ಪ್ರಕರ್ಷತಿ ತ್ವೇವ ನಿಶಾಚರೇಶ್ವರೇ
ತಥೈವ ರಾಮಾವರಜಂ ತ್ವರಾನ್ವಿತಃ ।
ಸಮಸ್ತಜೀವಾಧಿಪತೇಃ ಪರಾ ತನುಃ ಸಮುತ್ಪಪಾತಾಸ್ಯ
ಪುರೋ ಹನೂಮಾನ್ ॥೮.೮೯॥
ರಾವಣನು ಲಕ್ಷ್ಮಣನನ್ನು ಎಳೆಯುತ್ತಿರಲು, ವೇಗದಿಂದ ಕೂಡಿದ, ಎಲ್ಲಾ
ಜೀವರ ಅಧಿಪತಿಯಾಗಿರುವ ಮುಖ್ಯಪ್ರಾಣನ ಇನ್ನೊಂದು ಶರೀರಭೂತನಾದ ಹನುಮಂತನು ರಾವಣನ ಎದುರು ಬಂದು
ನಿಂತನು.
ಸ ಮುಷ್ಟಿಮಾವರ್ತ್ತ್ಯ ಚ ವಜ್ರಕಲ್ಪಂ
ಜಘಾನ ತೇನೈವ ಚ ರಾವಣಂ ರುಷಾ ।
ಪ್ರಸಾರ್ಯ್ಯ ಬಾಹೂನಖಿಲೈರ್ಮ್ಮುಖೈರ್ವಮನ್ ಸ ರಕ್ತಮುಷ್ಣಂ ವ್ಯಸುವತ್ ಪಪಾತ ॥೮.೯೦॥
ಹನುಮಂತನು ತನ್ನ ಮುಷ್ಟಿಯನ್ನು ಬಿಗಿ ಹಿಡಿದು, ವಜ್ರಕಲ್ಪವಾದ ತನ್ನ
ಮುಷ್ಟಿಯನ್ನು ತಿರುವಿ, ಅದರಿಂದಲೇ ರಾವಣನನ್ನು
ಸಿಟ್ಟಿನಿಂದ ಗುದ್ದಿದನು. ರಾವಣನು ಹನುಮಂತನ ಮುಷ್ಟಿಪ್ರಹಾರವನ್ನು ತಡೆಯಲಾಗದೇ, ತನ್ನ ಎಲ್ಲಾ
ಮುಖಗಳಿಂದ ಬಿಸಿಯಾದ ರಕ್ತವನ್ನು ಕಕ್ಕುತ್ತಾ ಹೆಣದಂತೆ ಬಿದ್ದನು.
ನಿಪಾತ್ಯರಕ್ಷೋಧಿಪತಿಂ ಸ ಮಾರುತಿಃ
ಪ್ರಗೃಹ್ಯ ಸೌಮಿತ್ರಿಮುರಙ್ಗಶಾಯಿನಃ ।
ಜಗಾಮ ರಾಮಾಖ್ಯತನೋಃ ಸಮೀಪಂ
ಸೌಮಿತ್ರಿಮುದ್ಧರ್ತ್ತುಮಲಂ ಹ್ಯಸೌ ಕಪಿಃ ॥೮.೯೧॥
ರಾಕ್ಷಸರ ಒಡೆಯನಾದ ರಾವಣನನ್ನು ಕೆಡವಿದ ಹನುಮಂತನು, ಲಕ್ಷ್ಮಣನನ್ನು
ಹಿಡಿದುಕೊಂಡು ರಾಮನೆಂಬ ಹೆಸರಿನ ಶೇಷಶಾಯಿ ನಾರಾಯಣನ ಸಮೀಪಕ್ಕೆ ತೆರಳಿದನು. ಲಕ್ಷ್ಮಣನನ್ನು
ಎತ್ತಲು ಈ ಹನುಮಂತನು ಸಮರ್ಥನಷ್ಟೇ?
ಸ ರಾಮಸಮ್ಸ್ಪರ್ಷನಿವಾರಿತಕ್ಲಮಃ
ಸಮುತ್ಥಿತಸ್ತೇನ ಸಮುದ್ಧೃತೇ ಶರೇ ।
ಬಭೌ ಯಥಾ ರಾಹುಮುಖಾತ್ ಪ್ರಮುಕ್ತಃ
ಶಶೀ ಸುಪೂರ್ಣ್ಣೋ ವಿಕಚಸ್ವರಶ್ಮಿಭಿಃ ॥೮.೯೨॥
ರಾಮನ ಸಂಸ್ಪರ್ಶದಿಂದ ತನ್ನೆಲ್ಲಾ ಶ್ರಮವನ್ನು ಲಕ್ಷ್ಮಣ ಕಳೆದುಕೊಂಡನು.
ರಾಮಚಂದ್ರನಿಂದ ತನ್ನ ಹಣೆಯಲ್ಲಿ ನೆಟ್ಟ ಬಾಣವು ಕೀಳಲ್ಪಡುತ್ತಿರಲು ಆತ ಎದ್ದು ಕುಳಿತನು. ಹೇಗೆ
ರಾಹುವಿನ ಮುಖದಿಂದ ಬಿಡುಗಡೆಯಾದ ಚಂದ್ರನು ತನ್ನ ಕಿರಣಗಳಿಂದ ಪೂರ್ಣನಾಗಿ ಶೋಭಿಸುವನೋ ಹಾಗೇ ಲಕ್ಷ್ಮಣನು ಶೋಭಿಸಿದನು.
ಸ ಶೇಷಭೋಗಾಭಮಥೋ ಜನಾರ್ದ್ದನಃ
ಪ್ರಗೃಹ್ಯ ಚಾಪಂ ಸಶರಂ ಪುನಶ್ಚ ।
ಸುಲಬ್ಧಸಙ್ಜ್ಞಂ ರಜನೀಚರೇಶಂ ಜಗಾದ
ಸಜ್ಜೀಭವ ರಾವಣೇತಿ ॥೮.೯೩॥
ಲಕ್ಷ್ಮಣನು ಸಂಪೂರ್ಣ ಸ್ವಸ್ಥನಾದ ಮೇಲೆ, ರಾಮಚಂದ್ರನು ಹಾವಿನ
ಶರೀರದಂತೆ ದಪ್ಪವಾಗಿರುವ ಬಿಲ್ಲನ್ನು ಬಾಣಗಳಿಂದ ಕೂಡಿ ಹಿಡಿದು, ಚನ್ನಾಗಿ ಎಚ್ಚರಗೊಂಡ ಮತ್ತು
ಆಯಾಸದಿಂದ ಚೇತರಿಸಿಕೊಂಡ ರಾವಣನನ್ನು ಕುರಿತು “ಎಲೈ ರಾವಣನೇ, ಸಿದ್ಧನಾಗು” ಎಂದು ಎಚ್ಚರಿಸಿದನು.
ಕನ್ನಡ ಪದ್ಯರೂಪ: https://go-kula.blogspot.com/2018/06/8-89-93.html
ಕನ್ನಡ ಪದ್ಯರೂಪ: https://go-kula.blogspot.com/2018/06/8-89-93.html
No comments:
Post a Comment