ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, June 17, 2018

Mahabharata Tatparya Nirnaya Kannada 8.31-8.34


ಇತೀರಿತಸ್ತೇನ ಸ ರಾಕ್ಷಸೋತ್ತಮೋ ವರಾದಮೋಘಂ ಪ್ರಜಹಾರ ವಕ್ಷಸಿ ।
ವಿಚೂರ್ಣ್ಣಿತೋsಸೌ ತದುರಸ್ಯಭೇದ್ಯೇ ಯಥೈವ ವಜ್ರೋ ವಿಪತೌ ವೃಥಾsಭವತ್ ॥೮.೩೧॥

ಈ ರೀತಿಯಾಗಿ ಹನುಮಂತನಿಂದ ಹೇಳಲ್ಪಟ್ಟಾಗ  ಆ ನಿಕುಂಭನು, ವರಬಲದಂತೆ ಎಂದೂ ವ್ಯರ್ಥವಾಗದ ತನ್ನ ಶಸ್ತ್ರವನ್ನು ಹನುಮಂತನ ಎದೆಗೆ ಹೊಡೆದನು. ಆ ಶಕ್ತ್ಯಾಯುಧವು ಹೇಗೆ ‘ಇಂದ್ರ ಪ್ರಯೋಗ ಮಾಡಿದ ವಜ್ರವು  ಗರುಡನಲ್ಲಿ ವ್ಯರ್ಥವಾಯಿತೋ’ ಹಾಗೇ, ಹನುಮಂತನ ಅಭೇಧ್ಯವಾದ ಎದೆಯಲ್ಲಿ ಬಿದ್ದು ಪುಡಿಪುಡಿಯಾಯಿತು.. (ಇಲ್ಲಿ ಹೋಲಿಕೆಯಾಗಿ ಬಳಸಿದ ಇಂದ್ರ-ಗರುಡರ ನಡುವಿನ ಯುದ್ಧ ಪ್ರಸಂಗವನ್ನು ಮಹಾಭಾರತದ ಆದಿಪರ್ವದಲ್ಲಿ(೩೩.೨೧-೩) ಕಾಣಬಹುದು)
 
ವಿಚೂರ್ಣ್ಣಿತೇ   ನಿಜಾಯುಧೇ ನಿಕುಮ್ಭ ಏತ್ಯ  ಮಾರುತಿಮ್ ।
ಪ್ರಗೃಹ್ಯ ಚಾsತ್ಮನೋಂsಸಕೇ ನಿಧಾಯ ಜಗ್ಮಿವಾನ್ ದ್ರುತಮ್ ॥೮.೩೨॥

ತನ್ನ ಆಯುಧವು ಪುಡಿಪುಡಿಯಾಗಲು ನಿಕುಂಭನು ಹನುಮಂತನ ಬಳಿ ಬಂದು, ಹನುಮಂತನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಓಡಲಾರಂಭಿಸಿನು. 

ಪ್ರಗೃಹ್ಯ ಕಣ್ಠಮಸ್ಯ ಸ ಪ್ರಧಾನಮಾರುತಾತ್ಮಜಃ ।
ಸ್ವಮಾಶು ಮೋಚಯಮ್ಸ್ತತೋ ನ್ಯಪಾತಯದ್ ಧರಾತಳೇ ॥೮.೩೩॥

ಆಗ ಮುಖ್ಯಪ್ರಾಣನ ಮಗನಾದ ಹನುಮಂತನು,  ನಿಕುಂಭನ ಕೊರಳನ್ನು ಗಟ್ಟಿಯಾಗಿ ಹಿಡಿದು, ತನ್ನನ್ನು ಅವನ ಹಿಡಿತದಿಂದ ಬಿಡಿಸಿಕೊಂಡು, ಆತನನ್ನು  ಭೂಮಿಯಲ್ಲಿ ಬೀಳಿಸಿದನು.

ಚಕಾರ ತಂ ರಣಾತ್ಮಕೇ ಮಖೇ ರಮೇಶದೈವತೇ ।
ಪಶುಂ ಪ್ರಭಞ್ಜನಾತ್ಮಜೋ ವಿನೇದುರತ್ರ ದೇವತಾಃ ॥೮.೩೪॥

ನಿಕುಂಭನನ್ನು ನೆಲದಮೇಲೆ ಬೀಳಿಸಿದ ಹನುಮಂತನು, ಅವನನ್ನು ಗುದ್ದಿ, ರಾಮಚಂದ್ರನೇ ದೇವತೆಯಾಗಿ ಉಳ್ಳ ಯುದ್ಧವೆಂಬ  ಯಜ್ಞದಲ್ಲಿ, ನಿಕುಂಭನನ್ನು ಪಶುವನ್ನಾಗಿ ಸಂಕಲ್ಪಿಸಿ ಬಲಿ ಕೊಟ್ಟನು. ಆಗ ದೇವತೆಗಳೆಲ್ಲರೂ ಸಂತೋಷದಿಂದ ಜಯಕಾರ ಮಾಡಿದರು.

No comments:

Post a Comment