚಂದ್ರನನ್ನು ಎದುರುಗೊಳ್ಳಲು ಹೊರಟ.  
(^ಇವನು ರಾವಣನ ತಮ್ಮನಾದ ಕುಂಭಕರ್ಣನಲ್ಲ. ಈತ ರಾವಣನ ಮಗನಾದ ಅತಿಕಾಯ. ಆತನಿಗೆ ಕುಂಭಕರ್ಣ ಎನ್ನುವ ಅಡ್ಡ ಹೆಸರಿತ್ತು ಅಷ್ಟೇ) 

ತಮಾಪತನ್ತಂ ಶರವರ್ಷಧಾರಂ ಮಹಾಘನಾಭಂ ಸ್ತನಯಿತ್ನುಘೋಷಮ್ ।
ನಿವಾರಯಾಮಾಸ ಯಥಾ ಸಮೀರಃ ಸೌಮಿತ್ರಿರಾತ್ತೇಷ್ವಸನಃ ಶರೌಘೈಃ ॥೮.೫೭॥

ಬಾಣಗಳ ಮಳೆಗೆರೆಯುವ, ದೊಡ್ಡ ಮೋಡದಂತೆ ಇರುವ, ಸಿಡಿಲಿನಂತೆ ಆರ್ಭಟಿಸುತ್ತಾ ಬರುತ್ತಿರುವ ಆ ಅತಿಕಾಯನನ್ನು, ಧನುರ್ಧಾರೀ ಲಕ್ಷ್ಮಣನು ತನ್ನ ಬಾಣಗಳಿಂದ ತಡೆದನು. 

Wednesday, June 20, 2018

Mahabharata Tatparya Nirnaya Kannada 8.43-8.52


ಗನ್ಧರ್ವಕನ್ಯಕಾಸೂತೇ ನಿಹತೇ ರಾವಣಾತ್ಮಜೇ ।
ಆಜಗಾಮಾಗ್ರಜಸ್ತಸ್ಯ ಸೋದರ್ಯ್ಯೋ  ದೇವತಾನ್ತಕಃ ॥೮.೪೩॥

ರಾವಣನಿಗೆ ಗಂಧರ್ವ ಕನ್ಯೆಯಲ್ಲಿ ಹುಟ್ಟಿದ ನರಾಂತಕನು ಸಾಯುತ್ತಿರಲು, ಅವನ ಅಣ್ಣನಾದ  ದೇವಾಂತಕನು ಯುದ್ಧಕ್ಕೆ ಬಂದನು.

ತಸ್ಯಾsಪತತ ಏವಾsಶು ಶರವರ್ಷಪ್ರತಾಪಿತಾಃ ।
ಪ್ರದುದ್ರುವುರ್ಭಯಾತ್ ಸರ್ವೇ ಕಪಯೋ ಜಾಮ್ಬವನ್ಮುಖಾಃ ॥೮.೪೪॥

ದೇವಾಂತಕ ನುಗ್ಗಿ ಬರುತ್ತಿರಬೇಕಾದರೆ, ಅವನ ಬಾಣದ ಮಳೆಯಿಂದ ಕಂಗೆಟ್ಟು, ಜಾಂಬವಂತನೂ ಸೇರಿ ಎಲ್ಲಾ  ಕಪಿಗಳು ಅಲ್ಲಿಂದ  ಓಡಿಹೋದರು.

ಸ ಶರಂ ತರಸಾssದಾಯ ರವಿಪುತ್ರಾಯುಧೋಪಮಮ್ ।
ಅಙ್ಗದಂ ಪ್ರಜಹಾರೋರಸ್ಯಪತತ್ ಸ ಮುಮೋಹ ಚ ॥೮.೪೫॥

ದೇವಾಂತಕನು ಯಮನ ದಂಡದಂತೆ ಇರುವ ಬಾಣವನ್ನು ವೇಗವಾಗಿ ತೆಗೆದುಕೊಂಡು, ಅದನ್ನು  ಅಂಗದನ ಎದೆಗೆ ಹೊಡೆದನು. ಅದರಿಂದ ಅಂಗದ ಮೂರ್ಛೆಹೊಂದಿದನು.

ಅಥ ತಿಗ್ಮಾಂಶುತನಯಃ ಶೈಲಂ ಪ್ರಚಲಪಾದಪಮ್ ।
ಅಭಿದುದ್ರಾವ ಸಙ್ಗೃಹ್ಯ ಚಿಕ್ಷೇಪ ಚ ನಿಶಾಚರೇ ॥೮.೪೬॥

ತದನಂತರ ಸೂರ್ಯನ ಮಗನಾದ ಸುಗ್ರೀವನು, ಅಲ್ಲಾಡುತ್ತಿರುವ ಮರಗಳುಳ್ಳ ಪುಟ್ಟದೊಂದು ಗುಡ್ಡವನ್ನು  ಎತ್ತಿಕೊಂಡು ಓಡಿಬಂದು, ಅದನ್ನು ರಾಕ್ಷಸನ ಮೇಲೆ ಎಸೆದನು.

ತಮಾಪತನ್ತಮಾಲಕ್ಷ್ಯದೂರಾಚ್ಛರವಿದಾರಿತಮ್ ।
ಸುರಾನ್ತಕಶ್ಚಕಾರಾsಶು ದಧಾರ ಚ ಪರಂ ಶರಮ್ ॥೮.೪೭॥

ದೂರದಿಂದಲೇ  ಬೀಳುತ್ತಿರುವ ಆ ಬೆಟ್ಟವನ್ನು ನೋಡಿದ ದೇವಾಂತಕನು, ತನ್ನ ಬಾಣದಿಂದ ಅದನ್ನು ಸೀಳಿ ಹಾಕಿ, ಇನ್ನೊಂದು ಬಾಣವನ್ನೂ ಕೂಡಾ ಧರಿಸಿದನು.

ಸ ತಮಾಕರ್ಣ್ಣಮಾಕೃಷ್ಯ ಯಮದಣ್ಡೋಪಮಂ ಶರಮ್ ।
ಅವಿದ್ಧ್ಯದ್ಧೃದಯೇ ರಾಜ್ಞಃ ಕಪೀನಾಂ ಸ ಪಪಾತ ಹ ॥೮.೪೮॥

ಅವನು ಯಮನ ದಂಡದಂತೆ ಇರುವ ಬಾಣವನ್ನು ತನ್ನ ಕಿವಿಯ ತನಕ ಎಳೆದು, ಅದನ್ನು  ಸುಗ್ರೀವನ ಎದೆಗೆ  ಹೊಡೆದ. ದೇವಾಂತಕನ ಬಾಣದ ಪೆಟ್ಟಿನಿಂದ ಸುಗ್ರೀವನು ಕೆಳಗೆ ಭೂಮಿಯ ಮೇಲೆ  ಬಿದ್ದನು.


ಬಲಮಪ್ರತಿಮಂ ವೀಕ್ಷ್ಯಸುರಶತ್ರೋಸ್ತು ಮಾರುತಿಃ ।
ಆಹ್ವಯಾಮಾಸ ಯುದ್ಧಾಯ ಕೇಶವಃ ಕೈಟಭಂ ಯಥಾ ॥೮.೪೯॥

ದೇವಾಂತಕನ ಬಲವನ್ನು ನೋಡಿದ ಹನುಮಂತನು, ಹೇಗೆ ಕೇಶವನು ಕೈಟಭನನ್ನು ಯುದ್ಧಕ್ಕೆ ಆಹ್ವಾನ ಮಾಡಿದನೋ ಹಾಗೇ, ಆತನನ್ನು ಯುದ್ಧಕ್ಕೆ ಆಹ್ವಾನ ಮಾಡಿದನು.

ತಮಾಪತನ್ತಮಾಲೋಕ್ಯ ರಥಂ ಸಹಯಸಾರಥಿಮ್ ।
ಚೂರ್ಣ್ಣಯಿತ್ವಾ ಧನುಶ್ಚಾಸ್ಯ ಸಮಾಚ್ಛಿದ್ಯ ಬಭಞ್ಜ ಹ ॥೮.೫೦॥

ಯುದ್ಧಕ್ಕಾಗಿ ವೇಗವಾಗಿ ಬರುತ್ತಿದ್ದ ದೇವಾಂತಕನನ್ನು ನೋಡಿದ ಮಾರುತಿಯು, ಅವನ  ಕುದುರೆ ಹಾಗು ಸಾರಥಿಯಿಂದ ಕೂಡಿರುವ ರಥವನ್ನು ಪುಡಿಪುಡಿ ಮಾಡಿ, ಅವನ ಧನುಸ್ಸನ್ನು ಕಿತ್ತುಕೊಂಡು ಮುರಿದುಬಿಟ್ಟನು.

ಅಥ ಖಡ್ಗಂ ಸಮಾದಾಯ ಪುರ ಆಪತತೋ ರಿಪೋಃ ।
ಹರಿಃ ಪ್ರಗೃಹ್ಯ ಕೇಶೇಷು ಪಾತಯಿತ್ವೈನಮಾಹವೇ ॥೮.೫೧॥

ಶಿರೋ ಮಮರ್ದ್ದ ತರಸಾ ಪವಮಾನಾತ್ಮಜಃ ಪದಾ ।
ವರದಾನಾದವದ್ಧ್ಯಂ ತಂ ನಿಹತ್ಯ ಪವನಾತ್ಮಜಃ ।
ಸಮೀಡಿತಃ ಸುರವರೈಃ ಪ್ಲವಗೈರ್ವೀಕ್ಷಿತೋ ಮುದಾ ॥೮.೫೨॥

ಆನಂತರ ಅವನ ಖಡ್ಗವನ್ನು ಕಿತ್ತುಕೊಂಡ ಹನುಮಂತನು, ಅವನ ತಲೆಕೂದಲನ್ನು ಹಿಡಿದು, ಕೆಳಗೆ ಬೀಳಿಸಿ, ಕಾಲಿನಿಂದ ಒತ್ತಿ ಅವನ ತಲೆಯನ್ನು ಪುಡಿಗೈದನು.
ಹೀಗೆ ವರದಾನದಿಂದ ಅವದ್ಯನಾಗಿದ್ದ ಅವನನ್ನು ಕೊಂದ ಹನುಮಂತನು ದೇವತೆಗಳಿಂದ ಸ್ತುತನಾದನು. ಕಪಿಗಳಿಂದ ಸಂತೋಷ ಮತ್ತು ಅಭಿಮಾನ ತುಂಬಿದ ನೋಟದಿಂದ ನೋಡಲ್ಪಟ್ಟವನೂ ಆದನು.
ಕನ್ನಡ ಪದ್ಯರೂಪ:  https://go-kula.blogspot.com/2018/06/8-43-52.html