ಹತೇಷು ಪುತ್ರೇಷು ಸ ರಾಕ್ಷಸೇಶಃ
ಸ್ವಯಂ ಪ್ರಯಾಣಂ ಸಮರಾರ್ತ್ಥಮೈಚ್ಛತ್ ।
ಸಜ್ಜೀಭವತ್ಯೇವ ನಿಶಾಚರೇಶೇ
ಖರಾತ್ಮಜಃ ಪ್ರಾಹ ಧನುರ್ದ್ಧರೋತ್ತಮಃ ॥೮.೬೩॥
ತನ್ನ ಮಕ್ಕಳು ಸಂಹರಿಸಲ್ಪಟ್ಟಿರುವುದರಿಂದ ನೊಂದ ರಾವಣನು ತಾನೇ
ಯುದ್ಧಕ್ಕಾಗಿ ಪ್ರಯಾಣವನ್ನು ಇಚ್ಛಿಸಿದನು. ಹೀಗೆ ಆತ ಸಿದ್ಧನಾಗುತ್ತಿರಲು, ಧನುರ್ಧಾರಿಗಳೆಲ್ಲೇ
ಅಗ್ರಗಣ್ಯನಾದ ಖರನ ಮಗನು ಅವನನ್ನು ಕುರಿತು ಮಾತನಾಡಿದನು:
ನಿಯುಙ್ಕ್ಷ್ವ ಮಾಂ ಮೇ
ಪಿತುರನ್ತಕಸ್ಯ ವಧಾಯ ರಾಜನ್ ಸಹಲಕ್ಷ್ಮಣಂ ತಮ್ ।
ಕಪಿಪ್ರವೀರಾಂಶ್ಚ ನಿಹತ್ಯ ಸರ್ವಾನ್
ಪ್ರತೋಷಯೇ ತ್ವಾಮಹಮದ್ಯ ಸುಷ್ಠು ॥೮.೬೪॥
“ಎಲೈ ರಾಜನೇ, ನನ್ನ ಅಪ್ಪನಾದ ಖರನ ಕೊಲೆಗಾರನನ್ನು ಕೊಲ್ಲುವಿಕೆಗಾಗಿ ನನಗೆ ಆಜ್ಞೆಮಾಡು. ನಾನು
ಲಕ್ಷ್ಮಣನಿಂದ ಕೂಡಿರುವ ರಾಮನನ್ನು, ಎಲ್ಲಾ ಕಪಿ ಪ್ರವೀರರನ್ನೂ ಕೂಡಾ ಕೊಂದು, ಇಂದೇ ನಿನ್ನನ್ನು
ಸಂತಸಗೊಳಿಸುತ್ತೇನೆ”
ಇತೀರಿತೇsನೇನ ನಿಯೋಜಿತಃ ಸ ಜಗಾಮ ವೀರೋ ಮಕರಾಕ್ಷನಾಮಾ
।
ವಿಧೂಯ ಸರ್ವಾಂಶ್ಚ ಹರಿಪ್ರವೀರಾನ್
ಸಹಾಙ್ಗದಾನ್ ಸೂರ್ಯ್ಯಸುತೇನ ಸಾಕಮ್ ॥೮.೬೫॥
ಈ ರೀತಿಯಾಗಿ ಮಕರಾಕ್ಷನೆಂಬ
ಹೆಸರುಳ್ಳ ಆ ದೈತ್ಯವೀರನು ಹೇಳಿದಾಗ, ರಾವಣ ಆತನನ್ನು ಯುದ್ಧಕ್ಕೆ ನಿಯುಕ್ತಗೊಳಿಸಿದನು. ಯುದ್ಧಕ್ಕೆ
ಬಂದ ಮಕರಾಕ್ಷ, ಸುಗ್ರೀವ, ಅಂಗದ, ಮೊದಲಾದ ಎಲ್ಲಾ
ಕಪಿಪ್ರವೀರರನ್ನೂ ಕೂಡಾ ನಿರಾಕರಿಸಿ, ನೇರವಾಗಿ ಶ್ರೀರಾಮನ ಬಳಿಗೇ ಹೊರಟನು.
ಅಚಿನ್ತಯನ್ ಲಕ್ಷ್ಮಣಬಾಣಸಙ್ಘಾನವಜ್ಞಯಾ ರಾಮಮಥಾsಹ್ವಯದ್ ರಣೇ ।
ಉವಾಚ ರಾಮಂ ರಜನೀಚರೋsಸೌ ಹತೋ ಜನಸ್ಥಾನಗತಃ ಪಿತಾ ತ್ವಯಾ ॥೮.೬೬॥
ಕೇನಾಪ್ಯುಪಾಯೇನ ಧನುರ್ದ್ಧರಾಣಾಂ
ವರಃ ಫಲಂ ತಸ್ಯ ದದಾಮಿ ತೇsದ್ಯ ।
ಇತಿ ಬ್ರುವಾಣಃ ಸ ಸರೋಜಯೋನೇರ್ವರಾದವದ್ಧ್ಯೋsಮುಚದಸ್ತ್ರಸಙ್ಘಾನ್ ॥೮.೬೭॥
ಶ್ರೀರಾಮನತ್ತ ತೆರಳುತ್ತಿರುವ ಮಕರಾಕ್ಷನ ಮೇಲೆ ಲಕ್ಷ್ಮಣ ಬಾಣ
ಬಿಡುತ್ತಿದ್ದರೂ ಕೂಡಾ, ಅದನ್ನು ತಿರಸ್ಕಾರದಿಂದ ನಿರ್ಲಕ್ಷಿಸಿದ ಆತ, ರಾಮನನ್ನೇ ಯುದ್ಧಕ್ಕೆ ಆಹ್ವಾನ
ಮಾಡಿದ ಮತ್ತು ಹೇಳಿದ ಕೂಡಾ: “ಜನಸ್ಥಾನದಲ್ಲಿರುವ ನನ್ನ ತಂದೆಯನ್ನು ನೀನು ಕೊಂದೆ. ಯಾವುದೋ
ಉಪಾಯದಿಂದ ನೀನು ನನ್ನ ತಂದೆಯನ್ನು ಕೊಂದಿರಬಹುದು. (ನನಗಿಂತ ಶ್ರೇಷ್ಠನಾಗಿರುವ ನನ್ನ ತಂದೆಗಿಂತ
ನೀನು ಶ್ರೇಷ್ಠ ಎಂದು ನನಗನಿಸುವುದಿಲ್ಲ). ನನ್ನ
ತಂದೆಯನ್ನು ಕೊಂದ ಫಲವನ್ನು ನಾನು ನಿನಗೆ ಈಗ
ಕೊಡುತ್ತೇನೆ” ಎಂದು ಹೇಳುತ್ತಾ, ಬ್ರಹ್ಮನ
ವರದಿಂದ ಅವಧ್ಯನಾದ ಆತ ರಾಮನ ಮೇಲೆ ಅಸ್ತ್ರಗಳನ್ನು ಬಿಟ್ಟನು.
ಪ್ರಹಸ್ಯ ರಾಮೋsಸ್ಯ ನಿವಾರ್ಯ್ಯ ಚಾಸ್ತ್ರೈರಸ್ತ್ರಾಣ್ಯಮೇಯೋsಶನಿಸನ್ನಿಭೇನ ।
ಶಿರಃ ಶರೇಣೋತ್ತಮಕುಣ್ಡಲೋಜ್ಜ್ವಲಂ
ಖರಾತ್ಮಜಸ್ಯಾಥ ಸಮುನ್ಮಮಾಥ ॥೮.೬೮॥
ಖರನ ಮಗನಾದ ಮಕರಾಕ್ಷನ ಮಾತನ್ನು ಕೇಳಿದ ರಾಮಚಂದ್ರನು ಮುಗುಳುನಕ್ಕು,
ಅವನ ಅಸ್ತ್ರಗಳನ್ನು ತನ್ನ ಅಸ್ತ್ರಗಳಿಂದ ತಡೆದು, ಮಿಂಚಿನಂತೆ ಇರುವ ಬಾಣದಿಂದ ಒಳ್ಳೆ
ಕುಂಡಲವನ್ನು ಧರಿಸಿದ್ದ ಆತನ ಶಿರಸ್ಸನ್ನು ಕತ್ತರಿಸಿದನು.
ವಿದುದ್ರುವುಸ್ತಸ್ಯ ತು ಯೇsನುಯಾಯಿನಃ ಕಪಿಪ್ರವೀರೈರ್ನ್ನಿಹತಾವಶೇಷಿತಾಃ
।
ಯಥೈವ ಧೂಮ್ರಾಕ್ಷಮುಖೇಷು ಪೂರ್ವಂ
ಹತೇಷು ಪೃಥ್ವೀರುಹಶೈಲಧಾರಿಭಿಃ ॥೮.೬೯॥
ಮಕರಾಕ್ಷ ಸಾಯಲು, ಮರ ಮತ್ತು ಬೆಟ್ಟಗಳನ್ನು ಬಳಸಿ ಯುದ್ಧಮಾಡುತ್ತಿದ್ದ
ಕಪಿಗಳಿಂದ ಬದುಕುಳಿದ ಆತನ ಅನುಯಾಯಿಗಳು ಅಲ್ಲಿಂದ ಓಡಿಹೋದರು. ಹೇಗೆ ದೂಮ್ರಾಕ್ಷ ಮೊದಲಾದವರು
ಸತ್ತಾಗ ಅವರ ಅನುಯಾಯಿಗಳು ಓಡಿದ್ದರೂ ಹಾಗೇ ಮಕರಾಕ್ಷನ ಅನುಯಾಯಿಗಳೂ ಓಡಿಹೋದರು.
ಕನ್ನಡ ಪದ್ಯರೂಪ: https://go-kula.blogspot.com/2018/06/8-63-69.html
ಕನ್ನಡ ಪದ್ಯರೂಪ: https://go-kula.blogspot.com/2018/06/8-63-69.html
No comments:
Post a Comment