ಅಥಾಸ್ತ್ರಸಮ್ಪ್ರದೀಪಿತೈಃ ಸಮಸ್ತಶೋ
ಮಹೋಲ್ಮುಕೈಃ ।
ರಘುಪ್ರವೀರಚೋದಿತಾಃ ಪುರಂ ನಿಷಿ
ಸ್ವದಾಹಯನ್ ॥೮.೨೫॥
ಮೊದಲನೆಯ ದಿನದ ಯುದ್ಧದ ನಂತರ, ಆ ರಾತ್ರಿ, ದೈತ್ಯರ ಪರಾಜಯವಾದ ಮೇಲೆ,
ರಾಮಚಂದ್ರ ದೇವರಿಂದ ಪ್ರಚೋದಿಸಲ್ಪಟ್ಟ ಕಪಿಗಳು, ಅಗ್ನ್ಯಸ್ತ್ರದಿಂದ ಹೊತ್ತಿಸಲ್ಪಟ್ಟ
ದೊಡ್ಡದೊಡ್ಡ ಪಂಜುಗಳಿಂದ ಲಂಕಾಪುರಿಯನ್ನು ಸುಟ್ಟವು.
ತತಸ್ತೌ ನಿಕುಮ್ಭೋsಥ ಕುಮ್ಭಶ್ಚ ಕೋಪಾತ್ ಪ್ರದಿಷ್ಟೌ ದಶಾಸ್ಯೇನ
ಕುಮ್ಭಶ್ರುತೇರ್ಹಿ ।
ಸುತೌ ಸುಪ್ರಹೃಷ್ಟೌ ರಣಾಯಾಭಿಯಾತೌ
ಕಪೀಂಸ್ತಾನ್ ಬಹಿಃ ಸರ್ವಶೋ ಯಾತಯಿತ್ವಾ ॥೮.೨೬॥
ಪಟ್ಟಣ ಸುಟ್ಟುಹೋದ ಕಾರಣದಿಂದ ಕೋಪಗೊಂಡ ರಾವಣನಿಂದ ಕಳುಹಿಸಲ್ಪಟ್ಟ,
ನಿಕುಂಭ ಮತ್ತು ಕುಂಭರೆನ್ನುವ ಕುಂಭಕರ್ಣನ ಇಬ್ಬರು ಮಕ್ಕಳು (ಕಪಿಗಳನ್ನು ಸುಲಭವಾಗಿ ಕೊಲ್ಲಬಲ್ಲೆವು ಎಂದುಕೊಂಡು)
ಬಹಳ ಆನಂದದಿಂದ ಯುದ್ಧಕ್ಕೆ ಬಂದವರಾಗಿ, ಕಪಿಗಳನ್ನು ಪ್ರಾಕಾರದಿಂದ ಆಚೆ ಹೊಡೆದು ಓಡಿಸುತ್ತಾರೆ.
ಸ ಕುಮ್ಭೋ ವಿಧಾತುಃ ಸುತಂ ತಾರನೀಲೌ
ನಳಂ ಚಾಶ್ವಿಪುತ್ರೌ ಜಿಗಾಯಾಙ್ಗದಂ ಚ ।
ಸುಯುದ್ಧಂ ಚ ಕೃತ್ವಾ ದಿನೇಶಾತ್ಮಜೇನ
ಪ್ರಣೀತೋ ಯಮಸ್ಯಾsಶು ಲೋಕಂ ಸುಪಾಪಃ
॥೮.೨೭॥
ಪಾಪಿಷ್ಠನಾದ ಕುಂಭನು ಜಾಂಬವಂತನನ್ನು, ತಾರ ಹಾಗು ನೀಲರನ್ನು,
ನಳನನ್ನು, ಮೈನ್ದ, ವಿವಿದ ಮತ್ತು ಅಂಗದನನ್ನು ಗೆಲ್ಲುತ್ತಾನೆ.
ಆದರೆ ಆನಂತರ, ಬಹಳ ಹೊತ್ತಿನತನಕ ಸುಗ್ರೀವನೊಂದಿಗೆ ಯುದ್ಧ ಮಾಡಿ, ಯಮಲೋಕ ಸೇರುತ್ತಾನೆ.
ತತೋ ನಿಕುಮ್ಭೋsದ್ರಿವರಪ್ರದಾರಣಂ ಮಹಾನ್ತಮುಗ್ರಂ ಪರಿಘಂ
ಪ್ರಗೃಹ್ಯ ।
ಸಸಾರ ಸೂರ್ಯ್ಯಾತ್ಮಜಮಾಶು ಭೀತಃ ಸ
ಪುಪ್ಲುವೇ ಪಶ್ಚಿಮತೋ ಧನುಃಶತಮ್॥೮.೨೮॥
ತದನಂತರ ನಿಕುಂಭನು ಶ್ರೇಷ್ಠ ಪರ್ವತಗಳನ್ನೇ ಸೀಳುವಂತಹ ಗಾತ್ರದಲ್ಲಿ
ದೊಡ್ಡದಾಗಿರುವ ಚೂಪಾಗಿರುವ ಈಟಿಯನ್ನು ಹಿಡಿದು, ಸುಗ್ರೀವನೊಂದಿಗೆ ಯುದ್ಧಕ್ಕೆ ಬರುತ್ತಾನೆ. ಆಗ
ಭಯಗೊಂಡ ಸುಗ್ರೀವನು ಪಶ್ಚಿಮದಿಕ್ಕಿಗೆ ನೂರು ಮಾರು ದೂರ ಹಿಂದಕ್ಕೆ ಜಿಗಿಯುತ್ತಾನೆ.
ತಂ ಭ್ರಾಮಯತ್ಯಾಶು ಭುಜೇನ ವೀರೇ
ಭ್ರಾನ್ತಾ ದಿಶೋ ದ್ಯೌಶ್ಚ ಸಚನ್ದ್ರಸೂರ್ಯ್ಯಾ ।
ಸುರಾಶ್ಚ ತಸ್ಯೋರುಬಲಂ ವರಂ ಚ
ಶರ್ವೋದ್ಭವಂ ವೀಕ್ಷ್ಯ ವಿಷೇದುರೀಷತ್ ॥೮.೨೯॥
ನಿಕುಂಭನು ತನ್ನ ಈಟಿಯನ್ನು ಅಗಲವಾದ ಭುಜದಿಂದ ಗರಗರನೆ
ತಿರುಗಿಸುತ್ತಿರಲು, ಕಪಿಗಳಿಗೆ ದಿಕ್ಕುಗಳೇ ತಿರುಗಿದಂತೆ ಕಂಡವು. ಚಂದ್ರ ಸೂರ್ಯರೂ ಮಂಕಾದಂತೆ
ಕಂಡರು. ದೇವತೆಗಳೂ ಕೂಡಾ ನಿಕುಂಭನಿಗೆ ಸದಾಶಿವ ಕೊಟ್ಟ ವರವನ್ನೂ, ಬಲವನ್ನೂ ಕಂಡು, ಸ್ವಲ್ಪ
ದುಃಖಿತರಾದರು.
ಅನನ್ಯಸಾಧ್ಯಂ ತಮಥೋ ನಿರೀಕ್ಷ್ಯ
ಸಮುತ್ಪಪಾತಾsಶು ಪುರೋsಸ್ಯ ಮಾರುತಿಃ ।
ಪ್ರಕಾಶಬಾಹ್ವನ್ತರ ಆಹ ಚೈನಂ
ಕಿಮೇಭಿರತ್ರ ಪ್ರಹರಾsಯುಧಂ ತೇ ॥೮.೩೦॥
ಬೇರಾರಿಗೂ ಗೆಲ್ಲಲು ಅಸಾಧ್ಯವಾದ ನಿಕುಂಭನನ್ನು ನೋಡಿದ ಹನುಮಂತನು,
ಅವನ ಎದುರು ನೆಗೆದು, ತನ್ನ ಎರಡೂ ಬಾಹುಗಳ ನಡುವಿನಭಾಗವನ್ನು(ಎದೆಯನ್ನು) ಹಿಗ್ಗಿಸಿ ನಿಂತನು. ತನ್ನ
ಎದೆಯನ್ನು ಸೆಟೆದು ತೋರಿಸುತ್ತಾ ಹನುಮಂತ ಹೇಳುತ್ತಾನೆ: “ಅವರೆಲ್ಲರಿಗೆ ಏಕೆ? ನನಗೆ ಹೊಡೆ” ಎಂದು.
[ಈ ಪ್ರಸಂಗವನ್ನು ಹನುಮಾನ್ಸ್ತು ವಿವೃತ್ಯೋರಸ್ತಸ್ಥೌ ತಸ್ಯಾಗ್ರತೋ ಬಲೀ ಎಂದು
ರಾಮಾಯಣದಲ್ಲಿ ವರ್ಣಿಸಿರುವುದನ್ನು ಕಾಣಬಹುದು]
No comments:
Post a Comment