ಪ್ರಾಪ್ತಂ ನಿಶಾಮ್ಯ ಪರಮಂ
ಭುವನೈಕಸಾರಂ ನಿಃಸೀಮಪೌರುಷಮನನ್ತಮಸೌ ದಶಾಸ್ಯಃ ।
ತ್ರಾಸಾದ್ ವಿಷಣ್ಣಹೃದಯೋ ನಿತರಾಂ
ಬಭೂವ ಕರ್ತ್ತವ್ಯಕರ್ಮ್ಮವಿಷಯೇ ಚ ವಿಮೂಢಚೇತಾಃ॥೮.೧೬॥
ಎಣೆಯಿರದ ಬಲವುಳ್ಳ, ಭುವನದಲ್ಲಿಯೇ ಶಕ್ತಿ ಸಾರವುಳ್ಳ, ಶ್ರೇಷ್ಠನಾದ
ಶ್ರೀರಾಮ ಲಂಕೆಗೆ ಬಂದಿರುವುದನ್ನು ತಿಳಿದ ರಾವಣನು, ಎದೆಗುಂದಿದವನಾಗಿ(ಕಳವಳಗೊಂಡ
ಮನಸ್ಸಿನವನಾಗಿ), ಮುಂದೇನು ಮಾಡಬೇಕು ಎಂದು ತಿಳಿಯದಾದನು.
ಪ್ರಸ್ಥಾಪ್ಯ ವಾಲಿಸುತಮೇವ ಚ
ರಾಜನೀತ್ಯೈ ರಾಮಸ್ತದುಕ್ತವಚನೇsಪ್ಯಮುನಾsಗೃಹೀತೇ ।
ದ್ವಾರೋ ರುರೋಧ ಸ ಚತಸ್ರ ಉದೀರ್ಣ್ಣಸೈನ್ಯೋ
ರಕ್ಷಃಪತೇಃ ಪುರ ಉದಾರಗುಣಃ ಪರೇಶಃ॥೮.೧೭॥
ರಾಜನೀತಿಗನುಗುಣವಾಗಿ, ಉತ್ಕೃಷ್ಟವಾದ ಗುಣವುಳ್ಳ ಶ್ರೀರಾಮಚಂದ್ರನು, ಯುದ್ಧಕ್ಕೂ
ಮೊದಲು ಅಂಗದನನ್ನು ರಾವಣನಲ್ಲಿಗೆ ಕಳುಹಿಸಿ, ತನ್ನ ಸಂದೇಶವನ್ನು ಆತನಿಗೆ ತಲುಪಿಸಿದನು.
ಆದರೆ ಆ ಮಾತನ್ನು ರಾವಣ ಗ್ರಹಿಸದಿರಲು, ಅತ್ಯಂತ ಉತ್ಕೃಷ್ಟವಾದ ಸೇನೆಯುಳ್ಳ
ರಾಮಚಂದ್ರನು ರಾವಣನ ಪುರದ ನಾಲ್ಕೂ ದಿಕ್ಕಿನ ಬಾಗಿಲನ್ನು ಆವರಿಸಿ ನಿಂತನು.
ದ್ವಾರಾಂ
ನಿರೋಧಸಮಯೇ ಸ ದಿದೇಶ ಪುತ್ರಂ ವಾರಾಮ್ಪತೇರ್ದ್ಧಿಶಿ ಸುರೇಶ್ವರಶತ್ರುಮುಗ್ರಮ್ ।
ಪ್ರಾಚ್ಯಾಂ
ಪ್ರಹಸ್ತಮದಿಶದ್ ದಿಶಿ ವಜ್ರದಂಷ್ಟ್ರಂ ಪ್ರೇತಾಧಿಪಸ್ಯ ಶಶಿನಃ ಸ್ವಯಮೇವ ಚಾಗಾತ್ ॥೮.೧೮॥
ಎಲ್ಲಾ ಕಡೆಯಿಂದಲೂ ತನ್ನ ಪಟ್ಟಣವನ್ನು ರಾಮನ ಸೇನೆ ಮುತ್ತಿಗೆ
ಹಾಕಿರುವುದನ್ನು ತಿಳಿದ ರಾವಣನು, ಪಶ್ಚಿಮದಿಕ್ಕಿಗೆ ಅತ್ಯಂತ ದುಷ್ಟನಾದ ತನ್ನ ಮಗ ಇನ್ದ್ರಜಿತುವನ್ನು
ಕಳುಹಿಸಿದನು. ಪೂರ್ವ ದಿಕ್ಕಿಗೆ ಪ್ರಹಸ್ತನನ್ನು,
ದಕ್ಷಿಣದಿಕ್ಕಿಗೆ ವಜ್ರದಂಷ್ಟ್ರನನ್ನು ಕಳುಹಿಸಿದ ಆತ, ಉತ್ತರದಿಕ್ಕಿಗೆ ತಾನೇ ಹೊರಟು ನಿಂತನು.
No comments:
Post a Comment