ಸಶೈಲಶೃಙ್ಗಾಸಿಪರಶ್ವಧಾಯುದೈರ್ನ್ನಿಶಾಚರಾಣಾಮಯುತೈರನೇಕೈಃ
।
ತಚ್ಛ್ವಾಸವೇಗಾಭಿಹತೈಃ ಕಥಞ್ಚಿದ್
ಗತೈಃ ಸಮೀಪಂ ಕಥಮಪ್ಯಬೋಧಯತ್ ॥೮.೯೯॥
ರಾವಣನ ಆಜ್ಞೆಯಂತೆ, ಹತ್ತು ಸಹಸ್ರ ರಾಕ್ಷಸರ ಗುಂಪುಗಳು ಸೇರಿ, ಬೆಟ್ಟದ ತುಂಡು, ಕತ್ತಿ, ಕೊಡಲಿ ಮೊದಲಾದ ಆಯುಧಗಳಿಂದ,
ಕುಂಭಕರ್ಣನನ್ನು ಎಚ್ಚರಿಸತೊಡಗಿದರು. ಆತನ ಉಸಿರಾಟದ
ವೇಗಕ್ಕೆ ಸಿಲುಕಿ ದೂರದೂರ ಹೋಗಿ ಬೀಳುತ್ತಿದ್ದ ರಾಕ್ಷಸರು,
ಹೇಗೋ ಅವನ ಬಳಿ ತಲುಪಿ, ಈ ಎಲ್ಲಾ ಆಯುಧಗಳನ್ನು ಬಳಸಿಯಾದಮೇಲೆ, ಆತ ಕಷ್ಟಪಟ್ಟು ಎದ್ದುನಿಂತ.
ಶೈಲೋಪಮಾನಸ್ಯ ಚ ಮಾಂಸರಾಶೀನ್ ವಿಧಾಯ
ಭಕ್ಷಾನಪಿ ಶೋಣಿತಹ್ರದಾನ್ ।
ಸುತೃಪ್ತಮೇನಂ ಪರಮಾದರೇಣ
ಸಮಾಹ್ವಯಾಮಾಸ ಸಭಾತಳಾಯ ॥೮.೧೦೦॥
ರಾವಣನು ಕುಂಭಕರ್ಣನಿಗೆ ಪರ್ವತ ಸದೃಶವಾದ ಮಾಂಸದ ರಾಶಿಯನ್ನು, ರಕ್ತದ ಮಡುವನ್ನು,
ಬಗೆಬಗೆಯ ಭಕ್ಷವನ್ನೂ ನೀಡಿ, ಆತನನ್ನು
ಸಂತೃಪ್ತಗೊಳಿಸಿ, ಗೌರವದಿಂದ ತನ್ನ ಸಭೆಗೆ ಕರೆಸಿದನು.
ಉವಾಚ ಚೈನಂ ರಜನೀಚರೇನ್ದ್ರಃ
ಪರಾಜಿತೋsಸ್ಮ್ಯದ್ಯ ಹಿ
ಜೀವತಿ ತ್ವಯಿ ।
ರಣೇ ನರೇಣೈವ ಚ ರಾಮನಾಮ್ನಾ ಕುರುಷ್ವ
ಮೇ ಪ್ರೀತಿಮಮುಂ ನಿಹತ್ಯ ॥೮.೧೦೧॥
ಸಭೆಗೆ ಬಂದ ಕುಂಭಕರ್ಣನನ್ನುದ್ದೆಶಿಸಿ ರಾವಣ ಹೇಳುತ್ತಾನೆ: “ನೀನು
ಬದುಕಿರುವಾಗಲೇ, ರಾಮನೆಂಬ ಹೆಸರಿನ ಮನುಷ್ಯನಿಂದ ಯುದ್ಧದಲ್ಲಿ ಸೋತಿದ್ದೇನೆ. ಅಂತಹ
ರಾಮನನ್ನು ನೀನು ಕೊಂದು ನನಗೆ ಪ್ರಿಯವನ್ನು
ಉಂಟುಮಾಡು” ಎಂದು.
ಇತೀರಿತಃ ಕಾರಣಮಪ್ಯಶೇಷಂ ಶ್ರುತ್ವಾ ಜಗರ್ಹಾಗ್ರಜಮೇವ
ವೀರಃ ।
ಅಮೋಘವೀರ್ಯ್ಯೇಣ ಹಿ ರಾಘವೇಣ ತ್ವಯಾ
ವಿರೋಧಶ್ಚರಿತೋ ಬತಾದ್ಯ ॥೮.೧೦೨॥
ಈ ರೀತಿಯಾಗಿ ಹೇಳಲ್ಪಟ್ಟವನಾದ ಪರಾಕ್ರಮಶಾಲಿ ಕುಂಭಕರ್ಣನು, ಎಲ್ಲಾ
ಹಿನ್ನೆಲೆಯನ್ನು ಕೇಳಿ ತಿಳಿದು, ಅಣ್ಣನನ್ನೇ ನಿಂದಿಸುತ್ತಾನೆ. “ವ್ಯರ್ಥವಾಗದ ಬಲವುಳ್ಳ ರಾಮನೊಂದಿಗೆ ನೀನು ವಿರೋಧವನ್ನು ಕಟ್ಟಿಕೊಂಡಿದ್ದೀಯ” ಎನ್ನುತ್ತಾನೆ ಕುಂಭಕರ್ಣ.
ಪ್ರಶಸ್ಯತೇ ನೋ ಬಲಿಭಿರ್ವಿರೋಧಃ
ಕಥಞ್ಚಿದೇಷೋsತಿಬಲೋ ಮತೋ ಮಮ ।
ಇತೀರಿತೋ ರಾವಣ ಆಹ ದುರ್ನ್ನಯೋsಪ್ಯಹಂ ತ್ವಯಾsವ್ಯೋ
ಹಿ ಕಿಮನ್ಯಥಾ ತ್ವಯಾ ॥೮.೧೦೩॥
“ಯಾವತ್ತೂ ಕೂಡಾ, ಅತ್ಯಂತ ಬಲಿಷ್ಟರೊಂದಿಗೆ ವಿರೋಧವನ್ನು
ಕಟ್ಟಿಕೊಳ್ಳಬಾರದು. ನೀನು ಹೇಳುವುದನ್ನು ಕೇಳುತ್ತಿದ್ದರೆ, ರಾಮನು ಅತ್ಯಂತ ಬಲಶಾಲಿ
ಅನಿಸುತ್ತಿದೆ” ಎಂದು ಕುಂಭಕರ್ಣನು ಹೇಳಲು, ರಾವಣ ಹೇಳುತ್ತಾನೆ: “ಹೌದು, ನಾನು ತಪ್ಪು ಮಾಡಿದ್ದೇನೆ. ಆದರೆ ಈಗ ನಾನು ನಿನ್ನಿಂದ ರಕ್ಷಿಸಲ್ಪಡತಕ್ಕವನಷ್ಟೇ?
ಹಾಗಿಲ್ಲದಿದ್ದರೆ ನಿನ್ನಿಂದ ನನಗೇನು ಪ್ರಯೋಜನ?”
ಚರನ್ತಿ ರಾಜಾನ ಉತಾಕ್ರಮಂ ಕ್ವಚಿತ್
ತ್ವಯೋಪಮಾನ್ ಬನ್ಧುಜನಾನ್ ಬಲಾಧಿಕಾನ್ ।
ಸಮೀಕ್ಷ್ಯ ಹೀತ್ಥಂ ಗದಿತೋsಗ್ರಜೇನ ಸ ಕುಮ್ಭಕರ್ಣ್ಣಃ ಪ್ರಯಯೌ ರಣಾಯ ॥೮.೧೦೪॥
“ರಾಜರು, ನಿನ್ನಂತಹ ಬಲಶ್ರೇಷ್ಠರಾದ ಬಾಂಧವರನ್ನು ಹೊಂದಿರುವುದರಿಂದ,
ಕೆಲವೊಮ್ಮೆ ಮಾಡಬಾರದ ಕೆಲಸವನ್ನೂ ಮಾಡುತ್ತಾರೆ” ಎಂದು ರಾವಣನು ಹೇಳಲು, ಕುಂಭಕರ್ಣನು
ಯುದ್ಧಕ್ಕೆಂದು ತೆರಳಿದನು.
ಕನ್ನಡ ಪದ್ಯರೂಪ: https://go-kula.blogspot.com/2018/07/8-99-104.html
No comments:
Post a Comment