ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, June 8, 2018

Mahabharata Tatparya Nirnaya Kannada 8.01-8.03


೮. ಹನೂಮತಿ ಶ್ರೀರಾಮದಯಾದಾನಮ್


ಓಂ ॥
ಶ್ರುತ್ವಾಹನೂಮದುದಿತಂ ಕೃತಮಸ್ಯ ಸರ್ವಂಪ್ರೀತಃ ಪ್ರಯಾಣಮಭಿರೋಚಯತೇ ಸ ರಾಮಃ ।
ಆರುಹ್ಯ ವಾಯುಸುತಮಙ್ಗದಗೇನ ಯುಕ್ತಃ ಸೌಮಿತ್ರಿಣಾ ಸರವಿಜಃ ಸಹ ಸೇನಯಾsಗಾತ್ ॥೮.೦೧॥

ರಾಮಚಂದ್ರನು ಹನುಮಂತ ಹೇಳಿದ, ಅವನು ಮಾಡಿದ ಎಲ್ಲಾ ಕರ್ಮಗಳನ್ನು ಕೂಡಾ ಕೇಳಿ, ಹನುಮಂತನ ಮೇಲೆ ಸಂತುಷ್ಟನಾಗಿ  ಲಂಕೆಯನ್ನು ಕುರಿತು ಪ್ರಯಾಣ ಮಾಡಲು ಬಯಸಿದನು. ಅಂಗದನನ್ನು ಏರಿದ ಲಕ್ಷ್ಮಣನಿಂದ ಕೂಡಿಕೊಂಡು, ಹನುಮಂತನನ್ನು ಏರಿದ ಶ್ರೀರಾಮಚಂದ್ರ, ಸುಗ್ರೀವ ಮತ್ತು ಅವನ ಕಪಿಸೇನೆಯೊಂದಿಗೆ ಲಂಕೆಯತ್ತ ತೆರಳಿದನು.

ಸಮ್ಪ್ರಾಪ್ಯ ದಕ್ಷಿಣಮಪಾಂನ್ನಿಧಿಮತ್ರ ದೇವಃ ಶಿಶ್ಯೇ ಜಗದ್ಗುರುತಮೋsಪ್ಯವಿಚಿನ್ತ್ಯಶಕ್ತಿಃ ।
ಅಗ್ರೇ ಹಿ ಮಾರ್ದ್ದವಮನುಪ್ರಥಯನ್ ಸ ಧರ್ಮ್ಮಂ ಪನ್ಥಾನಮರ್ತ್ಥಿತುಮಪಾಮ್ಪತಿತಃ ಪ್ರತೀತಃ॥೮.೦೨॥

ದಕ್ಷಿಣದ ಸಮುದ್ರವನ್ನು ತಲುಪಿದ ಶ್ರೀರಾಮಚಂದ್ರದೇವರು, ಎಲ್ಲರಿಗೂ ಗುರುವಾದರೂ, ಎಣೆಯಿರದಷ್ಟು ಬಲವನ್ನು ಹೊಂದಿದ್ದರೂ, ‘ಸಮರ್ಥರಾದವರೂ ಕೂಡಾ ಆದಿಯಲ್ಲಿ ಮೃದುವಾಗಿರಬೇಕು’ ಎನ್ನುವ ಧರ್ಮವನ್ನು ಎಲ್ಲರಿಗೂ ತೋರಿಸುತ್ತಾ,  ಸಮುದ್ರರಾಜನಿಂದ  ದಾರಿಯನ್ನು ಕೇಳುವುದಕ್ಕಾಗಿ, ಅಲ್ಲೇ ದರ್ಭೆಯಮೇಲೆ ಮಲಗಿದರು.

ತತ್ರಾsಜಗಾಮ ಸ ವಿಭಿಷಣನಾಮಧೇಯೋ ರಕ್ಷಃ ಪತೇರವರಜೋsಪ್ಯಥ ರಾವಣೇನ ।
ಭಕ್ತೋsಧಿಕಂ ರಘುಪತಾವಿತಿ ಧರ್ಮ್ಮನಿಷ್ಠಸ್ತ್ಯಕ್ತೋ ಜಗಾಮ ಶರಣಂ ಚ ರಘೂತ್ತಮಂ ತಮ್ ॥೮.೦೩॥

ಆ ಸಮಯದಲ್ಲಿ, ರಾಮಚಂದ್ರನಲ್ಲಿ ಅತ್ಯಂತ ಭಕ್ತಿಯನ್ನು ಹೊಂದಿರುವುದರಿಂದ ಮತ್ತು ಧರ್ಮದಲ್ಲಿಯೇ ನಿಷ್ಠನಾಗಿದ್ದಾನೆ ಎನ್ನುವ ಕಾರಣದಿಂದ,  ರಾವಣನಿಂದ ದೂರ ಮಾಡಲ್ಪಟ್ಟ  ವಿಭೀಷಣ ಎನ್ನುವ ಹೆಸರಿನ ರಾವಣನ ತಮ್ಮನು, ಶ್ರೀರಾಮ ಮಲಗಿದ್ದ ಸ್ಥಳಕ್ಕೆ ಬಂದು, ರಾಮಚಂದ್ರನಲ್ಲಿ  ಶರಣು ಹೊಂದಿದನು.

No comments:

Post a Comment