ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, June 5, 2018

Mahabharata Tatparya Nirnaya Kannada 7.42-7.47


ಇತೀರಿತೇ ವಧೋದ್ಯತಂ ನ್ಯವಾರಯದ್ ವಿಭೀಷಣಃ ।
ಸ ಪುಚ್ಛದಾಹಕರ್ಮ್ಮಣಿ ನ್ಯಯೋಜಯನ್ನಿಶಾಚರಾನ್ ॥೭.೪೨॥

ಹನುಮಂತನು ಶ್ರೀರಾಮನ ಕುರಿತು ಹೇಳುತ್ತಿರಲು, ಅವನನ್ನು ಕೊಲ್ಲಬೇಕು ಎಂದು ಸಂಕಲ್ಪಿಸುತ್ತಾ ಉದ್ಯುಕ್ತನಾದ  ರಾವಣನನ್ನು ವಿಭೀಷಣ ತಡೆಯುತ್ತಾನೆ. ಆಗ ರಾವಣನು ಹನುಮಂತನ ಬಾಲವನ್ನು ಸುಡುವಂತೆ ರಾಕ್ಷಸರಿಗೆ ತಿಳಿಸುತ್ತಾನೆ.

ಅಥಾಸ್ಯ ವಸ್ತ್ರಸಞ್ಚಯೈಃ ಪಿಧಾಯ ಪುಚ್ಛಮಗ್ನಯೇ ।
ದದುರ್ದ್ದದಾಹ ನಾಸ್ಯ ತನ್ಮರುತ್ಸಖೋ ಹುತಾಶನಃ ॥೭.೪೩॥

ಅನಂತರ ರಾಕ್ಷಸರೆಲ್ಲರೂ ಸೇರಿ, ಹನುಮಂತನ ಬಾಲವನ್ನು ಬಟ್ಟೆಗಳಿಂದ ಮುಚ್ಚಿ ಬೆಂಕಿ ಹಚ್ಚುತ್ತಾರೆ. ಆದರೆ ಆ ಬೆಂಕಿಯು ಅವನ ಬಾಲವನ್ನು ಸುಡಲಿಲ್ಲ. ಬೆಂಕಿ ವಾಯುವಿನ ಸಖನಷ್ಟೇ?   

ಮಮರ್ಷ ಸರ್ವಚೇಷ್ಟಿತಂ ಸ ರಕ್ಷಸಾಂ ನಿರಾಮಯಃ ।
ಬಲೋದ್ಧತಶ್ಚ ಕೌತುಕಾತ್ ಪ್ರದಗ್ಧುಮೇವ ತಾಂ ಪುರೀಮ್ ॥೭.೪೪॥

ಬಲದಿಂದ ಮಿಗಿಲೆನಿಸಿದ್ದರೂ, ಯಾವುದೇ ತೊಂದರೆ ಆಗದಿದ್ದರೂ ಕೂಡಾ, ಹನುಮಂತ   ರಾಕ್ಷಸರ ಎಲ್ಲಾ ಚೇಷ್ಟೆ ಗಳನ್ನೂ ಸಹಿಸಿ ಸುಮ್ಮನಿದ್ದ. ಏಕೆಂದರೆ: ಅವರು ಏನು ಮಾಡುತ್ತಾರೆ ಎಂದು ನೋಡುವ ಕುತೂಹಲದಿಂದ  ಮತ್ತು ಲಂಕೆಯನ್ನೆಲ್ಲಾ ಸುತ್ತಾಡಿಸಿಕೊಂಡು ಬಂದ ಅವರ ಪಟ್ಟಣವನ್ನು ಸುಡುವುದಕ್ಕಾಗಿ.


ದದಾಹ ಚಾಖಿಲಂ ಪುರಂ ಸ್ವಪುಚ್ಛಗೇನ ವಹ್ನಿನಾ ।
ಕೃತಿಸ್ತು ವಿಶ್ವಕರ್ಮ್ಮಣೋsಪ್ಯದಹ್ಯತಾಸ್ಯ ತೇಜಸಾ ॥೭.೪೫॥

ತನ್ನ ಬಾಲದಲ್ಲಿ ಇದ್ದ ಬೆಂಕಿಯಿಂದ ಲಂಕಾಪಟ್ಟಣವನ್ನು ಹನುಮಂತ ಸುಟ್ಟುಬಿಟ್ಟ.  ವಿಶ್ವಕರ್ಮನ ನಿರ್ಮಾಣವೂ ಕೂಡಾ ಹನುಮಂತನ ಪ್ರಭಾವದಿಂದ ಸುಟ್ಟುಹೋಯಿತು.

ಸುವರ್ಣ್ಣರತ್ನಕಾರಿತಾಂ ಸ ರಾಕ್ಷಸೋತ್ತಮೈಃ ಸಹ ।
ಪ್ರದಹ್ಯಸರ್ವಶಃ ಪುರೀಂ ಮುದಾsನ್ವಿತೋ ಜಗರ್ಜ್ಜ  ಚ ॥೭.೪೬॥

ಹನುಮಂತನು ರಾಕ್ಷಸ ಶ್ರೇಷ್ಠರನ್ನೂ ಸೇರಿಸಿ,  ಸುವರ್ಣ ಹಾಗು ರತ್ನದಿಂದ ಮಾಡಲ್ಪಟ್ಟ ಲಂಕಾಪಟ್ಟಣವನ್ನು ಎಲ್ಲೆಡೆಯಿಂದ ಸುಟ್ಟು, ಸಂತಸದಿಂದ ಕೂಡಿ, ಗಟ್ಟಿಯಾಗಿ ಗರ್ಜಿಸಿದನು.

ಸ ರಾವಣಂ ಸಪುತ್ರಕಂ ತೃಣೋಪಮಂ ವಿಧಾಯ ಚ ।
ತಯೋಃ ಪ್ರಪಶ್ಯತೋಃ ಪುರಂ ವಿಧಾಯ ಭಸ್ಮಸಾದ್ ಯಯೌ ॥೭.೪೭॥

ಹನುಮಂತನು ಇಂದ್ರಜಿತುವಿನಿಂದ ಕೂಡಿದ ರಾವಣನನ್ನು ಹುಲ್ಲಿಗಿಂತಲೂ ಕಡೆಯಾಗಿ ಮಾಡಿ, ಅವರ ಕಣ್ಣಮುಂದೇ ಲಂಕಾ ಪಟ್ಟಣವನ್ನು ಬಸ್ಮಮಾಡಿ ತೆರಳಿದ.

No comments:

Post a Comment